ತಾರುಣ್ಯದ ವಿಲಾಸ ವೈಚಿತ್ರಗಳ ಕವಿತೆಗಳು...

Update: 2016-01-09 17:22 GMT

ಮತ್ತೆ ಬಂತು ಶ್ರಾವಣ’ ದ. ರಾ. ಬೇಂದ್ರ ಸ್ಮತಿ ಅಂತರ ಕಾಲೇಜು ಕವನ ಸ್ಪರ್ಧೆಯ ಆಯ್ದ ಕವಿತೆಗಳ ಸಂಕಲನ. ಯುವ ಕವಿ ವಿಕ್ರಮ ವಿಸಾಜಿ ಕೃತಿಯನ್ನು ಸಂಪಾದಿಸಿದ್ದಾರೆ. ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವು 1982ರಿಂದ ಕನ್ನಡದ ವರಕವಿ ಡಾ. ದ.ರಾ. ಬೇಂದ್ರೆಯವರ ನೆನಪಿನಲ್ಲಿ ಅಂತರಕಾಲೇಜು ಕವನ ಸ್ಪರ್ಧೆಯನ್ನು ಹಮ್ಮಿಕೊಂಡು ಬರುತ್ತಿದೆ. ಈ ಅವಧಿಯಲ್ಲಿ ನಾಡಿನಾದ್ಯಂತ ಅನೇಕ ಕಾಲೇಜು ವಿದ್ಯಾರ್ಥಿಗಳು ಈ ಕವಿತಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹಾಗೆ ಪಡೆದುಕೊಂಡ ಯುವ ಕವಿಗಳೆಲ್ಲ ಇಂದು ಹಿರಿ ಕವಿಗಳಾಗಿ ಗಮನ ಸೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕಾವ್ಯ ಸಾಲಿನ ಹಿಂದು, ಇಂದು ಮತ್ತು ಮುಂದುಗಳನ್ನು ಸಂಧಿಸುವ ಕೃತಿಯಾಗಿ ‘ಮತ್ತೆ ಬಂತು ಶ್ರಾವಣ’ ಗಮನ ಸೆಳೆಯುತ್ತದೆ.

 
ಮುನ್ನುಡಿಯಲ್ಲಿ ವಿಸಾಜಿಯವರು ಹೇಳುವಂತೆ, ಮೂವತ್ತೆರಡು ವರ್ಷಗಳ ಇಲ್ಲಿನ ಕಾವ್ಯಲೋಕ ತಾರುಣ್ಯದ ವಿಲಾಸ ವೈಚಿತ್ರಗಳಿಂದ ಕೂಡಿದೆ ಮಾತ್ರವಲ್ಲ, ಅಪರೂಪದ ಭಾವಕೋಶಗಳನ್ನು ಹಿಡಿಯಲೆತ್ನಿಸಿದೆ. ಸೀಮಿತ ಅವಧಿಯ ಮೂರು ತಲೆಮಾರುಗಳ ಕಾವ್ಯದ ಕ್ರಿಯಾಶೀಲ ಸ್ಪಂದನವನ್ನು ನಾವಿಲ್ಲಿ ಕಾಣಬಹುದು. ಅಬ್ದುಲ್ ರಶೀದ್, ಕೋಡ್ಲೆಕೆರೆ, ಎಲ್ಸಿ ನಾಗರಾಜು, ಹುಳಿಯಾರ್, ಮೊಗಳ್ಳಿ, ಜಿ. ಎನ್. ಮೋಹನ್ ಇವರಿಂದ ಹಿಡಿದು ಇತ್ತೀಚಿನ ಕವಿಗಳಾಗಿರುವ ಅಕ್ಷತಾ ಕೆ., ಅಂಕುರ್ ಬೆಟಗೇರಿ, ಕಾವ್ಯಾ ಪಿ. ಕೆ. , ಸ್ಮಿತಾ ಮಾಕಳ್ಳಿ ಮೊದಲಾದವರ ತಾರುಣ್ಯ ಸಹಜ ಅನುಭೂತಿಗಳಿವೆ. ‘ಒಳ್ಳೆಯ ಕವಿತೆಯನ್ನು ಒಳ್ಳೆಯ ಕವಿತೆಯೆಂದು ಪ್ರಾಮಾಣಿಕವಾಗಿ ಗುರುತಿಸುವುದೇ ಮಾನದಂಡ’ ಎಂಬ ಬಿ. ಶ್ರೀನಿವಾಸರಾಜು ಅವರ ಮಾತಿನಂತೆಯೇ ಇಲ್ಲಿರುವ ಕವಿತೆಗಳನ್ನು ಆರಿಸಲಾಗಿದೆ. ಬಹುಶಃ ಕನ್ನಡವನ್ನು ಹೊಸ ದೃಷ್ಟಿಯಿಂದ ನೋಡಿದ ಹಲವು ಕವಿಗಳು ಈ ಸಂಗ್ರಹದಲ್ಲಿದ್ದಾರೆ. ‘ಕಣ್ಣು ರೆಪ್ಪೆಗಳ ಮೇಲೆ ಸದಾ ಹೆಪ್ಪುಗಟ್ಟುವ ರಾತ್ರಿ’ ಎಂದು ಬರೆಯುವ ರಾಮಚಂದ್ರ ಕಾ.ಸು., ಹೂಮೂಡಿ ಕಣ್ಣಲ್ಲಿ ಕಣ್ಣು ಹೊಡೆವ ಅಬ್ದುಲ್ ರಶೀದ್, ವಿಷಾದ ಮುದ್ರೆ ಬಿದ್ದ ತುಟಿಗಳನ್ನು ಬಿಚ್ಚಿಡಲು ಯತ್ನಿಸುವ ನಾಗರಾಜು ಎಲ್. ಸಿ...ಹೀಗೆ ಸುಮಾರು 96 ಕವಿಗಳ ನೂರಕ್ಕೂ ಅಧಿಕ ಕವಿತೆಗಳಲ್ಲಿ ನವ್ಯೋತ್ತರದ ಕಾವ್ಯದ ಹರಿವಿನ ಸದ್ದನ್ನು ಆಲಿಸಬಹುದಾಗಿದೆ. ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ, ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ. ಆಸಕ್ತರು 080-26757159 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News