ಲಿಂಗಸೂಕ್ಷ್ಮತೆಗಳ ಕಡೆಗೆ ಗಮನ ಸೆಳೆಯುವ ‘ಮಹಿಳೆ- ಇಂದಿನ ಸವಾಲುಗಳು’..

Update: 2016-01-10 18:29 GMT

‘ಮಹಿಳೆ-ಇಂದಿನ ಸವಾಲುಗಳು’ ಡಾ. ಸಬೀಹಾ ಭೂಮಿಗೌಡ ಅವರ ಲೇಖನ ಸಂಗ್ರಹಗಳು. ಹಲವು ದಶಕಗಳಿಂದ ಮಹಿಳಾ ಸಂವೇದನೆಗಳಿಗೆ ಸಂಬಂಧಿಸಿದ ಸಬೀಹಾ ಅವರು, ಈಗಾಗಲೇ ತಮ್ಮ ಹಲವು ಕೃತಿಗಳಲ್ಲಿ ಲಿಂಗ ಸೂಕ್ಷ್ಮತೆಗಳ ಕುರಿತಂತೆ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ಸಬೀಹಾ ಅವರು ಮಹಿಳೆಯ ವಿಷಯಗಳಿಗೆ ಸಂಬಂಧಿಸಿ ಬರೆದ ಸುಮಾರು 12 ಲೇಖನಗಳಿವೆ. ‘ಕೋಮುವಾದ ಮತ್ತು ಮಹಿಳೆ’ ಲೇಖನದಲ್ಲಿ ಕೋಮುವಾದದ ಮೊದಲ ಗುರಿ ಮಹಿಳೆಯೇ ಆಗಿದ್ದಾಳೆ ಎನ್ನುತ್ತಾರೆ ಸಬೀಹಾ. ಕೋಮುವಾದವನ್ನು ಮಹಿಳೆಯ ಸಮಸ್ಯೆಯಾಗಿ ಅವರು ಚರ್ಚಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಭಾರತ ಒಂದನ್ನೇ ಆಧಾರವಾಗಿಟ್ಟುಕೊಳ್ಳದೇ ನೆರೆಯ ಪಾಕಿಸ್ತಾನ, ಬಾಂಗ್ಲಾದಂತಹ ದೇಶಗಳಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆ ನಡೆಯುವ ದಾಳಿಗಳನ್ನೂ ಉಲ್ಲೇಖಿಸುತ್ತಾರೆ. ಮತ್ತು ಕೋಮುವಾದದ ಅತಿ ಹೆಚ್ಚು ಸಂತ್ರಸ್ತರು ಮಹಿಳೆಯರಾಗಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ನಿರೂಪಿಸುತ್ತಾರೆ. ಇದೇ ಸಂದರ್ಭದಲ್ಲಿ ಅದು ಹೇಗೆ ಇಡೀ ಸಮಾಜವನ್ನು ಪ್ರಭಾವಿಸುತ್ತದೆ ಎಂಬುದರ ಬಗ್ಗೆಯೂ ಅವರು ಹೇಳುತ್ತಾರೆ. ಸಮಸ್ಯೆಯ ಪರಿಣಾಮ ಎದುರಿಸುವವರೇ ಅದರ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಎತ್ತಿ ಹಿಡಿಯುತ್ತಾರೆ. ಅಂತೆಯೇ ಇನ್ನೊಂದು ಲೇಖನದಲ್ಲಿ ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಪ್ರತಿಯೋರ್ವ ನಾಗರಿಕರೂ ಸ್ವನಿಯಂತ್ರಣವನ್ನು ಸ್ವ ಇಚ್ಛೆಯಿಂದ ಗಳಿಸಿಕೊಂಡಾಗ ಮತ್ತು ವಿಭಿನ್ನ ಲಿಂಗದವರ ಲೈಂಗಿಕತೆಯನ್ನು ಗೌರವಿಸುವುದನ್ನು ಮತ್ತು ಅವರವರ ಇಚ್ಛೆಗಳಿಗೆ ಮಾನ್ಯತೆಯನ್ನು ನೀಡುವುದನ್ನು ರೂಢಿಸಿಕೊಂಡಾಗ ಮಹಿಳೆಯ ವಿರುದ್ಧದ ದೌರ್ಜನ್ಯ ಪ್ರಕರಣಗಳು ಇಳಿಮುಖಗೊಂಡಾವು ಎಂದು ಅಭಿಪ್ರಾಯ ಪಡುತ್ತಾರೆ. ಅಂದರೆ ಮಹಿಳೆ ಇನ್ನೊಬ್ಬಳನ್ನು ದೂಷಿಸುತ್ತಾ ಕುಳಿತುಕೊಳ್ಳದೇ, ಈ ಕಾರ್ಯದಲ್ಲಿ ಸಮಾನವಾಗಿ ಪಾಲುದಾರಳಾಗಬೇಕು ಎನ್ನುವ ಅಂಶದ ಕಡೆಗೆ ಗಮನ ಸೆಳೆಯುತ್ತಾರೆ. ಮಹಿಳೆಯ ಹೊಣೆಗಾರಿಕೆಯನ್ನೂ ಎತ್ತಿ ಹಿಡಿಯುತ್ತಾರೆ. ಸಬೀಹಾ ಅವರು ಸಂಘಟನೆ ಹೋರಾಟಗಳಲ್ಲಿ ಬೆಳೆದು ಬಂದವರು. ಅವರ ಬರಹಗಳು ಆ ಹೋರಾಟಗಳನ್ನೇ ನೆಚ್ಚಿಕೊಂಡಿವೆ. ಆದುದರಿಂದಲೇ ಅವರು ವರ್ತಮಾನದ ಮಹಿಳೆಯರ ತಲ್ಲಣಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಕೃತಿಯಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News