ಫ್ರೀಬೇಸಿಕ್ಸ್- ಭಾರತದ ಮುಂದಿರುವ ಅಪಾಯ
(ಭಾಗ-1)
ಇತ್ತೀಚೆಗೆ ಫ್ರೀಬೇಸಿಕ್ಸ್ ಅಥವಾ ಉಚಿತ ಮೂಲ ಅಗತ್ಯ ಅಬ್ಬರ ಭಾರೀ ಆಗಿಬಿಟ್ಟಿದೆ. ಇದು ಸುಮಾರು ಒಂದು ವರ್ಷದ ಹಿಂದೆಯೇ ಪ್ರಾರಂಭವಾದ ಇಂಟರ್‌ನೆಟ್ ದಿಗ್ಗಜ ಫೇಸ್‌ಬುಕ್ ಪ್ರೇರಿತ ಇಂಟರ್‌ನೆಟ್ ಡಾಟ್ ಆರ್ಗ್‌ನ ಇತ್ತೀಚಿನ ರೂಪ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂಟರ್‌ನೆಟ್ ಡಾಟ್ ಆರ್ಗ್ ಅಂತರ್ಜಾಲ ತಟಸ್ಥತೆಯ ಅಘೋಷಿತ ನಿಮಯವನ್ನು ಉಲ್ಲಂಘಿಸುತ್ತದೆ ಎಂಬ ಬಗ್ಗೆ ಕಳೆದ ಒಂದು ವರ್ಷದಿಂದಲೂ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ಭಾರೀ ಟೀಕೆ, ವಿಮರ್ಶೆಗಳು ವ್ಯಕ್ತವಾಗುತ್ತಿದ್ದರೂ ಫೇಸ್‌ಬುಕ್ ಹಠಕ್ಕೆ ಬಿದ್ದಂತೆ ಅದನ್ನು ವಿವಿಧ ದೇಶಗಳಲ್ಲಿ ಬಲವಂತವಾಗಿ ತುರುಕಲಾರಂಭಿಸಿದೆ. ಇತ್ತೀಚೆಗಂತೂ ಫೇಸ್‌ಬುಕ್ಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಖುದ್ದಾಗಿ ಮುಂದೆ ನಿಂತು ಈ ಫ್ರೀಬೇಸಿಕ್ಸ್ ಹೆಸರಿನಲ್ಲಿ ಅದೇ ಹಳೆಯ ಇಂಟರ್‌ನೆಟ್ ಡಾಟ್ ಆರ್ಗ್ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ.
ಫೇಸ್‌ಬುಕ್ಕೆಂಬ ಇಂಟರ್‌ನೆಟ್ ಲೋಕದ ದೈತ್ಯ ವೇದಿಕೆಯ ಮೂಲಕ ಬಹಳ ಅಗ್ರೆಸ್ಸಿವ್ ಆಗಿ ಈ ಕ್ಯಾಂಪೇನ್ ಮಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಫ್ರೀಬೇಸಿಕ್ಸ್ ಹೆಸರಿನ ಅಭಿಯಾನದ ಪ್ರಚಾರಕ್ಕಾಗಿ ಸಿದ್ಧಪಡಿಸಿದ ಜಾಹೀರಾತುಗಳಲ್ಲಿ ಖುದ್ದು ಝುಕರ್‌ಬರ್ಗ್ ಅವರೇ ನಟಿಸಿ ಹಗಲು ರಾತ್ರಿ ಎಲ್ಲಾ ಟೀವಿಗಳಲ್ಲಿ ತೋರಿಸುತ್ತಿದ್ದಾರೆ. ಭಾರತದ ಎಲ್ಲಾ ಅತಿದೊಡ್ಡ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಎರಡೆರಡು ಪುಟಗಳ, ಸ್ಪ್ರೆಡ್‌ಗಳ ಜಾಹೀರಾತು ನೀಡುತ್ತಿದ್ದಾರೆ. ಅಂದರೆ 300 ಬಿಲಿಯನ್ ಡಾಲರ್ ವೌಲ್ಯದ ಫೇಸ್‌ಬುಕ್ ಕಂಪೆನಿ ಫ್ರೀಬೇಸಿಕ್ಸ್ ಅಭಿಯಾನಕ್ಕಾಗಿ ಯಾಕೆ ಹೀಗೆ ಹಣದ ಹೊಳೆ ಹರಿಸುತ್ತಿದೆ ಎಂಬ ಸಣ್ಣ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ನೆಟ್ ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆ ವಿಷಯದ ಬಗ್ಗೆ ಸ್ವಲ್ಪಅರಿತುಕೊಳ್ಳಬೇಕು.
ನೆಟ್ ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆಯ ವಿಷಯವಾಗಿ ಇದೇ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ. ಇಂಟರ್‌ನೆಟ್ ತಟಸ್ಥವಾಗಿರಬೇಕು, ಯಾರು ಬೇಕಾದರೂ ಏನನ್ನು ಬೇಕಾದರೂ ಪಡೆಯುವುದಕ್ಕೆ ಮುಕ್ತ ಅವಕಾಶವಿರಬೇಕು, ವಿವಿಧ ಸೇವೆಗಳಿಗೆ ವಿವಿಧ ರೀತಿಯ ಶುಲ್ಕ ವಿಧಿಸಬಾರದು ಎಂಬುದು ಜಾಲತಟಸ್ಥತೆಯ ಮೂಲ ನಿಯಮ. ಸಕ್ಕರೆ ಕೊಂಡುಕೊಂಡ ಗ್ರಾಹಕ ಅದನ್ನು ಏತಕ್ಕೆ ಉಪಯೋಗಿಸುತ್ತಾನೆ ಎಂಬುದರ ಆಧಾರದ ಮೇಲೆ ಅಂಗಡಿಯವನು ಸಕ್ಕರೆಯ ಬೆಲೆಯನ್ನು ನಿಗದಿ ಮಾಡಕೂಡದು. ಚಹಾ ಮಾಡುವುದಕ್ಕಾದರೆ 40 ರೂಪಾಯಿ ಕೆಜಿ, ಮೈಸೂರು ಪಾಕ್ ಮಾಡುವುದಕ್ಕಾದರೆ 60 ರೂಪಾಯಿ, ಜಾಮೂನ್ ಮಾಡುವುದಕ್ಕಾದರೆ 80 ರೂಪಾಯಿ ಅಂತ ವಿವಿಧ ಬೆಲೆಯನ್ನು ನಿಗದಿ ಮಾಡುವುದು ಹಾಸ್ಯಾಸ್ಪದವಲ್ಲವೇ? ಹಾಗೆಯೇ ಇಂಟರ್‌ನೆಟ್ ಸೇವೆ ಕೂಡ. ಒಮ್ಮೆ ಏರ್‌ಟೆಲ್‌ನಿಂದಲೋ, ಐಡಿಯಾದಿಂದಲೋ, ಬಿಸ್ಸೆನ್ನೆಲ್‌ನಿಂದಲೋ, ವೊಡಾಫೋನ್ ನಿಂದಲೋ ಅಥವಾ ಇನ್ಯಾವುದೋ ಇಂಟರ್‌ನೆಟ್ ಸೇವೆ ನೀಡುವ ಸಂಸ್ಥೆಯಿಂದ ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಂಡರೆ ಅದನ್ನು ನಾವು ಫೇಸ್‌ಬುಕ್ ನೋಡಲು ಬಳಸುತ್ತೇವೆಯೊ, ವಾಟ್ಸಾಪ್‌ನಲ್ಲಿ ಕಾಲಕಳೆಯಲು ಬಳಸುತ್ತೇವೆಯೋ, ರೈಲು, ಸಿನೆಮಾ ಟಿಕೆಟ್ ಬುಕ್ ಮಾಡಲು ಬಳಸುತ್ತೇವೆಯೊ ಅಥವಾ ಫ್ಲಿಪ್‌ಕಾರ್ಟಿನಲ್ಲಿ ಅಂಡರ್‌ವೇರ್ ಖರೀದಿಸಲು ಬಳಸುತ್ತೇವೆಯೊ ಎಂಬುದು ನಮಗೆ ಬಿಟ್ಟ ವಿಷಯ. ನಾವು ಯಾವುದಕ್ಕೆ ಇಂಟರ್‌ನೆಟ್ ಬಳಸುತ್ತೇವೆ ಎಂಬುದರ ಆಧಾರದಲ್ಲಿ ರೇಟನ್ನು ಇಂಟರ್‌ನೆಟ್ ಸೇವೆ ಒದಗಿಸುವ ಕಂಪೆನಿಗಳು ಫಿಕ್ಸ್ ಮಾಡಿದರೆ ಹೇಗಿರುತ್ತದೆ?
ನಾವು ಚಹಾ ಮಾಡೋದಕ್ಕೆ ಅಂತ ಹೇಳಿ ಸಕ್ಕರೆ ಕೊಂಡುಕೊಂಡು ಬಂದು ಮನೆಯಲ್ಲಿ ಗುಲಾಬ್ ಜಾಮೂನ್ ಮಾಡಿದರೆ ಅಂಗಡಿಯವನಿಗೆ ಗೊತ್ತಾಗುವುದಿಲ್ಲ. ಆದರೆ, ಫೇಸ್‌ಬುಕ್ ಉಪಯೋಗಿಸೋಕೆ ಅಂತ ಹೇಳಿ ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಂಡು ನಾವು ಜೀಮೇಲ್ ಚೆಕ್ ಮಾಡುವುದಕ್ಕಾಗಿ, ಮೇಲ್ ಕಳಿಸುವುದಕ್ಕಾಗಿ ಬಳಸಿದರೆ ಇಂಟರ್‌ನೆಟ್ ಸೇವೆ ಒದಗಿಸುವ ಕಂಪೆನಿ ಗಳಿಗೆ ಗೊತ್ತಾಗದೇ ಇರುವು ದಿಲ್ಲ. ಹೀಗಾಗಿ ಅಲ್ಲಿ ಆ ರೀತಿಯ ‘ಮೋಸ’ಕ್ಕೂ ಅವಕಾಶವಿರುವುದಿಲ್ಲ. ಹಾಗಾಗಿ, ನೆಟ್‌ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆ ಇಲ್ಲದ ಅಂತರ್ಜಾಲ ಕೆಲವೇ ಜನಸಾಮಾನ್ಯರಿಗೆ ಉಪಯೋಗವಾಗುವ ಬದಲು ದುಡ್ಡಿದ್ದ ಕೆಲವೇ ಜನರ, ಕಂಪೆನಿಗಳ, ಪಕ್ಷಗಳ ಹಿತಾಸಕ್ತಿಗಳನ್ನು ರಕ್ಷಿಸುವ ಸಾಧನವಾಗಿ ಮಾರ್ಪಡುತ್ತದೆ. ಹಾಗಾಗಿ, ನೆಟ್ ನ್ಯೂಟ್ರಾಲಿಟಿ ಯಾವುದೇ ದೇಶಕ್ಕೆ ಅತ್ಯಗತ್ಯ.