ಕಾರ್ಗತ್ತಲ ಹಾದಿಯ ಬುಡ್ಡಿದೀಪಗಳು!

ಅಸಮತೆಯ ಹಾದಿಗೆ ಬುದ್ಧ, ಬಸವ, ಜ್ಯೋತಿಬಾ ಫುಲೆ ದೀಪಗಳಾದರು. ಪಂಜು ಹಿಡಿದು ಬಂದ ಬಾಬಾ ಸಾಹೇಬರು ಕತ್ತಲೆಯ ದಹಿಸಿದ ಸೂರ್ಯರಾದರು. ಈ ಮಹನೀಯರು ಶೋಷಿತರ ಶತ ಶತಮಾನಗಳ ಕತ್ತಲೆಯ ಬದುಕಿಗೆ ಬೆಳಕು ತಂದರು.
ಶಾಹು ಮಹಾರಾಜರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ನ್ಯಾಯದ ರಥಕ್ಕೆ ಚಾಲನೆ ಕೊಟ್ಟಿದ್ದರು. ಜ್ಯೋತಿಬಾ ಫುಲೆ ಶಿಕ್ಷಣ ಕ್ರಾಂತಿಯ ಪ್ರೇರಣೆ ಮತ್ತು ಬಾಬಾ ಸಾಹೇಬರು ರಾಷ್ಟ್ರವ್ಯಾಪಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಈ ಮೂವರು ಬದುಕಿ, ಬರೆದು ಸಮತೆಯ ಹೋರಾಟಕ್ಕೆ ಶಕ್ತಿ ತುಂಬಿದ ಮಹನೀಯರು ಎಂಬುದು ಗಮನಾರ್ಹ.
ಕನ್ನಡದ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ದಲಿತ ಬಂಡಾಯ ಸಾಹಿತ್ಯ ಆರಂಭಕ್ಕೂ ಮುಂಚೆ ಬರೆದ-ಹೋರಾಡಿದ ದಲಿತ ಲೇಖಕರ ದಾಖಲೆಯೇ ಇಲ್ಲ. ಚರಿತ್ರೆಯ ಸಮಾಧಿಯಲ್ಲಿ ಹೂಳಲಾಗಿದೆ. ಶೋಷಿತರ ಎದೆಯ ಸಂಕಟವನ್ನು ಮಣ್ಣು ಮಾಡಲಾಗಿದೆ. ಅವರಲ್ಲಿ ಮೂವರು ಮರಳಿ ಕನ್ನಡ ಚಿಂತನೆಯ ಧಾರೆಗೆ ಮರು ಪ್ರವೇಶ ಮಾಡಿದ್ದಾರೆ.
ಯುವ ಸಂಶೋಧಕ, ಬರಹಗಾರ, ಅಧ್ಯಾಪಕ ಡಾ.ಡಿ. ರವಿಕುಮಾರ್ ಇಂದ್ವಾಡಿ ಅವರ ‘ಮೊದಲ ತಲೆಮಾರಿನ ದಲಿತ ಲೇಖಕರು ದೇವರಾಯ ಇಂಗಳೆ, ಸೋಸಲೆ ಸಿದ್ದಪ್ಪ, ಡಿ.ಗೋವಿಂದದಾಸ್ ಬದುಕು-ಬರಹ’ ಸಂಶೋಧನಾ ಕೃತಿ ಈಚೆಗೆ ಬಿಡುಗಡೆಗೊಂಡಿದೆ. ಇದು ಅವರ ಪಿಎಚ್.ಡಿ. ಮಹಾಪ್ರಬಂಧ.
ಮೊದಲ ತಲೆಮಾರಿನ ದಲಿತ ಬರಹಗಾರರು ನೂರು ವರ್ಷಗಳ ಹಿಂದೆ ಸಾಮಾಜಿಕವಾಗಿ ವೈಯಕ್ತಿಕ ನೆಲೆಯಲ್ಲಿ ನಡೆಸಿದ ಹೋರಾಟದ ಧಾರೆಗಳನ್ನು ದಾಖಲು ಮಾಡಿದ್ದಾರೆ. ಸಾಹಿತ್ಯವನ್ನೂ ವಿಶ್ಲೇಷಿಸಿದ್ದಾರೆ. ಈ ಅಧ್ಯಯನದಿಂದ ದಲಿತ ಸಾಹಿತ್ಯ ಚರಿತ್ರೆ ವಿಸ್ತರಣೆಗೊಂಡಿದೆ. ಸಾಹಿತ್ಯ ವಿಮರ್ಶೆಯೊಳಗೆ ಕಡೆಗಣಿಸಲ್ಪಟ್ಟವರ ಅಧ್ಯಯನ ನಡೆಸಿದ ಕೃತಿಕಾರರು ಅಭಿನಂದನೆಗೆ ಪಾತ್ರರು.
ದೇವರಾಯ ಇಂಗಳೆ ಪ್ರಖರ ಹೋರಾಟಗಾರನಾಗಿ, ಸೋಸಲೆ ಸಿದ್ದಪ್ಪ, ಡಿ.ಗೋವಿಂದದಾಸ್ ಸಾಮಾಜಿಕ ಪರಿವರ್ತನಕಾರರಾಗಿ ನಿರೂಪಿತಗೊಂಡಿದ್ದಾರೆ. ಮೂವರ ಬದುಕು-ಬರಹದಲ್ಲಿ ನೂರು ವರ್ಷಗಳ ಹಿಂದಿನ ಅಸ್ಪಶ್ಯರ ಜೀವನ ಚಿತ್ರಣವಿದೆ. ಆ ಕಾಲದಲ್ಲಿ ಯಾವ ಸಮಸ್ಯೆಗಳ ವಿರುದ್ಧ ಹೋರಾಡಿದರೋ ಅದೇ ಸಮಸ್ಯೆ ಇವತ್ತೂ ಜೀವಂತವಾಗಿವೆ.
ದೇವರಾಯ ಇಂಗಳೆ ದೇವದಾಸಿ ಪದ್ಧತಿ ವಿರುದ್ಧ ನಾಟಕ ರಚಿಸಿ ಪ್ರದರ್ಶನ ಏರ್ಪಡಿಸಿ ಪರಿವರ್ತನೆಗೆ ಕಾರಣೀಕರ್ತರಾಗಿದ್ದಾರೆ. ಜೋಗತಿ ಬಿಡುವುದು ದುಷ್ಟ ನಡತೆ ಅದನ್ನು ಬಿಡಿ ಎಂದು ಜಾಗೃತಿ ಮೂಡಿಸಿದ್ದಾರೆ.
ಬಾಬಾ ಸಾಹೇಬರ ನಿಕಟವರ್ತಿಗಳಾಗಿದ್ದು, ಮಹಾತ್ಮಾ ಗಾಂಧಿ ಅಧ್ಯಕ್ಷತೆಯ ಐತಿಹಾಸಿಕ ಬೆಳಗಾವಿ ಅಧಿವೇಶನದ ವೇಳೆ ಪರ್ಯಾಯ ಅಧಿವೇಶನ ಏರ್ಪಡಿಸಿ ಅಂಬೇಡ್ಕರ್ ಅಧ್ಯಕ್ಷತೆ ವಹಿಸಿದ್ದು ಚಾರಿತ್ರಿಕವಾಗಿಯೂ ಮಹತ್ವದ ದಾಖಲೆ. ಪೊಲೀಸ್ ಠಾಣೆಯ ಮಾಹಿತಿಯನ್ನು ಆಧಾರವಾಗಿ ಬಳಸಿದ ಲೇಖಕರ ಶ್ರಮ ಶ್ಲಾಘನೀಯ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನವಕವಿ ಬಿರುದು ಪಡೆದ ಸೋಸಲೆ ಸಿದ್ದಪ್ಪ ಅವರ ಕಾವ್ಯ ತೀಕ್ಷ್ಣವಾಗಿದೆ. ಭಕ್ತಿ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಡಿ. ಗೋವಿಂದದಾಸ್ ಸಂಪ್ರದಾಯಸ್ಥ ಮನೆತನದಿಂದ ಬಂದು ತಮ್ಮ ಬರಹಗಳಿಗೆ ವೈಚಾರಿಕ ಹೊಳಹು ನೀಡಿದ್ದಾರೆ.
ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಗೆ ಡಿ. ಗೋವಿಂದದಾಸ್ ‘ನಾನೆಂಥ ಭಾಗ್ಯಹೀನನೊ ಹೇ ಗೊಮ್ಮಟೇಶ, ನೀನೆಂಥ ಪಕ್ಷಪಾತಿಯೋ ಹೇ ಭಕ್ತಿಕೋಶ’ ಎಂದು ಕಟಕಿಯಾಡುತ್ತಾರೆ. ಹಾಗೆಯೇ ಸೋಸಲೆ ಸಿದ್ದಪ್ಪ ಅವರು ‘‘ನಂಜನಗೂಡಿಗೆ ನಾವು ದೇವರ ದರ್ಶನಕ್ಕಾಗಿ ಹೋಗುವುದೇನೋ ನಿಜ. ಆದರೆ, ನಂಜುಂಡೇಶ್ವರನ ದರ್ಶನ ನಮಗಿಲ್ಲ. ನಮ್ಮ ದರ್ಶನ ನಂಜುಂಡೇಶ್ವರನಿಗಿಲ್ಲ’’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹೊತ್ತು ಮತೀಯ ದ್ವೇಷ, ಅಸಹನೆ ಅಪಾಯಕಾರಿ ಮಟ್ಟಕ್ಕೆ ಬೆಳೆದಿದೆ. ಆದರೆ ಆ ಕಾಲದಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಸರಾ ಮೆರವಣಿಗೆಯ ಚಿನ್ನದ ಅಂಬಾರಿಯಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯೀಲ್ ಅವರನ್ನು ಕುಳ್ಳಿರಿಸಿಕೊಂಡು ಬಹುಸಂತೋಷದಿಂದ ರಾಜಬೀದಿಯೊಳು ಸಾಗುತ್ತಿದ್ದರು ಎಂದು ‘ಆಳುವ ಮಹಾಸ್ವಾಮಿಯವರಾದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕೃತಿ’ಯಲ್ಲಿ ಸೋಸಲೆ ಸಿದ್ದಪ್ಪ ದಾಖಲಿಸಿದ್ದಾರೆ.
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಬಂದು ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಮ್ಯಾಥೂನ್, ಅಸ್ಪಶ್ಯರ ಶಿಕ್ಷಣಕ್ಕಾಗಿ ಊರೂರು ತಿರುಗಿದ ಗೋಪಾಲಸ್ವಾಮಿ ಅಯ್ಯರ್, ಸಿ.ಆರ್.ರಾಮಲಿಂಗಾರೆಡ್ಡಿ, ಎಂ.ವೆಂಕಟಸುಬ್ಬಯ್ಯ ಮುಂತಾದ ಮಹನೀಯರ ವಿವರಗಳಿಂದ ಕೃತಿಯು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಮೂವರ ಬರಹ ವಿಶ್ಲೇಷಣೆ ಮಾಡುವ ಕೃತಿಕಾರರು ಶರಣರು, ವಚನಕಾರರು, ಕವಿ, ಸಾಹಿತಿಗಳ ಉಲ್ಲೇಖಗಳನ್ನು ಬಳಸಿದ್ದಾರೆ. ಸಮಕಾಲೀನ ಬದುಕಿನ ಚರ್ಚೆಯೂ ಕೃತಿಯಲ್ಲಿರುವುದು ಗಮನಾರ್ಹ. ಬರವಣಿಗೆಯೂ ಸರಳ ಶೈಲಿಯಲ್ಲಿದೆ. ಮೂವರು ಲೇಖಕರ ಬದುಕು, ಬರಹವನ್ನು ಪ್ರತ್ಯೇಕವಾಗಿ ನಿರೂಪಿಸುವ ಬದಲು ಒಟ್ಟಿಗೆ ಇದ್ದಿದ್ದರೆ ಓದಲು ಸುಲಭವಾಗುತ್ತಿತ್ತು.
ಈ ಕೃತಿಯನ್ನು ಓದುವಾಗ ವರ್ತಮಾನದ ಎಲ್ಲ ಅನ್ಯಾಯಗಳು ಸಮಸ್ಯೆಗಳ ವಿರುದ್ಧ ಪ್ರತಿಭಟಿಸುವಂತೆಯೂ ಎಚ್ಚರ ಮೂಡುತ್ತದೆ. ಅದೇ ಕೃತಿಯ ಶ್ರೇಷ್ಠತೆ ಮತ್ತು ಹಿರಿಮೆಯೂ ಆಗಿದೆ. ಈ ಕೃತಿಯು ನಾಡಿನ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ ಅವರಿಗೆ ಅರ್ಪಿಸಲಾಗಿದೆ.