ಓದುಗಿ ಬೇರೆ! ಓದುಗ ಬೇರೆ!
ಲೇಖಕ-ಲೇಖಕಿ; ಪ್ರೇಕ್ಷಕ-ಪ್ರೇಕ್ಷಕಿ ಇವೆಲ್ಲ ಇರುವಂತೆ ಓದುಗ-ಓದುಗಿ ಎಂದು ಬಳಸುವುದು ಸರಿ ಅನ್ನಿಸಿ, ನಾನಂತೂ ಅದನ್ನೇ ಬಳಸುತ್ತಾ ಬಂದಿರುವೆ. ನನ್ನ ಗೆಳೆಯ, ಗೆಳತಿಯರಲ್ಲಿ ಕೆಲವರು ‘ಓದುಗಿ’ ಎಂಬ ಪದ ಬಳಸುತ್ತಿರುವುದನ್ನು ಕಂಡು ಪುಳಕಗೊಂಡಿರುವೆ!
ಒಂದು ರಾಜ್ಯದ ಸಚಿವ ಸಂಪುಟದಲ್ಲಿ ಇರುವ ಬಹುತೇಕ ಸ್ಥಾನಗಳನ್ನೆಲ್ಲ ಪುರುಷರೇ ಪಡೆದು ಮಂತ್ರಿಗಳಾಗುವುದಕ್ಕೂ, ನಮ್ಮ ಭಾಷೆ-ಸಂಸ್ಕೃತಿ-ಸಮಾಜದಲ್ಲಿ ಅಡಗಿರುವ ಮಹಿಳಾ ವಿರೋಧಿ ಯೋಚನೆಗಳು ಹಾಗೂ ಪೂರ್ವಾಗ್ರಹಗಳಿಗೂ ಸಂಬಂಧವಿದೆಯಲ್ಲವೆ?
ಈ ಅಂಕಣಕಾರ ಓದುಗ-ಓದುಗಿ; ಮತದಾರ-ಮತದಾರ್ತಿ... ಹೀಗೆ ಆಗಾಗ ಬಿಡಿಬಿಡಿಯಾಗಿ ಯಾಕೆ ಬಳಸುತ್ತಾನೆ ಎಂದು ಕೆಲವರು ಅಚ್ಚರಿಗೊಂಡಿರಬಹುದು; ಇನ್ನು ಕೆಲವರು ಎಂದಿನಂತೆ ಓದುಗ, ಮತದಾರ ಎಂದರೆ ಗಂಡು, ಹೆಣ್ಣು ಇಬ್ಬರಿಗೂ ಅನ್ಯಯವಾಗುತ್ತದೆ. ಅದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೇನಿದೆ?’ ಎಂದು ಗೊಣಗಿರಲೂಬಹುದು.
ಈ ಕಾಲದಲ್ಲಿ ಓದುಗಿ-ಓದುಗ ಎಂಬುದನ್ನು ಪ್ರತ್ಯೇಕವಾಗಿ ಬಳಸುವ ಅಗತ್ಯವಿದೆ ಎನ್ನಲು ಕಾರಣ- ‘ರೀಡರ್’ ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಬಳಸುವ ‘ಓದುಗ’ ಎಂಬ ಪದಕ್ಕೆ ಇರುವ ಮಿತಿ. ಇಂಗ್ಲಿಷಿನ ‘ರೀಡರ್’ ಎಂಬ ಪದ ಓದುಗಿಯನ್ನೂ, ಓದುಗನನ್ನೂ, ಲಿಂಗಾತೀತರನ್ನೂ ಒಳಗೊಳ್ಳುತ್ತದೆ; ಓದುವುದನ್ನು ಬಲ್ಲ ಯಂತ್ರಜೀವಿಯನ್ನೂ ‘ರೀಡರ್’ ಎಂಬ ಪದ ಒಳಗೊಳ್ಳುತ್ತದೆ. ಕನ್ನಡದ ‘ಓದುಗ’ ಎಂಬ ಪದಕ್ಕೆ ಈ ಎಲ್ಲ ಅರ್ಥಸಾಧ್ಯತೆಗಳು ಇಲ್ಲ ಎಂದು ಹೇಳುತ್ತಿಲ್ಲ; ಆದರೂ, ‘ಓದುಗ’ ಎಂದಾಕ್ಷಣ ಗಂಡಸೇ ನಮ್ಮ ಕಣ್ಣೆದುರು ಬರುತ್ತಾನೆ; ‘ಓದುಗಿ’ ತಕ್ಷಣ ನಮ್ಮ ಕಣ್ಣೆದುರು ಬರುವುದಿಲ್ಲ. ನಾನು ಬರೆಯುವ ರಾಜಕೀಯ ಬರಹಗಳಲ್ಲಿ ‘ಮತದಾರ್ತಿ’ ಎಂಬ ಪದವನ್ನು ಪ್ರತ್ಯೇಕವಾಗಿ ಬಳಸುವುದಕ್ಕೂ ಇದೇ ಕಾರಣ. ‘ವೋಟರ್’ ಎನ್ನುವ ಪದಕ್ಕೆ ‘ಮತದಾರ’ ಎಂಬ ಪದ ಬಳಸಿದ ತಕ್ಷಣ ‘ಗಂಡಸು’ ಎಂಬ ಚಿತ್ರವೇ ನಮ್ಮ ಕಣ್ಣೆದುರು ಬರುತ್ತದೆ. ಮತದಾರ್ತಿಯರು ತಕ್ಷಣ ನೆನಪಾಗುವುದಿಲ್ಲ.
ನಾವು ನಿತ್ಯ ಬಳಸುವ ಪದಗಳು ತಂದೊಡ್ಡುವ ಇಂಥ ಸೂಕ್ಷ್ಮ ಸಮಸ್ಯೆಗಳನ್ನು ನೀವು ಗಮನಿಸಿರಬಹುದು: ಇಂಡಿಯಾದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ‘ಪ್ರೆಸಿಡೆಂಟ್’ ಎಂಬ ಪದಕ್ಕೆ ‘ರಾಷ್ಟ್ರಪತಿ’ ಎಂಬ ಸಂಸ್ಕೃತ ಪದವನ್ನು ಸಂವಾದಿ ಪದವಾಗಿ ಬಳಸಿಕೊಳ್ಳಲಾಯಿತು. ಇದನ್ನು ಸೂಚಿಸಿದವರು ‘ಪ್ರೆಸಿಡೆಂಟ್’ ಎಂಬ ಪದವನ್ನು ‘ರಾಷ್ಟ್ರಾಧ್ಯಕ್ಷ’ ಎಂದು ಅನುವಾದಿಸಿದ್ದರೆ, ಅವತ್ತು ಪ್ರತಿಭಾ ಪಾಟೀಲ್ ಅವರನ್ನು, ಇವತ್ತು ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಾಧ್ಯಕ್ಷೆ’ ಎಂದು ಕರೆಯಬಹುದಿತ್ತು. ಅವತ್ತು ‘ರಾಷ್ಟ್ರಪತಿ’ ಎಂಬ ಶಬ್ದ ಟಂಕಿಸಿದವರಿಗೆ ಮುಂದೊಮ್ಮೆ ಮಹಿಳೆಯೊಬ್ಬರು ಈ ಪದವಿಗೇರಬಹುದೆಂಬ ಕಲ್ಪನೆ ಇರಲಿಲ್ಲವೇನೋ!
ಅದೇ ರೀತಿ ಇಂಗ್ಲಿಷ್‌ನಲ್ಲಿ ‘ಚೇರ‌್ಮನ್’ ಎಂಬ ಪದ ಟಂಕಿಸಿದವರು ಮುಂದೆ ಚೇರ್ ಮೇಲೆ ಹೆಂಗಸು ಕೂರಬಹುದು ಎಂದು ಯೋಚಿಸಿರಲಿಲ್ಲ! ನಂತರ ಪಶ್ಚಿಮದ ಸ್ತ್ರೀವಾದಿಗಳು ಭಾಷೆಯಲ್ಲಿ ಅಡಕವಾಗಿರುವ ಪೂರ್ವಗ್ರಹಗಳನ್ನು ಪ್ರಶ್ನಿಸಲಾರಂಭಿಸಿದ ನಂತರ, ‘ಚೇರ‌್ಮನ್’ ಎಂಬುದು ‘ಚೇರ್‌ಪರ್ಸನ್’ ಆಯಿತು. ‘ಸ್ಪೋಕ್ಸ್‌ಮನ್’ ಎಂಬುದು ‘ಸ್ಪೋಕ್ಸ್‌ಪರ್ಸನ್’ ಆಯಿತು. ಕನ್ನಡದಲ್ಲೂ ಅನೇಕ ಶಬ್ದಗಳಲ್ಲಿ ಅಡಗಿರುವ ಪುರುಷ ಪೂರ್ವಗ್ರಹವನ್ನು ಸ್ತ್ರೀವಾದಿಗಳು ವಿವರಿಸುವ ತನಕ ನಮಗೆ ಈ ಅಂಶ ಗೊತ್ತಾಗಿರಲೇ ಇಲ್ಲ. ಅಕ್ಕಮಹಾದೇವಿ ನಾನು ‘ಹೆಂಗೂಸಲ್ಲ’; ಅಂದರೆ, ‘ಹೆಣ್ಣು ಕೂಸಲ್ಲ’ ಎಂದು ಹೇಳಿದ್ದರಲ್ಲಿ ಅಡಗಿರುವ ದಿಟ್ಟತನ ಮತ್ತು ಆತ್ಮವಿಶ್ವಾಸ ನನಗೆ ಸರಿಯಾಗಿ ಗೊತ್ತಾಗಿದ್ದು ಸ್ತ್ರೀವಾದಿ ಚಿಂತನೆಯನ್ನು ಓದಿದ ನಂತರವೇ.
ಈ ಸಮಸ್ಯೆ ಕೇವಲ ಭಾಷೆಯಲ್ಲಲ್ಲ, ಒಟ್ಟು ಜನಮಾನಸದ ಧೋರಣೆಯಲ್ಲೇ ಹುದುಗಿದೆ ಎಂಬುದನ್ನು ಬ್ಲ್ಯಾಕ್ ಫೆಮಿನಿಸ್ಟ್ ಬೆಲ್ ಹುಕ್ಸ್ ಹೇಳುತ್ತಾರೆ: ‘ಸಾಮಾನ್ಯವಾಗಿ ‘ಬ್ಲ್ಯಾಕ್ ಪೀಪಲ್’ ಎಂದು ಜನರು ಮಾತಾಡುವಾಗ ಅವರ ಒತ್ತು ಕಪ್ಪು ಗಂಡಸರ ಬಗೆಗೆ ಇರುತ್ತದೆ; ಹಾಗೆಯೇ ‘ಹೆಂಗಸರು’ ಎಂದು ಸಾಮಾನ್ಯವಾಗಿ ಮಾತಾಡುವಾಗ, ಒತ್ತು ಬಿಳಿಯ ಮಹಿಳೆಯರ ಕಡೆಗೆ ವಾಲುತ್ತದೆ.’
ಇಷ್ಟಾಗಿಯೂ, ಕನ್ನಡ ಭಾಷೆ ಕೆಲವು ಸಂದರ್ಭಗಳಲ್ಲಿ ಸ್ತ್ರೀಯರನ್ನು ‘ರಕ್ಷಿಸಿದೆ’ ಎಂದು ಒಮ್ಮೆ ತಮಾಷೆಗೆ ಅಂದುಕೊಂಡೆ. ಈ ಕುತೂಹಲಕರ, ತಮಾಷೆಯ ಅಂಶವನ್ನು ಕನ್ನಡ ಸ್ತ್ರೀವಾದಿಗಳ ಗಮನಕ್ಕೆ ವಿನಮ್ರವಾಗಿ ತರಲೆತ್ನಿಸುತ್ತೇನೆ. ಈ ಅಂಶ ನನಗೆ ಒಂದು ದಿನ ಇದ್ದಕ್ಕಿದ್ದಂತೆ ಹೊಳೆದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರ್‌ನಲ್ಲಿ; ಯಾರೋ ಅಲ್ಲಿನ ಒಂದು ರೂಮಿನ ಬೀಗ ಮುರಿದಿದ್ದು ಪತ್ತೆಯಾದ ದಿನ. ಅವತ್ತು ನಾನು ಕ್ಲಾಸಿಗೆ ಹೋಗುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಕಡು ಉತ್ಸಾಹದಿಂದ ಒಂದು ರೋಚಕ ‘ಬ್ರೇಕಿಂಗ್ ನಾಯ್ಸ್’ ಬಿತ್ತರಿಸಿದ: ‘ಸಾರ್! ಯಾವನೋ ಕಳ್ಳ ಬೀಗ ಮುರಿದಿದ್ದಾನೆ!’
‘ಅರೆ! ಕಳ್ಳಿ ಯಾಕಾಗಿರಬಾರದು?’ ಎಂಬ ಪ್ರಶ್ನೆ ತಕ್ಷಣ ನನಗೆ ಎದುರಾಯಿತು! ಈ ತಮಾಷೆಯ ಪ್ರಶ್ನೆಯನ್ನು ಕ್ಲಾಸಿನಲ್ಲಿ ಕೇಳುವ ಮುನ್ನ ಸ್ತ್ರೀವಾದ ಕುರಿತ ಪಾಠ ಮಾಡುತ್ತಾ, ‘ಭಾಷೆಯೊಳಗೆ ಪುರುಷ ಪೂರ್ವಗ್ರಹ ಹುದುಗಿರುವ ಬಗೆಯನ್ನು ಡೇಲ್ ಸ್ಪೆಂಡರ್ ‘ಮ್ಯಾನ್ ಮೇಡ್ ಲ್ಯಾಂಗ್ವೇಜ್’ ಪುಸ್ತಕದಲ್ಲಿ ತೋರಿಸಿರುವುದನ್ನು ವಿವರಿಸಿದೆ. ಉದಾಹರಣೆಗೆ, ‘ಸಾಮಾನ್ಯವಾಗಿ ‘ದೇವರು’ ಎಂದರೆ ಗಂಡಸು ಎಂಬ ಅರ್ಥವೇ ನಮ್ಮ ತಲೆಯಲ್ಲಿ ಮೂಡುತ್ತದೆ. ನಿಮ್ಮೂರಲ್ಲಿ ಊರ ದೇವಿಯರಿದ್ದರೂ, ‘ದೇವರು ನೋಡ್ಕೊಂತಾನೆ’ ಎಂಬ ಮಾತೇ ನಿಮ್ಮ ಬಾಯಲ್ಲಿ ಬರುತ್ತದೆ, ಯಾಕೆ?’ ಈ ಥರದ ಪ್ರಶ್ನೆಗಳನ್ನು ಅವರ ಮುಂದಿಟ್ಟೆ.
ಇದೆಲ್ಲವನ್ನೂ ಹೇಳಿದ ಮೇಲೆ, ನಾನು ಕನ್ನಡದಲ್ಲಿ ಗಮನಿಸಿದ ಒಂದು ಕುತೂಹಲಕರ ಅಂಶದ ಬಗ್ಗೆ ಅವರ ಗಮನ ಸೆಳೆದೆ: ಸಾಮಾನ್ಯವಾಗಿ ಕಳ್ಳತನ, ಕೊಲೆ, ಭ್ರಷ್ಟಾಚಾರಗಳ ವಿಚಾರ ಬಂದಾಗ ಜನರ ಬಾಯಲ್ಲಿ ಬರುವ ಈ ವಾಡಿಕೆಯ ಮಾತುಗಳನ್ನು ಗಮನಿಸಿ: ‘ಯಾವನೋ ಕಳ್ಳ ನುಗ್ಗಿದಾನೆ!’ ‘ಯಾವನೋ ಕದ್ಕೊಂಡೋಗಿದಾನೆ!’ ‘ಯಾವನೋ ಕೊಲೆ ಮಾಡಿದಾನೆ!’ ‘ಯಾವನೋ ಹೊಡೆದಾಕಿದಾನೆ!’
‘ಈ ಉದ್ಗಾರಗಳನ್ನು ಗಮನಿಸಿದರೆ, ಪಾತಕಗಳ ವಿಚಾರದಲ್ಲಂತೂ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಇನ್ನೂ ಪುರುಷಪಕ್ಷಪಾತಿಯಾಗಿರುವುದು ನಿಜ!’ ಎಂದು ತಮಾಷೆಯಾಗಿ ಹೇಳಿದ ತಕ್ಷಣ ಕ್ಲಾಸಿನಲ್ಲಿದ್ದ ಹುಡುಗಿಯರ ಮುಖ ಅರಳಿತು; ಮುಕ್ತ ಮನಸ್ಸಿನ ಹುಡುಗರ ಮುಖವೂ ಅರಳಿತು; ಪುರುಷವಾದಿ ಹುಡುಗರ ಮುಖಗಳು ಸಣ್ಣಗೆ ಬಿಗಿದುಕೊಂಡಂತೆ ಕಂಡಿತು! ಮೇಲೆ ಕೊಟ್ಟಿರುವ
ವಾಡಿಕೆಯ ಕನ್ನಡ ಭಾಷೆಯ ಉದ್ಗಾರಗಳು, ವಿವರಣೆಗಳು ನಮ್ಮ ಸಮಾಜದಲ್ಲಿ ಅಪರಾಧಗಳನ್ನು ಹೆಚ್ಚು ಹೆಚ್ಚು ಮಾಡುವವರು ಯಾರು ಎಂಬುದನ್ನು ಸೂಚಿಸುವಂತಿವೆ. ಈ ಹಿನ್ನೆಲೆಯಲ್ಲಿ, ನಿತ್ಯ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಗಂಡಸರು-ಹೆಂಗಸರು ನಡೆಸುವ ಪಾತಕಗಳ ಪ್ರಮಾಣ ಎಷ್ಟಿರುತ್ತದೆ ಎಂಬ ಅಂಕಿಅಂಶಗಳನ್ನು ನೋಡಿದೆ: 2022ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಹಿಳಾ ಕೈದಿಗಳ ಸಂಖ್ಯೆ 206. ಈ ಸಂಖ್ಯೆಯ ಎದುರು ಪುರುಷ ಕೈದಿಗಳ ಸಂಖ್ಯೆಯನ್ನು ಎಷ್ಟೋ ಪಟ್ಟು ಹೆಚ್ಚಿಸಿ, ನೀವೇ ಲೆಕ್ಕ ಹಾಕಿಕೊಳ್ಳಬಹುದು!
ಅದೆಲ್ಲ ಇರಲಿ. ಈ ಲೇಖನದ ಶುರುವಿನಲ್ಲಿ ಹೇಳಿದ ‘ಓದುಗಿ’ ಎಂಬ ಪದವನ್ನು ನಾನು ಅಧಿಕೃತವಾಗಿ ಬಳಸಿದ್ದು ಪಿಎಚ್.ಡಿ. ಮೌಖಿಕ ಪರೀಕ್ಷೆಯೊಂದರಲ್ಲಿ; ಅವತ್ತು ವಿಷಯತಜ್ಞರಾಗಿದ್ದ ಸ್ತ್ರೀವಾದಿ ಚಿಂತಕಿ ಎಚ್. ಎಸ್. ಶ್ರೀಮತಿ ಈ ಪದಪ್ರಯೋಗವನ್ನು ಮನಸಾರೆ ಒಪ್ಪಿದರು. ಲೇಖಕ-ಲೇಖಕಿ; ಪ್ರೇಕ್ಷಕ-ಪ್ರೇಕ್ಷಕಿ ಇವೆಲ್ಲ ಇರುವಂತೆ ಓದುಗ-ಓದುಗಿ ಎಂದು ಬಳಸುವುದು ಸರಿ ಅನ್ನಿಸಿ, ನಾನಂತೂ ಅದನ್ನೇ ಬಳಸುತ್ತಾ ಬಂದಿರುವೆ. ನನ್ನ ಗೆಳೆಯ, ಗೆಳತಿಯರಲ್ಲಿ ಕೆಲವರು ‘ಓದುಗಿ’ ಎಂಬ ಪದ ಬಳಸುತ್ತಿರುವುದನ್ನು ಕಂಡು ಪುಳಕಗೊಂಡಿರುವೆ!
ಹಾಗಾದರೆ ಎಂದೂ ಇಲ್ಲದ ‘ಓದುಗಿ’ಯ ಪ್ರಶ್ನೆ ಈ ಕಾಲದಲ್ಲಿ ಹೇಗೆ ಬಂತು? ಇದಕ್ಕೆ ಕಾರಣವಿದೆ: ಓದುಗಿ ಹುಟ್ಟುವುದು ಫೆಮಿನಿಸ್ಟ್ ರೀಡಿಂಗ್ ಬಂದ ನಂತರ! ಒಂದು ಕತೆಯನ್ನು ಹೆಂಗಸರು ಓದುವ ಕ್ರಮಕ್ಕೂ, ಗಂಡಸರು ಓದುವ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ನಲುವತ್ತು ವರ್ಷಗಳ ಕೆಳಗೆ ಪ್ರಾಥಮಿಕ ಶಾಲೆಯ ಪಾಠವೊಂದನ್ನು ಓದಿದ ನೆನಪು ಇವತ್ತಿನ ಹಿರಿಯರಿಗೆ ಇರಬಹುದು. ಆ ಪಾಠ ಹೆಚ್ಚುಕಡಿಮೆ ಹೀಗಿತ್ತು:
ಬಸವಾ ಏಳು! ಕಮಲಾ ಏಳು!
ಬಸವ ಅಪ್ಪನ ಜೊತೆ ತೋಟಕ್ಕೆ ಹೋಗುವನು.
ಕಮಲ ತಾಯಿಯ ಜೊತೆಗೆ ಅಡುಗೆ ಮನೆಗೆ ಹೋಗುವಳು.
ನಾವೆಲ್ಲ ಈ ಪಾಠವನ್ನು ಸುಮ್ಮನೆ ಓದಿಕೊಂಡು ಬಂದಿದ್ದೆವು. ಆದರೆ
‘ಈ ಪಾಠ ಹುಡುಗಿಯ ಪಾತ್ರವನ್ನು ಅಡುಗೆ ಮನೆಗೇ ನಿರ್ದಿಷ್ಟಗೊಳಿಸುತ್ತದೆ’ ಎಂದು ಎಚ್ಚೆತ್ತ ಓದುಗಿಯರು ಟೀಕಿಸಿದ ಮೇಲೆಯೇ ಈ ಪಠ್ಯ ಬದಲಾದದ್ದು.
ಕಳೆದ ಇಪ್ಪತ್ತು ವರ್ಷಗಳಿಂದಲೂ ಕರ್ನಾಟಕ ಸರಕಾರಗಳ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆ ಮಾತ್ರ ಇರುವುದನ್ನು ನೀವು ಗಮನಿಸಿರಬಹುದು. ಒಂದು ಸಚಿವ ಸಂಪುಟದಲ್ಲಿ ಇರುವ ಸ್ಥಾನಗಳನ್ನೆಲ್ಲ ಪುರುಷರೇ ಪಡೆಯುವುದಕ್ಕೂ, ಭಾಷೆ, ಸಂಸ್ಕೃತಿ ಹಾಗೂ ಸಮಾಜದಲ್ಲಿ ಅಡಗಿರುವ ಮಹಿಳಾ ವಿರೋಧಿ ಚಿಂತನೆ, ಪೂರ್ವಾಗ್ರಹಗಳಿಗೂ ಸಂಬಂಧವಿದೆ ಎಂಬುದು ನಿಮಗೆ ಇಷ್ಟು ಹೊತ್ತಿಗೆ ಹೊಳೆದಿರಬಹುದು!