ದಲಿತ ಕಾಳಜಿಯ ಮಹತ್ವದ ಕೃತಿ

ಪತ್ರಕರ್ತ ಹಾಗೂ ಜನಪರ ಕಾರ್ಯಕರ್ತ ನವೀನ್ ಸೂರಿಂಜೆ ‘ಕೊರಗರು-ತುಳುನಾಡಿನ ಮಾತೃ ಸಮುದಾಯ’ ಎಂಬ ಕೊರಗರ ಕುರಿತಾದ ಒಂದು ಅವಶ್ಯವಾದ ಕೃತಿಯನ್ನು ಬರೆದಿದ್ದಾರೆ. ಇದನ್ನು ಕ್ರಿಯಾ ಪ್ರಕಾಶನ ಮುದ್ರಿಸಿ ಬಿಡುಗಡೆಗೊಳಿಸಿದೆ. ಇದು ಕೊರಗ ಸಮುದಾಯದ ಹೃದಯ ವಿದ್ರಾವಕ ಬದುಕಿನ ಒಂದು ಚಿತ್ರಣವನ್ನು ಓದುಗರಿಗೆ ನೀಡುತ್ತದೆ. ನಾಗರಿಕವೆಂದು ಹೇಳಿಕೊಳ್ಳುತ್ತಿರುವ ಸಮಾಜ ಹಾಗೂ ಅದರ ಸರಕಾರಗಳು ಒಂದು ದುಡಿಮೆಗಾರ ಸಮುದಾಯವನ್ನು ಇಷ್ಟೊಂದು ಕಿರಾತಕವಾಗಿ ನಡೆಸಿಕೊಳ್ಳುತ್ತಾ ಅಳಿವಿನಂಚಿಗೆ ದೂಡುತ್ತಾ ಬಂದಿದೆ ಎಂಬ ಕಠೋರ ಸತ್ಯವನ್ನು ಸ್ಪಷ್ಟವಾಗಿ ಮುಖಕ್ಕೆ ರಾಚುವಂತೆ ತೆರೆದಿಡುವ ಕೃತಿಯಿದು. ಇದು ಕಾಲ್ಪನಿಕ ಕೃತಿಯಲ್ಲ ಎನ್ನುವುದನ್ನು ಸ್ಪಷ್ಟವಾದ ಗ್ರಹಿಕೆಯೊಂದಿಗೆ ಓದಿಕೊಳ್ಳಬೇಕು. ಎಲ್ಲವನ್ನು ಆಧಾರಸಹಿತವಾಗಿ ವಿವರಿಸಿರುವ ಕೃತಿಯಿದು. ಕೊರಗ ಸಮುದಾಯವನ್ನು ಹತ್ತಿರದಿಂದ ಕಂಡು ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿಯನ್ನು ನವೀನ್ ಸೂರಿಂಜೆ ರಚಿಸಿದ್ದಾರೆ. 108 ಪುಟಗಳ ಈ ಕೃತಿಯನ್ನು ನಾವುಗಳು ನಮ್ಮ ಮನುಷ್ಯತ್ವ ಉಳಿಸಿಕೊಳ್ಳಲು ಓದಿ ಗ್ರಹಿಸಬೇಕಾದ ಅಗತ್ಯವಿದೆ.
ಒಟ್ಟು ಹದಿಮೂರು ಅಧ್ಯಾಯಗಳಿಂದ ಈ ಕೃತಿಯಲ್ಲಿ ಕೊರಗ ಸಮುದಾಯದ ಬಗ್ಗೆ, ಅವರನ್ನು ಈ ನಾಗರಿಕವೆಂದು ಹೇಳುತ್ತಿರುವ ಸಾಮಾಜಿಕ ವ್ಯವಸ್ಥೆ ಇಟ್ಟಿರುವ ಬಗ್ಗೆ ಮನುಷ್ಯತ್ವವಿರುವ ಹೃದಯಗಳು ಕೊರಗುವಂತಹ ವಾಸ್ತವ ಮಾಹಿತಿಗಳು ಹಾಗೂ ವಿಶ್ಲೇಷಣೆಯಿದೆ. ತುಳುನಾಡಿನಲ್ಲಿ ಕೊರಗ ಸಮುದಾಯ, ಅಜಲು ಶೋಷಣೆಯ ಅಮಾನವೀಯ ಸಮರ್ಥನೆ, ಡಾ. ಮುಹಮ್ಮದ್ ಪೀರ್ ವರದಿ ಸರಕಾರಗಳ ನಿರ್ಲಕ್ಷ್ಯ, ವಿಧಾನ ಸಭೆಯಲ್ಲಿ ಅಜಲು ನಿಷೇಧ ಕಾಯ್ದೆ ಮಂಡನೆಯ ಐತಿಹಾಸಿಕ ಪ್ರಕ್ರಿಯೆ, ಕೊರಗರ ಅಭಿವೃದ್ಧಿಯ ಶತ್ರು ಯಾರು?, ರಾಜಕೀಯದಲ್ಲಿ ಕೊರಗರು, ಜನಪದ ಐತಿಹ್ಯದಲ್ಲಿ ಕೊರಗರು, ಬ್ರಾಹ್ಮಣ ಜನಪದದಲ್ಲಿ ಕೊರಗರು, ಚಂಡರು ಮತ್ತು ಕೊರಗರು, ಕಟೀಲಿನಲ್ಲಿ ಕೊರಗರ ಆಡಳಿತ, ಬಪ್ಪನಾಡು ದುರ್ಗಾ ಪರಮೇಶ್ವರಿ ಮತ್ತು ಕೊರಗರ ಡೋಲು, ಕೊರಗರ ಕಾಂತಾರ ಈಶ್ವರ, ಕೊರಗ ಕೊರಪಲ್ದಿಯಾದ ಕದ್ರಿ ಮಂಜುನಾಥ ಎಂದೆಲ್ಲಾ ಮಾಹಿತಿಯುಕ್ತ ವಿಶ್ಲೇಷಣೆಗಳಿವೆ. ನಂತರ ಜನಪದದಲ್ಲಿ ಕೊರಗ ಹುತಾತ್ಮರು ಎಂಬ ಅಧ್ಯಾಯದಡಿ ಕೊರಗ ತನಿಯ ಹುಟ್ಟು-ಬದುಕು-ಸಾವು, ಕುತ್ತಾರಪದವು ಕೊರಗಜ್ಜನ ಕ್ರಾಂತಿ ಸ್ಥಳ, ಕೊರಗ ತನಿಯರ ವೀರತ್ವ ಮತ್ತು ಆಹಾರ, ಕೊರಗಜ್ಜ ಆರಾಧನೆ ಮತ್ತು ಅಸ್ಪಶ್ಯತೆ, ಕೊರತಿ, ಕೊರಗರ ದೈವಗಳು ಮತ್ತು ಹಿಂದುತ್ವ ರಾಜಕಾರಣ, 1950 ರಿಂದ 1990ರವರೆಗಿನ ಕೊರಗ ಸಂಘಟನೆಗಳ ಹೋರಾಟ, ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿ, ಕೊರಗರ ವರ್ತಮಾನ ಮತ್ತು ಭವಿಷ್ಯ ಹೀಗೆ ಸಾಕಷ್ಟು ವಿಶದವಾಗಿ ಮಾಹಿತಿಯುಕ್ತವಾಗಿ ಚರ್ಚಿಸಲಾಗಿದೆ.
ಈ ದೇಶದ ಬ್ರಾಹ್ಮಣಶಾಹಿ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆ ನಮ್ಮ ಸಮಾಜದ ಬುನಾದಿಯಾಗಿರುವ, ತಮ್ಮ ಜೀವಗಳನ್ನೇ ತೇಯುತ್ತಾ ಬದುಕಲು ಹೆಣಗಾಡುತ್ತಿರುವ ಇಂತಹ ದಲಿತ ಸಮುದಾಯಗಳನ್ನು ಶೋಷಿಸುತ್ತಾ ಬರುತ್ತಿದೆ. ಆರ್ಥಿಕ, ಜಾತೀಯ ಹಾಗೂ ಧಾರ್ಮಿಕ ಕಟ್ಟಳೆಗಳು ಮತ್ತು ಸಂಕೋಲೆಗಳ ಮೂಲಕ, ನೇರವಾಗಿ ಹಾಗೂ ಪರೋಕ್ಷವಾಗಿ ಹೇಗೆಲ್ಲಾ ಹೇರಿಕೆ, ಸಾಮಾಜಿಕ ಮತ್ತು ಮಾನಸಿಕ ಕ್ರೌರ್ಯ ಹಾಗೂ ದಬ್ಬಾಳಿಕೆಗಳನ್ನು ನಡೆಸುತ್ತಾ ಬರುತ್ತಿದೆ ಎನ್ನುವುದಕ್ಕೆ ಅಳಿವಿನಂಚಿಗೆ ದೂಡಲ್ಪಟ್ಟಿರುವ ಕೊರಗ ಸಮುದಾಯದ ಕುರಿತಾದ ಈ ಕೃತಿ ಬೆಳಕು ಚೆಲ್ಲುತ್ತದೆ.
ಇಪ್ಪತ್ತೊಂದನೇ ಶತಮಾನ, ಆಧುನಿಕ ಕಾಲ ಎಂದೆಲ್ಲಾ ಕರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಜನಪ್ರತಿನಿಧಿಗಳೆನಿಸಿಕೊಂಡವರ ತಲೆಗಳಲ್ಲಿ ಹೇಗೆಲ್ಲಾ ಹಾಗೂ ಯಾವ ಮಟ್ಟದಲ್ಲಿ ಜಾತಿವಾದಿ ಕಟುವಿಷ ತುಂಬಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕೂಡ ಈ ಕೃತಿಯನ್ನು ಓದಬೇಕು. ವಿಧಾನ ಸೌಧದಲ್ಲಿ ಕೊರಗರು ಹಾಗೂ ಅನಿಷ್ಟಕಾರಿ ಅಜಲು ಪದ್ಧತಿ ಬಗ್ಗೆ ನಡೆದ ಚರ್ಚೆಗಳ ಅಧಿಕೃತ ವಿವರಗಳು ಈ ಕೃತಿಯಲ್ಲಿ ಅಡಕವಾಗಿದೆ.
ಜನಪದ ಕತೆಗಳ ಪ್ರಕಾರ ಕಟೀಲು ದುರ್ಗಪರಮೇಶ್ವರಿ ದೇವಸ್ಥಾನ ಕೂಡ ಕೊರಗರಿಗೆ ಸೇರಿದ್ದಾಗಿತ್ತು ಎನ್ನುವುದಕ್ಕೆ ಜನಪದ ಹಾಗೂ ಕಟೀಲಿನಲ್ಲಿ ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಆಚರಣೆಗಳ ಮೂಲಕ ವಿವರಿಸಲಾಗಿದೆ.
ಈ ಕೃತಿಯಲ್ಲಿ ಜನಪದ ಐತಿಹ್ಯದಲ್ಲಿ ಕೊರಗರು ಎಂಬ ಅಧ್ಯಾಯದಡಿ ತುಳುನಾಡನ್ನು ಕೊರಗರು ಆಳುತ್ತಿದ್ದವರು. ಹುಬ್ಬಾಸಿಗ ಎಂಬಾತ ರಾಜನಾಗಿದ್ದ. ನಂತರ ಮೋಸಕ್ಕೆ ತುತ್ತಾಗಿ ಪ್ರಾಣ ಕಳಕೊಂಡ. ಆನಂತರ ಬ್ರಾಹ್ಮಣರು ಸೇರಿದಂತೆ ಆಕ್ರಮಣಕಾರಿ ಆಳುವ ವರ್ಗ ಅಸ್ಪಶ್ಯರಲ್ಲಿ ಅಸ್ಪಶ್ಯರನ್ನಾಗಿ ಕೊರಗ ಸಮುದಾಯವನ್ನು ದೂಡಿತು. ಅಮಾನವೀಯ ಹಾಗೂ ಅನಾಗರಿಕ ಅಜಲು ಪದ್ಧತಿಯಡಿ ಕೊರಗ ಸಮುದಾಯವನ್ನು ಸಿಲುಕಿಸಿ ಶೋಷಿಸುತ್ತಾ ನ್ಯಾಯಬದ್ಧ ಅವಕಾಶಗಳಿಂದೆಲ್ಲಾ ವಂಚಿಸುತ್ತಾ ಬರಲಾಯಿತು ಎಂಬುದರ ವಿವರಣೆಯಿದೆ. ಅದಕ್ಕೆ ಆಧಾರವಾಗಿ ಹಲವು ಉಲ್ಲೇಖಗಳನ್ನು ಹಾಗೂ ಅಧ್ಯಯನಗಳ ಉಲ್ಲೇಖಗಳನ್ನು ಲೇಖಕರು ನೀಡುತ್ತಾರೆ. ಅದರಲ್ಲಿ ಬ್ರಾಹ್ಮಣರ ಜನಪದವೂ ಒಂದು.
ಈಗೆಲ್ಲಾ ಕೊರಗಜ್ಜ ದೇವಸ್ಥಾನಗಳು ಹಾಗೂ ಆರಾಧನೆಗಳು ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ ಮಲೆನಾಡು ಭಾಗಗಳಲ್ಲೂ ಹೆಚ್ಚುತ್ತಿದೆ. ಅದಕ್ಕನುಗುಣವಾಗಿ ಇತ್ತೀಚೆಗೆ ಸಂಘಪರಿವಾರದ ವಿಶ್ವಹಿಂದೂ ಪರಿಷತ್ ದಕ್ಷಿಣಕನ್ನಡದಲ್ಲಿರುವ ಕೊರಗಜ್ಜ ಕ್ಷೇತ್ರಕ್ಕೆ ಯಾತ್ರೆಯನ್ನು ಕೂಡ ಸಂಘಟಿಸಿತ್ತು. ಅಂದರೆ ಜನಪ್ರಿಯವಾಗುತ್ತಿರುವ ಕೊರಗಜ್ಜನ ವೈದಿಕೀಕರಣದ ಭಾಗವನ್ನಾಗಿ ಹಾಗೆಯೇ ಕೊರಗಜ್ಜನ ಆರಾಧಕರನ್ನು ದಿಕ್ಕು ತಪ್ಪಿಸಿ ತಮ್ಮ ವಿನಾಶಕಾರಿ ಕೋಮು ಹಾಗೂ ಜಾತಿ ರಾಜಕಾರಣದೊಳಗೆ ಸೆಳೆದಿಡುವ ಕುತಂತ್ರವೆಂದೇ ಇದನ್ನು ಪರಿಗಣಿಸಬೇಕಾಗುತ್ತದೆ.
ನವೀನ್ ಈ ಕೃತಿಯಲ್ಲಿ ಕೊರಗ ಸಮುದಾಯದ ತನಿಯ ಎಂಬ ಬಂಡಾಯಗಾರ ಕೊರಗಜ್ಜನಾದ ಬಗೆಯನ್ನು ಒಂದಷ್ಟು ವಿವರಣೆಗಳ, ಜನಪದ ಇನ್ನಿತರ ಮೂಲಗಳ ಉಲ್ಲೇಖಗಳೊಂದಿಗೆ ಮಾಹಿತಿ ಒದಗಿಸುತ್ತಾರೆ. ಇಂದು ಕೊರಗಜ್ಜನ ಕ್ರೇತ್ರವೂ ಕೊರಗ ಸಮುದಾಯದಿಂದ ಶೋಷಕ ಶಕ್ತಿಗಳ ಪ್ರತಿನಿಧಿಗಳೇ ಕಿತ್ತುಕೊಂಡಿವೆ ಎಂಬ ವೈದಿಕತೆಯ ವಾಸ್ತವಗಳನ್ನು ತೆರೆದಿಡುತ್ತಾರೆ. ಬ್ರಾಹ್ಮಣ ಸಮುದಾಯದ ಹಿನ್ನೆಲೆಯ ಕುದ್ಮುಲ್ ರಂಗರಾವ್ ಕೊರಗ ಸಮುದಾಯಕ್ಕಾಗಿ ಮಾಡಿದ ಹೋರಾಟ ಹಾಗೂ ಕಾರ್ಯಗಳ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ. ಆ ಕಾರ್ಯ ಅಲ್ಲಿಗೆ ನಿಂತು ಹೋಗಿದ್ದರಿಂದ ಕೊರಗ ಸಮುದಾಯಕ್ಕೆ ಆದ ನಷ್ಟಗಳು ಬಹಳ ಎಂದು ನವೀನ್ ಹೇಳುತ್ತಾರೆ.
ಸ್ವಾಭಿಮಾನಿ ಚಳವಳಿಯ ಕೊರತೆ ದಲಿತ ಸಂಘರ್ಷ ಸಮಿತಿಯಂತಹ ಸಂಘಟನೆಗಳಲ್ಲಿ ಕೊರಗರು ಒಳಗೊಳ್ಳದೆ ಹೋಗಿದ್ದರಿಂದಾಗಿ ದಲಿತರಲ್ಲಿ ದಲಿತರಾಗಿರುವ ಕೊರಗರು ತಮ್ಮ ಅಸ್ತಿತ್ವ ಹಾಗೂ ಅನನ್ಯತೆ ಕೊನೆಗೆ ಸಮುದಾಯವಾಗಿಯೇ ವಿನಾಶದ ಅಂಚಿಗೆ ದೂಡಲ್ಪಟ್ಟಿರುವ ದಾರುಣತೆಯನ್ನು ಈ ಕೃತಿ ತೆರೆದಿಡುತ್ತದೆ.
ನಮ್ಮ ಸಮಾಜದ ಊಳಿಗಮಾನ್ಯ ಮನೋಭಾವ ಹಾಗೂ ದಬ್ಬಾಳಿಕೆಗಳನ್ನು, ನಾಗರಿಕ ವೇಷದಲ್ಲಿರುವ ಕಿರಾತಕತೆಯನ್ನು ಗ್ರಹಿಸಬೇಕಾದರೆ ಇಂತಹ ಕೃತಿಗಳನ್ನು ಮನನ ಮಾಡಿಕೊಳ್ಳಬೇಕಾಗಿದೆ.
ಈ ಕೃತಿಯಲ್ಲಿನ ಒಂದು ಪ್ರಮುಖ ಲೋಪವೇನೆಂದರೆ ಕಾಂಗ್ರೆಸ್ ಕೊರಗರ ಪರವಾಗಿದೆ, ಬಿಜೆಪಿ ಮಾತ್ರ ವಿರುದ್ಧವಾಗಿದೆ ಎಂಬಂತೆ ನಿರೂಪಣೆಗಳು ಹಾಗೂ ಉದಾಹರಣೆಗಳ ಉಲ್ಲೇಖಗಳ ಮೂಲಕ ಬಿಂಬಿತವಾಗಿದೆ. ಇದು ರಾಜಕೀಯವಾಗಿಯೂ ಹಾಗೂ ವಾಸ್ತವವಾಗಿಯೂ ಸರಿಯಾದುದಲ್ಲ. ರಾಜ್ಯದಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ಮಾಡಿದ್ದು ಕಾಂಗ್ರೆಸ್ ಪಕ್ಷ ತಾನೇ. ಕೊರಗರಿಗೆ ಭೂಮಿ ಕೊಟ್ಟು ಕೃಷಿಗೆ ನೆರವಾಗಿ ಅವರ ಬಳಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾಕೆ ತಲುಪುವಂತೆ ಮಾಡಲಿಲ್ಲ....? ಕೊರಗರು ಇಂತಹ ದಾರುಣ ಪರಿಸ್ಥಿತಿಗೆ ತಲುಪಿದ್ದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲವೇ? ಅಜಲು ಪದ್ಧತಿ ನಿಷೇಧ ಕೂಡ ಬಹಳ ತಡವಾಗಿ ಅದೂ ಸಾರ್ವಜನಿಕ ಒತ್ತಡ ಹೆಚ್ಚಾಗಿದ್ದರಿಂದಾಗಿ ಮಾಡಿದ್ದಲ್ಲವೇ? ಹೀಗೆಲ್ಲಾ ಪ್ರಶ್ನೆಗಳು ಎದುರಾಗುತ್ತವೆ.
ಹಾಗೆಯೇ ವ್ಯಕ್ತಿಗತವಾಗಿ ಕೆಲವು ರಾಜಕೀಯ ಪಕ್ಷಗಳ ನಾಯಕರು ಸಾಂದರ್ಭಿಕವಾಗಿಯೋ ಇಲ್ಲವೇ ಬೇರಾವುದೋ ಕಾರಣಗಳಿಗಾಗಿಯೋ ಕೊರಗರ ಪರವಾಗಿ ಎಲ್ಲೊ ಒಂದು ಕಡೆ ಮಾತನಾಡಿದ್ದೋ ಇಲ್ಲವೇ ಕೊರಗರ ಪರ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಲಾಗಿದೆ. ಈ ಪದ್ಧತಿ ತಪ್ಪಾದ ನಿರೂಪಣೆಯಾಗುತ್ತದೆ. ಅವರು ಕೊರಗರ ಪರವಾಗಿ ಪ್ರಾಮಾಣಿಕ ಕಾಳಜಿಯಿಂದ ಕಾರ್ಯನಿರ್ವಹಿಸಿದ್ದರೆ ಇಲ್ಲವೇ ಕೊರಗ ಸಮುದಾಯದ ಅಭಿವೃದ್ಧಿಗಾಗಿ ದುಡಿದಿದ್ದರೆ ಮಾತ್ರ ಉಲ್ಲೇಖಗಳಡಿ ತರುವುದು ಸರಿಯಾದ ವಿಧಾನವಾಗುತ್ತದೆ. ಇಲ್ಲದಿದ್ದಲ್ಲಿ ತಪ್ಪಾಗಿ ಬಿಂಬಿತವಾಗುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಅಲ್ಲದೆ ಕೃತಿಯ ಗಂಭೀರತೆಗೂ ಹಾನಿ ಮಾಡುತ್ತದೆ.
ದಲಿತರ ಪ್ರಶ್ನೆ ಮೂಲಭೂತವಾಗಿ ಭೂಹಂಚಿಕೆ ಹಾಗೂ ಸಮಾಜದ ಎಲ್ಲಾ ಅವಕಾಶಗಳನ್ನು ಆಯಾ ಜನಸಂಖ್ಯೆಗಳಿಗನುಗುಣವಾಗಿ ವೈಜ್ಞಾನಿಕವಾಗಿ ಹಾಗೂ ಸಹಜವಾಗಿ ದೊರೆಯುವಂತೆ ಖಾತ್ರಿಪಡಿಸುವುದಾಗಿರಬೇಕು. ಅದು ಒಂದು ಸಮಾಜದಲ್ಲಿ ನಾಗರಿಕತೆ ಹಾಗೂ ಪ್ರಜಾತಾಂತ್ರಿಕತೆ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪ್ರಧಾನ ಮಾನದಂಡವೂ ಆಗುತ್ತದೆ. ಅದನ್ನು ಖಾತ್ರಿಪಡಿಸುವುದು ಪ್ರಜಾತಾಂತ್ರಿಕ ಹಾಗೂ ಸಂವಿಧಾನಬದ್ಧ ಸರಕಾರವೊಂದರ ಪ್ರಧಾನ ಕರ್ತವ್ಯವಾಗಬೇಕು. ಈ ಪ್ರಧಾನ ಕರ್ತವ್ಯವನ್ನು ಯಾವ ರಾಜಕೀಯ ಪಕ್ಷಗಳೂ ತೆಗೆದುಕೊಂಡಿಲ್ಲ ಹಾಗೇ ತೆಗೆದುಕೊಳ್ಳಲು ಇಂದಿಗೂ ತಯಾರಿಲ್ಲ ಎಂಬುದೇ ಈ ದೇಶದ ವಾಸ್ತವವಾಗಿದೆ. ಒಂದಷ್ಟು ಸಿಹಿಲೇಪನಗಳ ಮೂಲಕ ದಲಿತ ದಮನಿತ ಸಮುದಾಯಗಳನ್ನು ವಂಚಿಸುತ್ತಾ ಇರುವುದೇ ಆಳುವ ವರ್ಗಗಳ ಪಕ್ಷಗಳ ಪ್ರಧಾನ ಕಾರ್ಯವಾಗಿದೆ ಎನ್ನುವುದೇ ವಾಸ್ತವ.
ಈ ಮೇಲಿನ ಲೋಪಗಳ ಅಂಶಗಳನ್ನು ಹೊರತುಪಡಿಸಿದಂತೆ ಕೊರಗ ಸಮುದಾಯದ ಕುರಿತಾದ ಈ ಕೃತಿ ಬಹಳ ಅಗತ್ಯವೂ ಹಾಗೂ ಗಂಭೀರತೆಯುಳ್ಳದ್ದಾಗಿದೆ. ಕೊರಗರ ಬಗ್ಗೆ ಹಲವು ಸಂಶೋಧನಾ ಕೃತಿಗಳೆನ್ನಿಸಿಕೊಂಡವುಗಳು ಕೊರಗರನ್ನು ಸಿಲುಕಿಸಿರುವ ಅಜಲು ಪದ್ಧತಿ, ಪನಿಕುಲ್ಲುನು ಇತ್ಯಾದಿಗಳನ್ನು ಸಮಾಜೋ ಆರ್ಥಿಕ ಹಿನ್ನೆಲೆಯಲ್ಲಿ ಅರ್ಥೈಸಿ ನೋಡದೆ ಅಂತಹ ಅನಾಗರಿಕ ಹಾಗೂ ಅಮಾನವೀಯ ಪದ್ಧತಿಗಳನ್ನು ವೈಭವೀಕರಿಸಿ ಸಮರ್ಥಿಸುವ ರೀತಿಯಲ್ಲಿ ಬರೆದಿರುವುದೇ ಹೆಚ್ಚು. ಅಂತಹುದರಲ್ಲಿ ಈ ಕೃತಿ ಕೊರಗ ಸಮುದಾಯದ ಕುರಿತು ನೈಜ ಚಿತ್ರಣವನ್ನು ತೆರೆದಿಡುತ್ತದೆ. ಅದಕ್ಕಾಗಿ ನವೀನ್ ಸೂರಿಂಜೆಯವರನ್ನು ಅಭಿನಂದಿಸಲೇಬೇಕಾಗುತ್ತದೆ.
ಕೃತಿಯ ಬಗ್ಗೆ ಆಸಕ್ತಿಯಿರುವವರು
ಕ್ರಿಯಾ ಮಾಧ್ಯಮ ಪ್ರೈ. ಲಿ., 37/ಎ, 4ನೇ ತಿರುವು, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು- 560086, ಮೊಬೈಲ್ 9036082005
ಇವರನ್ನು ಸಂಪರ್ಕಿಸಬಹುದು.