ಮೀಸಲಾತಿ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡುವ ಕೃತಿ

ಕೃತಿ: ಮೀಸಲಾತಿಯ ಒಳಮುಖ ಲೇಖಕರು: ಕೆ.ಎನ್. ಲಿಂಗಪ್ಪ ಪ್ರಕಾಶಕರು: ಅಭಿರುಚಿ ಪ್ರಕಾಶನ, #386, 14ನೇ ಮುಖ್ಯ ರಸ್ತೆ, ಮೂರನೇ ತಿರುವು, ಸರಸ್ವತಿಪುರ, ಮೈಸೂರು-09 ಫೋನ್: 9980560013

Update: 2024-10-13 10:03 GMT

ಮೀಸಲಾತಿ ಎಂದರೆ ಶೂದ್ರರಿಗೆ, ದಲಿತರಿಗೆ ಸರಕಾರ ನೀಡುವ ಭಿಕ್ಷೆ ಎಂಬ ತಾತ್ಸಾರ ಭಾವದಲ್ಲಿ ವರ್ಣ ಶ್ರೇಷ್ಠತೆಯ ಮನಸ್ಸುಗಳು ಬಿಂಬಿಸುತ್ತಾ ಬಂದಿವೆ. ಇಂಥ ಮೌಢ್ಯವನ್ನು ಮಧ್ಯಮ ವರ್ಗದ ಬಹುತೇಕ ಮನಸ್ಸುಗಳಿಗೆ ಹಾಗೆಯೇ ನಂಬಿಸಲಾಗಿದೆ. ಕೆಲವು ಮಾಧ್ಯಮಗಳೂ ಅದೇ ಧೋರಣೆಯಲ್ಲಿ ವಿಚಾರ ಮಂಡನೆಗೆ ತೊಡಗುತ್ತವೆ. ಇಂಥ ಸಂದರ್ಭದಲ್ಲಿ ಮೀಸಲಾತಿ ಮತ್ತು ಒಳಮೀಸಲಾತಿಗಳನ್ನು ಕುರಿತು ವೈಜ್ಞಾನಿಕ, ವೈಚಾರಿಕ ಹಾಗೂ ಸಾಮಾಜಿಕ ನ್ಯಾಯದ ಮಾನವೀಯ ನೆಲೆಯಲ್ಲಿ ಅಧಿಕೃತವಾಗಿ ಮಾತನಾಡಬಲ್ಲವರು ಮತ್ತು ಬರೆಯಬಲ್ಲವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರ ಸಾಲಿನಲ್ಲಿ ಮಿತ್ರರಾದ ಕೆ.ಎನ್.ಲಿಂಗಪ್ಪನವರ ಬರಹಕ್ಕೆ ಹೆಚ್ಚಿನ ಮಾನ್ಯತೆ ಇದೆ.

ಕೆ.ಎನ್. ಲಿಂಗಪ್ಪನವರು ವೃತ್ತಿಯಲ್ಲಿ ವಕೀಲರು. ಅವರ ವಿಶೇಷ ಆಸಕ್ತಿ ಬದ್ಧತೆಯ ಕ್ಷೇತ್ರ ಮೀಸಲಾತಿಯ ಅನುಷ್ಠಾನಕ್ಕೆ ಸಂಬಂಧಿಸಿದ್ದು. ವರ್ತಮಾನದ ಉರಿಯುವ ಸಮಸ್ಯೆಗಳು ಇವರಿಗೆ ಕರತಲಾಮಲಕ ವಿಚಾರ.

ಪ್ರತಿಯೊಂದು ರಾಜ್ಯದಲ್ಲಿನ ಮೀಸಲಾತಿ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ಅಧಿಕೃತ ಮಾಹಿತಿ ಇವರ ಬರಹಗಳಲ್ಲಿ ಸಿಗುತ್ತದೆ. ಇವರ ಲೇಖನ ಪ್ರತಿಕ್ರಿಯಾತ್ಮಕ ಬರಹಗಳಲ್ಲ: ಮೀಸಲಾತಿಯ ಅನುಷ್ಠಾನಕ್ಕೆ ಬೇಕಾದ ಮಾರ್ಗಸೂಚಿ ರಚನೆಗಳು.

ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ತೀರ್ಪುಗಳನ್ನು ಆಧರಿಸಿ, ಆ ತೀರ್ಪಿನ ಪೂರ್ವಾಪರಗಳನ್ನು ಚರ್ಚಿಸುತ್ತಾರೆ. ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೀಸಲಾತಿಯ ಬಗ್ಗೆ ಯಾವುದೇ ಬಗೆಯ ನಿರ್ಣಯಗಳನ್ನು ತೆಗೆದುಕೊಂಡು ಕಾನೂನು ರೂಪಿಸಿದಾಗಲೂ ಅದರ ಕುರಿತು ಕೂಲಂಕಷ ಚರ್ಚೆ ಮಾಡಿ ಲೇಖನ ಬರೆದಿದ್ದಾರೆ.

ಜಾತಿ ಜನಗಣತಿಯ ಅಗತ್ಯತೆಯ ಬಗೆಗಿನ ಇವರ ಚರ್ಚೆಗಳು ನಮ್ಮ ಆರ್ಥಿಕ ಶೈಕ್ಷಣಿಕ ಅಸಮಾನತೆ ತೊಡೆಯಲು ಅಗತ್ಯ ಬೇಕಾಗಿರುವ ಮಾರ್ಗದರ್ಶಿ ವಿಚಾರಗಳು, ಮೀಸಲಾತಿ ಒಳಮೀಸಲಾತಿ ಕುರಿತು ಇವರ ಬರಹಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವೈಜ್ಞಾನಿಕ ವೈಚಾರಿಕ ಒಳನೋಟಗಳನ್ನು ನೀಡುವ ಅಧ್ಯಯನಶೀಲತೆಯಿಂದ ಕೂಡಿವೆ. ಈ ಬಗೆಗಿನ ಇವರ ಬದ್ಧತೆ ಬಹುಜ್ಞತೆ ಪ್ರಶ್ನಾತೀತ ನಡೆಯಿಂದ ಕೂಡಿ ಗೌರವಾರ್ಹವಾದುದಾಗಿದೆ.

ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಸಮುದಾಯಗಳ ಹಿಂದಿನ ಜಾತಿ ರಾಜಕಾರಣ ಅದರಿಂದಾಗುವ ಅಪಾಯ, ವಂಚನೆ, ಪ್ರತಿರೋಧ ಇವುಗಳ ಬಗ್ಗೆ ಇವರ ಅಧ್ಯಯನಶೀಲತೆ ವಾಸ್ತವಕ್ಕೆ ಕನ್ನಡಿ ಹಿಡಿದಿವೆ. ಈ ಎಲ್ಲ ಹಿನ್ನೆಲೆಗಳಲ್ಲಿ ಕೆ.ಎನ್.ಲಿಂಗಪ್ಪನವರ ಈ ಕೃತಿ ರಾಜಕಾರಣಿಗಳಿಗೆ, ಸಮಾಜ ಸುಧಾರಣೆಗೆ ತೊಡಗಿರುವವರಿಗೆ ಹಾಗೂ ನಮ್ಮ ಸಾಮಾಜಿಕ ಸಂರಚನೆಯ ಹಿನ್ನೆಲೆಯಲ್ಲಿ ಜಾತಿವಿನಾಶದ ಮಾತನಾಡುವವರಿಗೆ ಹೊಸ ತಿಳಿವಳಿಕೆ ನೀಡುವ ಕೃತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರೊ. ಎಸ್.ಜಿ. ಸಿದ್ದರಾಮಯ್ಯ

contributor

Similar News