ನೆಲದ ಸತ್ಯಗಳಿಗೆ ಕಿವಿಯಾಗಿ...

Update: 2015-12-18 05:28 GMT

 ಕೃಷಿ ಮತ್ತು ಅದಕ್ಕೆ ಸಂಬಂಸಿದ ಪರಿಸರ, ಆಹಾರ ಭದ್ರತೆ, ಜೈವಿಕ ತಂತ್ರಜ್ಞಾನಗಳ ಬಗ್ಗೆ ಅಪಾರ ಅಧ್ಯಯನ ಮಾಡಿರುವ ಅಂತಾರಾಷ್ಟ್ರೀಯ ಮಟ್ಟದ ಚಿಂತಕ ದೇವಿಂದರ್ ಶರ್ಮಾ ಅವರ ಲೇಖನಗಳ ಸಂಗ್ರಹವೇ ‘ನೆಲದ ಸತ್ಯ’ ಕೃತಿ. ನಾಗೇಶ್ ಕೆ. ಎನ್. ಅವರು ಇದನ್ನು ಸಮರ್ಥವಾಗಿ ಕನ್ನಡಕ್ಕಿಳಿಸಿದ್ದಾರೆ. ಇಲ್ಲಿರುವ ಎಲ್ಲ ಲೇಖನಗಳೂ ಕೃಷಿ ಕ್ಷೇತ್ರ ಅವಸಾನದತ್ತ ಸಾಗುತ್ತಿರುವ ಹಿಂದಿನ ರಾಜಕೀಯ ಮತ್ತು ಸಾಮಾಜಿಕ ಕಾರಣಗಳನ್ನು ವಿಶ್ಲೇಷಿಸುತ್ತದೆ. ಭಾರತದ ಕೃಷಿನೀತಿ ಮತ್ತು ಆರ್ಥಿಕ ನೀತಿಗಳ ನಡುವಿನ ವಿರೋಧಾಭಾಸಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಹೇಗೆ ನಮ್ಮ ನೆಲ, ಬದುಕು ದುರಂತದ ಅಂಚಿಗೆ ದಾಪುಗಾಲಿಕ್ಕುತ್ತಿದೆ ಎನ್ನುವ ಸತ್ಯವನ್ನು ನಮಗೆ ಮನವರಿಕೆ ಮಾಡಿ ಕೊಡುವಲ್ಲಿ ಕೃತಿ ಯಶಸ್ವಿಯಾಗುತ್ತದೆ. ಇಲ್ಲಿ ದೇವೇಂದ್ರ ಶರ್ಮಾ ಅವರ 20ಕ್ಕೂ ಅಕ ಲೇಖನಗಳಿವೆ. ಭಾರತದ ಕೃಷಿ ಯಾಕೆ ಲಾಭದಾಯಕವಾಗಿಲ್ಲ, ದೇಶದ ಪ್ರಗತಿ ಹೇಗೆ ಕೃಷಿಯ ಜೊತೆಗಿನ ಕೊಂಡಿಯನ್ನು ಕಳಚಿಕೊಳ್ಳುತ್ತಾ ಅಧಃಪತನದೆಡೆಗೆ ಸಾಗುತ್ತಿದೆ, ರಾಜಕಾರಣಿಗಳ ಕುಲಾಂತರಿ ಜಪಗಳಿಂದ ನಮ್ಮ ನೆಲೆ ಮತ್ತು ಬದುಕು ಹೇಗೆ ಪರಾವಲಂಬಿಯಾಗುತ್ತಿದೆ. ಸೆಲೆಬ್ರಿಟಿಗಳ ಹಿಪಾಕ್ರಸಿ, ಮಾರುಕಟ್ಟೆಯ ಬಿಕ್ಕಟ್ಟು, ನಗರ-ಗ್ರಾಮೀಣ ಭಾರತದ ಸಂಘರ್ಷಗಳನ್ನು ಲೇಖನಗಳು ತೆರೆದಿಡುತ್ತವೆ. ಈರುಳ್ಳಿ ಕಥಾನಕದ ಹಿಂದಿರುವ ಕಪಟ ನಾಟಕವನ್ನು ಅಂಕಿ ಸಂಖ್ಯೆಗಳ ಜೊತೆಗೆ ಶರ್ಮಾ ಬಯಲಿಗೆಳೆಯುತ್ತಾರೆ. ಇಲ್ಲಿರುವ ಪ್ರತೀ ಲೇಖನಗಳೂ ಈ ನೆಲದ ಸತ್ಯವನ್ನು ತೆರೆದಿಡುವ ಶಕ್ತಿಯನ್ನು ಹೊಂದಿವೆ. ಶರ್ಮಾ ಅವರ ಬರಹಗಳು ಕನ್ನಡಕ್ಕಿಳಿಯುವಾಗ ಮೂಲ ಲಾಲಿತ್ಯಕ್ಕೆ ಯಾವುದೇ ಭಂಗ ಬಾರದೇ ಇರುವುದು ಅನುವಾದಕರ ಹೆಗ್ಗಳಿಕೆ. ಈ ನೆಲ, ಬದುಕು, ಭವಿಷ್ಯದ ಕುರಿತಂತೆ ಚಿಂತಿಸುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಇದು. ಲೇಖನಗಳಿಗೆ ಪೂರಕವಾಗಿ ಕಲಾವಿದ ಗುಜ್ಜಾರಪ್ಪ ಅವರ ಗೆರೆಗಳು ಪುಸ್ತಕವನ್ನು ಇನ್ನಷ್ಟು ಆಪ್ತವಾಗಿಸುತ್ತವೆೆ.

ಕೃಷಿ ಸಮಯ, ಬೆಂಗಳೂರು ಇವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಕೃತಿಯ ಮುಖಬೆಲೆ 300 ರೂ. ಆಸಕ್ತರು 9845548313 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News