2015ರ ಗಮನಾರ್ಹ ಹ್ಯಾಕಿಂಗ್‌ಗಳು

Update: 2015-12-20 06:46 GMT

ನಾವೀಗ 2015ನೆ ಸಾಲಿನ ಕೊನೆಯಲ್ಲಿ ನಿಂತಿದ್ದೇವೆ. ಇಡೀ ವರ್ಷದುದ್ದಕ್ಕೂ ಮತ್ತು ಅದಕ್ಕೂ ಮೊದಲು ಇಂಟರ್‌ನೆಟ್ ಭದ್ರತೆಯ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಪ್ರತೀ ಬಾರಿ ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತ ಹ್ಯಾಕರ್‌ಗಳು ಇಂಟರ್‌ನೆಟ್ ಮೂಲಕ ಇನ್ಯಾವುದೋ ಮೂಲೆಯಲ್ಲಿರುವ ಕಂಪ್ಯೂಟರ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇತ್ಯಾದಿ ಇಂಟರ್‌ನೆಟ್ ಜೊತೆ ಸಂಪರ್ಕ ಹೊಂದಿರುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಹಿಡಿತ ಸಾಧಿಸಿ ಭಾರೀ ನಷ್ಟ ಮಾಡಿಬಿಡುವ ವರದಿಗಳು ಸ್ಫೋಟಗೊಂಡಾಗ ಮೈ ಜುಮ್ಮೆನ್ನುತ್ತದೆ.

ಈ ಹ್ಯಾಕರ್‌ಗಳಿಂದ ಸುರಕ್ಷಿತವಾಗಿರುವುದಕ್ಕೆ ಎಲ್ಲ ಕಡೆಯಿಂದಲೂ ಬಹಳ ಪ್ರಯತ್ನ ನಡೆಯುತ್ತಲೇ ಇದೆ. ಒಂದೆಡೆ ಆ್ಯಂಟಿ ವೈರಸ್ ತಂತ್ರಾಂಶಗಳನ್ನು ರೂಪಿಸುವ ಸಂಸ್ಥೆಗಳು ಹೊಸ ಹೊಸ ಸ್ಪೈವೇರ್‌ಗಳು ಇಂಟರ್‌ನೆಟ್ ದಾರಿಯ ಮೂಲಕ ನಿಮ್ಮ ಮೊಬೈಲ್‌ಗಳಿಗೆ, ಕಂಪ್ಯೂಟರುಗಳಿಗೆ ನುಸುಳದಂತೆ ಹೊಸ ಹೊಸ ಅಪ್‌ಡೇಟ್‌ಗಳನ್ನು ಕೊಡುತ್ತಲೇ ಇವೆ. ಇಂಟರ್‌ನೆಟ್ ಬ್ಯಾಂಕಿಂಗ್ ಮಾಡುವ ಜನರ ಅಕೌಂಟುಗಳು ಸುರಕ್ಷಿತವಾಗಿರಲೆಂದು ಬ್ಯಾಂಕುಗಳು ಗ್ರಾಹಕರಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ನಿರಂತರವಾಗಿ ತಿಳಿಸುತ್ತಲೇ ಇರುತ್ತವೆ. ನೆಟಿಜೆನ್‌ಗಳೂ ಕೂಡ ಒಂದಷ್ಟು ಮಟ್ಟಿಗೆ ಜಾಗೃತರಾಗಿರುವುದು ಒಂದು ಉತ್ತಮ ಬೆಳವಣಿಗೆ. ಆದರೆ, ನೆಟಿಜೆನ್ ಸಮುದಾಯಕ್ಕೆ ನಿತ್ಯ ಹೊಸಬರು ಸೇರುತ್ತಲೇ ಇರುತ್ತಾರೆ. ಅವರಿಗೆ ಇಂತಹ ಹ್ಯಾಕಿಂಗ್ ಅನಾಹುತಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ, ಇಂತಹ ಜನರೇ ಹ್ಯಾಕರ್‌ಗಳಿಗೆ ಸುಲಭವಾಗಿ ಬಲಿಯಾಗಿಬಿಡುತ್ತಾರೆ.

ಎಷ್ಟೆಲ್ಲಾ ಜಾಗೃತಿ ಮೂಡಿದರೂ, ಏನೆಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ, ಏನೆಲ್ಲಾ ಪರಿಹಾರೋಪಾಯಗಳನ್ನು ಕಂಡುಕೊಂಡರೂ ಹ್ಯಾಕಿಂಗ್ ಮಾತ್ರ ನಿಂತಿಲ್ಲ. ನಾವು ಚಾಪೆಯ ಕೆಳಗೆ ತೂರಿದರೆ ಹ್ಯಾಕರ್‌ಗಳು ರಂಗೋಲಿ ಕೆಳಗೆ ತೂರುತ್ತಾರೆ. 2015ರಲ್ಲಿ ನಡೆದ ಅತಿದೊಡ್ಡ ಹ್ಯಾಕಿಂಗ್‌ಗಳನ್ನು ಇಲ್ಲಿ ಕೊಡಲಾಗಿದೆ.

1. StageFright ಎಂದು ಕರೆಯಲ್ಪಡುವ ದಾಳಿ ಈ ವರ್ಷದಲ್ಲಿ ನಡೆದ ಮೊದಲ ಅತಿದೊಡ್ಡ ಹ್ಯಾಕಿಂಗ್ ದಾಳಿ ಎನ್ನಬಹುದು. ಇದು ನಡೆದದ್ದು ಜುಲೈ ತಿಂಗಳಲ್ಲಿ. ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಂನಲ್ಲಿದ್ದ ಒಂದು ಸಣ್ಣ ಕೊರತೆಯನ್ನು ಬಂಡವಾಳ ಮಾಡಿಕೊಂಡ ಹ್ಯಾಕರ್‌ಗಳು ಸುಮಾರು 10 ಲಕ್ಷ ಆಂಡ್ರಾಯ್ಡಾ ಮೊಬೈಲ್/ ಟ್ಯಾಬ್ಲೆಟ್‌ಗಳ ಮೇಲೆ ನಿಯಂತ್ರಣ ಸಾಧಿಸಿದ್ದರು. ವಿಶೇಷ ಎಂದರೆ ಆ ಮೊಬೈಲ್/ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದ ವ್ಯಕ್ತಿಗಳಿಗೂ ತಮ್ಮ ಫೋನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ, ಅದರೊಳಗಿನ ಎಲ್ಲಾ ಮಾಹಿತಿಯನ್ನು ಕದಿಯುತ್ತಿದ್ದಾರೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಅಷ್ಟೊಂದು ಚಾಕಚಕ್ಯತೆಯಿಂದ ಈ ದಾಳಿಯನ್ನು ಮಾಡಿದ್ದರು. ಜಿಂಪೇರಿಯಂ ಎಂಬ ಭದ್ರತಾ ಕಂಪೆನಿಯು ಮೊದಲ ಬಾರಿಗೆ ಈ ದಾಳಿಯನ್ನು ಪತ್ತೆ ಹಚ್ಚಿತು. ಕೂಡಲೇ ಆಂಡ್ರಾಯ್ಡಾ ತಂತ್ರಾಂಶವನ್ನು ರೂಪಿಸಿದ ಗೂಗಲ್ ಸಂಸ್ಥೆಯು ಇದಕ್ಕೊಂದು ಪ್ಯಾಚ್ ಬಿಡುಗಡೆ ಮಾಡಿತು. ಆದರೆ, ಈ ಪ್ಯಾಚ್ ಬಳಕೆಗೆ ಬರಬೇಕೆಂದರೆ ಮೊಬೈಲ್/ ಟ್ಯಾಬ್ಲೆಟ್ ತಯಾರಿಸುವ ಕಂಪೆನಿಗಳು ಮೊದಲು ಇದನ್ನು ಅಳವಡಿಸಬೇಕು. ಆನಂತರ ಮಾತ್ರವೇ ಅದು ಬಳಕೆದಾರರಿಗೆ ದೊರೆಯುತ್ತದೆ. ಈ ತಾಂತ್ರಿಕ ಕಾರಣದಿಂದಾಗಿ ಇಂದಿಗೂ ಹಳೆಯ ಆಂಡ್ರಾಯ್ಡಾ ಮೊಬೈಲ್‌ಗಳು ದಾಳಿಗೆ ತುತ್ತಾಗುವ ಸಾಧ್ಯತೆಯಿದೆ.

2. ಆಶ್ಲೆ ಮ್ಯಾಡಿಸನ್ ದಾಳಿ: ಇದೂ ಕೂಡ ಜುಲೈ ತಿಂಗಳಲ್ಲೇ ನಡೆದ ದಾಳಿ. ಆಶ್ಲೆ ಮ್ಯಾಡಿಸನ್ ಎಂಬುದು ಒಂದು ವೆಬ್‌ಸೈಟ್ ಆಗಿದ್ದು ಮದುವೆಯಾದ ಪುರುಷ, ಮಹಿಳೆಯರು ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದಕ್ಕೆ ನೆರವಾಗುವ ವೆಬ್‌ಸೈಟ್ ಇದು. ಇಲ್ಲಿ ಲಕ್ಷಾಂತರ ಪುರುಷ, ಮಹಿಳೆಯರು ದುಡ್ಡು ಕೊಟ್ಟು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದರು. ಎಲ್ಲರೂ ತಮ್ಮ ಈ ಮೇಲ್ ವಿಳಾಸಗಳನ್ನೂ ಒಳಗೊಂಡಂತೆ ಸಂಪರ್ಕ ವಿಳಾಸವನ್ನೂ ಕೊಟ್ಟಿದ್ದರು. ಆ ಅಂತರ್ಜಾಲ ತಾಣವು ಈ ಹೆಸರು ಮತ್ತು ಸಂಪರ್ಕ ವಿವರಗಳನ್ನೆಲ್ಲಾ ಗೌಪ್ಯವಾಗಿಟ್ಟಿತ್ತು. ಆದರೆ, ಹ್ಯಾಕರ್‌ಗಳು ಈ ವೆಬ್‌ಸೈಟ್‌ನ ಸರ್ವರ್ ಮೇಲೆ ದಾಳಿ ಮಾಡಿ ಈ ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಕೊಂಡಿದ್ದ 3.20 ಕೋಟಿ ಜನರ ಪಟ್ಟಿಯನ್ನು, ಅವರ ಈ ಮೇಲ್ ವಿಳಾಸವನ್ನು ಹಾಗೂ ಅವರ ಕ್ರೆಡಿಟ್/ಡೆಬಿಟ್ ಕಾರ್ಡುಗಳ ಆಂಶಿಕ ಮಾಹಿತಿಯನ್ನು ಕದ್ದುಬಿಟ್ಟರು! ಆದರೆ, ಈ ಹ್ಯಾಕ್‌ನಿಂದ ತನಗೇನೂ ನಷ್ಟವಾಗಲಿಲ್ಲ, ವೆಬ್‌ಸೈಟ್ ಮತ್ತಷ್ಟು ಜನಪ್ರಿಯವಾಗಿ ಸದಸ್ಯರ ಸಂಖ್ಯೆ ಜಾಸ್ತಿಯಾಯಿತು ಅಂತ ವೆಬ್‌ಸೈಟ್ ಹೇಳಿಕೊಂಡಿತು. ಆದರೆ, 3.20 ಕೋಟಿ ಜನರ ಹೆಸರುಗಳು ಬಹಿರಂಗಗೊಂಡು ಅವರೆಲ್ಲ ಬಹಳ ಮುಜುಗರ ಎದುರಿಸಬೇಕಾಯಿತು.

3. ಫೈರ್‌ಫಾಕ್ಸ್ ದಾಳಿ: ನಮಗೆಲ್ಲಾ ಗೊತ್ತಿರುವಂತೆ ಮೊಜಿಲ್ಲಾ ಫೈರ್‌ಫಾಕ್ಸ್ ಒಂದು ವೆಬ್‌ಬ್ರೌಸಿಂಗ್ ತಂತ್ರಾಂಶ. ಇದರಲ್ಲಿರುವ ಒಂದು ಸಣ್ಣ ನ್ಯೂನತೆಯನ್ನು ಬಳಸಿಕೊಂಡ ಹ್ಯಾಕರ್‌ಗಳು ಮಿಲಿಯಾಂತರ ಕಂಪ್ಯೂಟರುಗಳಿಗೆ ನುಸುಳಿ ಅಲ್ಲಿರುವ ಬಿಡಿಬಿಡಿ ಫೈಲುಗಳನ್ನು ಕದ್ದಿರುವ ಸಾಧ್ಯತೆ ಆಗಸ್ಟ್ ತಿಂಗಳಿನಲ್ಲಿ ಬಯಲಿಗೆ ಬಂತು. ಮೊಜಿಲ್ಲಾ ಕೂಡಲೇ ತನ್ನ ಬಳಕೆದಾರರಿಗೆ ಈ ಅಪಾಯದ ಕುರಿತು ಎಚ್ಚರಿಸಿ ಆ ಸಮಸ್ಯೆಯನ್ನು ಬಗೆಹರಿಸುವ ಅಪ್‌ಡೇಟ್ ಬಿಡುಗಡೆ ಮಾಡಿತು.

4. ಜನರಲ್ ಮೋಟಾರ್ಸ್‌ ಮೇಲಿನ ದಾಳಿ: ಜನರಲ್ ಮೋಟಾರ್ಸ್‌ ಒಂದು ಅಟೋಮೊಬೈಲ್ ಕಂಪೆನಿಯಾಗಿದ್ದು ಕಾರು ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಕಾರುಗಳಲ್ಲಿ ಆನ್‌ಸ್ಟಾರ್ ಎಂಬ ಸಲಕರಣೆಯನ್ನು ಇದು ಅಳವಡಿಸಿದ್ದು ಈ ಸಲಕರಣೆಯ ಮೂಲಕ ಕಾರಿನ ಲೊಕೇಶನ್ ಪತ್ತೆ ಹಚ್ಚುವುದು, ಡೋರ್ ಅನ್‌ಲಾಕ್ ಮಾಡುವುದು ಹಾಗೂ ಕಾರಿಗೆ ಸ್ಟಾರ್ಸ್‌ ನೀಡುವುದು ಇತ್ಯಾದಿ ಕೆಲಸಗಳನ್ನು ಮಾಡಬಹುದು. ಸಮಿ ಕಾಮ್ಕಾರ್ ಎಂಬ 29 ವರ್ಷದ ಯುವಕನೊಬ್ಬ ಆನ್‌ಸ್ಟಾರ್ ಸಲಕರಣೆಯನ್ನೇ ಹೋಲುವ ತನ್ನದೇ ಆದ ಹೊಸ ಸಲಕರಣೆಯನ್ನು ರೂಪಿಸಿ 100 ಡಾಲರ್‌ಗೆ ಮಾರಲಾರಂಭಿಸಿದ. ಈ ಸಲಕರಣೆಯನ್ನು ಯಾವುದೇ ಆನ್‌ಸ್ಟಾರ್ ಸಲಕರಣೆಯನ್ನು ಹೊಂದಿರುವ ಕಾರಿಗೆ ಅಟ್ಯಾಚ್ ಮಾಡಿಬಿಟ್ಟರೆ ಆನ್‌ಸ್ಟಾರ್ ಏನೆಲ್ಲಾ ಕೆಲಸಗಳನ್ನು ಮಾಡುತ್ತದೆಯೋ ಅದನ್ನೆಲ್ಲಾ ಈ ಸಲಕರಣೆಯನ್ನು ಉಪಯೋಗಿಸಿ ಮಾಡಬಹುದಿತ್ತು. ಅಂದರೆ, ಯಾವುದೋ ಕಾರಿನ ಇನ್ಯಾವುದೋ ವ್ಯಕ್ತಿ ಈ ಸಲಕರಣೆನ್ನು ಅಂಟಿಸಿಬಿಟ್ಟರೆ ಈತ ಆ ಕಾರಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಿತ್ತು. ಇದು ಬೆಳಕಿಗೆ ಬಂದಿದ್ದೇ ತಡ ಜನರಲ್ ಮೋಟಾರ್ಸ್‌ ತನ್ನ ಆನ್‌ಸ್ಟಾರ್ ಸಿಸ್ಟಂ ಅನ್ನು ಅಪ್‌ಡೇಟ್ ಮಾಡಿ ಸಮಸ್ಯೆಯನ್ನು ಬಗೆಹರಿಸಿತು.

Writer - xsangeetax@gmail.com

contributor

Editor - xsangeetax@gmail.com

contributor

Similar News