ಅರಿಯದ ಚರಿತೆಯ ತೆರೆದಿಡುವ ಕವಿತೆಗಳು....

Update: 2015-12-21 08:30 GMT

‘‘ನಮ್ಮ ಮನೆಯಲ್ಲಿ ಇಬ್ಬರಿದ್ದೆವು

ಎರಡು ಕಾಲಗಳಲ್ಲಿ ಬದುಕುತ್ತಿದ್ದೆವು

ನಮ್ಮ ಕೊರಳುಗಳು ಒಂದು ನೊಗಕ್ಕೆ

 ಕೂಡಲೇ ಇಲ್ಲ....’’

ಕಾವ್ಯಬೋಧಿ-ಮಹಿಳಾ ಕಾವ್ಯ 2014ರ ಗಿಡದಿಂದ ಉದುರಿದ ಒಂದು ಎಲೆಯಿದು. ಪ್ರತಿಭಾನಂದ ಕುಮಾರ್ ಅವರು ಬರೆದ ಕವಿತೆಯ ಸಾಲು. ಇಂತಹ ಉಜ್ವಲ ಸಾಲುಗಳಿರುವ ಮಹಿಳೆಯರೇ ಬರೆದ ಅಪಾರ ಪದ್ಯಗಳನ್ನು ಒಂದೆಡೆ ಹಿಡಿದಿಟ್ಟಿದ್ದಾರೆ ಸಂಪಾದಕಿ ಡಾ. ಎಚ್. ಎಸ್. ಅನುಪಮಾ.

ಕನ್ನಡದಲ್ಲಿ ಮಹಿಳಾ ಕಾವ್ಯಕ್ಕೆ ಪ್ರಾಚೀನ ಇತಿಹಾಸದ ಬೆಂಬಲ ತೀರಾ ಕಡಿಮೆ. ಅದು ಉಜ್ವಲವಾಗಿ ಹೊರಹೊಮ್ಮಿದ್ದು ಅಕ್ಕಮಹಾದೇವಿಯಂತಹ ಶರಣೆಯಿಂದ. ಅಂತೆಯೇ ಮುಂದೆ ಸಂಚಿಯ ಹೊನ್ನಮ್ಮನಂತಹ ಕವಯಿತ್ರಿಯರು ಹುಟ್ಟಿದರೂ ಅವರ ಕಾವ್ಯಕ್ಕೆ ಹದಿಬದೆಯ ಮಿತಿಗಳಿದ್ದವು. ಆದರೆ ಮಹಿಳೆಯ ಧ್ವನಿ ಮಾತ್ರ ಗುಪ್ತಗಾಮಿನಿಯಂತೆ ಕತೆಗಳಲ್ಲಿ, ಹಾಡುಗಳಲ್ಲಿ, ಜನಪದ ಕಾವ್ಯಗಳಲ್ಲಿ ಗುಟ್ಟಾಗಿ ಹರಿಯುತ್ತಲೇ ಇತ್ತು. ಭೂಮಿಯೊಳಗಿನ ಲಾವರಸದಂತೆ ಗುಟ್ಟಾಗಿ ಕುದಿಯುತ್ತಿತ್ತು.

ಆಧುನಿಕ ದಿನಗಳಲ್ಲಿ ಕವಿತೆಗಳು ಆಸರೆಯಾದದ್ದು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು. ಪುರುಷರ ಕವಿತೆಗಳು ಕ್ಲೀಷೆಗಳ ನಡುವೆ ತೊಳಲಾಡುತ್ತಿದ್ದರೆ, ಮಹಿಳೆಯ ಸಾಲುಗಳು ಒರೆಯಿಂದೆಳೆದ ಕತ್ತಿಯಂತೆ ಹಲವರ ಕಣ್ಣು ಕುಕ್ಕ ತೊಡಗಿದ್ದು ಸತ್ಯ. ಇಲ್ಲಿರುವ ಕವಿತೆಗಳಲ್ಲಿ ಅಂತಹ ಗುಣಲಕ್ಷಣಗಳುಳ್ಳ ಹಲವು ಕವಿತೆಗಳಿವೆ. ವರ್ತಮಾನವು ಆಧುನಿಕ ಹೆಣ್ಣನ್ನು ಹೇಗೆ ಸ್ಪರ್ಶಿಸಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಬೇರೆ ಬೇರೆ ಬಗೆಯ ಕಾವ್ಯಗಳನ್ನು ಇಲ್ಲಿ ಕಾಣಬಹುದು.

‘‘ಹಣ್ಣು ಹೆಣ್ಣುಗಳ ಮನುಷ್ಯತ್ವದ ಮೀಮಾಂಸೆ ಅರಿಯದ ಚರಿತೆಗೆ ಅನಾಗರಿಕ ಸೋಂಕು...’’ ಎಂದು ದಿಟ್ಟವಾಗಿ ಬರೆಯುವ ಅನಸೂಯ ಕಾಂಬಳೆ, ‘‘ಕೇಳುವುದೇ ಆದರೆ, ಬುದ್ಧಿ, ಬಲ ಕೇಳು/ ಛೂ ಮಂತ್ರದ ದೇವರನ್ನಲ್ಲ, ನಿನ್ನೊಳಗಿನ ಗಣಿಯನ್ನು ಎಂಬ ಆತ್ಮವಿಶ್ವಾಸದ ಸಾಲುಗಳನ್ನು ತೆರೆದಿಡುವ ಅಲಾವಿಕಾ ಲಾ, ‘‘ಒದ್ದೆ ನಗುವ ಸದೆ ಬಡಿದ ಸಂತಾಪ ಸಂಭ್ರಮ/ ಹಾಕದ ಬರೆಗೆ ತಂನಿಂತಾನೆ ಸುಟ್ಟ ಕನಸು...’’ ಎಂಬ ನೋವಿನ ಗೆರೆಗಳನ್ನು ಎಳೆವ ಆರತಿ ಎಚ್. ಎನ್....ಹೀಗೆ ಇಡೀ ಕವಿತೆಗಳು ಹೆಣ್ಣಿನ ಸುಖ, ಸಂತೋಷ, ನೋವು, ಬಂಡಾಯಗಳನ್ನು ಪಿಸುಗುಟ್ಟುತ್ತವೆ. ಸ್ವಾತಂತ್ರದ ತುಡಿತವನ್ನು ಇಲ್ಲಿನ ಕವಿತೆಗಳು ತೆರೆದಿಡುತ್ತವೆ. ಕಮಲ ಎಂ. ಆರ್, ಕಾವ್ಯಾ ಕಡಮೆ, ಅಕ್ಷತಾ, ಗುಲಾಬಿ ಬಿಳಿಮಲೆ, ಜ್ಯೋತಿ ಗುರುಪ್ರಸಾದ್, ತಾರಿಣಿ ಶುಭದಾಯಿನಿ, ದೀಪಾ ಹಿರೇಗುತ್ತಿ, ಧರಣೀ ದೇವಿ ಮಾಲಗತ್ತಿ, ಸಬೀಹಾ ಭೂಮಿಗೌಡ, ವೈದೇಹಿ ಮೊದಲಾದ ಪ್ರತಿಭಾವಂತ ಹಿರಿ-ಕಿರಿ ಕವಯಿತ್ರಿಯರ ಸಂಗಮವಾಗಿದೆ ‘‘ಕಾವ್ಯಬೋಧಿ’’. ನಿಜಕ್ಕೂ ಅಧ್ಯಯನಕ್ಕೆ ಯೋಗ್ಯವಾದ ಸಂಪಾದನೆ ಇದು. ಡಾ. ಎಚ್. ಎಸ್. ಅನುಪಮಾ ಅವರ ಸುದೀರ್ಘ ಮುನ್ನುಡಿ, ಕವಿತೆಗಳ ಕುರಿತಂತೆ ಒಂದು ಮುನ್ನೋಟವನ್ನು ನೀಡುತ್ತದೆ.

ಕವಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 170 ರೂ. ಆಸಕ್ತರು 9480 211320 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News