ಸಾಹಿತ್ಯ ಪರಿಷತ್ತಿನ ಚಿಲ್ಲರೆ ರಾಜಕೀಯ

ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಕುರಿತಂತೆ ಒಂದೇ ಒಂದು ಮಹತ್ವದ ಚರ್ಚೆಯನ್ನಾದರೂ ಈಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಾವ ಸಭೆಯೂ, ಸಾಹಿತ್ಯ ಸಮ್ಮೇಳನವೂ ಏಕೆ ಎತ್ತಲು ಸಾಧ್ಯವಾಗಿಲ್ಲ? ಈ ಕುರಿತು ಪರಿಷತ್ತಿನಂಥ ಜಡ ಸಂಸ್ಥೆಗಳನ್ನು ನೆಚ್ಚಿದವರು ಯೋಚಿಸಬೇಕು.

Update: 2024-10-28 05:40 GMT

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅದರ ಅಧ್ಯಕ್ಷರ ಈಚಿನ ವರಸೆಗಳನ್ನು ಗಮನಿಸಿ: ಇವೆಲ್ಲವೂ ಈ ಕಾಲದ ರಾಜಕಾರಣದ ವಿಕೃತ ಭಾಷೆ, ಸಂಚು, ವ್ಯೆಹಗಳನ್ನು ಮೀರಿಸುವಂತೆ ಕಾಣತೊಡಗುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಗೊಂದಲ ಹಾಗೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮಾಡಿಕೊಂಡಿರುವ ಅಧಿಕಾರ ಕೇಂದ್ರೀಕರಣದ ತಿದ್ದುಪಡಿಗಳು ನಮ್ಮ ಸುತ್ತ ನಡೆಯುತ್ತಿರುವ ನಿತ್ಯದ ರಾಜಕೀಯ ಆಟಗಳ ನಕಲಿನಂತಿವೆ.

ಹಾಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಅಸಂಬದ್ಧವಾಗಿ ಮಾತಾಡುತ್ತಿರುವುದಕ್ಕೆ ವಿಶೇಷ ಕಾರಣಗಳೇನೆಂಬುದನ್ನು ಯಾರೂ ಹೊಸದಾಗಿ ಸಂಶೋಧನೆ ಮಾಡಬೇಕಾಗಿಲ್ಲ. ಈ ಮಹನೀಯರು ಮೂಲತಃ ಕನ್ನಡದ ಮುಖ್ಯ ಸಾಹಿತಿಯೇನಲ್ಲ. ‘ಉತ್ತಮ ಸಾಹಿತ್ಯ’ ಎನ್ನಿಸಿಕೊಳ್ಳುವಂಥ ಯಾವ ಪ್ರಮುಖ ರಚನೆಯನ್ನೂ ಅವರು ಮಾಡಿದ್ದು ನನ್ನ ಗಮನಕ್ಕಂತೂ ಬಂದಿಲ್ಲ. ಸಹಜವಾಗಿಯೇ ಅವರಿಗೆ ಕನ್ನಡ ಸಾಹಿತ್ಯ ಪರಂಪರೆ ಹಾಗೂ ಅದರ ಘನತೆಯ ಬಗೆಗಾಗಲೀ, ಸಾಹಿತ್ಯದ ಅನಂತ ಸಾಧ್ಯತೆಗಳ ಬಗೆಗಾಗಲೀ ಅರಿವು, ಗೌರವ ಎರಡೂ ಇದ್ದಂತಿಲ್ಲ. ಈ ಥರದ ಕನ್ನಡದ ‘ಕಟ್ಟಾಳುಗಳು’ ಕಳೆದ ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಪರಂಪರೆ ಕುರಿತು ರಿಫ್ರೆಶರ್ ಕೋರ್ಸ್ ಅಟೆಂಡ್ ಮಾಡುವುದು ಒಳ್ಳೆಯದು.

ಎಂದೂ ಸಾಹಿತ್ಯ ರಚನೆಯನ್ನೇ ಮಾಡದೆ ಹಿಂದೊಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗೆದ್ದ ಪುಂಡಲೀಕ ಹಾಲಂಬಿಯಂಥವರ ವಿನಯದಿಂದಲಾದರೂ ಹೇಗೋ ಈ ಹುದ್ದೆ ಹಿಡಿದ ‘ಅಸಾಹಿತಿಗಳು’ ಕಲಿಯಬೇಕಾದ ಕೆಲವು ಮಾರ್ಗಗಳಿವೆ. ಪುಂಡಲೀಕ ಹಾಲಂಬಿ ಪರಿಷತ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸಮ್ಮೇಳನಾಧ್ಯಕ್ಷರನ್ನು ಆರಿಸಿದ ರೀತಿಯಿಂದ ಇಂಥವರು ಕೆಲವು ಪಾಠಗಳನ್ನು ಕಲಿಯುವ ಅಗತ್ಯವಿದೆ. ನಾ. ಡಿಸೋಜ, ಡಾ. ಸಿದ್ಧಲಿಂಗಯ್ಯ, ನಿಸಾರ್ ಅಹಮದ್- ಹೀಗೆ ಹಾಲಂಬಿಯವರ ಕಾಲದ ಮೂವರು ಸಮ್ಮೇಳನಾಧ್ಯಕ್ಷರು ಕನ್ನಡ ಸಾಹಿತ್ಯದ ಜಾತ್ಯತೀತ ವೈವಿಧ್ಯವನ್ನು ಎತ್ತಿ ಹಿಡಿದವರಾಗಿದ್ದರು; ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಗಳನ್ನು ಕೊಟ್ಟವರಾಗಿದ್ದರು. ಇಡೀ ನಾಡಿನ ಜನ ಓದಿ, ಮೆಚ್ಚಿದ ಲೇಖಕರಾಗಿದ್ದರು.

ಇಂಥ ಉತ್ತಮ ಪರಂಪರೆಯನ್ನಾದರೂ ಮುಂದುವರಿಸಲಾಗದ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯಿಲೆಗಳು ಸಮ್ಮೇಳನಕ್ಕಷ್ಟೇ ಸೀಮಿತವಾಗಿಲ್ಲ. ಅಧ್ಯಕ್ಷರ ಆಯ್ಕೆಯ ಚುನಾವಣೆಗಳಿಂದಲೇ ಇವರ ಕಾಯಿಲೆಗಳು ಶುರುವಾಗುತ್ತವೆ. ಆದ್ದರಿಂದಲೇ ಸಾಹಿತ್ಯ ಪರಿಷತ್ತಿನಲ್ಲಿ ದೊಡ್ಡ ಸಾಹಿತ್ಯಕ ಚರ್ಚೆಗಳಾಗಲೀ, ಚಿಂತನೆಗಳಾಗಲೀ ನಡೆಯುವ ಯಾವ ಸಾಧ್ಯತೆಗಳೂ ಉಳಿದಿಲ್ಲ. ಈಚಿನ ವರ್ಷಗಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಭಾಷಣಗಳಾಗಲೀ, ಚರ್ಚೆಗಳಾಗಲೀ ಕನ್ನಡದ ಅಳಿವು, ಉಳಿವಿನ ಬಗ್ಗೆ ಒಂದು ಮಟ್ಟದ ಜನಾಭಿಪ್ರಾಯವನ್ನೂ ರೂಪಿಸಲಾಗಿಲ್ಲ. ಮುಚ್ಚುತ್ತಿರುವ ಕನ್ನಡ ಮಾಧ್ಯಮ ಶಾಲೆಗಳು; ಕನ್ನಡವನ್ನು ಒಂದು ಭಾಷೆಯನ್ನಾಗಿ ಕೂಡ ಕಲಿಸದ ಖಾಸಗಿ ಶಾಲೆಗಳ ಅಹಂಕಾರ; ಮಕ್ಕಳಿಗೆ ಕನ್ನಡವನ್ನೇ ಕಲಿಸದ ತಾಯಂದಿರ ಅಜ್ಞಾನ...ಕನ್ನಡಿಗರ ನಿರುದ್ಯೋಗ...ಈ ಥರದ ಹಲವು ಬೆಳವಣಿಗೆಗಳು ಈಗ ಕನ್ನಡವನ್ನು ಕೊಲ್ಲುತ್ತಿವೆ. ಈ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯಲು ನಾಡಿನ ಗಂಭೀರ ಸಾಹಿತಿಗಳು, ಚಿಂತಕ, ಚಿಂತಕಿಯರ ಜೊತೆ ವಿಸ್ತೃತ ಚರ್ಚೆ ಮಾಡುವ ಸಣ್ಣ ಕಾಳಜಿ ಕೂಡ ಪರಿಷತ್ತಿನ ಮಂದಿಯಲ್ಲಿ ಕಾಣುತ್ತಿಲ್ಲ.

ಈಚಿನ ದಶಕಗಳಲ್ಲಿ ಡಿಜಿಟಲ್ ಮಾಧ್ಯಮ ಪ್ರಬಲವಾದ ಮೇಲೆ ಕನ್ನಡ ಪುಸ್ತಕಗಳ ಓದುಗ, ಓದುಗಿಯರ ಸ್ವರೂಪವೇ ಬದಲಾಗಿದೆ. ಇದು ಕನ್ನಡ ಸಾಹಿತ್ಯ ರಚನೆ, ಪ್ರಸಾರ, ಬೆಳವಣಿಗೆ ಎಲ್ಲವನ್ನೂ ನಿರ್ಣಾಯಕವಾಗಿ ಬದಲಿಸತೊಡಗಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡುವ ಸಾಹಿತ್ಯ ಪರಿಷತ್ತು ಈ ಸವಾಲಿನ ಬಗ್ಗೆ ಎಂದೂ ಗಂಭೀರವಾಗಿ ಯೋಚಿಸಿದಂತಿಲ್ಲ. ಕನ್ನಡದಲ್ಲಿ ಇ-ಬುಕ್‌ಗಳು ಬಂದರೂ ಕಿಂಡಲ್‌ನಲ್ಲಿ ಈ ಪುಸ್ತಕಗಳಿಗೆ ಮಾರುಕಟ್ಟೆ ಯಾಕೆ ಸೃಷ್ಟಿಯಾಗುತ್ತಿಲ್ಲ ಎಂಬ ಬಗ್ಗೆ ಲೇಖಕ, ಲೇಖಕಿಯರಾಗಲೀ, ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳಾಗಲೀ ತಲೆ ಕೆಡಿಸಿಕೊಂಡಂತಿಲ್ಲ. ಕನ್ನಡದ ಹೊಸ ತಲೆಮಾರು ಮೊಬೈಲ್ ಸ್ಕ್ರೀನಿನಲ್ಲಿ ಒಂದೆರಡು ಪ್ಯಾರಾ ಮಾತ್ರ ಓದುವ ವ್ಯವಧಾನ ತೋರುತ್ತಿರುವ ಈ ಕಾಲದಲ್ಲಿ ಕನ್ನಡ ಬರವಣಿಗೆಯ ಸ್ವರೂಪವೇ ಬದಲಾಗಲಿದೆಯೇ? ಕನ್ನಡ ಭಾಷೆ, ಸಾಹಿತ್ಯದ ಗತಿ ಏನಾಗಲಿದೆ? ಈ ಬಗ್ಗೆ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯಗಳು, ಅಕಾಡಮಿಗಳಂಥ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಚರ್ಚಿಸುವ ಹಾಗೂ ಪರಿಹಾರಗಳನ್ನು ಹುಡುಕುವ ಜರೂರಿದೆ.

ಕನ್ನಡ ಬರವಣಿಗೆಯ ಕ್ರಮ ಬದಲಾಗಿರುವ ಈ ಕಾಲದಲ್ಲಿ ಇವತ್ತಿನ ಜಾಲತಾಣಗಳಲ್ಲಿ ಸಾಹಿತ್ಯ, ಸಮಾಜ, ಭಾಷೆ ಕುರಿತ ಎಲ್ಲ ಕಾಳಜಿಗಳನ್ನು ಹಂಚಿಕೊಳ್ಳುವ ತರುಣ ತರುಣಿಯರಿದ್ದಾರೆ. ಸರಕಾರಗಳ ದೋಷಗಳನ್ನು ಎತ್ತಿ ತೋರಿಸುತ್ತಿರುವವರು, ಕೋಮುವಾದ, ಜಾತೀಯತೆಗಳನ್ನು ದಿಟ್ಟವಾಗಿ ಮುಖಾಮುಖಿಯಾಗುವವರು ಜನರ ದನಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ‘ಜನಪ್ರಿಯ’ ಎನ್ನಲಾಗುವ ‘ಜನಬಳಕೆಯ ಸಂಸ್ಕೃತಿ’ಯನ್ನು ಪ್ರಭಾವಿಸುವ ರಾಜಕೀಯ ಲೋಕ, ಧಾರ್ಮಿಕ ಲೋಕ ಹಾಗೂ ತೆರೆ ಲೋಕ- ಈ ಮೂರೂ ಲೋಕಗಳು ಸಾಮಾನ್ಯ ಜನರನ್ನು ಅತ್ಯಂತ ನಿಕೃಷ್ಟವಾಗಿ ಕಾಣತೊಡಗಿವೆ: ರಾಜಕೀಯ ನಾಯಕರಿಗೆ ಸಾಮಾನ್ಯ ಮಹಿಳೆ ಎಂದರೆ ಒಂದು ಓಟು ಮಾತ್ರ. ಧಾರ್ಮಿಕ ಲೋಕದವರಿಗೆ ಸಾಮಾನ್ಯ ಮನುಷ್ಯ ತಮ್ಮನ್ನು ಹಿಂಬಾಲಿಸುವ ಕುರಿ ಮಾತ್ರ. ಜನಪ್ರಿಯ ಸಿನೆಮಾ ಹಾಗೂ ಟೆಲಿಲೋಕಕ್ಕೆ ಸಾಮಾನ್ಯ ಗಂಡಸು ಹಾಗೂ ಹೆಂಗಸು ಎಂದರೆ ಕೇವಲ ಗ್ರಾಹಕರು, ಅಷ್ಟೆ. ಇದೇ ಧೋರಣೆ ಸರಕಾರದ ಹಣ ಪಡೆಯುತ್ತಿರುವ ಸಾಹಿತ್ಯ ಪರಿಷತ್ತಿನಲ್ಲೂ ಹಬ್ಬಿದೆ. ಸಾಮಾನ್ಯ ಕನ್ನಡಿಗರು ಲೆಕ್ಕಕ್ಕೇ ಇಲ್ಲವೆಂಬಂತೆ ಪರಿಷತ್ತಿನ ಜನ ವರ್ತಿಸುತ್ತಿದ್ದಾರೆ.

ಇಂಥ ಸಿನಿಕ ಹಾಗೂ ಕ್ರೂರ ಸಂದರ್ಭದಲ್ಲಿ ಸರಕಾರದ ಅನುದಾನಕ್ಕಾಗಿ ಕಾಯುತ್ತಾ ಕಾಲಹರಣ, ಕಾಸುಹರಣ ಮಾಡುವ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಸಾಮಾನ್ಯರನ್ನು ಕುರಿತ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಬೌದ್ಧಿಕ ಸಿದ್ಧತೆಯಾಗಲೀ ಕಾಳಜಿಯಾಗಲೀ ಇದ್ದಂತಿಲ್ಲ. ಕರ್ನಾಟಕದಲ್ಲಿ ಕಾಲಕಾಲಕ್ಕೆ ಪ್ರಗತಿಶೀಲ-ಬಂಡಾಯ- ದಲಿತ- ಸ್ತ್ರೀ ಸಾಹಿತ್ಯಗಳ ಸಮ್ಮೇಳನಗಳು ರೂಪಿಸಿದ ಪ್ರಶ್ನೆಗಳು, ಚರ್ಚೆಗಳು ಹತ್ತಾರು ವರ್ಷ ಕಾಲ ಸಾಮಾನ್ಯರ ಕನಸುಗಳನ್ನು, ದೃಷ್ಟಿಕೋನವನ್ನು ಪ್ರತಿನಿಧಿಸಿವೆ; ಸಾವಿರಾರು ಸಾಹಿತ್ಯ ಕೃತಿಗಳ ಸೃಷ್ಟಿಗೆ ಪ್ರೇರಣೆಯಾಗಿವೆ; ಲಕ್ಷಾಂತರ ಸೂಕ್ಷ್ಮ ಓದುಗರನ್ನು ಸೃಷ್ಟಿಸಿವೆ. ಕನ್ನಡ ಪತ್ರಿಕೆಗಳು, ಸಣ್ಣ ಪುಟ್ಟ ಗುಂಪುಗಳು, ಶೂದ್ರ, ಸಂಕ್ರಮಣ, ಅನ್ವೇಷಣೆ ಮುಂತಾದ ಸಾಹಿತ್ಯಕ ಪತ್ರಿಕೆಗಳು ಮಹತ್ವದ ವಾಗ್ವಾದಗಳನ್ನು ಸೃಷ್ಟಿಸಿವೆ. ಆದರೆ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಕುರಿತಂತೆ ಒಂದೇ ಒಂದು ಮಹತ್ವದ ಚರ್ಚೆಯನ್ನಾದರೂ ಈಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಾವ ಸಭೆಯೂ, ಸಾಹಿತ್ಯ ಸಮ್ಮೇಳನವೂ ಏಕೆ ಎತ್ತಲು ಸಾಧ್ಯವಾಗಿಲ್ಲ? ಈ ಕುರಿತು ಪರಿಷತ್ತಿನಂಥ ಜಡ ಸಂಸ್ಥೆಗಳನ್ನು ನೆಚ್ಚಿದವರು ಯೋಚಿಸಬೇಕು.

ದಶಕದ ಕೆಳಗೆ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರು ಅಂದಿನ ಮುಖ್ಯಮಂತ್ರಿಗಳ ಎದುರಿಗೇ ಆಡಿದ ನಿಷ್ಠುರವಾದ ಮಾತುಗಳನ್ನು ಆಡಬಲ್ಲ ಛಾತಿ ಆನಂತರದಲ್ಲಿ ಬಂದ ಪರಿಷತ್ತಿನ ಯಾವ ಅಧ್ಯಕ್ಷರಲ್ಲೂ ಕಾಣಲಿಲ್ಲ. ಐದಾರು ವರ್ಷಗಳ ಕೆಳಗೆ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕಲ್ಕುಳಿ ವಿಠ್ಠಲ ಹೆಗಡೆಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹೆಂಬೇಡಿ ನಡವಳಿಕೆಯಿಂದ ಇಡೀ ಕನ್ನಡ ಸಾಹಿತ್ಯಲೋಕವೇ ತಲೆ ತಗ್ಗಿಸುವಂತಾಯಿತು. ‘ಸಾಹಿತ್ಯ ಪರಿಷತ್ತಿನಂಥ ಸ್ವಾಯತ್ತ ಸಂಸ್ಥೆಯ ಜಿಲ್ಲಾ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಸಂಸ್ಕೃತಿ ಸಚಿವರು ಮೂಗು ತೂರಿಸಬಾರದು’ ಎಂಬ ಪುಟ್ಟ ಹೇಳಿಕೆ ನೀಡುವ ಧೈರ್ಯವನ್ನೂ ಅಂದಿನ ಅಧ್ಯಕ್ಷರು ತೋರಲಿಲ್ಲ; ಅವತ್ತು ಸಾಹಿತ್ಯ ಪರಿಷತ್ತಿನ ಅಷ್ಟಿಷ್ಟು ಘನತೆಯೂ ಕುಸಿದುಹೋಯಿತು. ಹೊಸ ಹೊಸ ತಲೆಮಾರುಗಳಿಗೆ ಬೇಕಾದ ಹೊಸ ಬೌದ್ಧಿಕ ವಾತಾವರಣವನ್ನು ಸೃಷ್ಟಿಸಲಾಗದ, ಕೊನೆಯ ಪಕ್ಷ ಸ್ವಾಭಿಮಾನವೂ ಇಲ್ಲದ ಇಂಥ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಗಂಭೀರ ಪ್ರಶ್ನೆಗಳನ್ನಾಗಲೀ, ಸಾಮಾನ್ಯರ ಕಷ್ಟಗಳನ್ನಾಗಲೀ, ಕನ್ನಡ ಭಾಷೆಯ ಆತಂಕಗಳನ್ನಾಗಲೀ ಗಂಭೀರ ಬೌದ್ಧಿಕ ನೆಲೆಯಲ್ಲಿ ಚರ್ಚಿಸುತ್ತವೆಂದು ನಿರೀಕ್ಷಿಸಲಾಗದು.

ಇಷ್ಟಾಗಿಯೂ ಇಂಥ ನಿರ್ಜೀವ ಸಂಸ್ಥೆಗಳ ಸಮ್ಮೇಳನಗಳಿಗೆ ಕೋಟಿಗಟ್ಟಲೆ ಸಾರ್ವಜನಿಕ ಹಣ ಖರ್ಚಾಗುತ್ತದೆ ಎಂಬುದನ್ನು ಕಡೆಗಣಿಸಲಾಗದು. ಸಾವಿರಾರು ಜನ ಸಾಮಾನ್ಯ ಓದುಗ ಓದುಗಿಯರು, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಜವಾದ ಉತ್ಸಾಹದಿಂದ ಸಮ್ಮೇಳನಗಳಿಗೆ ಬಂದು ಸೇರುತ್ತಾರೆ. ಅವರಲ್ಲಿ ಕೆಲವು ಸಾವಿರ ಜನವಾದರೂ ಸಾಹಿತ್ಯದೆಡೆಗೆ, ಪುಸ್ತಕಗಳ ಕಡೆಗೆ ವಾಲುವ ಸೂಕ್ಷ್ಮ ಓದುಗರಾಗುವ, ಲೇಖಕರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಇದರ ಅರಿವೇ ಇಲ್ಲದೆ, ಹೇಗೋ ಸಮ್ಮೇಳನ ನಡೆದರೆ ಸಾಕು ಎಂಬ ಅಲ್ಪ ತೃಪ್ತಿಯಲ್ಲಿ ಈ ಸಮ್ಮೇಳನಗಳು ನಡೆಯುವಂತೆ ಕಾಣುತ್ತವೆ. ಹೊಸ ಹೊಸ ಸವಾಲುಗಳು, ಹೊಸ ಹೊಸ ಓದುಗರು ಸೃಷ್ಟಿಯಾದಂತೆ ಹೊಸ ಚರ್ಚೆಗಳನ್ನು ಹುಟ್ಟು ಹಾಕಬೇಕು; ಹೊಸ ಸಂವೇದನೆಯನ್ನು, ಆರೋಗ್ಯಕರ ಜನಾಭಿಪ್ರಾಯವನ್ನು ರೂಪಿಸಬೇಕು ಎಂಬ ಕಾಳಜಿಗಳು ಇಲ್ಲಿ ಸಂಪೂರ್ಣ ಮಾಯವಾಗಿವೆ.

ಸಾರ್ವಜನಿಕ ಭಾಷೆ ಅತಿ ದುರ್ಬಳಕೆಯಾಗುತ್ತಿರುವ ಈ ಕಾಲದಲ್ಲೂ ಭಾಷೆಯನ್ನು, ಭಾವನೆಗಳನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆ ಸಾಹಿತ್ಯ ಲೋಕದಲ್ಲಿ ಇನ್ನೂ ಇದೆ. ಸಂಸ್ಕೃತಿ, ಸಮಾಜಗಳನ್ನು ಕುರಿತ ಸಮಸ್ತ ಪ್ರಶ್ನೆಗಳನ್ನು ಸಮರ್ಥವಾಗಿ ಮಂಡಿಸುವ ಅವಕಾಶ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಉಳಿದಿದೆ. ಇಂಥ ಕಾಲದಲ್ಲಿ ಸಾಹಿತ್ಯ ಪರಿಷತ್ತು ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ಹೊಲಸಾಗಬೇಕೆಂದು ಪೈಪೋಟಿಗಿಳಿದರೆ, ಅಳಿದುಳಿದ ಓದುಗ, ಓದುಗಿಯರೂ ಕನ್ನಡ ಸಾಹಿತ್ಯದ ಬಗ್ಗೆ ಸಿನಿಕರಾದಾರು. ಈ ಪ್ರಜ್ಞೆ, ಎಚ್ಚರ ಜನರ ತೆರಿಗೆ ಹಣದಿಂದ ನಡೆಯುವ ಸಾಹಿತ್ಯ ಪರಿಷತ್ತಿನ ಮಂದಿಯಲ್ಲಿರಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News