ನೀವು ಆಫೀಸಿನಿಂದ ಮನೆಗೆ ಹೊರಡುತ್ತಿದ್ದಂತೆಯೇ ನಿಮ್ಮ ಮನೆಯಲ್ಲಿರುವ ವಾಟರ್‌ಹೀಟರ್‌ಗೆ ಗೊತ್ತಾಗುತ್ತದೆ !

Update: 2015-12-27 06:48 GMT
Editor : ಸಂಗೀತ

ನಾವೀಗ 2015ರ ಅಂಚಿಗೆ ಬಂದು ನಿಂತಿ ದ್ದೇವೆ. ಭಾರತದಲ್ಲಿ ಇಂಟರ್‌ನೆಟ್ ಲೋಕ ಈ ವರ್ಷದಲ್ಲಿ ಬಹಳಷ್ಟು ಗಮನಾರ್ಹ ಬೆಳವಣಿಗೆಗಳನ್ನು ಕಂಡಿದೆ. ಇದರಲ್ಲಿ ಬಹಳ ಮುಖ್ಯವಾದ ಬೆಳವಣಿಗೆ ಎಂದರೆ ದೇಶದ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಏರುಮುಖವಾಗಿ ಚಲಿಸಿ ಅಮೆರಿಕದ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಗೆ ಸರಿಸಮನಾಗಿದ್ದದ್ದು.

ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 40ರಷ್ಟು ಇಂಟರ್‌ನೆಟ್ ಬಳಕೆದಾರರು ಹೆಚ್ಚಾಗಿದ್ದು ಇಲ್ಲಿಯ ತನಕ ಸುಮಾರು 40 ಕೋಟಿ ಭಾರತೀಯರು ಇಂಟರ್‌ನೆಟ್ ಬಳಸುತ್ತಿದ್ದಾರೆ. ಅವರಲ್ಲಿ ಸುಮಾರು 30 ಕೋಟಿಯಷ್ಟು ಜನ ಇಂಟರ್‌ನೆಟ್ಟನ್ನು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳ ಮೂಲಕ ಬಳಸುತ್ತಿದ್ದಾರೆ. ವಿಶೇಷ ಏನೆಂದರೆ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹತ್ತು ಕೋಟಿ ಮುಟ್ಟುವುದಕ್ಕೆ ಹತ್ತು ವರ್ಷಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಂಡಿತು. ಆನಂತರ ಅದು ಇಪ್ಪತ್ತು ಕೋಟಿ ಮುಟ್ಟುವುದಕ್ಕೆ ಕೇವಲ ಮೂರು ವರ್ಷಗಳನ್ನು ತೆಗೆದುಕೊಂಡಿತು. ಆ ಸಂಖ್ಯೆ ನಲ್ವತ್ತು ಕೋಟಿ ಆಗುವುದಕ್ಕೆ ತೆಗೆದುಕೊಂಡ ಸಮಯ ಕೇವಲ ಒಂದು ವರ್ಷ. ಅಂದರೆ, ಈ ವರ್ಷದ ಆರಂಭದಲ್ಲಿ ಮೂವತ್ತು ಕೋಟಿ ಭಾರತೀಯರು ಇಂಟರ್‌ನೆಟ್ ಬಳಸುತ್ತಿದ್ದರೆ ಈ ವರ್ಷದ ಅಂತ್ಯದ ವೇಳೆಗೆ ಅವರ ಸಂಖ್ಯೆ ನಲವತ್ತು ಕೋಟಿಗೆ ಏರಿದೆ.

ಈ ಏರುಗತಿಯ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ವರ್ಷ, ಅಂದರೆ 2016ರ ಅಂತ್ಯದ ವೇಳೆ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಮತ್ತೆ ಗಣನೀಯವಾಗಿ ಏರುವ ಸಾಧ್ಯತೆಯಿರುವುದು ಕಂಡುಬರುತ್ತದೆ. ಆದರೆ, ಅದು ದ್ವಿಗುಣವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಭಾರತದಲ್ಲಿ ಶೇಕಡ 60 ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು ಅವರಲ್ಲಿ ಬಹುತೇಕರು ಕಡುಬಡತನದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಮೂರು ಹೊತ್ತಿನ ಊಟ, ಬಟ್ಟೆ, ವಸತಿ ಮುಂತಾದ ಮೂಲಭೂತ ಅಗತ್ಯಗಳು ಈಡೇರದ ಹೊರತು ಅವರು ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಮಾಡುವುದಿಲ್ಲ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಈಡೇರದ ಅವರ ಮೂಲಭೂತ ಅಗತ್ಯಗಳ ಬೇಡಿಕೆ ಕೇವಲ ಒಂದೇ ವರ್ಷದಲ್ಲಿ ಈಡೇರಿಬಿಡುತ್ತೆ ಎಂದು ಹೇಳುವುದಕ್ಕೆ ನಮಗೆ ಯಾವುದೇ ಕಾರಣಗಳು, ಮುನ್ಸೂಚನೆಗಳು ಕಾಣುತ್ತಿಲ್ಲ.

ಪ್ರಧಾನ ಮಂತ್ರಿ ಮೋದಿಯವರು ಡಿಜಿಟಲ್ ಇಂಡಿಯಾ ಕಡೆ ತೋರುತ್ತಿರುವ ಆಸಕ್ತಿಯಲ್ಲಿ, ಅದಕ್ಕೆ ಕೊಡುತ್ತಿರುವ ಗಮನದಲ್ಲಿ, ನೀಡುತ್ತಿರುವ ಹಣದಲ್ಲಿ ಕನಿಷ್ಠ ಶೇಕಡ 10ರಷ್ಟನ್ನಾದರೂ ಈ ಕಡುಬಡವರ ಹಸಿವು ನೀಗಿಸುವುದಕ್ಕೆ, ಅವರ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸುವುದಕ್ಕೆ ವಿನಿಯೋಗಿಸಲು ಮನಸ್ಸು ಮಾಡಿದ್ದರೆ ಪ್ರಾಯಶಃ ಅವರ ‘ಡಿಜಿಟಲ್ ಇಂಡಿಯಾ’ದ ಕನಸು ಕೂಡ 2016ನೆ ಇಸ್ವಿಯಲ್ಲಿ ಬಹುತೇಕ ಈಡೇರಿಬಿಡುತ್ತಿತ್ತೇನೋ. ಆದರೆ, ಕೇಂದ್ರ ಸರಕಾರದ ನೀತಿಗಳನ್ನು ನೋಡಿದರೆ ಹಳ್ಳಿಗಾಡಿನ ಜನ ಇನ್ನಷ್ಟು ದಿವಾಳಿಯೇಳುವ, ರೈತರ ಆತ್ಮಹತ್ಯೆಗಳು ಇನ್ನಷ್ಟು ಹೆಚ್ಚಾಗುವ, ಸಾಮೂಹಿಕ ವಲಸೆಗಳು ಹೆಚ್ಚಾಗಿ ಹಳ್ಳಿಗಳು ಖಾಲಿ ಖಾಲಿಯಾಗಿ ಬಣಗುಟ್ಟುವ ಮುನ್ಸೂಚನೆಗಳೇ ಜಾಸ್ತಿಯಾಗಿ ಕಾಣುತ್ತಿವೆ. ಹೀಗಾಗಿ, ಡಿಜಿಟಲ್ ಇಂಡಿಯ ಎಂಬುದು ಕೇವಲ ಮಧ್ಯಮ ಮತ್ತು ಶ್ರೀಮಂತ ವರ್ಗಗಳ ವಿಷಯದಲ್ಲಿ ಯಶಸ್ವಿಯಾಗಬಹುದೇ ಹೊರತು ಅದು ಇಂಡಿಯಾದ ಇಡೀ ತಳಸಮುದಾಯಗಳನ್ನು ಒಳಗೊಂಡು ನಿಜಾರ್ಥದಲ್ಲಿ ಡಿಜಿಟಲ್ ಇಂಡಿಯಾವಾಗಿ ಯಶಸ್ವಿಯಾಗುವುದಿಲ್ಲ.

ಆದರೂ ಕೂಡ, 2016ನೆ ವರ್ಷದಲ್ಲಿ ಸುಮಾರು 60 ಲಕ್ಷ ಜನ ಇಂಟರ್‌ನೆಟ್ ಬಳಕೆದಾರರು ಹೆಚ್ಚುವರಿಯಾಗಿ ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ಪ್ರಾಯಶಃ ಇವರು ಡಿಜಿಟಲ್ ಇಂಡಿಯಾಗೆ ಸೇರುವ ಕೊನೆಯ ದಂಡು ಎಂದು ಕಾಣುತ್ತದೆ. ಅದರಾಚೆಗೆ, ಇನ್ನೂ ಸುಮಾರು ಮೂರನೆ ಎರಡರಷ್ಟು ಭಾರತೀಯರು ಡಿಜಿಟಲ್ ಇಂಡಿಯಾದಿಂದ ಹೊರಗಡೆಯೇ ಉಳಿಯಲಿದ್ದಾರೆ ಎಂಬುದು ಕಟು ವಾಸ್ತವ. ಈ ಬೃಹತ್ ಸಮುದಾಯವನ್ನು ಡಿಜಿಟಲ್ ಇಂಡಿಯಾದ ಒಳಗೆ ಸೇರಿಸಿಕೊಳ್ಳಲು ನಮ್ಮ ಪ್ರಧಾನಿಯವರ ಹತ್ತಿರ ಯಾವ ಮಂತ್ರದಂಡವಿದೆ ಎಂಬುದು ನಮಗಂತೂ ಅರ್ಥವಾಗಿಲ್ಲ.

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಉಲ್ಲೇಖವಿಲ್ಲದೆ, 2016ರಲ್ಲಿ ಇಂಟರ್‌ನೆಟ್ ಲೋಕದಲ್ಲಿ ನಡೆಯಬಹುದಾದ ಕೆಲವು ಸಂಭವನೀಯ ಬೆಳವಣಿಗೆಗಳನ್ನು ನೋಡುವುದಾದರೆ ‘ಇಂಟರ್‌ನೆಟ್ ಆಫ್ ಥಿಂಗ್ಸ್’ನ ಪರಿಕಲ್ಪನೆ ಪ್ರಾಯಶಃ ಆಚರಣೆಗಿಳಿಯುತ್ತದೆ. ಇಂಟರ್‌ನೆಟ್ ಆಫ್ ಥಿಂಗ್ಸ್ ಅಥವಾ ವಸ್ತುಗಳ ಅಂತರ್ಜಾಲದ ಬಗ್ಗೆ ಈಗಾಗಲೇ ಇದೇ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ. ಸಾರಾಂಶದಲ್ಲಿ ಹೇಳುವುದಾದರೆ ನಾವು ದೈನಂದಿನ ಬದುಕಿನಲ್ಲಿ ಬಳಸುವ ಬಹುತೇಕ ವಸ್ತುಗಳು ಸೆನ್ಸಾರ್, ಎಲೆಕ್ಟ್ರಾನಿಕ್ ಚಿಪ್ ಮತ್ತಿತರ ಅಗತ್ಯ ತಾಂತ್ರಿಕ ಸಲಕರಣೆ ಗಳನ್ನು ಅಳವಡಿಸಿಕೊಂಡು ಪರಸ್ಪರ ಸಂವಹನ ಮಾಡಿಕೊಳ್ಳುವ ಮೂಲಕ ನಮ್ಮ ಕೆಲಸವನ್ನು, ಬದುಕನ್ನು ಸರಳಗೊಳಿಸುವುದು ಎಂದು ಹೇಳಬಹುದು. ಉದಾಹರಣೆಗೆ, ನೀವು ಆಫೀಸಿನಿಂದ ಕಾರು ಹತ್ತಿ ಮನೆಗೆ ಹೊರಡುತ್ತಿದ್ದಂತೆಯೇ ನಿಮ್ಮ ಮನೆಯಲ್ಲಿರುವ ವಾಟರ್‌ಹೀಟರ್‌ಗೆ ಗೊತ್ತಾಗುತ್ತದೆ. ಏಕೆಂದರೆ ನಿಮ್ಮ ಕಾರು ನಿಮ್ಮ ಮನೆಯ ಇತರ ವಸ್ತುಗಳೊಂದಿಗೆ ಇಂಟರ್‌ನೆಟ್ ಮೂಲಕ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ನೀವು ಮನೆಗೆ ಬರುವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಗ್ರಹಿಸುವ ವಾಟರ್ ಹೀಟರ್ ನೀವು ಮನೆಗೆ ಕಾಲಿಡುವ ವೇಳೆಗೆ ಬಿಸಿ ನೀರು ಸಿದ್ಧವಾಗಿರುವಂತೆ ಸರಿಯಾದ ಸಮಯಕ್ಕೆ ನೀರು ಕಾಯಿಸುವುದಕ್ಕೆ ಪ್ರಾರಂಭ ಮಾಡುತ್ತದೆ. ನೀವು ನಿರ್ದಿಷ್ಟ ದಿನಾಂಕದಂದು, ನಿರ್ದಿಷ್ಟ ಆಫೀಸಿನಲ್ಲಿ ಮೀಟಿಂಗ್‌ಗೆ ಹೋಗಬೇಕಾದ ವಿಷಯವನ್ನು ನಿಮ್ಮ ಗೂಗಲ್ ಕ್ಯಾಲೆಂಡರ್‌ನಲ್ಲಿ ನಮೂದಿಸಿರುತ್ತೀರಿ. ಆವತ್ತು ಮೀಟಿಂಗ್ ಇದೆ, ನೀವು ಅಲ್ಲಿಗೆ ಹೋಗಬೇಕು ಎಂಬುದನ್ನು ಆ ಕ್ಯಾಲೆಂಡರ್‌ನೊಂದಿಗೆ ಸಂಪರ್ಕವೇರ್ಪಡಿಸಿಕೊಂಡಿರುವ ನಿಮ್ಮ ಕಾರಿಗೆ ಗೊತ್ತಿರುತ್ತದೆ. ನೀವು ಎಲ್ಲೇ ಇದ್ದರೂ ಅಲ್ಲಿಂದ ಆ ಮೀಟಿಂಗ್ ಜಾಗಕ್ಕೆ ಹೋಗುವುದಕ್ಕೆ ಅತ್ಯಂತ ಸಮೀಪವಾದ ದಾರಿಯನ್ನು ನಿಮ್ಮ ಕಾರೇ ಆಯ್ದುಕೊಳ್ಳುತ್ತದೆ (ಗೂಗಲ್ ಮ್ಯಾಪ್ ಮೂಲಕ). ರಸ್ತೆಯಲ್ಲಿ ಟ್ರಾಪಿಕ್ ಜಾಮ್ ಆಗಿದ್ದರೆ ಮೀಟಿಂಗ್‌ಗೆ ಹಾಜರಾಗಲಿರುವ ಇತರ ವ್ಯಕ್ತಿಗಳಿಗೆ ನಿಮ್ಮ ಕಾರೇ ತಿಳಿಸಿಬಿಡುತ್ತದೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗುವ ಮೊದಲೇ ಕಾರೇ ನಿಮಗೆ ಆ ವಿಷಯ ತಿಳಿಸಿ ಸಮೀಪದ ಪೆಟ್ರೋಲ್ ಬಂಕ್‌ನ ದಾರಿ ತೋರಿಸುತ್ತದೆ.

ಬೆಳಗ್ಗೆ ಆರು ಗಂಟೆಗೆ ಅಲಾರ್ಮ್ ಇಟ್ಟುಕೊಂಡು ಮಲಗಿದರೆ ಆರೂವರೆಗೆ ಕಾಫಿ ಮಾಡುವಂತೆ ಕಾಫಿ ಮೇಕರ್‌ಗೆ ನಿಮ್ಮ ಅಲಾರ್ಮ್ ಸೂಚನೆ ಕೊಡುತ್ತದೆ. ಕಾಫಿ ಮೇಕರ್‌ನಲ್ಲಿ ಕಾಫಿಪುಡಿ ಕಡಿಮೆಯಾಗುತ್ತಿದ್ದಂತೆಯೇ ಕಿರಾಣಿ ಅಂಗಡಿಯವನಿಗೆ ಅದೇ ಸೂಚನೆ ಕೊಟ್ಟು ಕಾಫಿಪುಡಿಗೆ ಆರ್ಡರ್ ಮಾಡುತ್ತದೆ. ಮನೆಯ ಮೇಲಿರುವ ತೊಟ್ಟಿಯಲ್ಲಿ (ಸಿಂಟೆಕ್ಸ್) ನೀರು ತಳಮಟ್ಟಕ್ಕೆ ಬರುತ್ತಿದ್ದಂತೆಯೇ ಅದು ವಾಟರ್‌ಮೋಟರ್ ಅನ್ನು ಸ್ಟಾರ್ಟ್‌ಮಾಡಿ ಮನೆಯ ಸಂಪ್‌ನಿಂದ ನೀರೆತ್ತುತ್ತದೆ. ತುಂಬಿದ ತಕ್ಷಣವೇ ಮೋಟರ್ ಆಫ್ ಆಗುತ್ತದೆ. ಎಲ್‌ಪಿಜಿ ಸಿಲಿಂಡರ್ ಖಾಲಿಯಾಗುವ ಹಂತ ತಲುಪುತ್ತಿದ್ದಂತೆಯೇ ಇನ್ನೊಂದು ಸಿಲಿಂಡರ್ ರೀಫಿಲ್‌ಗೆ ಆರ್ಡರ್ ಮಾಡಿಬಿಡುತ್ತದೆ. ನಿಮ್ಮ ಮೊಬೈಲ್‌ನಲ್ಲಿ ಕರೆನ್ಸಿ ಖಾಲಿಯಾಗುತ್ತಿದ್ದಂತೆಯೇ ಅದು ಮತ್ತೆ ರೀಚಾರ್ಜ್ ಮಾಡಿಸಿಬಿಡುತ್ತದೆ. 

Writer - ಸಂಗೀತ

contributor

Editor - ಸಂಗೀತ

contributor

Similar News