‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’

Update: 2024-12-15 04:49 GMT

ತುಮಕೂರಿನ ದಲಿತ ಸಂಘರ್ಷ ಸಮಿತಿ ಹಾಗೂ ಇತರ ಜನಪರ ಚಳವಳಿಗಳ ಸಂಗಾತಿಗಳಿಗೆ ರಂಗಸ್ವಾಮಿ ಬೆಲ್ಲದಮಡು ಚಿರಪರಿಚಿತ ಹೆಸರು. ಎಂಭತ್ತರ ದಶಕದಲ್ಲಿ ಸಂಘಟನೆಯ ಕಾವು ಉತ್ತುಂಗ ಸ್ಥಿತಿಯಲ್ಲಿದ್ದಾಗ ದಲಿತ ಸಂಘರ್ಷ ಸಮಿತಿಯಲ್ಲಿ ಕೇಳಿಬರುತ್ತಿದ್ದ ಹೆಸರುಗಳಲ್ಲಿ ರಂಗಸ್ವಾಮಿ ಬೆಲ್ಲದಮಡು ಅವರದು ಪ್ರಮುಖವಾದುದು. ರಾಜ್ಯ ದಲಿತ ಸಂಘರ್ಷ ಸಮಿತಿಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ ರಂಗಸ್ವಾಮಿಯವರು ಅಂದಿಗೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದ ಸೊಲನಾಯಕನಹಳ್ಳಿ ಹೋರಾಟ, ಗೂಳೂರು, ಮಾನಂಗಿ ಹೋರಾಟ, 1981-82ರಲ್ಲಿ ನಡೆದ ಕಿತ್ತಗಾನಹಳ್ಳಿ ಭೂ ಹೋರಾಟದ ಪ್ರಮುಖ ರೂವಾರಿಯಾಗಿದ್ದರು.

ಸ್ವಾರ್ಥ ರಹಿತ ಹೋರಾಟದ ಮುಂಚೂಣಿ ನಾಯಕರಾಗಿದ್ದ ರಂಗಸ್ವಾಮಿ ಬೆಲ್ಲದಮಡು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೆಲ್ಲದಮಡು ಎಂಬ ಕುಗ್ರಾಮದಲ್ಲಿ 05.11.1948ರಂದು ಜನಿಸಿದರು. ಶೋಷಿತ ವರ್ಗದ ಹಾಗೂ ದನಿ ಇಲ್ಲದವರ ಪರವಾಗಿ ಅವಿರತ ಹೋರಾಟ ನಡೆಸಿದ ಅವರು ತಮ್ಮ 58ನೇ ವಯಸ್ಸಿನಲ್ಲಿ 20.07.2004ರಂದು ನಿಧನರಾದರು. ಅವರು ನಿಧನರಾಗಿ 20 ವರ್ಷಗಳ ನಂತರ ಇದೀಗ ಅವರ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ನೆನಪಿನ ಸಂಪುಟವನ್ನು ಹೊರತಂದಿದ್ದಾರೆ.

ಹೋರಾಟಗಾರನ ಮರಣದ ಇಪ್ಪತ್ತು ವರ್ಷಗಳ ನಂತರ ಅವರ ನೆನಪಿನ ಸಂಪುಟವನ್ನು ಹೊರತಂದಿರುವುದು ಆ ನಾಯಕನ ಹೋರಾಟದ ಹೆಜ್ಜೆಗಳ ಮಹತ್ವವನ್ನು ತೋರಿಸುತ್ತದೆ. 274 ಪುಟಗಳ ಈ ಗ್ರಂಥದಲ್ಲಿ ರಾಜ್ಯದ ದಲಿತ ಪರ ಹೋರಾಟಗಾರರು, ಅವರ ಸಹವರ್ತಿ ಹೋರಾಟಗಾರರು, ಕುಟುಂಬಸ್ಥರು ಸೇರಿದಂತೆ ಹಲವರು ರಂಗಸ್ವಾಮಿ ಬೆಲ್ಲದಮಡು ಅವರ ಹೋರಾಟದ ಗುರುತುಗಳ ಕುರಿತಾದ ಲೇಖನಗಳನ್ನು ಬರೆದಿದ್ದಾರೆ. ಹಿರಿಯ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕ ಕಾಳೇಗೌಡ ನಾಗವಾರ ಅವರು ಮುನ್ನುಡಿಯಲ್ಲಿ, ಪ್ರೊ. ಬಿ. ಕೃಷ್ಣಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ, ಕೆ. ದೊರೈರಾಜ್ ಮತ್ತಿತರ ಕ್ರಿಯಾಶೀಲ ಒಡನಾಡಿಗಳ ಸಮಾಜ ಸುಧಾರಣೆಯ ಪ್ರಯತ್ನಗಳ ಜೊತೆಜೊತೆಯಲ್ಲಿಯೇ ತನ್ನ ಸುತ್ತಲಿನ ಸಕಲೆಂಟು ಸಂಕಟಗಳನ್ನು ಬದಿಗೆ ಸರಿಸುತ್ತಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮಾಜ ಸುಧಾರಣೆಯ ಕಾಯಕವನ್ನು ಬಹಳ ನಿಷ್ಠೆಯಿಂದ ನಿರ್ವಹಿಸುತ್ತಿದ್ದ ರಂಗಸ್ವಾಮಿ ಬೆಲ್ಲದಮಡು ಅವರ ಹೋರಾಟ ಮತ್ತು ಸಾಧನೆಗಳು ಜೀವಪರ ಕಾಳಜಿಗಳ ಪ್ರಯತ್ನಶೀಲರಿಗೆ ಸದಾಕಾಲದ ಮಾದರಿಯಾಗಿವೆ. ದಲಿತ ಲೋಕದ ಎಡ-ಬಲ ಪಂಗಡಗಳ ವಿಂಗಡಣೆಯಾಚೆಗೂ ಕಣ್ಣಾಡಿಸಿದ ರಂಗಸ್ವಾಮಿಯವರು ತಮ್ಮೆಲ್ಲರ ಒಗ್ಗಟ್ಟಿನ ಪರಿಣಾಮವಾಗಿ ಈ ಒಳಪಂಗಡಗಳಲ್ಲಿಯೂ ಭೇದಭಾವವಿಲ್ಲದೆ ಸಂತೋಷದ ಮದುವೆಗಳು ಸೇರಿದಂತೆ ಹಲವು ಅಂತರ್‌ಜಾತಿಯ ಮದುವೆಗಳನ್ನು ಮಾಡಿಸಿದರು ಎಂದು ನೆನಪಿಸಿಕೊಂಡಿದ್ದಾರೆ.

ದಲಿತ ಸಂಘರ್ಷ ಸಮಿತಿಯನ್ನು ತುಮಕೂರು ಜಿಲ್ಲೆಯಾದ್ಯಂತ ಬೇರುಮಟ್ಟದಿಂದ ಕಟ್ಟಿಬೆಳೆಸಿದ ನಾಯಕರಲ್ಲಿ ಅಗ್ರಗಣ್ಯರಾದ ರಂಗಸ್ವಾಮಿಯವರು ಪಂಚಮ ಪತ್ರಿಕೆಯ ಆರಂಭದ ದಿನಗಳಲ್ಲಿ ಪತ್ರಿಕೆಯನ್ನು ವಿತರಿಸುವ, ಲೇಖನಗಳನ್ನು ಸಂಗ್ರಹಿಸಿ, ಪ್ರಕಟಣೆಗೆ ಕಳುಹಿಸಿಕೊಡುವ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಪಂಚಮ ಪತ್ರಿಕೆಗೆ ರಂಬೆ ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಕೋಟಗಾನಹಳ್ಳಿ ರಾಮಯ್ಯನವರು ತಮ್ಮ ಲೇಖನದಲ್ಲಿ, ‘‘ಇಂದೂಧರ ಹೊನ್ನಾಪುರ ನಡೆಸುತ್ತಿದ್ದ ಪಂಚಮ ಪತ್ರಿಕೆಯನ್ನು ರಂಗಸ್ವಾಮಿ ಬೆಲ್ಲದಮಡು ತೆಗೆದುಕೊಂಡರು. ನಾನು ಸಂಪಾದಕನಾಗಿದ್ದರೆ, ರಂಗಸ್ವಾಮಿಯವರು ಪ್ರಕಾಶಕರಾಗಿ, ಮುದ್ರಕರಾಗಿ ಕಾರ್ಯನಿರ್ವಹಿಸಿದರು’’ ಎಂದು ಬರೆದಿದ್ದಾರೆ.

ನಾಟಕ, ಸಂಗೀತ, ನೃತ್ಯ, ಸಿನೆಮಾ ಹಾಗೂ ಜಾನಪದ ಕಲೆಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿಯನ್ನು ಹೊಂದಿದ್ದ ರಂಗಸ್ವಾಮಿಯವರು ದಲಿತ ಸಂಘರ್ಷ ಸಮಿತಿ ರಚಿಸಿದ ಜೀತದಟ್ಟಿರಂಗ ಮತ್ತು ಕೃಷ್ಣೇಗೌಡ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದರ ಜೊತೆಗೆ ನಟನೆಯನ್ನೂ ಕೂಡ ಮಾಡಿದ್ದರು. ತಮಿಳು, ಇಂಗ್ಲಿಷ್, ಹಿಂದಿ ಸೇರಿದಂತೆ ರಂಗಸ್ವಾಮಿಯವರು ಐದಾರು ಭಾಷೆಗಳನ್ನು ಮಾತನಾಡುತ್ತಿದ್ದರು. ಇದು ಅವರ ಹೋರಾಟಕ್ಕೆ ತಡೆಯಿಲ್ಲದ ಸಂವಹನಕ್ಕೆ ನಾಂದಿಯಾಯಿತು ಎಂದು ತುಮಕೂರಿನ ಮಾಜಿ ನಗರಸಭಾ ಸದಸ್ಯ ನರಸೀಯಪ್ಪನವರು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಸವತತ್ವ, ಬಸವಾದಿ ಶರಣರ ಚಳವಳಿಯ ಅರಿವಿದ್ದಿದ್ದರಿಂದ ಮಹಿಳೆಯರಿಲ್ಲದ ಸಂಘಟನೆ ಮತ್ತು ಚಳವಳಿ ಅಪೂರ್ಣವೆಂಬುದನ್ನು ಮನಗಂಡ ರಂಗಸ್ವಾಮಿ ಬೆಲ್ಲದಮಡು ಅವರು ದಲಿತ ಸಂಘರ್ಷ ಸಮಿತಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಶ್ರೀಮತಿ ಗಂಗಮ್ಮ ಕೆಂಪಯ್ಯನವರ ನೇತೃತ್ವದಲ್ಲಿ ದಲಿತ ಮಹಿಳಾ ಒಕ್ಕೂಟವನ್ನು ಸ್ಥಾಪಿಸುವ ಮೂಲಕ ಹೋರಾಟದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗವಹಿಸುವಂತೆ ಮಾಡಿದರು. ಮುಂದೆ ಗಂಗಮ್ಮನವರು ಮಹಿಳಾ ಒಕ್ಕೂಟದ ಸಂಚಾಲಕಿಯಾದರು ಎಂದು ಚಿಂತಕರು ಮತ್ತು ಡಿಎಸ್‌ಎಸ್ ಸಂಘಟಕ ಪ್ರೊ.ಕೆ. ದೊರೈರಾಜ್ ಅವರು ತಮ್ಮ ನೆನಪಿನ ಬುತ್ತಿಯನ್ನು ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ.

ಚಳವಳಿ, ಶಿಕ್ಷಣ, ಪ್ರಜ್ಞೆ, ಸಾಮಾಜಿಕ ನ್ಯಾಯಕ್ಕಾಗಿ, ಶೋಷಿತ ಜನಾಂಗಗಳ ಪ್ರಗತಿಗಾಗಿ ಹೋರಾಟ ನಡೆಸಿದ ತ್ಯಾಗಜೀವಿ ರಂಗಸ್ವಾಮಿ ಬೆಲ್ಲದಮಡು ಅವರ ‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ಕೃತಿ ಮತ್ತೊಂದು ಏಕತೆಯ ಹೋರಾಟಕ್ಕೆ ಬೆಳಕು ತೋರಿಸುವಂತಾಗಲಿ.

ಮೈತ್ರಿ ಪ್ರಕಾಶನ ಹೊರತಂದಿರುವ ಕೃತಿಯನ್ನು ವೆಂಕಟಾಚಲ ಎಚ್.ವಿ. ಅವರು ಸಂಪಾದಿಸಿದ್ದು ಕೃತಿಯ ಮುಖಬೆಲೆ ರೂ.325. ಕೃತಿಯ ಕುರಿತ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9141431674.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಅಮ್ಮಸಂದ್ರ ಸುರೇಶ್

contributor

Similar News