ಪ್ರೊ. ಬಿ. ಕೃಷ್ಣಪ್ಪ ಬರಹಗಳು, ಭಾಷಣಗಳು....

Update: 2016-01-08 18:32 GMT

ಕರ್ನಾಟಕದ ದಲಿತ ಚಳವಳಿ, ಸಾಮಾಜಿಕ ಹೋರಾಟಗಳಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರು ಅಜರಾಮರ. ದಲಿತ ಚಳವಳಿಯ ಕೇಂದ್ರ ಶಕ್ತಿಯಾಗಿ ಕೆಲಸ ಮಾಡಿದವರು ಕೃಷ್ಣಪ್ಪ. ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಕ್ರೋಡೀಕರಿಸುವ ಕೆಲಸವನ್ನು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಮೂಲಕ, ಇಂದಿರಾ ಕೃಷ್ಣಪ್ಪ ಅವರು ಮಾಡುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವೇ ‘ಪ್ರೊ. ಬಿ. ಕೃಷ್ಣಪ್ಪನವರ ಬರಹಗಳು ಮತ್ತು ಭಾಷಣಗಳು’ ಕೃತಿ. ಇದು ಟ್ರಸ್ಟ್‌ನಿಂದ ಪ್ರಕಟವಾದ ಕೃಷ್ಣಪ್ಪ ಅವರ ಬದುಕನ್ನು ಕಟ್ಟಿಕೊಡುವ ಮೂರನೆ ಕೃತಿ. ಈ ಕೃತಿಯಲ್ಲಿ ಬಯಲು ಬೆತ್ತಲೆ ಚಂದ್ರಗುತ್ತಿ ಎಂಬ ಸುದೀರ್ಘ ಲೇಖನವೊಂದಿದೆ. ಅದರ ಜೊತೆಗೇ ಕೃಷ್ಣಪ್ಪ ಅವರು ವಿವಿಧ ಸಮಾವೇಶಗಳಲ್ಲಿ, ವೇದಿಕೆಗಳಲ್ಲಿ ಮಾಡಿದ ಭಾಷಣಗಳು ಮತ್ತು ಪತ್ರಿಕೆಗಳಿಗೆ ನೀಡಿದ ಸಂದರ್ಶನವನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ. ಸತ್ಯ ಘಟನೆಗಳನ್ನು ಆಧರಿಸಿದ ವರದಿ ‘ಕೋಮು ದಳ್ಳುರಿಯ ಆಂತರ್ಯ’ ಇನ್ನೊಂದು ಪ್ರಮುಖ ಅಧ್ಯಾಯವಾಗಿದೆ. ಕೊನೆಯಲ್ಲಿ ವಿಶ್ಲೇಷಣೆ ಹಾಗೂ ರೂಪಕಗಳ ಮೂಲಕ ಭಾರತದ ಯುದ್ಧಧರ್ಮದ ಬಗ್ಗೆ ಚರ್ಚಿಸುತ್ತಾರೆ. ಹಾಗೆಯೇ ಕಿರು ಪ್ರಹಸನಗಳೂ ಇಲ್ಲಿವೆ.
ಮೊದಲ ಸುದೀರ್ಘ ಲೇಖನ ‘ಬಯಲು ಬೆತ್ತಲೆ ಚಂದ್ರಗುತ್ತಿ’ ಇಲ್ಲಿರುವ ಪ್ರಮುಖ ಬರಹಗಳಲ್ಲಿ ಒಂದು. 80ರ ದಶಕದಲ್ಲಿ ಭಾರೀ ಸುದ್ದಿ ಮಾಡಿದ್ದ ಚಂದ್ರಗುತ್ತಿ ಮತ್ತು ಅದನ್ನು ಸುತ್ತು ವರಿದ ರಾಜಕೀಯವನ್ನು ಇಲ್ಲಿ ವಿಶ್ಲೇಷಿಸುತ್ತಾರೆ. ಚಂದ್ರಗುತ್ತಿ ವಿರೋಧಿ ಚಳವಳಿಯಲ್ಲಿ ಕೃಷ್ಣಪ್ಪ ನೇರವಾಗಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ತಾನು ಕಂಡುಂಡ ಸತ್ಯಗಳನ್ನು ತೆರೆದಿಡುತ್ತಾ, ಈ ಸಾಮಾಜಿಕ ಅನಿಷ್ಠವನ್ನು ವಿಶ್ಲೇಷಿಸುತ್ತಾರೆ. ಇದರ ವಿರುದ್ಧದ ಅವರ ನೀಳ ಹೋರಾಟದ ಸಂದರ್ಭದಲ್ಲಿ, ಹೇಗೆ ನಾಗರಿಕರೆನಿಸಿಕೊಂಡವರು, ವಿದ್ಯಾವಂತರೆನಿಸಿಕೊಂಡವರು, ರಾಜಕಾರಣಿಗಳು ಈ ಅನಿಷ್ಠದ ಪರವಾಗಿ ನಿಂತು, ಹೋರಾಟವನ್ನು ದಮನಿಸಲು ನೋಡಿದರು ಎನ್ನುವ ಕಟು ಸತ್ಯವನ್ನು ತೆರೆದಿಡುತ್ತಾರೆ. ಜನರ ವೌಢ್ಯವನ್ನು ಉಳಿಸಿ, ಬೆಳೆಸಿ ಅದರಿಂದ ಯಾರ್ಯಾರು, ಹೇಗೆ ಲಾಭಪಡೆಯುತ್ತಾರೆ ಎನ್ನುವ ಅಂಶವನ್ನು ಇಲ್ಲಿ ಎಳೆ ಎಳೆಯಾಗಿ ಮಂಡಿಸುತ್ತಾರೆ. ‘ಔಷಧಿ ನುಂಗಲು ಹಠ ಮಾಡುವ ಮಗುವಿಗೆ ತಾಯಿ ಮೂಗು ಹಿಡಿದು ಸ್ವಲ್ಪ ಹಿಂಸೆಯಾದರೂ ಔಷಧಿ ಕುಡಿಸುವಂತೆ, ಕಠಿಣವಾದರೂ ಕಾನೂನಿನ ಕ್ರಮವನ್ನು ಜರಗಿಸಿ ಈ ಅನಿಷ್ಠ ಪದ್ಧತಿಯನ್ನು ನಿಲ್ಲಿಸಬೇಕು’’ ಎಂದು ಕೃಷ್ಣಪ್ಪ ಒತ್ತಾಯಿಸುತ್ತಾರೆ. 21 ನೆ ಶತಮಾನದಲ್ಲಿ ಮಡೆಸ್ನಾನ, ಪಂಕ್ತಿ ಭೇದದಂತಹ ಅನಿಷ್ಠಗಳಿಗೆ ರಾಜಕಾರಣಿಗಳು, ಸ್ವಾಮೀಜಿಗಳು ಬಹಿರಂಗ ಬೆಂಬಲ ಸೂಚಿಸುತ್ತಿರುವಾಗ 80 ರ ದಶಕದಲ್ಲಿ ಕೃಷ್ಣಪ್ಪ ಅವರು ಅಷ್ಟೆಲ್ಲ ವಿರೋಧಿಗಳನ್ನು ಎದುರು ಹಾಕಿಕೊಳ್ಳುವುದು ಅಚ್ಚರಿಯಾಗಿಯೇನೂ ಕಾಣುವುದಿಲ್ಲ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News