ಓದಿರಿ-ಸೃಜನಶೀಲ ಬರಹಗಾರನ ಕಣ್ಣಲ್ಲಿ ಪ್ರವಾದಿ

Update: 2015-12-25 13:58 GMT

ಬೊಳುವಾರು ಮಹಮದ್ ಕುಂಞಿ ಅವರ ಮೂರನೆ ಕಾದಂಬರಿ ‘ಓದಿರಿ’. ಹಲವು ಕಾರಣಕ್ಕೆ ಈ ಕೃತಿ ವಿಶಿಷ್ಟವಾಗಿದೆ. ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿರುವುದು ಮತ್ತು ಕಾದಂಬರಿಯಾಗಿ ಮುಹಮ್ಮದರ ಪಾತ್ರವನ್ನು ಬೊಳುವಾರು ಹೇಗೆ ಗ್ರಹಿಸಿದ್ದಾರೆ ಎನ್ನುವುದು ಸಾಹಿತ್ಯಕ ವಲಯದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು.

ಪ್ರವಾದಿ ಮುಹಮ್ಮದರನ್ನು ಧಾರ್ಮಿಕ ವ್ಯಕ್ತಿಗಳು ಕಟ್ಟಿಕೊಟ್ಟಿರುವುದನ್ನು ನಾವು ಓದಿದ್ದೇವೆ. ಹಾಗೆಯೇ ಇತಿಹಾಸ ತಜ್ಞರು ಕಟ್ಟಿಕೊಟ್ಟಿರುವುದನ್ನೂ ನಾವು ಓದಿದ್ದೇವೆ. ಆದರೆ ಒಬ್ಬ ಸೃಜನಶೀಲ ಬರಹಗಾರನ ಕೈಯಲ್ಲಿ ಪ್ರವಾದಿಯವರು ಮೂಡಿ ಬಂದಿರುವುದು ಕಡಿಮೆ. ಈ ಕಾರಣದಿಂದಲೇ ಕನ್ನಡ ಸಾಹಿತ್ಯಕ್ಕೆ ಬೊಳುವಾರರ ‘ಓದಿರಿ’ ಒಂದು ಹೊಸ ಓದು. ಪ್ರವಾದಿ ಮುಹಮ್ಮದರನ್ನು ಎಲ್ಲ ಧರ್ಮ, ವರ್ಗದ ಜನರಿಗೆ ಸಾರ್ವತ್ರಿಕಗೊಳಿಸಿದ ಹೆಗ್ಗಳಿಕೆ ಈ ಕಾದಂಬರಿಯದು.

 ಹಾಗೆ ನೋಡಿದರೆ ಕಾದಂಬರಿಕಾರರದು ಹಗ್ಗದ ಮೇಲಿನ ನಡಿಗೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಬೊಳುವಾರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅತ್ಯಂತ ಭಾವ ತೀವ್ರತೆಯಲ್ಲಿ ಪ್ರವಾದಿಯ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಪ್ರವಾದಿಯ ಬಾಲ್ಯಕಾಲ, ಯೌವನ ಮತ್ತು ಹೋರಾಟದ ಕಾಲ ಹೀಗೆ ಮೂರು ಘಟ್ಟಗಳನ್ನು ಅಂತರಂಗ, ಬಹಿರಂಗ ಮತ್ತು ಚದುರಂಗ ಎಂದು ವಿಂಗಡಿಸಿದ್ದಾರೆ. ಅಂದರೆ ಮೊದಲನೆಯದು ಅವರೊಳಗಿನ ಚಿಂತನೆ ಆಲೋಚನೆಗಳ ಸಂಘರ್ಷ ವನ್ನು ತಿಳಿಸುತ್ತದೆ.

ಎರಡನೆ ಭಾಗದಲ್ಲಿ, ಅದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಹಂತಕ್ಕೆ ಇಳಿಯುತ್ತಾರೆ. ಮೂರನೆಯದಾಗಿ, ಅದರ ಅನುಷ್ಠಾನಕ್ಕಾಗಿ ಅವರು ನಡೆಸಿದ ಹೋರಾಟಗಳನ್ನು ತೆರೆದಿಡುತ್ತಾರೆ. ಪ್ರವಾದಿ ಮುಹಮ್ಮದರನ್ನು ಅರಿತವರು ಮತ್ತು ಅರಿಯದವರು ಜೊತೆಗೂಡಿ ಓದಬೇಕಾದ ಕೃತಿ ಇದು. ಪ್ರವಾದಿಯ ವ್ಯಕ್ತಿತ್ವದ ಕುರಿತಂತೆ ಇನ್ನಷ್ಟು ಹೊಳಹುಗಳನ್ನು ಈ ಕಾದಂಬರಿ ನೀಡುವುದರಲ್ಲಿ ಅನುಮಾನವಿಲ್ಲ.

ಮುತ್ತುಪ್ಪಾಡಿ ಪುಸ್ತಕ ಹೊರತಂದಿರುವ ಈ ಕೃತಿಯ ಮುಖಬೆಲೆ 220 ರೂ. ಆಸಕ್ತರು 876 2800786 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News