ದಲಿತ ಸಂವೇದನೆಯೊಂದಿಗೆ ಒನಕೆ ಓಬವ್ವಳ ಚರಿತ್ರೆಯ ಮುಖಾಮುಖಿ

ಧರ್ಮ ಮತ್ತು ಸಾಂಪ್ರದಾಯಿಕ ಚರಿತ್ರೆ ರಚನೆಯಿಂದ ಯಾವುದೇ ದೇಶದ ಸಾಂಸ್ಕೃತಿಕ ಹಿನ್ನೆಲೆಗೆ ಭಾರೀ ನಷ್ಟ ಉಂಟಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ‘ಇತಿಹಾಸವನ್ನು ಮರೆತವರು-ಇತಿಹಾಸವನ್ನು ಸೃಷ್ಟಿಸಲಾರರು’. ಆದರೆ ಅಂಬೇಡ್ಕರ್ ಅವರ ಈ ತತ್ವವನ್ನು ಭಾರತದ ಚರಿತ್ರೆಕಾರರು ಅಳವಡಿಸಿಕೊಳ್ಳದೆ ಚರಿತ್ರೆಯನ್ನು ವೈಭವೀಕರಿಸಿ ಬರೆಯುವ ಮೂಲಕ ಮಾನವರ ಸಹಜೀವನದ ಶ್ರೇಷ್ಠ-ಕನಿಷ್ಠ, ಸ್ಪಶ್ಯ-ಅಸ್ಪಶ್ಯ, ಧರ್ಮ ಹಾಗೂ ಜಾತಿಗಳ ನಡುವಿನ ಅಂತರಗಳ ವಸ್ತುನಿಷ್ಠ ಚರಿತ್ರೆಯನ್ನು ದಾಖಲಿಸುವಲ್ಲಿ ಹೆಚ್ಚಿನ ಚರಿತ್ರೆಕಾರರು ವಿಫಲರಾಗಿದ್ದಾರೆ.
ಕೆಲವರು ಮಾಡಿದ ಈ ಪ್ರಜ್ಞಾಪೂರ್ವಕ ಕೃತ್ಯದಿಂದಾಗಿ ಭಾರತದ ಚರಿತ್ರೆ ಬಡವಾಗಿದೆ. ಇಂತಹ ಚರಿತ್ರೆ ರಚನೆಯಲ್ಲಿ ಉದಯಿಸಿದವಳೇ ಛಲವಾದಿ ಜನಾಂಗದ ವೀರವನಿತೆ ಚಿತ್ರದುರ್ಗದ ಒನಕೆ ಓಬವ್ವೆ. ಹಾಗೆ ನೋಡಿದರೆ, ಓಬವ್ವೆ ಯಾವುದೇ ಸಂಸ್ಥಾನದ ಪಾಳೇಗಾರರ ರಾಣಿಯೂ ಆಗಿರಲಿಲ್ಲ. ವೈದಿಕರಿಂದ ಕ್ಷತ್ರಿಯ ಎಂದು ದೀಕ್ಷೆಯನ್ನು ಪಡೆದು ರಾಜಾಳ್ವಿಕೆಯನ್ನು ಮಾಡಿದ ಕ್ಷತ್ರಿಯ ಕುಲಕ್ಕೆ ಸೇರಿದವಳೂ ಅಲ್ಲ. ಬದಲಾಗಿ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಮೇಲ್ಪಂಕ್ತಿಯರು ಎಂದು ಹೇಳಿಕೊಳ್ಳುವವರಿಂದ ಶತಶತಮಾನ ಗಳಿಂದ ಅಸ್ಪಶ್ಯತೆ ಎಂಬ ಅಮಾನವೀಯ ಸಂಕೋಲೆಯಲ್ಲಿ ಸಿಲುಕಿ ಬದುಕಿ ಬಾಳಿದ ಕುಲದವಳು. ಒನಕೆ ಓಬವ್ವೆಯ ವಂಶಸ್ಥರ ಶ್ರಮದ ಚರಿತ್ರೆಯನ್ನು ದಾಖಲಿಸದೆ, ಚಿತ್ರದುರ್ಗದ ಕೋಟೆಯನ್ನು ಹೈದರಲಿಯ ಸೈನ್ಯದ ದಾಳಿಯ ಹಿನ್ನೆಲೆಯಲ್ಲಿ ಕೋಮುಭಾವನೆಯ ಚರಿತ್ರೆ ರಚನೆಯ ಹಿನ್ನೆಲೆಯಲ್ಲಿ ಒನಕೆ ಓಬವ್ವೆಯನ್ನು ಬಳಸಿಕೊಳ್ಳಲಾಯಿತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆಯವರು ತಮ್ಮ ಕೃತಿ ‘ಛಲವಾದಿ ವೀರವನಿತೆ ಒನಕೆ ಓಬವ್ವೆ’ ಕೃತಿಯಲ್ಲಿ ದಾಖಲಿಸಿದ್ದಾರೆ.
ದಲಿತ ಸಂವೇದನೆಯೊಂದಿಗೆ ಮುಖಾಮುಖಿ ಎಂಬ ಅಡಿ ಬರಹವನ್ನು ಹೊಂದಿರುವ ಈ ಕೃತಿಯ ಶೀರ್ಷಿಕೆಯೇ ಹೇಳುವಂತೆ ಲೇಖಕರು ಕಾಲಕಾಲಕ್ಕೆ ಇತಿಹಾಸದ ಓದು ಹಾಗೂ ಗ್ರಹಿಕೆಯಲ್ಲಿ ಹೊಸ ಹೊಸ ದಲಿತ ಸಂವೇದನೆಯ ಜೀವನಾನುಭವವು ಜನಮುಖಿ ಯಾಗಿ ವಿಭಿನ್ನತೆಯನ್ನು ದಾಖಲಿಸುವ ಮತ್ತು ಅದನ್ನು ನೋಡುವ, ಗ್ರಹಿಸುವ ಅಭಿವ್ಯಕ್ತಿಯ ಭಿನ್ನತೆಯನ್ನು ಈ ಕೃತಿಯಲ್ಲಿ ಕಾಣಬಹುದು.
ಪ್ರೊ. ಚಿನ್ನಸ್ವಾಮಿ ಸೋಸಲೆಯವರು ನಾಡಿನ ಚರಿತ್ರೆ ಅಧ್ಯಯನ ದಲ್ಲಿ ಶಿಸ್ತಿನ ವಿದ್ವಾಂಸರು. ಅವರ ಚಿಂತನೆಗಳು ಮತ್ತು ಬರಹಗಳು ಸಾಂಪ್ರದಾಯಿಕ ಚರಿತ್ರೆಯ ಚೌಕಟ್ಟಿನ ಆಚೆಗೂ ವಿಸ್ತರಿಸಿಕೊಳ್ಳುತ್ತವೆ ಎಂದು ಕೃತಿಯ ಮುನ್ನುಡಿಯಲ್ಲಿ ದಾಖಲಿಸಿರುವ ಪ್ರಾಧ್ಯಾಪಕ ಹಾಗೂ ಚಿಂತಕ ಪ್ರೊ.ಬಿ.ಎಂ. ಪುಟ್ಟಯ್ಯನವರು ಚರಿತ್ರೆ ಎಂಬುದು ಆಗಿಹೋದ ಘಟನೆ ಮಾತ್ರವಲ್ಲ. ಪ್ರಸ್ತುತ ಆಗುತ್ತಿರುವ ಪ್ರಕ್ರಿಯೆಯೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ದೃಷ್ಟಿಕೋನವು ಕೃತಿಯ ಲೇಖಕರಿಗೆ ಖಚಿತವಾಗಿರುವುದರಿಂದ ಅವರು ಚರಿತೆಯ ಅಧ್ಯಯನಶಿಸ್ತನ್ನು ಸಮಕಾಲೀನ ದಲಿತರ ಸಕಲ ಸಮಸ್ಯೆಗಳು ಹಾಗೂ ಸಂಕಟಗಳೊಡನೆ ಬೆರೆಸಿ ನೋಡುವ ಅಕಡಮಿಕ್ ಪರಿಣಿತಿಯನ್ನು ಹೊಂದಿದ್ದಾರೆ. ದಲಿತರ ಗ್ರಹಿಕೆಯು ದಲಿತರ ಹಿತಾಸಕ್ತಿಯಿಂದ ಪ್ರತ್ಯೇಕವಾಗುತ್ತಿದೆ. ಇಂತಹ ಸಂದರ್ಭ ದಲ್ಲಿ ಡಾ.ಎನ್. ಚಿನ್ನಸ್ವಾಮಿ ಸೋಸಲೆಯವರು ಚಿತ್ರದುರ್ಗದ ಚರಿತ್ರೆಯಲ್ಲಿ ಛಲವಾದಿ ಜನಾಂಗದ ವೀರ ಮಹಿಳೆ ಎನ್ನಿಸಿಕೊಂಡ ಒನಕೆ ಓಬವ್ವೆಯ ರಾಷ್ಟ್ರೀಯ ದೃಷ್ಟಿಕೋನದ ವರ್ಣನಾತ್ಮಕ ಚರಿತೆಯನ್ನು ವರ್ತಮಾನ ಮತ್ತು ಪ್ರಸಕ್ತ ಸಬಾಲ್ಟರ್ನ್ ಚರಿತ್ರೆ ರಚನೆಯ ದೃಷ್ಟಿಕೋನದಲ್ಲಿ ಗ್ರಹಿಸುವ ಪ್ರಯತ್ನವನ್ನು ಬಹಳ ಸೂಕ್ಷ್ಮ ವಾಗಿ ದಲಿತ ಸಂವೇದನೆಯೊಂದಿಗೆ ಮುಖಾಮುಖಿ ಮಾಡಿದ್ದಾರೆ.
ದಲಿತ ಸಂವೇದನೆ ಎನ್ನುವುದು ಆಕ್ರೋಶ ಅಥವಾ ವಿತಂಡವಾದದ ಪರಿಕಲ್ಪನೆಯಲ್ಲ. ವ್ಯವಸ್ಥೆಯನ್ನು ಪ್ರಶ್ನಿಸುವುದು ಸಹ ದಲಿತ ಸಂವೇದನೆಯೇ ಆಗಿದೆ. ಆದರೆ ನಮ್ಮ ವರ್ಣರಂಜಿತ ಇತಿಹಾಸ ಮಾತ್ರ ಈ ದಲಿತ ಸಂವೇದನೆಯನ್ನು ದಾಖಲಿಸಿದ್ದು ಕಡಿಮೆ. ಅದು ಅದರ ಮಿತಿಯೂ ಆಗಿದೆ. ಈ ಮಿತಿಯಲ್ಲಿಯೇ ಒನಕೆ ಓಬವ್ವಳನ್ನು ವರ್ಣರಂಜಿತವಾಗಿ ಇತಿಹಾಸವು ದಾಖಲಿಸಿದೆ ಎಂದು ಕೃತಿಯಲ್ಲಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
‘ಒನಕೆ ಓಬವ್ವೆಯ ಇತಿಹಾಸವು ಕಾಲ್ಪನಿಕ ಚರಿತೆಯಲ್ಲಿ ಕೆಳ ಸಮುದಾಯದವರು ಇಲ್ಲಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ತಮ್ಮ ಐಡೆಂಟಿಟಿಗಾಗಿ ರಚಿಸಿದ ಅಥವಾ ಸವರ್ಣೀಯರು ಬರೆದು ದಲಿತರನ್ನು ತಮ್ಮ ಸ್ವಾರ್ಥಕ್ಕೆ ಗುರುತಿಸಿಕೊಳ್ಳುವ ಮಾದರಿಯ ತೋರಿಕೆಯ ಚರಿತ್ರೆಯಾಗಿದೆ’ ಎನ್ನುವ ಲೇಖಕರು, ‘ಮಧ್ಯಕಾಲೀನ ಚರಿತ್ರೆಯಲ್ಲಿ ದಲಿತರಿಗೆ ಮಹತ್ವದ ಸ್ಥಾನಮಾನಗಳಿದ್ದರೂ ಸಹ ಅವರ ಅವರ್ಣನಾತ್ಮಕವಾದ ಚರಿತ್ರೆಯನ್ನು ಎಲ್ಲೂ ದಾಖಲಿಸದ ಇತಿಹಾಸಕಾರರು ಛಲವಾದಿ ಚಿನ್ನಪ್ಪನ ಮಗಳಾದ ಓಬವ್ವೆಗೆ ಮಾತ್ರ ವರ್ಣನಾತ್ಮಕ ಸ್ಥಾನವನ್ನು ನೀಡಿದ್ದು ಅನೇಕ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ.
‘ನಾಗರಹಾವು’ ಸಿನೆಮಾದಲ್ಲಿ ಓಬವ್ವೆಯ ಸಾಹಸ ಹಾಗೂ ಯುದ್ಧರಂಗದಲ್ಲಿ ಶತ್ರು ಸೈನಿಕರನ್ನು ಸಾಯಿಸುವ ವರ್ಣರಂಜಿತ ಸನ್ನಿವೇಶವನ್ನು ನೋಡಿಯೇ ಒನಕೆ ಓಬವ್ವೆಯ ಚರಿತ್ರೆಯನ್ನು ದಾಖಲಿಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ಮನಗಾಣಬೇಕಾಗಿದೆ. ಅದು ಕಾಲ್ಪನಿಕ ಚರಿತ್ರೆ-ವಾಸ್ತವಿಕ ಚರಿತ್ರೆಯ ಗ್ರಹಿಕೆ ಹಾಗೂ ಬರವಣಿಗೆ ಬೇರೆಯೇ ಇದೆ. ಏಕೆಂದರೆ, ಭಾರತದ ಪ್ರಭುತ್ವ ಹಾಗೂ ಜನಕೇಂದ್ರಿತ ಚರಿತ್ರೆ ರಚನೆಯಲ್ಲಿ ಸಾಮ್ರಾಜ್ಯ- ಸಂಸ್ಥಾನಗಳನ್ನು ದುಡಿದು ಕಟ್ಟಿದವರ ಚರಿತ್ರೆ ಗೌಣವಾಗಿದ್ದು ದುಡಿಯದೇ ಸಾಮ್ರಾಜ್ಯ ಹಾಗೂ ಸಂಸ್ಥಾನಗಳಲ್ಲಿ ಮೆರೆದವರ ಚರಿತ್ರೆ ಅಜರಾಮರವಾಗಿರುವುದನ್ನು ಕಾಣಬಹುದು.
ಕನ್ನಡ ನೆಲದ ನೆಲಮೂಲ ಸಂಸ್ಕೃತಿಯ ವೀರವನಿತೆ ಒನಕೆ ಓಬವ್ವೆಯ ಚರಿತ್ರೆಯನ್ನು ಪುನರ್‌ರಚಿಸುವ ಮೂಲಕ ದಲಿತ ಸಂವೇದನೆಯೊಂದಿಗೆ ಮುಖಾಮುಖಿಯಾಗಬೇಕು ಎಂಬುದನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಚಿತ್ರದುರ್ಗದ ಒನಕೆ ಓಬವ್ವೆಯ ಚಾರಿತ್ರಿಕ ವಿವೇಚನೆ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡಿರುವ ಪ್ರೊ. ಲಕ್ಷ್ಮಣ್ ತೆಲಗಾವಿಯವರು ಮಂಡಿಸಿದ ಓಬವ್ವೆಯ ಕುರಿತಾದ ಚರಿತ್ರೆಯ ಮರುಚಿಂತನೆ ಅಥವಾ ಪುನರ್‌ವ್ಯಾಖ್ಯಾನದ ಹಲವು ವಿಚಾರಗಳನ್ನು ಕೃತಿಯಲ್ಲಿ ಚರ್ಚಾಪೂರ್ವಕವಾಗಿ ಬಳಸಿಕೊಳ್ಳಲಾಗಿದೆ.
ಓಬವ್ವೆಯ ಜೀವಿತಾವಧಿ, ಅವಳ ಹಿನ್ನೆಲೆ, ಅವಳು ತೋರಿದ ಸಾಹಸದ ಕುರಿತಾದ ಜಾನಪದೀಯ ಹಾಗೂ ಚಾರಿತ್ರಿಕ ಘಟನೆಗಳು, ಚಿತ್ರದುರ್ಗದ ಕೋಟೆಯಲ್ಲಿ ಓಬವ್ವೆ ತೋರಿದಳೆನ್ನಲಾದ ಸಾಹಸದ ವಾಸ್ತವಿಕತೆ, ಪ್ರಸ್ತುತ ಚರಿತ್ರೆಯಲ್ಲಿ ದಾಖಲಾಗಿರುವಂತೆ ಅವಳು ಮದಕರಿನಾಯಕನ ರಾಜಸಭೆಯಲ್ಲಿ ‘‘ನಿನಗೇನು ಬೇಕು?’’ ಎಂದು ಕೇಳಿದಾಗ ಅವಳು ಕೇಳಿಕೊಂಡ ಬೇಡಿಕೆಗಳು, ಅವಳ ಅಂತ್ಯದ ಕುರಿತಾದ ವಿವರಣೆ, ಓಬವ್ವೆಯ ಸಾವಿನ ನಂತರ ಚಿತ್ರದುರ್ಗದ ಕೋಟೆಯೊಳಗಿರುವ ಓಬವ್ವೆಯ ಸಮಾಧಿ ಎಂದು ಹೇಳಲಾಗುವ ಸ್ಥಳದ ನಿಖರತೆ, ದಲಿತ ಸಂವೇದನೆಯ ಹಿನ್ನೆಲೆಯಲ್ಲಿ ಈ ಘಟನೆಗಳ ಹಿಂದಿನ ಪ್ರಸ್ತುತತೆ, ಹೈದರಲಿಯ ಸೈನ್ಯದ ದಾಳಿಯನ್ನು ಹಿಮ್ಮೆಟ್ಟಿಸಿದ ಓಬವ್ವೆಯನ್ನು ಸ್ವಾತಂತ್ರ್ಯ ಹೋರಾಟಗಾರಳಂತೆ ಚಿತ್ರಿಸಿದ ಚರಿತ್ರೆಕಾರರ ಔಚಿತ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಕೃತಿಯಲ್ಲಿ ಚರ್ಚಿಸಲಾಗಿದೆ.
ಹೈದರಲಿಯ ಚರಿತ್ರೆಯನ್ನು ದಾಖಲಿಸಿರುವ ಡಾ. ಷೇಕ್ ಅಲಿ, ಕರ್ನಾಟಕದ ವೀರಗಲ್ಲುಗಳ ಕುರಿತು ಅಧ್ಯಯನ ಮಾಡಿರುವ ಡಾ. ಆರ್.ಶೇಷಶಾಸ್ತ್ರ, ಒನಕೆ ಓಬವ್ವ ಹಾಗೂ ಚಿತ್ರದುರ್ಗದ ಕೋಟೆಯ ಕುರಿತಾದ ಡಾ. ಅರವಿಂದ ಮಾಲಗತ್ತಿಯವರು ಮತ್ತು ಒನಕೆ ಓಬವ್ವೆಯ ವಂಶಸ್ಥರೆಂದು ಹೇಳಿಕೊಳ್ಳುವ ಪ್ರೊ. ಎಂ.ಡಿ. ಕೃಷ್ಣಯ್ಯನವರು ಸೇರಿದಂತೆ ಹಲವು ವಿದ್ವಾಂಸರು ಒನಕೆ ಓಬವ್ವನ ಕುರಿತಾದ ಕೃತಿಗಳನ್ನು ಮತ್ತು ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಈ ಪುಟ್ಟ ಕೃತಿಯಲ್ಲಿ ಓರೆಗಲ್ಲಿಗೆ ಹಚ್ಚಲಾಗಿದೆ.
ಈ ಕೃತಿಯು ಒನಕೆ ಓಬವ್ವನ ಕುರಿತು ಅಧ್ಯಯನ ಮಾಡುವವರಿಗೆ ಅತ್ಯುತ್ತಮ ಪರಾಮರ್ಶನ ಕೃತಿಯಾಗಿದೆ. ಹೊಸಪೇಟೆಯ ಯಾಜಿ ಪ್ರಕಾಶನ ಹೊರತಂದಿರುವ ಈ ಪುಸ್ತಕವು 84 ಪುಟಗಳನ್ನು ಹೊಂದಿದ್ದು ಮುಖಬೆಲೆ 120 ರೂಪಾಯಿಗಳಾಗಿದೆ. ಪುಸ್ತಕದ ಪ್ರತಿಗಳಿಗಾಗಿ ದೂರವಾಣಿ ಸಂಖ್ಯೆ 7019637741 ಅನ್ನು ಸಂಪರ್ಕಿಸಬಹುದು.