ರಾಜ್ಯಪಾಲನೆಯ ರಾಜಕೀಯ
ಒಂದಿಷ್ಟು ಆಯುಷ್ಯ, ದೈಹಿಕ ಆರೋಗ್ಯವಿರುವ ನಿಷ್ಠರನ್ನು, ತರಲೆ ಕೋರರನ್ನು, ಅನಿವಾರ್ಯವಾಗಿ ತಾಳಿಕೊಳ್ಳಬೇಕಾದವರನ್ನು ಅಥವಾ ಎಲ್ಲಾದರೂ ಪುನರ್ವಸತಿಗೊಳಿಸಬೇಕಾದವರನ್ನು ರಾಜ್ಯಪಾಲರಾಗಿ ನೇಮಿಸುವುದು ಈಗಿನ ರಾಜತಾಂತ್ರಿಕತೆ. ಇದರಿಂದಾಗಿ ರಾಜ್ಯಪಾಲರ ಹುದ್ದೆ ‘ವೃದ್ಧಾಶ್ರಮ’ದಂತಾಗಿದೆ. ಇಂತಹ ರಾಜಕಾರಣಿಗಳ ಪೈಕಿ ಸದಾ ಯಾರಿಗಾದರೂ ತೊಂದರೆ ಕೊಡಬಲ್ಲ ಸಾಮರ್ಥ್ಯವಿರುವವರನ್ನು ಪ್ರತಿಪಕ್ಷಗಳ ಸರಕಾರವಿರುವ ರಾಜ್ಯಗಳಿಗೆ ನೇಮಿಸುವುದು ಲಾಗಾಯ್ತಿನಿಂದಲೂ ಬಂದ ಪರಿಪಾಠ. ಈ ತಲೆಮಾರಿನಲ್ಲಿ ಹೆಸರು ಉಳಿಸಿಕೊಳ್ಳುವಂತಹ ಅಥವಾ ಉಳಿಸಿಕೊಂಡಂತಹ ಒಬ್ಬ ರಾಜ್ಯಪಾಲರೂ ಇಲ್ಲದಿರುವುದು ದೇಶದ, ಕಾಲದ ದುರಂತ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರು ಶಾಸನಸಭೆಯ ಆರಂಭದಲ್ಲಿ ಮಾಡಬೇಕಾದ ಸಾಂಪ್ರದಾಯಿಕ ಭಾಷಣವನ್ನು ಕೈಬಿಟ್ಟು ಸಭಾತ್ಯಾಗ ಮಾಡಿದ್ದಾಗಿ ವರದಿಯಾಗಿದೆ. ರಾಜ್ಯ ಸರಕಾರಕ್ಕೂ ಅವರಿಗೂ ಸಂಬಂಧ ಹಳಸಿದ್ದು ಬಹಿರಂಗ ವಿಚಾರ. ಆದರೂ ಸಾಂವಿಧಾನಿಕ ಹುದ್ದೆಯಲ್ಲಿರುವವರು ಎಲ್ಲಿಯ ವರೆಗೆ ಸಂವಿಧಾನವನ್ನು ತಾಳಿಕೊಳ್ಳುವರೋ ಅಲ್ಲಿಯವರೆಗೆ ಸಾಂವಿಧಾನಿಕ ಹೊಣೆಗಾರಿಕೆಯನ್ನು ತಾಳಿಕೊಳ್ಳಬೇಕು. ಯಾವಾಗ ತನಗೆ ಸಂವಿಧಾನದ ವ್ಯಾಪ್ತಿಯೊಳಗೆ ಅಂದರೆ ರಾಜ್ಯ ಸರಕಾರದ ನೀತಿನಿಯಮಗಳಿಗನುಗುಣವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಿಲ್ಲವೆಂದು ಅನ್ನಿಸುತ್ತದೆಯೋ ಆಗ ಅಲ್ಲಿಂದ ತಾನಾಗಿ/ಸ್ವಇಚ್ಛೆಯಿಂದ ಕಾಲುಕೀಳಬೇಕು. ಕಾಲುಕೀಳುವುದೆಂದರೆ ಸಭಾತ್ಯಾಗ ಮಾಡಿ ರಾಜಭವನಕ್ಕೆ ಮರಳುವುದಲ್ಲ; ಶಾಶ್ವತವಾಗಿ ತನ್ನ ಹುದ್ದೆಯನ್ನು ಬಿಟ್ಟುಹೋಗುವುದು.
ಸಂವಿಧಾನದಡಿ ರಾಜ್ಯಪಾಲರು ಅಲಂಕಾರಮೂರ್ತಿ; ಉತ್ಸವಮೂರ್ತಿ. ಅವರಿಗೆ ‘ತನ್ನತನ’ವೆಂಬುದು ಇರುವುದಿಲ್ಲ; ಇರಬಾರದು. ಅವರು ಕೇಂದ್ರ ಸರಕಾರದಿಂದ ಈ ಹುದ್ದೆಗೆ ನಿಗದಿತ ಕಾರ್ಯಭಾರಗಳಿಗಾಗಿ ನೇಮಕಗೊಂಡ ಅಧಿಕಾರಿ. ರಾಜ್ಯ ಸರಕಾರದ ಒಲವುನಿಲುವುಗಳನ್ನು-ಅವು ಎಲ್ಲಿಯ ವರೆಗೆ ಬಹುಮತ ಮತ್ತು ಸಂವಿಧಾನಬದ್ಧತೆಯೊಂದಿಗೆ ಅಧಿಕಾರ ಚಲಾಯಿಸುತ್ತವೆಯೋ ಅಲ್ಲಿಯವರೆಗೆ- ಪಾಲಿಸಬೇಕು; ಘೋಷಿಸಬೇಕು. ಸ್ವಂತ, ಸ್ವತಃ ಮತ್ತಿತರ ವಿಚಾರಗಳಿದ್ದರೆ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಇಳಿಯಬೇಕು. ಅವಲಕ್ಕಿ ತಿನ್ನುವುದೂ ಕೊಂಬು ಊದುವುದೂ ಜೊತೆಯಲ್ಲಿ ಸಾಗದು. ಇದು ಹೇಗಿದೆಯೆಂದರೆ ದೇವರಮೂರ್ತಿಯಾಗಿ ಕುಳಿತವನಿಗೆ ಮೌನವಾಗಿರಲು ಮತ್ತು ಜನರು ಮಾಡುವ ಎಲ್ಲ ಬಗೆ ಸೇವೆಯನ್ನು, ಅರ್ಚನೆಯನ್ನು, ಅಭಿಷೇಕವನ್ನು ತಾಳಿಕೊಳ್ಳುವ ಸಹನೆ ಮತ್ತು ಸಾಮರ್ಥ್ಯ ಬೇಕು. ಕರ್ನಾಟಕದ ರಾಜ್ಯಪಾಲರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೊಗಳಿ ಮಾತನಾಡಿ ದರಲ್ಲ, ಹಾಗೆ! ಅದಿಲ್ಲವಾದರೆ ಆತ ಗರ್ಭಗುಡಿ ಬಿಟ್ಟು ತೆರಳಬೇಕು; ಸಾಧ್ಯವಾದರೆ ಲೋಕೋದ್ಧಾರ ಮಾಡುತ್ತೇನೆಂದು ಸಕ್ರಿಯ ರಾಜಕಾರಣದ ಮೆರವಣಿಗೆಯಲ್ಲಿ ಮನುಷ್ಯರಂತೆ ನಶ್ವರತೆಯ ಬೀದಿಗಿಳಿಯಬೇಕು.
ಇಷ್ಟಕ್ಕೂ ರಾಜ್ಯಪಾಲರೆಂದರೇನೆಂಬುದನ್ನು ಸಾಮಾನ್ಯ ಪ್ರಜೆಯೂ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದಾನೆ/ಳೆ. ಆದರೂ ಕೆಲವು ಮಾಹಿತಿಗಳು: ಸಂವಿಧಾನದ ೧೫೩ನೇ ವಿಧಿಯಲ್ಲಿ ಪ್ರತೀ ರಾಜ್ಯಕ್ಕೂ ಒಬ್ಬ ರಾಜ್ಯಪಾಲರು ಇರತಕ್ಕದ್ದು ಎಂದು ನಿಬಂಧಿಸಲಾಗಿದೆ. ಇದರ ಬೇಕುಬೇಡಗಳನ್ನು, ಅಗತ್ಯ, ಐಚ್ಛಿಕತೆಗಳನ್ನು ಇಷ್ಟಾನಿಷ್ಟಗಳನ್ನು ಸಂವಿಧಾನ ಸಮಿತಿಯು ಸಮಗ್ರವಾಗಿ ಚರ್ಚಿಸಿಯೇ ಈ ಕ್ರಮಕೈಗೊಂಡಿದೆಯಾದ್ದರಿಂದ ಅವರ ಬುದ್ಧಿಮತ್ತೆಯನ್ನು, ವಿವೇಕವನ್ನು ಈ ಏಳು ದಶಕಗಳ ಬಳಿಕ ವಿವೇಚಿಸುವುದು ಸರಿಯಲ್ಲ. ಆ ಹುದ್ದೆ ನಮ್ಮ ಇತಿಹಾಸದ ಭಾಗವಾಗಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಣ ಕೊಂಡಿ ಈ ಹುದ್ದೆ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೇಂದ್ರ ಸರಕಾರದ ಸಲಹೆಯ ಮೇರೆಗೆ ಒಂದು ಬಾರಿ ಐದು ವರ್ಷ ಅವಧಿಗೆ ನೇಮಿಸುವರು. ೩೫ ವರ್ಷಗಳ ಕನಿಷ್ಠ ವಯಸ್ಸನ್ನು ತಲುಪಿದ ಯಾವನೇ ಭಾರತೀಯ ನಾಗರಿಕನನ್ನು ರಾಜ್ಯಪಾಲರನ್ನಾಗಿ ನೇಮಿಸಬಹುದು. ಯಾವನೇ ವ್ಯಕ್ತಿ ಈ ಹುದ್ದೆಗೆ ನೇಮಕವಾಗಬೇಕಾದರೆ ಆತ/ಆಕೆ ತಾನು ಈಗಾಗಲೇ ಹೊಂದಿದ್ದ ಲಾಭದಾಯಕ ಹುದ್ದೆ ಅಥವಾ ಚುನಾಯಿತ ಸ್ಥಾನವನ್ನು ಬಿಟ್ಟುಕೊಡಬೇಕು. ಆದರೆ ಈ ನೇಮಕಾತಿಯನ್ನು ಯಾವಾಗ ಬೇಕಾದರೂ ನಿರಸನಗೊಳಿಸಬಹುದು. ಹಾಗೆಯೇ ರಾಜ್ಯಪಾಲರು ಯಾವಾಗ ಬೇಕಾದರೂ ರಾಜೀನಾಮೆ ನೀಡಿ ಹೊರಬರಬಹುದು. ರಾಜ್ಯಪಾಲರ ಅಧಿಕಾರ ಮತ್ತು ನಿಯಮಗಳನ್ನು ಸಂವಿಧಾನದ ೧೫೩ರಿಂದ ೧೬೧ನೇ ವಿಧಿಯ ವರೆಗೆ ನಮೂದಿಸಲಾಗಿದೆ. ರಾಜಕಾರಣಿಗಳು ರಾಜ್ಯಪಾಲರಾದಾಗ ಅವರ ಪೂರ್ವಾಶ್ರಮದ ರಾಜಕೀಯ ನೆಂಟಸ್ತಿಕೆಯನ್ನು ಅವರು ದೂರಮಾಡಿ ಮಧ್ಯವರ್ತಿಯಂತೆ, ಅರೆನ್ಯಾಯಿಕ ನ್ಯಾಯಾಧೀಶರಂತೆ ನಡೆದುಕೊಳ್ಳಬೇಕಾಗುತ್ತದೆ. ತನ್ನ ಹುದ್ದೆಯ ಘನತೆ ಗೌರವಗಳನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಅವರು ಹೊಂದಿರಬೇಕಾಗುತ್ತದೆ ಮತ್ತು ಅದನ್ನು ಉಳಿಸಿಕೊಳ್ಳಬೇಕಾಗಿದೆ. ಇದಕ್ಕೆ ಬೇಕಾದ ಸಂಬಳ, ಸವಲತ್ತು, ಕಾನೂನಿನ ರಕ್ಷಣೆ ಅವರಿಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹುದ್ದೆ ‘ಲೆಫ್ಟಿನೆಂಟ್’ ಎಂಬ ಪದದೊಂದಿಗೆ ಸಮ್ಮಿಳಿತವಾಗಿದೆ.
ರಾಜ್ಯಪಾಲರುಗಳು ಎರಡು ಬಗೆಯ ಹೊಣೆಯನ್ನು ಪಡೆದಿದ್ದಾರೆ.: ಒಂದು, ರಾಜ್ಯ ಸಚಿವ ಸಂಪುಟದ ಸಲಹೆ ಸೂಚನೆಗಳಂತೆ ಕಾರ್ಯವೆಸಗು ವುದು; ಎರಡು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಸಾಮರಸ್ಯದ ಸುವರ್ಣಸೇತುವೆಯಾಗುವುದು. ರಾಜ್ಯವನ್ನು ಚುನಾಯಿತ ಸರಕಾರವೇ ನಡೆಸುತ್ತದೆಯಾದರೂ ಸರಕಾರದ ಎಲ್ಲ ಆದೇಶಗಳೂ ರಾಜ್ಯಪಾಲರ ಪರವಾಗಿ ಮತ್ತು ಅವರ ಹೆಸರಿನಡಿಯಲ್ಲಿಯೇ ಜಾರಿಗೊಳ್ಳುತ್ತದೆ. ಅನುಷಂಗಿಕವಾಗಿ ಅವರಿಗೆ ಕೇಂದ್ರ ಸರಕಾರದ ಪರವಾದ, ಹಾಗೂ ಇತರ ವಿಶೇಷ ಕಾಯ್ದೆಗಳಲ್ಲಿ ಹೊಂದಿದ ಅಧಿಕಾರದ ಮೂಲಕ ವಿಶ್ವವಿದ್ಯಾನಿಲಯ ಮುಂತಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯೇತರ ಸಂಸ್ಥೆಗಳ ಮುಖ್ಯಸ್ಥರನ್ನು, ಸಮಿತಿ ಸದಸ್ಯರನ್ನು ನೇಮಕಗೊಳಿಸುವ ಅಧಿಕಾರವೂ ಇದೆ. ರಾಜ್ಯದಲ್ಲಿ ಸಂವಿಧಾನ ಅಥವಾ ಪ್ರಜಾಸತ್ತಾತ್ಮಕ ಆಡಳಿತವು ಸಂಪೂರ್ಣ ಶಿಥಿಲವಾದರೆ ಶಾಸನ ಸದನದಲ್ಲಿ ಯಾರಿಗೂ ಬಹುಮತವಿಲ್ಲದೆ ಅತಂತ್ರಸ್ಥಿತಿ ಉಂಟಾದರೆ ಅದನ್ನು ವರದಿ ಮಾಡಿ ಅದು ಅಂಗೀಕಾರವಾದರೆ ರಾಜ್ಯದಲ್ಲಿ ರಾಷ್ಟ್ರಪತಿ (ಕೇಂದ್ರ ಸರಕಾರದ ಪರವಾದ) ಆಡಳಿತ ಜಾರಿಯಾದರೆ ಆಗ ರಾಜ್ಯಪಾಲರೇ ರಾಜ್ಯದ ಅಧಿಕಾರ ಸೂತ್ರಧಾರಿಯಾಗುತ್ತಾರೆ. ಕರ್ನಾಟಕದಲ್ಲೂ ಹಿಂದೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಇವಲ್ಲದೆ ಚುನಾವಣೆಯ ಹಿಂದೆ-ಮುಂದೆ ರಾಜಕೀಯ ಆಡಳಿತವು ಅಸ್ತಿತ್ವದಲ್ಲಿಲ್ಲದಾಗ ರಾಜ್ಯಪಾಲರೇ ಪ್ರಭಾರ ಆಡಳಿತಗಾರರಾಗಿರುತ್ತಾರೆ. ಇವು ಸಮಗ್ರವೆಂದಲ್ಲ; ಆಯಾಯ ಪರಿಸ್ಥಿತಿಗೆ ತಕ್ಕಂತೆ ಅನ್ವಯಿಸುತ್ತದೆ. ಏಕೆಂದರೆ ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಹಲವು ಬಾರಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಮತ್ತು ಮಿತಿಯನ್ನು ಸೂಚಿಸಿದೆ. ರಾಜ್ಯಸರಕಾರಗಳನ್ನು ರಾಜ್ಯಪಾಲರ ಏಕಪಕ್ಷೀಯ ಮತ್ತು ವೈಯಕ್ತಿಕ ಹಾಗೂ ವ್ಯಕ್ತಿನಿಷ್ಠ ಅಭಿಪ್ರಾಯ, ನಿರ್ಣಯಗಳ ಆಧಾರದಲ್ಲಿ ವಜಾಮಾಡಲಾಗದೆಂದು ಹೇಳಿದೆ. ೧೯೯೪ರ ಎಸ್.ಆರ್. ಬೊಮ್ಮಾಯಿ ಪ್ರಕರಣ, ೨೦೦೬ರ ರಾಮೇಶ್ವರ ಪ್ರಸಾದ್ ಪ್ರಕರಣ ಮತ್ತು ಅನೇಕ ಆಯೋಗ, ಸಮಿತಿಗಳ ಶಿಫಾರಸು ಕಡತಗಳಲ್ಲಿವೆ. ೧೯೯೮ರ ಸರಕಾರಿಯಾ ಆಯೋಗ, ೨೦೦೨ರ ವೆಂಕಟಾಚಲ ಆಯೋಗದ ವರದಿಗಳು ರಾಜ್ಯಪಾಲರ ನೇಮಕಾತಿ, ವಜಾ ಮುಂತಾದ ಅಗತ್ಯ ಅಂಶಗಳ ಕುರಿತು ಸಾಕಷ್ಟು ಶಿಫಾರಸನ್ನು ಮಾಡಿದರೂ ಅವನ್ನು ಅನುಷ್ಠಾನಗೊಳಿಸುವ ಗೋಜಿಗೆ ಯಾವ ಸರಕಾರವೂ ಹೋಗಿಲ್ಲ. (ರಾಜ್ಯಪಾಲರನ್ನು ಪ್ರಧಾನಿ, ಗೃಹಮಂತ್ರಿ, ಲೋಕಸಭೆಯ ಸಭಾಪತಿ ಮತ್ತು ಸಂಬಂಧಿಸಿದ ರಾಜ್ಯದ ಮುಖ್ಯಮಂತ್ರಿಗಳು ಸಮಾಲೋಚಿಸಿ ಆಯ್ಕೆಮಾಡಬೇಕೇ ಹೊರತು ಕೇಂದ್ರಸರಕಾರವಲ್ಲ ಎಂದು ವೆಂಕಟಾಚಲಯ್ಯ ಸಮಿತಿ ಹೇಳಿದೆ.) ೨೦೧೦ರ ಪುಂಛಿ ಆಯೋಗವು ರಾಜ್ಯಪಾಲರ ಹುದ್ದೆ ರಾಷ್ಟ್ರಪತಿಗಳ ಮರ್ಜಿಯ ಮೇಲೆ ಉಳಿಯುವುದಾಗಲೀ ಅಳಿಯುವುದಾಗಲೀ ಆಗಬಾರದು, ಅದಕ್ಕೂ ಕಾಲರಕ್ಷಣೆ ಬೇಕು, ವಜಾಗೊಳಿಸಬೇಕಾದರೆ ಪೂರಕ ಕಾರಣಗಳು ಬೇಕು ಎಂದು ಹೇಳಿದೆ.
ನೇರ ಹೋಲಿಕೆಯಲ್ಲದಿದ್ದರೂ ಒಂದೊಮ್ಮೆ ಪಠೇಲ, ಮಣೆಗಾರ, ಶಾನುಭೋಗ, ಉಗ್ರಾಣಿ ಎಂಬ ಗ್ರಾಮಾಧಿಕಾರದ ಆನುವಂಶಿಕ ಹುದ್ದೆಗಳನ್ನು ಬದಲಾಯಿಸಿ ಗ್ರಾಮ ಕರಣಿಕ/ಲೆಕ್ಕಿಗ, ಕಂದಾಯ ಪರಿವೀಕ್ಷಕ/ನಿರೀಕ್ಷಕ ಮತ್ತು ನಾಲ್ಕನೇ ದರ್ಜೆಯ ಇತರ ಉದ್ಯೋಗಗಳನ್ನು ನಿರ್ಮಿಸಿದಂತೆ ದೊಡ್ಡಮಟ್ಟದಲ್ಲಿ ಹಿಂದಿನ ರಾಜರಿಗೆ ತತ್ಸಮಾನವಾದ ಅಲ್ಲದಿದ್ದರೂ ಅದೇ ಸಾರ್ವಜನಿಕ ಗೌರವದ ಭ್ರಮೆಯನ್ನು ತರಬಲ್ಲ ಈ ಹುದ್ದೆಗಳು ಸಂವಿಧಾನದಡಿ ಸೃಷ್ಟಿಯಾದವು. ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಆಗಿನ ಮೈಸೂರು ರಾಜ್ಯದ ಮತ್ತು ಬಳಿಕ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ನಿವೃತ್ತ ರಾಜಕಾರಣಿಗಳು ಮತ್ತು ಸಾಮಾಜಿಕ, ಸಾಂಸ್ಕೃತಿಕ ಮನ್ನಣೆಗೆ ಪಾತ್ರವಾದವರು ಹೀಗೆ ಅನೇಕ ಪ್ರಸಿದ್ಧರು ನೇಮಕಗೊಂಡಿದ್ದರು. ಇವರಲ್ಲಿ ಅನೇಕರು ತಮ್ಮ ಹುದ್ದೆಗೆ ಗೌರವ ತಂದರು.
ಈ ಪೈಕಿ ಒಂದಿಷ್ಟು ಆಯುಷ್ಯ, ದೈಹಿಕ ಆರೋಗ್ಯವಿರುವ ನಿಷ್ಠರನ್ನು, ತರಲೆಕೋರರನ್ನು, ಅನಿವಾರ್ಯವಾಗಿ ತಾಳಿಕೊಳ್ಳಬೇಕಾದವರನ್ನು ಅಥವಾ ಎಲ್ಲಾದರೂ ಪುನರ್ವಸತಿಗೊಳಿಸಬೇಕಾದವರನ್ನು ರಾಜ್ಯಪಾಲರಾಗಿ ನೇಮಿಸುವುದು ಈಗಿನ ರಾಜತಾಂತ್ರಿಕತೆ. ಇದರಿಂದಾಗಿ ರಾಜ್ಯಪಾಲರ ಹುದ್ದೆ ‘ವೃದ್ಧಾಶ್ರಮ’ದಂತಾಗಿದೆ.
ಇಂತಹ ರಾಜಕಾರಣಿಗಳ ಪೈಕಿ ಸದಾ ಯಾರಿಗಾದರೂ ತೊಂದರೆ ಕೊಡಬಲ್ಲ ಸಾಮರ್ಥ್ಯವಿರುವವರನ್ನು ಪ್ರತಿಪಕ್ಷಗಳ ಸರಕಾರವಿರುವ ರಾಜ್ಯಗಳಿಗೆ ನೇಮಿಸುವುದು ಲಾಗಾಯ್ತಿನಿಂದಲೂ ಬಂದ ಪರಿಪಾಠ. ಈ ತಲೆಮಾರಿನಲ್ಲಿ ಹೆಸರು ಉಳಿಸಿಕೊಳ್ಳುವಂತಹ ಅಥವಾ ಉಳಿಸಿಕೊಂಡಂತಹ ಒಬ್ಬ ರಾಜ್ಯಪಾಲರೂ ಇಲ್ಲದಿರುವುದು ದೇಶದ, ಕಾಲದ ದುರಂತ. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನ್ಕರ್, ಕೇರಳದಲ್ಲಿ ಮುಹಮ್ಮದ್ ಆರಿಫ್ಖಾನ್ ಇವರು ನಡೆದುಕೊಂಡ/ಕೊಳ್ಳುತ್ತಿರುವ ರೀತಿ-ನೀತಿ ತಮಿಳುನಾಡಿನ ರಾಜ್ಯಪಾಲರಿಗಿಂತ ಭಿನ್ನವಾಗಿಲ್ಲ. ಪಂಜಾಬ್ ಮುಂತಾದ ಪ್ರತಿಪಕ್ಷಗಳ ಸರಕಾರವು ಆಡಳಿತದಲ್ಲಿರುವ ರಾಜ್ಯಗಳಲ್ಲೂ ರಾಜ್ಯಪಾಲರ ಹಾವಳಿ ಹೆಚ್ಚಾಗಿದೆ. ಪ್ರಾಯಃ ಇವರ ಪೈಕಿ ಜಗದೀಪ್ ಧನ್ಕರ್ ತಮ್ಮ ‘ಸಕ್ರಿಯ ಚಟುವಟಿಕೆ’ಗಳಿಂದಾಗಿ ಪ್ರಧಾನಿಯವರ (ಗ)ಮನಸೆಳೆದು ಉಪರಾಷ್ಟ್ರಪತಿ ಅಭ್ಯರ್ಥಿಯಾದರು.
ಹಾಗೆಯೇ ಇತರ ಹುದ್ದೆಗಳಲ್ಲಿದ್ದು ಸರಕಾರದ ಹಿತಕಾಯ್ದ ಅನೇಕ ನ್ಯಾಯಮೂರ್ತಿಗಳು ರಾಜ್ಯಪಾಲರಾದದ್ದಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಸದಾಶಿವಂ ಅವರು ರಾಜ್ಯಪಾಲರಾಗಿ ನೇಮಕವಾದರು. ಪ್ರಧಾನಿ ತಮ್ಮ ರಾಜ್ಯಕ್ಕೆ ಬಂದಾಗ ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಅವರು ಮೊದಲ ಬಾರಿ ಹೋದಾಗ ಇಡೀ ನ್ಯಾಯಾಂಗವೇ ತಲೆತಗ್ಗಿಸುವಂತಾಗಿತ್ತು. ಆನಂತರ ಅದು ಅವರಿಗೂ ನಮಗೂ ಅಭ್ಯಾಸವಾಯಿತು. ಈಚೆಗೆ ನ್ಯಾಯಮೂರ್ತಿ ನಝೀರ್ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕವಾದದ್ದು ಮತ್ತು ಅದನ್ನು ಅವರು ಬೇಷರತ್ತು ಅಂಗೀಕರಿಸಿದ್ದು ಸುದ್ದಿಯಾಗಿತ್ತು. ರಾಜಕಾರಣಿಗಳು ರಾಜ್ಯಪಾಲರಾಗುವುದಕ್ಕೂ ನ್ಯಾಯಮೂರ್ತಿಗಳು ರಾಜ್ಯಪಾಲರಾಗುವುದಕ್ಕೂ ಭಾರೀ ಅಂತರವಿದೆ. ಅದನ್ನು ಅವರವರೇ ಅರ್ಥಮಾಡಿಕೊಳ್ಳಬೇಕಾಗಿದೆ. ಮೌಲ್ಯಗಳು ಕುಸಿದ ಈ ಕಾಲದಲ್ಲಿ ಅವನ್ನೆಲ್ಲ ಪರಿಗಣಿಸುವವರು ಅಪರೂಪ.
ಸಂವಿಧಾನ ಈಗೀಗ ರಾಜಕಾರಣಿಗಳಿಗೆ ಹವ್ಯಾಸವಾಗಿದೆ. ಬೇಕಾದಲ್ಲಿ ಬಳಸುವ, ಬೇಡದಿದ್ದಲ್ಲಿ ಹಿಸುಕುವ ಕತ್ತಾಗಿದೆ. ಆದ್ದರಿಂದ ಸಂವಿಧಾನದ ಕರ್ತವ್ಯಗಳ ನ್ಯೂನತೆಯನ್ನು ಅವರ್ಯಾರೂ ಪ್ರಶ್ನಿಸುವುದಿಲ್ಲ. ಭ್ರಷ್ಟಾಚಾರ, ಪಕ್ಷಾಂತರ, ಸ್ವಜನ ಪಕ್ಷಪಾತ, ಸುಳ್ಳು, ಪರನಿಂದೆ, ಇವೆಲ್ಲ ವರ್ತಮಾನದ ರಾಜಕಾರಣದ ಪವಿತ್ರ ಗ್ರಂಥಗಳಾಗಿವೆ. ಜಯಪ್ರಕಾಶ ನಾರಾಯಣರ ಬಳಿಕ ಆ ಪ್ರಮಾಣದ ಹೋಗಲಿ, ಅವರ ವ್ಯಕ್ತಿತ್ವದ ಒಂದಿಷ್ಟನ್ನೂ ಹೊಂದದಿರುವ ರಾಜಕಾರಣಿಗಳದ್ದೇ ಬೆಳೆ. ಯಾರು ಯಾವಾಗ ಯಾವ ಪಕ್ಷದ ಪರವಾಗಿರುತ್ತಾರೋ ಹೇಳುವಂತಿಲ್ಲ. ಒಂದೇ ಪಕ್ಷದಲ್ಲಿರುವವರೂ ತಮ್ಮ ಬೇಳೆಕಾಳು ವ್ಯಾಪಾರಕ್ಕೆ ಕುಳಿತಂತಿದ್ದಾರೆಯೇ ಹೊರತು ದೇಶ, ಜನ ಈ ಕುರಿತು ಕಾಳಜಿಯಿರುವವರಂತೆ ಕಾಣಿಸುತ್ತಿಲ್ಲ.
ದಿಲ್ಲಿ ಸರಕಾರ ಮತ್ತು ಅಲ್ಲಿನ ರಾಜ್ಯಪಾಲ ನಝೀಬ್ಜಂಗ್ ನಡುವೆ ನಡೆದ ಹಗ್ಗ ಜಗ್ಗಾಟದಲ್ಲಿ ಚುನಾಯಿತ ಸರಕಾರದ ಹಕ್ಕುಗಳನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಾಗ ಅವರು ನೈತಿಕ ಹೊಣೆಹೊತ್ತು ತಮ್ಮ ಹುದ್ದೆಯನ್ನು ತ್ಯಜಿಸಿದರು. ಹಿಂದೆ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ರಾಜ್ಯಪಾಲರಾಗಿದ್ದಾಗ ಅವರ ಹೇಳಿಕೆಯನ್ನು ದಾಖಲಿಸಲು ಸಿಬಿಐ ಯತ್ನಿಸಿದಾಗ ಆಗಿನ ಯುಪಿಎ ಸರಕಾರ ಒಪ್ಪಿರಲಿಲ್ಲ. ಬಳಿಕ ಎನ್ಡಿಎ ಸರಕಾರ ಬಂದಾಗ ಅವರ ವಿಚಾರಣೆಗೆ ಅನುಮತಿ ನೀಡಿತು. ಹೀಗೆ ರಾಜಕಾರಣವೂ ರಾಜ್ಯಪಾಲರ ರಕ್ಷಣೆ ಮಾಡುತ್ತದೆ, ಹಾಗೆಯೇ ಹಿತವಿಲ್ಲದಿದ್ದರೆ ಕೈಬಿಡುತ್ತದೆ.
ರಾಜ್ಯಪಾಲರ ರಾಜಕೀಯದ ಬಗ್ಗೆ ಅಧ್ಯಯನ ಮಾಡಿದರೆ ಇನ್ನಷ್ಟು ಅಸ್ಥಿಪಂಜರಗಳು ಕಪಾಟಿನಿಂದ ಹೊರಬೀಳಬಹುದು.
ಇದೇ ರೀತಿಯ ಲಕ್ಷ್ಮಣ ರೇಖೆ ಸಂವಿಧಾನದಡಿ ರಾಷ್ಟ್ರಪತಿ, ಉಪರಾಷ್ಟ್ರಪತಿಯವರಿಗೂ ಇದೆ. ಅವರ್ಯಾರಿಗೂ ಈ ಲಕ್ಷ್ಮಣರೇಖೆಯನ್ನು ದಾಟುವ ಹಕ್ಕಿಲ್ಲ. ಉಪರಾಷ್ಟ್ರಪತಿಗಾದರೋ ಸಂವಿಧಾನದ ೮೯ನೇ ವಿಧಿಯಡಿ ರಾಜ್ಯಸಭೆಯೆಂಬ ‘ಬುದ್ಧಿವಂತರ’ ನಾಡಿನ ಪಾಳೇಗಾರರಾಗಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯ ಅದೃಷ್ಟ ದಕ್ಕಿದೆ. ಇದು ಎಷ್ಟು ತಾರ್ಕಿಕವೋ ಗೊತ್ತಿಲ್ಲ. ಪ್ರಜಾಪ್ರಭುತ್ವದ ಆಯ್ಕೆಗಳಿಗೆ ಇದೊಂದು ಅಪವಾದ. ಇರಲಿ, ಇದು ದೊಡ್ಡವರು ಮಾಡಿದ ತಪ್ಪಾದ್ದರಿಂದ ಅದು ಔಷಧಿಗೆಂದು ತಿಳಿಯೋಣ. ಇದೇ ವಿಧಿಯಡಿ ರಾಜ್ಯಸಭೆಯು ಆದಷ್ಟು ಬೇಗ, ತನ್ನ ಸದಸ್ಯರ ಪೈಕಿ ಒಬ್ಬರನ್ನು ಉಪಸಭಾಪತಿಯಾಗಿ ಆಯ್ಕೆ ಮಾಡ‘ತಕ್ಕದ್ದು’. ಇದರನ್ವಯ ಸದ್ಯ ಜೆಡಿ(ಯು) ಪಕ್ಷದ ಹರಿವಂಶ್ ಅವರು ಈ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದೇ ರೀತಿಯ ಶಿಸ್ತನ್ನು ಸಂವಿಧಾನದಡಿ ಲೋಕಸಭೆಗೂ ನೀಡಲಾಗಿದೆ. ಸಂವಿಧಾನದ ೯೩ನೇ ವಿಧಿಯಡಿ ಲೋಕಸಭೆಗೂ ಅದರ ಸದಸ್ಯರ ಪೈಕಿ ಒಬ್ಬರನ್ನು ಸಭಾಪತಿಯಾಗಿ, ಒಬ್ಬರನ್ನು ಉಪಸಭಾಪತಿಯಾಗಿ ಆಯ್ಕೆ ಮಾಡ‘ತಕ್ಕದ್ದು’. ಸಭಾಪತಿಯಾಗಿ ಬಿಜೆಪಿಯ ಬಿರ್ಲಾ ಅವರ ಆಯ್ಕೆಯಾಗಿದೆ. ಆದರೆ ಕಳೆದ ೫ ವರ್ಷಗಳಲ್ಲಿ ಲೋಕಸಭೆಗೆ ಉಪಸಭಾಪತಿ ನೇಮಕ/ಆಯ್ಕೆ ಆಗಲೇ ಇಲ್ಲ. ಇದನ್ನು ಪ್ರತಿಪಕ್ಷಗಳು ಪ್ರಶ್ನಿಸಲೇ ಇಲ್ಲ. ಅವರ ಬಡಿದಾಟ ಏನಿದ್ದರೂ ಅಧಿಕಾರ ರಾಜಕೀಯದ ಮೇಲಾಟಕ್ಕೆ ಮೀಸಲು. ಈಗ ಇನ್ನೊಂದು ಚುನಾವಣೆ ಸಮೀಪಿಸುತ್ತಿರುವಾಗ ಪ್ರತಿಪಕ್ಷಗಳು ಈ ವಿಚಾರವನ್ನು ಪ್ರಸ್ತಾವಿಸುವುದು ಒಂದು ಹಾಸ್ಯಾಸ್ಪದ ಪ್ರಹಸನವಾಗುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ಅರ್ಹರನ್ನು ಕೂರಿಸುವುದು ಪ್ರಜಾತಂತ್ರದಲ್ಲಿ ಯಾವುದೇ ಹುದ್ದೆಯ ಅಗತ್ಯ. ಅದು ನಡೆಯದಿರುವುದು ದುರಂತ.