ಪ್ರಭುತ್ವ-ಜನರ ನಡುವಿನ ಸಂಘರ್ಷವಾಗಿ ಪರಿಸರ..

Update: 2015-12-23 09:54 GMT

ಡಾ. ಟಿ.ಎಸ್. ವಿವೇಕಾನಂದ್ ಪರಿಸರವನ್ನು ಕಂಡ ಬಗೆ ಬಹಳ ವಿಶಿಷ್ಟವಾದುದು. ಅವರ ಪರಿಸರದಲ್ಲಿ ಗಾಳಿ, ಬೆಳಕು, ಮಣ್ಣು , ಕಾಡು ಮಾತ್ರವಲ್ಲ ಮನುಷ್ಯ ಮತ್ತು ಮನುಷ್ಯತ್ವವೂ ಪ್ರಮುಖ ಸ್ಥಾನ ಪಡೆಯುತ್ತದೆ. ಇವರ ‘ಭೂಮಿಗೀತೆ’ ಕೃತಿ ಈ ಕಾರಣಕ್ಕಾಗಿಯೇ ಸಾಕಷ್ಟು ಹೆಸರು ಮಾಡಿತ್ತು.

ಪರಿಸರವಾದದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂಪನ್ಮೂಲಗಳ ಹಂಚಿಕೆಯ ಮಹತ್ವಗಳನ್ನು ಈ ಕೃತಿಯಲ್ಲಿ ಸಾದರ ಪಡಿಸಿದವರು. ಆದುದರಿಂದಲೇ ಅವರ ಪರಿಸರದ ಮಾತುಗಳು ಸದಾ ಜೀವಂತಿಕೆಯಿಂದ ನಳನಳಿಸುತ್ತವೆ. ‘ಜೀವ ಪಲ್ಲಟಗಳ ಆತ್ಮಕಥನ’ ಕೃತಿಯೂ ಈ ಕಾರಣಕ್ಕಾಗಿಯೇ ಮುಖ್ಯವೆನಿಸುತ್ತದೆ. ಭೂಮಿಗೀತೆಯ ಎರಡನೆ ಭಾಗವೆಂದು ಇದನ್ನು ಪರಿಗಣಿಸಿದರೂ ಸಲ್ಲುತ್ತದೆ.

ಈ ಕೃತಿ ‘ಗಿಡ ನೆಡಿ’ ಎನ್ನುವ ಜನಪ್ರಿಯ ಪರಿಸರವಾದಕ್ಕೆ ಹೊರತಾದುದು. ಅರಣ್ಯ ನೀತಿಯಿಂದ ಬಳಲುತ್ತಿರುವ ಬುಡಕಟ್ಟು ಜನರು, ಕೃಷಿ ನೀತಿಯಿಂದ ಆತ್ಮಹತ್ಯೆಗೀಡಾಗುತ್ತಿರುವ ರೈತರು, ಡೀಸೆಲ್ ತೆರಿಗೆಯ ದುರುಪಯೋಗದಿಂದ ಆಗುವ ಪರಿಸರ ಮಾಲಿನ್ಯ, ಗೋ ಉದ್ಯಮದ ಹಿಂದಿರುವ ರಾಜಕೀಯ, ಕೃಷಿಯಲ್ಲಿರುವ ಬಡಜನರ ಸಾಂಪ್ರದಾಯಿಕ ವಿವೇಕ, ನದಿಗಳು ಮತ್ತು ಅದನ್ನು ಅವಲಂಬಿಸಿದ ಜನರು....ಹೀಗೆ ಪರಿಸರದ ಚರ್ಚೆ ವಿಸ್ತಾರವಾಗುತ್ತಾ ಅದು ಪ್ರಭುತ್ವ ಮತ್ತು ಜನರ ನಡುವಿನ ಸಂಘರ್ಷವಾಗಿ ಹೇಗೆ ನಮ್ಮ ಮುಂದಿದೆ ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ಪರಿಸರದ ಕುರಿತಂತೆ ಹೊಸತೊಂದು ಒಳನೋಟವನ್ನು ನಿಮಗೆ ಈ ಕೃತಿ ನೀಡುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲೇ, ಈ ಕೃತಿ ಏಕ ಕಾಲದಲ್ಲಿ ಹಲವು ಕ್ಷೇತ್ರಗಳ ಜನರ ಆಸಕ್ತಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ.

ಈ ಕೃತಿಯಲ್ಲಿ ಒಟ್ಟು 28 ಲೇಖನಗಳಿವೆ. ಸುದ್ದಿಯ ವಾರದಲ್ಲಿ ಬುದ್ಧ, ಗುಹೇಶ್ವರರೇ ಪರಿಸರವಾಗಿ, ಪ್ಲಾಚಿಮಡದ ಜಲಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ, ಇಂಗ್ಲಿಷ್ ಕಲಿಕೆ: ಸಾಮಾಜಿಕ ನ್ಯಾಯದ ಪ್ರಶ್ನೆ, ಇಂದಿರಾಗಾಂಧಿಯ ಶೌಚ ಪುರಾಣ...ವೈವಿಧ್ಯಮ ಯವಾದ ಲೇಖನಗಳನ್ನು ಇದು ಒಳಗೊಂಡಿದೆ. ಕವಿಯೂ ಆಗಿರುವ ವಿವೇಕಾನಂದರ, ಗದ್ಯಕ್ಕೂ ಕಾವ್ಯದ ಸೊಗಡಿದೆ. ಆದುದರಿಂದಲೇ ಈ ಕೃತಿ ನಮ್ಮನ್ನು ಲೀಲಾಜಾಲವಾಗಿ ಓದಿಸಿಕೊಂಡು ಹೋಗುತ್ತದೆ.

ತೇಜಸ್ವಿ ಪ್ರಕಾಶನ, ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು ವಿಚಾರಿಸ ಬೇಕಾದ ಮೊಬೈಲ್ ನಂ. 99868 33515

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News