ಸ್ಪರ್ಧಾತ್ಮಕ ಪರೀಕ್ಷೆ ಬರೆದವರಿಗೆ ಉದ್ಯೋಗ ಯಾವಾಗ ಸಿಗುತ್ತದೆ?
ಮಾನ್ಯರೇ,
ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾದ ಕರ್ನಾಟಕದ ಮೂರು ಪ್ರಮುಖ ಪಕ್ಷಗಳು ಕುರ್ಚಿ ಉಳಿಸಿ ಕೊಳ್ಳುವುದರಲ್ಲಿ ಹಾಗೂ ಕುರ್ಚಿ ಕಿತ್ತುಕೊಳ್ಳುವುದರಲ್ಲೇ ನಿರತವಾಗಿವೆ. ರಾಜ್ಯದಲ್ಲಿ ಸಾವಿರಾರು ಮಂದಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈ ಅಭ್ಯರ್ಥಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಯಾರೂ ತೋರಿಸುತ್ತಿಲ್ಲ.
*ಕೆಪಿಸಿಎಲ್‌ನಲ್ಲಿನ 622 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿ (2017) 7 ವರ್ಷಗಳೇ ಆಗಿವೆ. ಮರು ಪರೀಕ್ಷೆ ಮುಗಿದು (ಫೆಬ್ರವರಿ-2024) 6 ತಿಂಗಳಾದರೂ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
* 545 ಮತ್ತು 402 ಸಿವಿಲ್ ಪಿಎಸ್‌ಐ ನೇಮಕಾತಿ ಅಧಿಸೂಚನೆ ಪ್ರಕಟಿಸಿ (2021) 3 ವರ್ಷಗಳಾಗಿದ್ದು ಲಿಖಿತ ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ ಮತ್ತು 402 ಪಿಎಸ್‌ಐ ಹುದ್ದೆಗಳ ಪರೀಕ್ಷೆ ಇನ್ನೂ ನಡೆದಿಲ್ಲ.
* 245 ಸಿಟಿಐ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿ(ಅಗಸ್ಟ್-2023) ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ.
* 3,064 ಮತ್ತು 420 ಹುದ್ದೆಗಳಿಗೆ (ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್) ನೇಮಕಾತಿ ಅಧಿಸೂಚನೆ ಪ್ರಕಟಿಸಿ (ಸೆಪ್ಟಂಬರ್-2022) ಎರಡು ವರ್ಷಗಳಾಗುತ್ತಾ ಬಂತು. ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಇನ್ನೂ ಪ್ರಕ್ರಿಯೆ ಅಂತಿಮಗೊಂಡಿಲ್ಲ.
* 1,137 ಮತ್ತು 454 ಹುದ್ದೆಗಳ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಅಧಿಸೂಚನೆ ಪ್ರಕಟಿಸಿ (ಅಕ್ಟೋಬರ್-2022) ಎರಡು ವರ್ಷಗಳಾಗುತ್ತಾ ಬಂದಿದೆ. ಪರೀಕ್ಷೆ ಮುಗಿದು (ಫೆಬ್ರವರಿ) 6 ತಿಂಗಳಾದರೂ ಇನ್ನೂ ಪ್ರಕ್ರಿಯೆ ಅಂತಿಮಗೊಂಡಿಲ್ಲ.
ಕೆಇಎ ನಡೆಸುವ ವಿವಿಧ ನಿಗಮ ಮಂಡಳಿಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ (ಜೂನ್-2023) 1 ವರ್ಷವಾದರೂ ಪರೀಕ್ಷೆ ನಡೆಸಿ (ನವೆಂಬರ್-2023) 8-10 ತಿಂಗಳಾದರೂ ಇನ್ನೂ ಫಲಿತಾಂಶ ಬಂದಿಲ್ಲ.
ಈ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ನ್ಯಾಯ ಒದಗಿಸುವವರು ಯಾರು?
-ನೊಂದ ಸ್ಪರ್ಧಾರ್ಥಿ, ಧಾರವಾಡ