‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು ಮತ್ತು ನನ್ನ ಹೋರಾಟ)’

Update: 2016-01-02 03:49 GMT

‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು ಮತ್ತು ನನ್ನ ಹೋರಾಟ)’ ಭಾಗ 1 ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ವಿಭಿನ್ನ ಯೋಜನೆಯ ಫಲ. ಇದೊಂದು ಸರಣಿ ಸಂಪುಟಗಳಾಗಿವೆ. ಡಾ. ಸಬಿಹಾ ಭೂಮಿಗೌಡ ಇದರ ಪ್ರಧಾನ ಸಂಪಾದಕರಾಗಿದ್ದಾರೆ. ಸಂದರ್ಶನಗಳ ಮೂಲಕ ಸಂಪಾದಿಸಿರುವ ಈ ಕೃತಿಯಲ್ಲಿ ಎರಡು ಪ್ರಧಾನ ನೆಲೆಗಳನ್ನು ಪ್ರೊ. ರಾಜಪ್ಪ ದಳವಾಯಿ ಅವರು ಗುರುತಿಸುತ್ತಾರೆ. 1.ಒಬ್ಬ ವ್ಯಕ್ತಿಯ ಹೋರಾಟದ ವಿವರಗಳಿಂದ ಕಟ್ಟಿಕೊಡುವ ಹೋರಾಟದ ಸ್ವರೂಪ ಮತ್ತು ಅದರ ಸಾಧಕ ಬಾಧಕಗಳು.
2. ಸಂದರ್ಶನ ಭಾಗದಲ್ಲಿ ಹೋರಾಟಗಾರರು ಸಮಾಜ, ಸಂಸ್ಕೃತಿಗಳನ್ನು ನೋಡುವ ದೃಷ್ಟಿಕೋನ. ಹೋರಾಟ ಎಂಬ ಪದ ಅರ್ಥಕಳೆದುಕೊಳ್ಳುತ್ತಿರುವ ಅಥವಾ ತಿರುಚಲ್ಪಡುತ್ತಿರುವ ಈ ದಿನಗಳಲ್ಲಿ ಹೋರಾಟಗಾರರ ಕಣ್ಣಲ್ಲಿ, ಕರಾವಳಿ ಭಾಗದ ಸಾಮಾಜಿಕ ಮತ್ತು ಅದನ್ನು ಸುತ್ತಿಕೊಂಡ ರಾಜಕೀಯ ಮಗ್ಗುಲುಗಳನ್ನು ಈ ಕೃತಿ ಶೋಧಿಸುತ್ತದೆ. ಇಲ್ಲಿ ಕೊರಗರ ಬದುಕು, ಸಂಘಟನೆ ಹೋರಾಟಗಳ ಬಗ್ಗೆ ದೇವದಾಸ್ ಶೆಟ್ಟಿ, ಗೋಕುಲದಾಸ್ ಮತ್ತು ಬಾಲರಾಜ್ ತೆರೆದಿಡುತ್ತಾರೆ. ಸಮುದ್ರದಿಂದ ಆವೃತವಾಗಿರುವ ಕರಾವಳಿಯ ಸೂಕ್ಷ್ಮ ಪರಿಸರವನ್ನು ಸುತ್ತಿಕೊಂಡಿರುವ ರಾಜಕೀಯ ಮತ್ತು ಅಭಿವೃದ್ಧಿಯ ಜೊತೆಗಿನ ಅದರ ಬಿಕ್ಕಟ್ಟುಗಳನ್ನು ವಿಠಲರಾವ್ ಮತ್ತು ಸೆಲಿನ್ ಅರಾನ್ಹಾ ಅವರು ತೆರೆದಿಡುತ್ತಾರೆ. ಕುಡುಬಿಯರ ಬದುಕು, ಹೋರಾಟಗಳನ್ನು ಜನಾರ್ದನಗೌಡ ಮತ್ತು ನಾರಾಯಣ ಗೌಡ ಹಂಚಿಕೊಂಡರೆ, ಮೀನುಗಾರರ ಹೋರಾಟ, ಹೆಂಚು ಮತ್ತು ಬೀಡಿಕಾರ್ಮಿಕರ ಹೋರಾಟಗಳನ್ನು ಬಿ. ಮಾಧವ, ಶಿವಪ್ರಸಾದ್ ಪಚ್ಚನಾಡಿ, ಕೆ. ಆರ್. ಶ್ರೀಯಾನ್ ವಿವರಿಸುತ್ತಾರೆ. ಎಚ್.ಐವಿ. ಪೀಡಿತರ ಸಂಕಟಗಳು ಮತ್ತು ಅವರ ಬದುಕುವ ಹಕ್ಕಿನ ಕುರಿತ ಹೋರಾಟಗಳನ್ನು, ಸಮಸ್ಯೆಗಳನ್ನು ಶಾಂತಿನೊರೋನ್ಹಾ, ವೀಣಾ ಶೆಟ್ಟಿ ವಿಶ್ಲೇಷಿಸುತ್ತಾರೆ. ಹಾಗೆಯೇ ತರೆಹೊರೆ ಕಾರ್ಮಿಕರ ಬದುಕು, ಸಂಘರ್ಷಗಳನ್ನು ರೀಟಾ ನೊರೋನ್ಹಾ ಅವರು ತೆರೆದಿಡುತ್ತಾರೆ.
 ಹೇಗೆ ಹಂತಹಂತವಾಗಿ ತಳಸ್ಥರದ ಜನರ ಹೋರಾಟಗಳು ನೆಲೆಕಳೆದುಕೊಳ್ಳುತ್ತಿವೆ, ಕಾರ್ಮಿಕರ ಹಕ್ಕುಗಳೇ ದಮನಗೊಳ್ಳುತ್ತಿರುವ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವಲ್ಲಿ ರಾಜಕೀಯ ಶಕ್ತಿಗಳು ಯಶಸ್ವಿಯಾಗುತ್ತಿರುವುದರ ದುರಂತಗಳನ್ನು ಈ ಕೃತಿ ತೆರೆದಿಡುತ್ತವೆ. ಕರಾವಳಿಯಲ್ಲಿ ಬಲಗೊಳ್ಳುತ್ತಿರುವ ಕೋಮುವಾದಿ ಶಕ್ತಿಗಳ ಹಿಂದಿನ ಕಾರಣಗಳನ್ನೂ ಈ ಕೃತಿಯಲ್ಲಿ ನಾವು ಹುಡುಕಾಡಬಹುದಾಗಿದೆ. ಕರಾವಳಿಯಲ್ಲಿ ತಲೆಯೆತ್ತುತ್ತಿರುವ ಎಸ್‌ಇಝಡ್, ಕೈಗಾರಿಕೆಗಳಿಂದ ಹೆಚ್ಚಾಗು ತ್ತಿರುವ ಪರಿಸರ ಮಾಲಿನ್ಯ, ಸಮುದ್ರವನ್ನು ಅವಲಂಬಿಸಿರುವ ಜನರ ಆತಂಕ, ಬೀದಿ ಪಾಲಾಗುತ್ತಿರುವ ಅಥವಾ ಅನಾಥರಾ ಗುತ್ತಿರುವ ಕಾರ್ಮಿಕರು ಸೇರಿದಂತೆ ಹತ್ತು ಹಲವು ವಿಷಯ ಗಳನ್ನು ಈ ಕೃತಿ ಚರ್ಚಿಸುತ್ತದೆ. ಕರಾವಳಿಯ ವರ್ತಮಾನದ ದುರಂತಗಳನ್ನು ತಿಳಿದುಕೊಳ್ಳುವುದಕ್ಕೆ ಇದೊಂದು ಮಹತ್ವಪೂರ್ಣ ವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಷಯಗಳಿಗೆ ಪೂರಕವಾಗಿ ವರ್ಣಮಯ ಚಿತ್ರಗಳನ್ನೂ ನೀಡಲಾಗಿದೆ. ಕೃತಿಯ ಮುಖಬೆಲೆ 175 ರೂ. ಆಸಕ್ತರು 0824- 2287360 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News