ಎಲ್ಲರ ‘ಆಶೋತ್ತರಗಳನ್ನು’ ಈಡೇರಿಸಿದ ಮತದಾರ ಪ್ರಭು!

ಈ ಬಾರಿ ಬಿಜೆಪಿಗೆ ಬಂದಿರುವ ಬಹುಮತ ಎಷ್ಟೆಂದರೆ, ತನ್ನ ಸಹಪಕ್ಷಗಳ ಊರುಗೋಲಿನ ಆಧಾರದಲ್ಲಿ ಮುನ್ನಡೆಯುವಷ್ಟು. ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ (ಬೇರೇನೂ ಅಚ್ಚರಿಯ ಬೆಳವಣಿಗೆಗಳಾಗದಿದ್ದರೆ) ಈ ಸರಕಾರದ ಊರುಗೋಲುಗಳಾಗಲಿದ್ದಾರೆ. ಅವರು ಬಯಸಿದರೆ, ಪ್ರಧಾನಿಯನ್ನೂ ಈಗ ಬದಲಾಯಿಸಿಯಾರು!

Update: 2024-06-05 06:26 GMT

ಕಳೆದ (2023) ನವೆಂಬರ್ - ಡಿಸೆಂಬರ್ ಹೊತ್ತಿಗೆ ಇನ್ನೇನು ಚುನಾವಣೆಗಳು ಬರಲಿವೆ ಎನ್ನುವಾಗ ನರೇಂದ್ರ ಮೋದಿಯವರ ಸರಕಾರ ತನ್ನ 3.0 ಆವೃತ್ತಿಗೆ ಆತ್ಮವಿಶ್ವಾಸದಿಂದ ಸಿದ್ಧತೆ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿಗಳು ಸದನದಲ್ಲಿಯೇ, ತಮ್ಮ ಪಕ್ಷ 370ರ ಗಡಿ ದಾಟಲಿದೆ ಮತ್ತು ಎನ್‌ಡಿಎ ಒಟ್ಟಾಗಿ 400ರ ಗಡಿ ದಾಟುವುದು ಗುರಿ (ಫೆಬ್ರವರಿ 2024) ಎಂದು ಪ್ರಕಟಿಸಿದ್ದರು. ಈ ಆತ್ಮವಿಶ್ವಾಸದ ದ್ಯೋತಕವಾಗಿ, ತಾನು ಮೂರನೇ ಅವಧಿಗೆ ಅಧಿಕಾರ ಹಿಡಿದ ಬಳಿಕ, ಮೊದಲ 125 ದಿನಗಳಲ್ಲಿ ನಿರ್ವಹಿಸಬೇಕಾದ ಕಾರ್ಯಯೋಜನೆಗಳ ಕುರಿತು ಸಿದ್ಧತೆ ನಡೆಸುವಂತೆ ತನ್ನ ಅಧಿಕಾರಿವರ್ಗಕ್ಕೆ ಅಧಿಕೃತವಾಗಿಯೇ ಸೂಚನೆ ನೀಡಿದ್ದರು.

ಪ್ರತಿಪಕ್ಷಗಳ ಕಡೆಯಿಂದ, INDI ಅಲಯನ್ಸ್ ರೂಪುಗೊಳ್ಳತೊಡಗಿದ್ದೇ 2023ರ ಜುಲೈ ತಿಂಗಳಿನಲ್ಲಿ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಬೇರೆ 26ರಷ್ಟು ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಆಗಿರುವ ಈ ಒಕ್ಕೂಟ, ಆರಂಭದಿಂದಲೂ ಚುನಾವಣೆ ಗೆಲ್ಲುತ್ತೇವೆಂಬ ಭರವಸೆಯಿಂದ ಹೊರಟಂತಿರಲಿಲ್ಲ. ರಾಹುಲ್ ಗಾಂಧಿ ಅವರ ‘ಪ್ರೀತಿಯ ಅಂಗಡಿ’ ತೆರೆಯುವ ಎರಡು ದೇಶವ್ಯಾಪಿ ನಡಿಗೆಗಳು ಇನ್ನೇನು ಚಿಗುರಲಿವೆ ಎಂಬ ಹೊತ್ತಿಗೆ ಆರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಾದ ಹಿನ್ನಡೆಗಳಿಂದಾಗಿ INDI ಅಲಯನ್ಸ್‌ಗೆ ಒಳ್ಳೆಯ ಆರಂಭ ಸಿಗಲೇ ಇಲ್ಲ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಅಂತರ ಕಾದುಕೊಂಡರು. ಈ ಎಲ್ಲ ವೈರುಧ್ಯಗಳ ಮೂಟೆಯೇ ಆಗಿದ್ದ INDI ಒಕ್ಕೂಟ, ಹೆಚ್ಚೆಂದರೆ ಒಂದು ಪ್ರಬಲ ವಿರೋಧ ಪಕ್ಷಕ್ಕೆ ಸಂಸತ್ತಿನಲ್ಲಿ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದಂತಿತ್ತು.

ಆದರೆ, ಮತದಾರರ ಮನದಲ್ಲಿ ಬೇರೆಯೇ ಸಂಗತಿಗಳಿದ್ದವು. ಹಾಲೀ ಸರಕಾರದ ಅವಧಿಯುದ್ದಕ್ಕೂ ಕಾಡಿದ್ದ ಬೆಲೆ ಏರಿಕೆ, ನಿರುದ್ಯೋಗ, ಕೋವಿಡ್ ಸಂಕಷ್ಟ, ದುರಾಡಳಿತಗಳಿಂದ ಬೇಸತ್ತಿದ್ದ ಮತದಾರ ‘ಆಡಳಿತ ವಿರೋಧಿ ಅಲೆ’ ಎಬ್ಬಿಸಿದ್ದನ್ನು ಆಡಳಿತಪಕ್ಷ ಗ್ರಹಿಸಲೇ ಇಲ್ಲ. ರಾಮ ಮಂದಿರ ನಿರ್ಮಾಣದ ಬಳಿಕ ಬಿಜೆಪಿ ಸರಕಾರದಲ್ಲಿ ಒಂದು ‘ಆರಾಮದ’ ವಾತಾವರಣ ತಲೆಹಾಕಿತ್ತು. ಇತ್ತ ಕಾಂಗ್ರೆಸ್ ಕೂಡ ಇದು ತನ್ನ ಗಮನಕ್ಕೆ ಬಂದಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ. ಸಮಸ್ಯೆಯ ಮೂಲಕ್ಕೆ ಹೋಗಿ, ಅದಕ್ಕೆ ಪರಿಹಾರ ಗುರುತಿಸುವ ಬದಲು, ಕರ್ನಾಟಕದಲ್ಲಿ ಯಶಸ್ಸು ಕಂಡ ‘ಗ್ಯಾರಂಟಿ’ ಮಾದರಿಯ ತಾತ್ಕಾಲಿಕ ಮುಲಾಮನ್ನೇ ನೆಚ್ಚಿಕೊಂಡು ಹೊರಟಿತು.

ಚುನಾವಣೆಯ ಆಸುಪಾಸಿನ ಡ್ರಾಮಾ

ಚುನಾವಣೆಗಳು ಪ್ರಕಟಗೊಳ್ಳುವ ಹೊತ್ತಿಗೆ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬುದು ಬಹುತೇಕ ಖಚಿತವಿತ್ತು. ಆದರೆ, ಚುನಾವಣೆಗಳ ಕಾವು ಏರುತ್ತಾ ಹೋದಂತೆ, ತನ್ನ ಪುನರಾಗಮನದ ಸಂಭಾವ್ಯತೆಗಳು ಅಪಾಯದಲ್ಲಿರುವುದನ್ನು ಮೊದಲು ಗ್ರಹಿಸಿದ್ದೇ ಬಿಜೆಪಿ. ಅದು ಪ್ರಧಾನಮಂತ್ರಿ ಮೋದಿಯವರ ಭಾಷಣಗಳಲ್ಲಿ ಸ್ಪಷ್ಟವಾಗಿ ಗೋಚರಕ್ಕೆ ಬರುತ್ತಿತ್ತು. ಇಡಿಯ ಚುನಾವಣೆಯನ್ನೇ ‘ಮೋದಿ ವರ್ಸಸ್ ವಿರೋಧಪಕ್ಷ’ ಎಂಬ ಸಮೀಕರಣಕ್ಕೆ ಬದಲಾಯಿಸಿದ್ದುದರಿಂದ ಇಡಿಯ ಚುನಾವಣಾ ಪ್ರಚಾರ ಸತ್ರವನ್ನು ನರೇಂದ್ರ ಮೋದಿಯವರು ತನ್ನ ಅಳಿವು ಉಳಿವಿನ ಪ್ರಶ್ನೆಯಾಗಿಯೇ ಪರಿಗಣಿಸಿ ಹೋರಾಟ ನೀಡಿದ್ದು ಸುಳ್ಳಲ್ಲ. 2014, 2019ರ ಬಿಜೆಪಿ ಚುನಾವಣಾ ಪ್ರಚಾರ ವೈಖರಿಗಳನ್ನು ಕಂಡವರಿಗೆ ಇದು ಸ್ಪಷ್ಟವಾಗಿ ಗೋಚರಕ್ಕೆ ಬರುತ್ತಿತ್ತು. ಚುನಾವಣಾ ಆಯೋಗ, ಸರಕಾರಿ ಯಂತ್ರಗಳು ಸೇರಿದಂತೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಪರಿಕರಗಳನ್ನೂ ಭರಪೂರ ಬಳಸಿಕೊಂಡು ನರೇಂದ್ರ ಮೋದಿಯವರ ಹೋರಾಟ ನಡೆಯಿತು. ಈ ನಡುವೆ, ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ತಮ್ಮವರ ಸರಕಾರದ ಬಗ್ಗೆ ಸಂತುಷ್ಟವಾಗಿಲ್ಲ ಎಂಬ ಪುಕಾರುಗಳೂ ಎದ್ದವು. ಅದಕ್ಕೆ ಪೂರಕವೆನ್ನಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷರು ‘‘ಈಗ ನಾವು ಅವರನ್ನು ಮೀರಿ ಬೆಳೆದಿದ್ದೇವೆ’’ ಎಂಬರ್ಥದ ಹೇಳಿಕೆ ನೀಡಿದ್ದೂ ಆಯಿತು.

ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಚುನಾವಣೆಗಳು ಆರಂಭಗೊಳ್ಳುವ ಹೊತ್ತಿಗೆ INDI ಅಲಯನ್ಸ್ ಆಶ್ಚರ್ಯಕರ ರೀತಿಯಲ್ಲಿ ಬಲಶಾಲಿಯಾದ ಪ್ರತಿಪಕ್ಷವಾಗಿ ಕಾಣಿಸಿಕೊಳ್ಳತೊಡಗಿತ್ತು. ಅಲಯನ್ಸ್ ಪಾಲುದಾರರ ಚುನಾವಣಾ ಪ್ರಚಾರ ಸಭೆಗಳು ವೇಗಪಡೆದುಕೊಳ್ಳತೊಡಗಿದ್ದೇ ಇದಕ್ಕೆ ಸಾಕ್ಷಿಯಾಯಿತು. ಚುನಾವಣೆಯ ನೆರೇಟಿವ್‌ಗಳನ್ನು ಬಹು ಕಾಲದ ಬಳಿಕ INDI ಅಲಯನ್ಸ್ ಸೆಟ್ ಮಾಡುವುದು ಸಾಧ್ಯವಾಯಿತು. ನರೇಂದ್ರ ಮೋದಿಯವರು ತಮ್ಮ ಪ್ರಚಾರ ಸಭೆಗಳ ಉದ್ದಕ್ಕೂ, ಹಿಂದಿನಂತೆ ತಮ್ಮ ಪಕ್ಷದ ಕಾರ್ಯಕ್ರಮಗಳ-ಸಾಧನೆಗಳ ಬಗ್ಗೆ ಹೇಳುವ ಬದಲು INDI ಅಲಯನ್ಸ್ ಚುನಾವಣಾ ಪ್ರಣಾಳಿಕೆಯ ವಿಶ್ಲೇಷಣೆಗೆ ಶುರುಹಚ್ಚಿಕೊಂಡರು. ಕರಿಮಣಿ, ಟೆಂಪೊದಲ್ಲಿ ಅದಾನಿ ಹಣ ಹೀಗೆ. ಚುನಾವಣಾ ಆಯೋಗದ ಕೃಪೆಯಿಂದಾಗಿ ನರೇಂದ್ರ ಮೋದಿಯವರಿಗೆ ತಮ್ಮ ಏಕಾಂಗಿ ಹೋರಾಟದ ಮತ್ತು ಪ್ರಚಾರದ ಮೈಕ್ರೊ ಮ್ಯಾನೇಜ್‌ಮೆಂಟ್ ಕೂಡ ಸುಲಭವಾಯಿತು.

ಚುನಾವಣೆ ನಾಲ್ಕು ಐದನೇ ಸುತ್ತಿಗೆ ಬರುವ ವೇಳೆಗೆ, INDI ಅಲಯನ್ಸ್‌ಗೆ ತನಗೆ ತಾನು ಊಹಿಸಿದ್ದಕ್ಕಿಂತ ಹೆಚ್ಚಿನ ಅವಕಾಶ ಈ ಚುನಾವಣೆಗಳಲ್ಲಿ ದೊರಕಲಿದೆ ಎಂಬುದು ಸ್ಪಷ್ಟ ಆದಂತಿತ್ತು. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಿಂದಿ ಹಾರ್ಟ್‌ಲ್ಯಾಂಡಿನಲ್ಲಿ IಓಆI ಅಲಯನ್ಸ್‌ಗೆ ಮತದಾರ ಸ್ಪಂದಿಸತೊಡಗಿದ್ದ. ಅಲ್ಲಿಂದೀಚೆಗೆ ಕಾಂಗ್ರೆಸ್ ಚುನಾವಣಾ ಫಲಿತಾಂಶಗಳ ಕಡೆ ಗಮನ ನೀಡತೊಡಗಿತು ಮತ್ತು ಇವಿಎಂ ಮತದಾನ ವ್ಯವಸ್ಥೆಯಲ್ಲಿನ ಸಂಭಾವ್ಯ ಲೋಪಗಳು, ಸರಕಾರದ ತಪ್ಪು ನಡೆಗಳು, ಚುನಾವಣಾ ಆಯೋಗದ ಪಾರದರ್ಶಕತೆಯ ಕೊರತೆಗಳ ಬಗ್ಗೆ ಮತ್ತೆ ಮತ್ತೆ ಸ್ವರ ಎತ್ತತೊಡಗಿತು. ಚುನಾವಣೆಯ ವಾತಾವರಣ ಬಿಗಿಗೊಳ್ಳತೊಡಗಿದ್ದು ಇಲ್ಲಿಂದಾಚೆಗೆ.

ಎಕ್ಸಿಟ್ ಪೋಲ್ ಪ್ರಕರಣ!

ಚುನಾವಣಾ ಆಯೋಗ ಈ ಬಾರಿ ಎಕ್ಸಿಟ್ ಪೋಲ್‌ಗಳನ್ನು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳದೇ ಪ್ರಕಟಿಸುವಂತಿಲ್ಲ ಎಂದು ವಿಧಿಸಿತ್ತು. ಹಾಗಾಗಿ ಕೊನೆಯ ಸುತ್ತಿನ ಮತದಾನಗಳು ಮುಗಿದ ಬಳಿಕ, ಜೂನ್ ಒಂದರ ಸಂಜೆ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟಗೊಂಡವು. ಆರಂಭದಲ್ಲಿ ‘ಚಾರ್‌ಸೌ ಪಾರ್’ ಎಂದಿದ್ದ ಬಿಜೆಪಿ, ಆ ಮಾತನ್ನು ಚುನಾವಣೆ ಆರಂಭವಾದ ಬಳಿಕ ಮರೆತೇ ಬಿಟ್ಟಂತಿತ್ತು. ಬಹುತೇಕ ಸಮಬಲದ ಕದನ ಎಂದು ಬಿಂಬಿತವಾಗತೊಡಗಿದ್ದ ಈ ಚುನಾವಣೆ ಏಕಾಏಕಿ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದ ಬೆನ್ನಿಗೇ ಮತ್ತೆ ‘ಚಾರ್ ಸೌ ಪಾರ್’ ನೆರೇಟಿವ್‌ಅನ್ನು ನಡುಮನೆಗೆ ತಂದಿಟ್ಟಿತು.

ಎರಡು ದಿನಗಳ ಕಾಲ ಚುನಾವಣಾ ಫಲಿತಾಂಶಗಳ ವಾಸ್ತವಿಕ ಲೆಕ್ಕಾಚಾರಗಳನ್ನೆಲ್ಲ ಹೈಜಾಕ್ ಮಾಡಿ ಇಟ್ಟುಕೊಂಡಿದ್ದ ಈ ಎಕ್ಸಿಟ್ ಪೋಲ್ ಡ್ರಾಮಾ ಇಂದು (ಮಂಗಳವಾರ) ಪ್ರಮುಖ ಸೆಫಾಲಜಿ ಪರಿಣತರೊಬ್ಬರು ಲೈವ್ ಆಗಿ ಚಾನೆಲ್ ಒಂದರಲ್ಲಿ ಅಳುವುದರೊಂದಿಗೆ ಅಂಕದ ಪರದೆ ಎಳೆದುಕೊಂಡಿತು.

ವಾಸ್ತವ ಫಲಿತಾಂಶಗಳು ಬಂದಾಗ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪ. ಬಂಗಾಳ ಮತ್ತು ರಾಜಸ್ಥಾನಗಳು ದೇಶದ ಮುಂದಿನ 5 ವರ್ಷಗಳ ಹಣೆಬರಹವನ್ನು ನಿರ್ಧರಿಸಿಬಿಟ್ಟಿದ್ದವು.

ಎಲ್ಲರ ಆಶೋತ್ತರಗಳು ಈಡೇರಿದ್ದು ಹೇಗೆ?

ಈ ಫಲಿತಾಂಶ ಸ್ಥೂಲವಾಗಿ ಏನನ್ನೆಲ್ಲ ಹೇಳುತ್ತಿದೆ ಎಂಬುದನ್ನು ಗಮನಿಸಿದರೆ, ಎಲ್ಲರ ಆಶೋತ್ತರಗಳನ್ನೂ ಮತದಾರ ಪ್ರಭು ಈಡೇರಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತಿದೆ. ಭಾರತದ ಮತದಾರರು ತಾವು ಪ್ರಬುದ್ಧರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ನರೇಂದ್ರ ಮೋದಿಯವರಿಗೆ ಮೂರನೇ ಅವಧಿಯ ಅವಕಾಶವು ಪ್ರಾಪ್ತವಾಗುವ ಸನ್ನಿವೇಶ ಇರುವುದು, ಅವರ ಅಭಿಮಾನಿಗಳಿಗೆ ಬಿಜೆಪಿ ಗುರಿ ತಲುಪದಿರುವ ಬೇಸರದಲ್ಲೂ ಸಮಾಧಾನದ ಸಂಗತಿ ಆಗಲಿದೆ. ಅವರು ಈ ನಿಟ್ಟಿನಲ್ಲಿ ನೆಹರೂ ಸಾಧನೆಯನ್ನು ಸರಿಗಟ್ಟಲಿದ್ದಾರೆ!

‘‘ಒಂದು ದೇಶ, ಒಬ್ಬ ನಾಯಕ’’ ಎಂಬ ದೃಷ್ಟಿಕೋನದ ಹತ್ತು ವರ್ಷಗಳಲ್ಲಿ, ಆಡಳಿತಕ್ಕೆ ಚೆಕ್ ಮತ್ತು ಬ್ಯಾಲೆನ್ಸ್

ಗಳು ಅಗತ್ಯ ಎಂದವರ ಬಯಕೆಗಳೂ ಈಡೇರಿವೆ. ಈ ಬಾರಿ ಬಿಜೆಪಿಗೆ ಬಂದಿರುವ ಬಹುಮತ ಎಷ್ಟೆಂದರೆ, ತನ್ನ ಸಹಪಕ್ಷಗಳ ಊರುಗೋಲಿನ ಆಧಾರದಲ್ಲಿ ಮುನ್ನಡೆಯುವಷ್ಟು. ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ (ಬೇರೇನೂ ಅಚ್ಚರಿಯ ಬೆಳವಣಿಗೆಗಳಾಗದಿದ್ದರೆ) ಈ ಸರಕಾರದ ಊರುಗೋಲುಗಳಾಗಲಿದ್ದಾರೆ. ಅವರು ಬಯಸಿದರೆ, ಪ್ರಧಾನಿಯನ್ನೂ ಈಗ ಬದಲಾಯಿಸಿಯಾರು!

ವೈವಿಧ್ಯಮಯ ದೇಶವಾದ ಭಾರತದ ಪ್ರಾದೇಶಿಕ ಹಿತಾಸಕ್ತಿಗಳು ಸಹಜವಾಗಿಯೇ ಮುಂಚೂಣಿಗೆ ಬರಲಿವೆ. ಕೇಂದ್ರ-ರಾಜ್ಯ ಸಂಬಂಧಗಳು, ದಿಕ್ಕುತಪ್ಪಿದ ಉದಾರೀಕರಣ ಮತ್ತದರ ಫಲವಾದ ಖಾಸಗೀಕರಣ, ಆರ್ಥಿಕ ಸಂಕಷ್ಟಗಳೆಲ್ಲ ಸಂಸತ್ತಿನಲ್ಲಿ ಬುಲ್ಡೋಜ್ ಆಗುವ ಸಾಧ್ಯತೆಗಳು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಗಲಿವೆ. ರಾಜ್ಯಸಭೆಯಲ್ಲೂ ಬಿಜೆಪಿಯ ಪ್ರಾಬಲ್ಯ ಈ ಫಲಿತಾಂಶಕ್ಕನುಗುಣವಾಗಿ ಕ್ರಮೇಣ ಕಡಿಮೆ ಆಗಲಿರುವುದರಿಂದ, ರಾತ್ರೋರಾತ್ರಿ ಚರ್ಚೆ ಇಲ್ಲದೆ ಮಸೂದೆಗಳನ್ನು ಕಾಯ್ದೆ ಆಗಿಸುವ ಪ್ರಕ್ರಿಯೆಗಳಿಗೆ ಕಡಿವಾಣ ಬೀಳಲಿದೆ.

ಪಕ್ಷದ ಒಳಗೇ ಏಕಮೇವಾದ್ವಿತೀಯ ನಾಯಕರಾಗಿದ್ದ ನರೇಂದ್ರ ಮೋದಿಯವರಿಗೆ ‘ಸಮ್ಮಿಶ್ರ ಸರಕಾರ’ದ ಹೊಸ ಮಾದರಿಯೊಂದು ಪರಿಚಯವಾಗಲಿದೆ. ಸದನದಲ್ಲಿ ಒಬ್ಬರು ವಿರೋಧ ಪಕ್ಷ ನಾಯಕರೂ ಅಧಿಕೃತವಾಗಿ ನೇಮಕಗೊಳ್ಳಲಿದ್ದಾರೆ.

ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ಕೂಡ, ಚುನಾವಣೆಯ ವೇಳೆ ಎದ್ದಿದ್ದ ಪುಕಾರುಗಳು ಸತ್ಯ ಎಂದಾದರೆ, ಈ ಫಲಿತಾಂಶದಿಂದ ಸಮಾಧಾನ ಹೊಂದಲಿದೆ.

ರಾಮಮಂದಿರ ಚುನಾವಣೆಗಳನ್ನು ಗೆಲ್ಲಿಸಬಹುದು ಎಂಬ ಎಣಿಕೆ, ಸ್ವತಃ ಅಯೋಧ್ಯಾ ಕ್ಷೇತ್ರ ಇರುವ ಫೈಝಾಬಾದ್‌ನಲ್ಲಿಯೇ ಸುಳ್ಳಾಗಿದೆ.

ಹೀಗೆ ಇಂಚಿಂಚಾಗಿ, ದೇಶ ಏಕಚಕ್ರಾಧಿಪತ್ಯದತ್ತ ಸಾಗುತ್ತಿದೆ ಎಂಬ ನೆರೇಟಿವ್ ಬಲಗೊಳ್ಳುತ್ತಿದ್ದಾಗ, ಬಹಳ ಐಡಿಯಲ್ ಅನ್ನಿಸುವಂತಹ ಸಮ್ಮಿಶ್ರ ಸರಕಾರದ ಫಲಿತಾಂಶವನ್ನು ಈ ಚುನಾವಣೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News