ಹಿತಾನುಭವ ನೀಡುವ ಎನ್.ಜಿ. ಮೋಹನ್ ಅವರ ‘ಬೀದಿ ದೀಪದ ಬೆಳಕು’
ಕೃತಿ: ಬೀದಿ ದೀಪದ ಬೆಳಕು ಲೇಖಕರು: ಎನ್.ಜಿ. ಮೋಹನ್ ಮುಖಬೆಲೆ: 150 ರೂ. ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಶನ್, ಮಾಕ್ಸಿಮಸ್ ಕಾಂಪ್ಲೆಕ್ಸ್, ಲೈಟ್ ಹಿಲ್ ರೋಡ್, ಮಂಗಳೂರು-575001 ಫೋನ್:08242972002
ಸಮಾಜಜೀವಿಯಾದ ಪ್ರತಿಯೊಬ್ಬ ಮನುಷ್ಯನ ಬದುಕಿನ ಕತೆಯಲ್ಲಿ ಆ ಸಮಾಜ ಮತ್ತು ಪ್ರದೇಶದ ವೈಶಿಷ್ಟ್ಯಗಳನ್ನು ಕಾಣಬಹುದು. ಒಂದು ರೀತಿಯಲ್ಲಿ ಅವನ ಬದುಕು ಹಾಗೂ ಸಮಾಜ ಪರಸ್ಪರ ಪೂರಕವಾಗುತ್ತವೆ. ಅಂತಹ ಒಂದು ಬದುಕಿನ ಕತೆಯನ್ನು ಎನ್.ಜಿ ಮೋಹನ್ ತಮ್ಮ ‘ಬೀದಿ ದೀಪದ ಬೆಳಕು’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಒಂದು ವಿಧದಲ್ಲಿ ನೋಡಿದರೆ, ಅದು ಕರಾವಳಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ಆದ ಸಾಮಾಜಿಕ ಬದಲಾವಣೆಯ ಸಂಕ್ಷಿಪ್ತ ಚಿತ್ರಣವೂ ಹೌದು.
ಅವರ ಅನುಭವದ ಜೊತೆಗೆ ಸಮಾಜದಲ್ಲಿ ಅಂದಿನ ದಿನಗಳಲ್ಲಿ ಕಂಡ ದೋಷಗಳನ್ನು ಅವರು ಬೆಳೆದ ವಾತಾವರಣದಲ್ಲಿ ಆದ ಬದಲಾವಣೆಗಳನ್ನು, ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಮೌಲ್ಯಗಳ ಮೇಲೆ ಹಿರಿಯರ ಪ್ರಭಾವವನ್ನು ಮೋಹನ್ ಸೊಗಸಾಗಿ ನಿರೂಪಿಸುತ್ತಾರೆ. ಜೀವಮಾನದ ಬಹುಪಾಲು ಸಮಯವನ್ನು ಮಂಗಳೂರಿನಲ್ಲಿಯೇ ಕಳೆದವರಿಗೆ ಈ ಬದಲಾವಣೆಗಳು ನಮ್ಮೆದುರಿಗೆ ಸಂಭವಿಸಿದಂತೆ ಅನಿಸುತ್ತದೆ.
ಬಾಲ್ಯದ ದಿನಗಳಲ್ಲಿ ತಾವು ಈಜಿದ ಕೆರೆಗಳು, ದಾಟಿದ ತೋಡುಗಳು, ಆಡುತ್ತಿದ್ದ ವಿಶಾಲವಾಗಿದ್ದ ಗದ್ದೆಗಳು ಇಂದು ಮರೆಯಾಗಿವೆ-ಒಂದು ಪ್ರದೇಶದ ಪ್ರಗತಿಯ ಹಾದಿಯಲ್ಲಿ ಇದು ಸ್ವಾಭಾವಿಕ: ಆದರೆ ಅವುಗಳು ನಿರ್ಜೀವ ವಸ್ತುಗಳಲ್ಲ, ಜೀವ ನೀಡುವ ಬದುಕನ್ನು ಹಸನುಮಾಡುವ ಮೂಲ ಸಾಧನಗಳು ಎಂದು ಮೋಹನ್ ನಂಬುತ್ತಾರೆ.
ಕರಾವಳಿಯ ಶ್ರೀಮಂತ ಸಂಸ್ಕೃತಿ, ಸರ್ವಧರ್ಮ ಸಮಭಾವ, ಜಾತಿ ಧರ್ಮ ಮೀರಿದ ಮಾನವೀಯ ಮೌಲ್ಯಗಳನ್ನು ತಾವೇ ಗಮನಿಸಿದ ಘಟನೆಗಳ ಬಗ್ಗೆ ಬರೆಯುವ ಮೂಲಕ ಸೂಚ್ಯವಾಗಿ ಮೋಹನ್ ಓದುಗರ ಮುಂದಿಡುತ್ತಾರೆ. ಅಂದಿನ ಪರಿಸ್ಥಿತಿಯ ಸಮಾಜದ ಕಟ್ಟಳೆಗಳನ್ನು ಮೀರಿ ಆದ ಶಿವರಾಮ ಕಾರಂತ ಮತ್ತು ಲೀಲಾ ಅವರ ಮದುವೆಯು ಅವರು ಉಲ್ಲೇಖಿಸಿದ ಒಂದು ಜ್ವಲಂತ ಉದಾಹರಣೆ (ಪು.76)
ಹೆಣ್ಣುಮಕ್ಕಳ ವಿದ್ಯಾಭ್ಯಾಸದಲ್ಲಿ ಕರಾವಳಿಯ ಸಾಧನೆಯು ಒಂದು ಮಾದರಿ. ಥಿಯಾಸಾಫಿಕಲ್ ಸೊಸೈಟಿಯ ಆಶ್ರಯದಲ್ಲಿ ಬೆಸೆಂಟರು ಮಂಗಳೂರಿನಲ್ಲಿ 1918ರಲ್ಲಿ ಸ್ಥಾಪಿಸಿದ ಶಾಲೆ ಮತ್ತು ಆ ಬಳಿಕ ಆರಂಭವಾದ ಸಂತ ಆ್ಯಗ್ನೆಸ್ ಶಾಲೆಯ ಬಗ್ಗೆ ಬರೆಯುವ ಮೂಲಕ ಈ ಸಾಧನೆಯನ್ನು ಚಿತ್ರಿಸುತ್ತಾರೆ (ಪು.39).
ಹೋದ ಶತಮಾನದಲ್ಲಿ ಇನ್ನೂ ಜೀವಂತವಾಗಿದ್ದ ಅಸ್ಪಶ್ಯತೆಯ ಕುರಿತಾದ ಕೆಲವು ಘಟನೆಗಳು ಮತ್ತು ಅವುಗಳ ಬಗ್ಗೆ ಅವರ ಪ್ರತಿಕ್ರಿಯೆಗಳು ಚಿಂತನಾರ್ಹ. ಒಬ್ಬ ಮನುಷ್ಯನ ಮಲವನ್ನು ಇನ್ನೊಬ್ಬ ಮನುಷ್ಯನು ತಲೆಯಲ್ಲಿ ಹೊರುವ, ಸತ್ತ ದನಗಳನ್ನು ಹೊತ್ತುಕೊಂಡು ಹೋಗುವ ಮತ್ತು ಎಂಜಲೆಲೆಗಳನ್ನು ತಳಸಮುದಾಯದವರತ್ತ ಎಸೆಯುವ ಪದ್ಧತಿಗಳ ಬಗ್ಗೆ ಅವರ ಮಾತುಗಳು ಅಂದಿನ ಸಮಾಜದ ಕೊಳಕಿನ ಬಗ್ಗೆ ಬೆಳಕು ಚೆಲ್ಲುತ್ತವೆ. ಅವುಗಳು ಬಾಲಕ ಮೋಹನ್‌ರ ಮನಸ್ಸನ್ನು ನೋಯಿಸುತ್ತಿದ್ದವು ಎಂಬುದು ಅವರ ಈ ಮಾತುಗಳಿಂದ ಸ್ಪಷ್ಟವಾಗುತ್ತದೆ (ಪು.24): ‘ಸಮಾಜದ ಕೆಳಸ್ತರದ ವ್ಯಕ್ತಿಗಳನ್ನು ಅಥವಾ ಪಂಗಡಗಳನ್ನು ಕೀಳಾಗಿ ಕಾಣುವ ಪ್ರವೃತ್ತಿಯನ್ನು ಎಳವೆಯಿಂದಲೂ ಮನಸ್ಸಿನೊಳಗೆ ವಿರೋಧಿಸುತ್ತಿದ್ದವನು ನಾನು. ಮಲ ಹೊರುವವರನ್ನು ಕಾಣುವಾಗ, ಸತ್ತ ದನಗಳ ನಾಲ್ಕು ಕಾಲುಗಳನ್ನು ಬಡಿಗೆಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗುವುದನ್ನು ಕಂಡಾಗ ಅವರ ದಾರುಣ ಸ್ಥಿತಿಗೆ ನನ್ನ ಎಳೆಯ ಮನಸ್ಸು ಮಿಡಿಯುತ್ತಿತ್ತು.’
ಎಂಜಲೆಲೆಯನ್ನು ಎಸೆಯುವುದರ ಬಗ್ಗೆಯೂ ಬರೆಯುತ್ತಾರೆ (ಪು.25): ‘...ಆ ದಿನ ಗಟ್ಟಿ ಮನಸ್ಸು ಮಾಡಿ ತಂದೆಯವರೊಡನೆ ಹೇಳಿಯೇ ಬಿಟ್ಟೆ. ಉಂಡ ಎಲೆಗಳನ್ನು ಅವರ ಬಳಿ ಹಾಕಬಾರದು ಮತ್ತು ಅವರಿಗೆ ಎಲೆ ಹಾಕಿ ಊಟ ಬಡಿಸಬೇಕು.’
ಈ ಘಟನೆಗಳು ಮೋಹನ್‌ರ ಸುಧಾರಣಾವಾದಿ ಚಿಂತನೆಯನ್ನು ಬಿಂಬಿಸುತ್ತವೆ.
ಬೆಳೆಯುವ ವಾತಾವರಣದಲ್ಲಿಯೇ ಎಳೆಯ ಮನಸ್ಸುಗಳು ಜೀವನದ ಮೌಲ್ಯಗಳನ್ನು ಹಿರಿಯರ ವರ್ತನೆಯಿಂದ ಗ್ರಹಿಸಿಕೊಂಡು ಮುಂದಕ್ಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದಕ್ಕೆ ಮೋಹನ್ ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ಮಕ್ಕಳ ಎದುರು ಮದ್ಯಪಾನ ಮಾಡುವುದು (ಪು.26), ತಂದೆಯವರ ‘ಚಾಪೆಯಿದ್ದಷ್ಟೇ ಕಾಲು ಚಾಚಬೇಕು’ ಎನ್ನುವ ನೀತಿ (ಪು 31), ತಮ್ಮ ಪ್ರದೇಶಕ್ಕೆ ಬರುತ್ತಿದ್ದ ಹಿರಿಯ ಚೇತನರ ನಡೆನುಡಿಗಳು (ಪು.106)- ಮನಸ್ಸಿನ ವಿಕಸನಕ್ಕೆ ಇವುಗಳೆಲ್ಲ ಪೂರಕವಾದವು ಎಂದು ಅವರು ತಮ್ಮ 70 ವರ್ಷಗಳ ದಾರಿಯ ಹಿನ್ನೋಟದಲ್ಲಿ ಒತ್ತಿ ಹೇಳುತ್ತಾರೆ.
ಎಳವೆಯಲ್ಲಿಯೇ ಮೂಢನಂಬಿಕೆಗಳನ್ನು ಪ್ರಶ್ನಿಸುವ ಮನೋವೃತ್ತಿ ಮೋಹನ್‌ರದು, ಕದ್ರಿ ಗುಡ್ಡೆಯ ಪಾಂಡವರ ಗುಹೆಯ ಒಳಗೆ ಹೋದವರು ಯಾರೂ ಹೊರಗೆ ಬರುವುದಿಲ್ಲ ಎಂಬ ಪ್ರತೀತಿಯನ್ನು ತಮ್ಮ ಸ್ನೇಹಿತರೊಂದಿಗೆ ಗುಹೆಯ ಒಳಗೆ ಹೋಗಿ ಬಂದು ಹುಸಿಮಾಡಿ ತೋರಿಸಿದ ಸನ್ನಿವೇಶ (ಪು.55) ಇದಕ್ಕೆ ಉದಾಹರಣೆ.
ಜೀವನ ರಸವತ್ತಾಗುವುದೇ ಸಂಘಜೀವನದಿಂದ. ತಮ್ಮ ಬಾಲ್ಯಕಾಲದ ಸ್ನೇಹಿತರ ಒಡನಾಟ, ಅಂದಿನ ವಿಶಿಷ್ಟ ಘಟನೆಗಳು, ಅವರೆಲ್ಲರೂ ಕಾಲದ ಚಲನೆಯಿಂದಾಗಿ ದೂರದೂರವಾದರೂ ಮರೆಯದ ಆತ್ಮೀಯತೆ ಮತ್ತು ಯಾವತ್ತಾದರೂ ಒಟ್ಟುಸೇರಿದಾಗ ಮರುಕಳಿಸುವ ನೆನಪುಗಳು ವ್ಯಕ್ತಿಯ ಜೀವನವನ್ನು ಶ್ರೀಮಂತಗೊಳಿಸುತ್ತವೆ ಎಂಬುದನ್ನು ಮೋಹನ್‌ರ ಕೃತಿ ಒತ್ತಿಹೇಳುತ್ತದೆ.
ತಮ್ಮ ಕಥನದಲ್ಲಿ ಬಾಲ್ಯದ ಕೆಲವು ಹಾಸ್ಯದ ಘಟನೆಗಳನ್ನು ತೆರೆದಿಡುತ್ತಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಸ್ನೇಹಿತ ಡಾಲ್ಫಿ ಬಂದವನು ಹುಣಸೆ ಮರಕ್ಕೆ ಹತ್ತಿದಾಗ ಬಂದ ಕೊರಗ ಮತ್ತು ಅವನ ಮಗಳು ಪುಷ್ಪಳನ್ನು ಕಂಡು ಹೆದರಿ ಮರದಿಂದ ಹಾರುವಾಗ ಲುಂಗಿ ಮರಕ್ಕೆ ಸಿಕ್ಕಿದ ಸನ್ನಿವೇಶ (ಪು.70), ಸ್ನೇಹಿತ ಸತ್ಯ ಬ್ರಾಹ್ಮಣನ ಶಾಪದ ಹೆಸರು ಹೇಳಿ ಉಳಿದವರಿಂದ ಕಾಫಿ ಗಿಟ್ಟಿಸಿಕೊಂಡ ಘಟನೆ (ಪು.100)-ಇಂತಹ ಸನ್ನಿವೇಶಗಳು ಓದುಗರಿಗೆ ಮುದನೀಡುತ್ತವೆ.
ಮೋಹನ್‌ರಿಗೆ ಇರುವ ಸಾಮಾಜಿಕ ಪ್ರಜ್ಞೆ ಮತ್ತು ಕಾಳಜಿಯನ್ನೂ ಅನೇಕ ಕಡೆ ಗಮನಿಸಬಹುದು. ಪ್ರಗತಿಯು ಸ್ವಾಭಾವಿಕ ಆದರೆ ಅದರ ಹೆಸರಿನಲ್ಲಿ ಆಗುವ ಹಾನಿಯನ್ನು ಮರೆಯಾಗುವ ನಮ್ಮ ಕೆರೆಗಳು, ಮೈದಾನಗಳು ಬಿಂಬಿಸುತ್ತವೆ. ಮುಂದಿನ ಪೀಳಿಗೆಗಳಿಗೆ ಅವುಗಳು ಕೇವಲ ಕಲ್ಪನೆಗೆ ಸೀಮಿತ. ಈ ಬಗ್ಗೆ ಅವರಿಗೆ ವಿಷಾದವಿದೆ. ಆದರೆ ಏನು ಮಾಡಬೇಕೆಂಬುದರ ಬಗ್ಗೆಯೂ ಅವರು ಸಲಹೆ ನೀಡುತ್ತಾರೆ. ತಮ್ಮ ಅನುಭವದ ಆಧಾರದಲ್ಲಿ ಅವರು ಕೊಡುವ ಸಲಹೆಗಳು ವಿಚಾರಯೋಗ್ಯ.
ಆಡುಭಾಷೆಯ ಶಬ್ದಗಳ ಪ್ರಯೋಗ ಕಡಿಮೆಯಾಗುವ ಇಂದಿನ ದಿನಗಳಲ್ಲಿ ಮೋಹನ್‌ರವರು ಉಪಯೋಗಿಸುವ ಕೆಲವು ಶಬ್ದಗಳು ಅವುಗಳನ್ನು ಕೇಳಿತಿಳಿದವರಿಗೆ ಹಳತನ್ನು ನೆನಪಿಸುತ್ತವೆ. ಉದಾಹರಣೆಗಾಗಿ, ‘ಕಟ್ಟಪುಣಿ’, ‘ಬಜಕೆರೆ ಹಕ್ಕಿ’ ಮತ್ತು ‘ಪಾಲೆಮರ’ ಇವುಗಳ ಬಳಕೆ ಇಂದು ಮಾಯವಾಗುತ್ತಾ ಇದೆ. ಹೊಸ ಪೀಳಿಗೆಯವರಿಗೆ ಈ ಶಬ್ದಗಳ ಪರಿಚಯವಿದ್ದರೆ ಆಶ್ಚರ್ಯ.
ತನ್ನ ಜೀವನೋಪಾಯಕ್ಕೆ ಅಗತ್ಯವಾದ ವ್ಯವಹಾರದ ಜೊತೆಗೆ ಅನನ್ಯವಾದ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿದ ಎನ್.ಜಿ. ಮೋಹನ್‌ರ ಈ ಅನುಭವ ಕಥನ ಓದಿಸಿಕೊಂಡು ಹೋಗುವ ಒಂದು ಕೃತಿ. ತಿಳಿಯಾದ ಹಾಸ್ಯ, ಸರಳವಾದ ಭಾಷೆ, ಮನಕಲಕುವ ಕೆಲವು ನೈಜ ಘಟನೆಗಳು, ಮಾನವೀಯ ಸಂಬಂಧಗಳು-ಇವುಗಳನ್ನು ಒಳಗೊಂಡ ಅನುಭವಕಥನ ‘ಬೀದಿ ದೀಪದ ಬೆಳಕು’ ಓದುಗರಿಗೆ ಹಿತಾನುಭವವನ್ನು ನೀಡುತ್ತವೆ.