ತುಳುನಾಡಿನ ಹಿನ್ನೋಟ ಮತ್ತು ಮುನ್ನೋಟ

Update: 2015-12-22 14:23 GMT

 ‘ಇತಿಹಾಸದ ಶೋಧ, ಗತದ ಹುಡುಕಾಟ’ ಲೇಖಕ ಬಾರ್ಕೂರು ಉದಯ ಅವರ ಹೊಸ ಸಂಶೋಧನಾ ಕೃತಿಯಾಗಿದೆ. ತುಳು ಸಂಸ್ಕೃತಿ ಚರಿತ್ರೆ ಕಥನದ ನಿರೂಪಣೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಕರಾವಳಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಧಾರ್ಮಿಕ ಪರಂಪರೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ತುಳು ಇತಿಹಾಸವೆನ್ನುವುದು ನೆಲಮೂಲವಾದದ್ದು. ಇಂದು ಆ ಇತಿಹಾಸವನ್ನು ತಿರುಚಿ, ಅಲ್ಲಿ ಅನ್ಯವಾದುದನ್ನು ತುರುಕಿಸಿ ಅದನ್ನೇ ಇತಿಹಾಸ, ಪರಂಪರೆ ಎಂದು ನಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ, ತುಳು ಬೇರನ್ನು ಹುಡುಕುತ್ತಾ ಹೋಗುವ ಈ ಕೃತಿ, ವರ್ತಮಾನಕ್ಕೆ ಅತ್ಯಗತ್ಯವಾದ ಕೊಡುಗೆಯಾಗಿದೆ.

ಇಲ್ಲಿ ಇತಿಹಾಸ ಕಥನ, ಸ್ಥಳೀಯ ಆಡಳಿತ, ಬಾರ್ಕೂರಿನ ಇತಿಹಾಸ, ಅಬ್ಬಕ್ಕ ರಾಣಿ ಕಾಲದ ರಾಜಕೀಯ ಹಾಗೂ ಸಾಮಾಜಿಕ ಪರಿಸರ, ಹೊನ್ನೆ ಕಂಬಳಿ ಅರಸರು, ದೈವಾರಾಧನೆಯ ಪ್ರತೀಕವಾಗಿ ಕಚ್ಚೂರ ಮಾಲ್ದಿ ಮತ್ತು ಕೋಟೆದ ಬಬ್ಬು ಮೊದಲಾದುವುಗಳಲ್ಲದೆ ಆಧುನಿಕ ಜಗತ್ತಿಗೆ ತುಳುನಾಡನ್ನು ತೆರೆದುಕೊಟ್ಟ ಸಮಾಜ ಸುಧಾರಕ ಕುದ್ಮಲ್ ರಂಗರಾವ್‌ನ್ನೂ ಪರಿಚಯಿಸಲಾಗಿದೆ. ಕಾರಂತರ ಚೋಮನ ದುಡಿಯನ್ನು ಮುಂದಿಟ್ಟುಕೊಂಡು ಆಧುನಿಕೋತ್ತರವಾದ ಧ್ವನಿಗಳನ್ನು ಲೇಖಕರು ಚರ್ಚಿಸಿದ್ದಾರೆ.

ಇಲ್ಲಿ ಒಟ್ಟು 11 ಅಧ್ಯಾಯಗಳಿವೆ. ಮೊದಲ ಮತ್ತು ಕೊನೆಯ ಲೇಖನಗಳು ಇತಿಹಾಸ ರಚನಾ ಪರಂಪರೆಯ ಕುರಿತು ವ್ಯಾಖ್ಯಾನಗಳಾಗಿವೆ. ಆಳೂಪರ ಕಾಲದಿಂದ ವಿಜಯನಗರದ ಕಾಲದವರೆಗಿನ ತುಳುವ ಪರಂಪರೆಯನ್ನು ಕುರಿತು ವಿಶ್ಲೇಷನಾತ್ಮಕ ಅಧ್ಯಯನ ಮಾಡಲಾಗಿದೆ. ತುಳುನಾಡಿನ ಇತಿಹಾಸ ಹೇಳುವ ಸತ್ಯಗಳು, ತುಳುನಾಡಿನಲ್ಲಿ ಬೇರು ಬಿಟ್ಟ ಗೋಚರ, ಅಗೋಚರ ಗುಲಾಮಗಿರಿ ಪದ್ಧತಿ, ಇಲ್ಲಿನ ಪ್ರತಿಭಟನೆ, ಬಂಡಾಯ ಇತ್ಯಾದಿಗಳನ್ನು ಬೇರೆ ಬೇರೆ ಪಾತ್ರಗಳನ್ನು ಇಟ್ಟುಕೊಂಡು ಲೇಖಕರು ಚರ್ಚಿಸುತ್ತಾರೆ. ದ್ರಾವಿಡ ಸಂಸ್ಕೃತಿಯ ಮತ್ತು ಕನ್ನಡ ನಾಡು ನುಡಿಯ ಅಧ್ಯಯನದ ಸಂದರ್ಭದಲ್ಲಿ ಅತ್ಯಮೂಲ್ಯ ಕೃತಿ ಇದಾಗಿದೆ.

 ಆಕೃತಿ ಆಶಯ ಪಬ್ಲಿಕೇಶನ್ಸ್, ಮಂಗಳೂರು ಇವರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 230 ರೂ. ಆಸಕ್ತರು 944 8331 284 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News