ಬೆಳೆಯುವ ಪೈರು: “ಮನೆಯೆಂಬ ಚಿಕಿತ್ಸಾಲಯ”

Update: 2016-01-11 12:49 GMT

ಮಕ್ಕಳ ಏಳ್ಗೆಯ ಮತ್ತು ಅಭಿವೃದ್ಧಿಯ ಬಗ್ಗೆ ನಿಜವಾಗಿ ಕಾಳಜಿ ಇದ್ದ ಪಕ್ಷದಲ್ಲಿ ಮಕ್ಕಳ ಮುಂದೆ ಅವರನ್ನು ದೂರುತ್ತಾ ಚರ್ಚೆ ಮಾಡಬೇಡಿ. ಅದು ತಿನ್ನಲ್ಲ, ಇದು ತಿನ್ನಲ್ಲ, ಹೇಳಿದ ಮಾತು ಕೇಳಲ್ಲ, ಬೇಡಾಂದ್ರೂ ಇದನ್ನು ತಿಂತಾನೆ, ಕುಡಿತಾನೆ ಎಂದು, ಮಕ್ಕಳನ್ನು ಟಾರ್ಗೆಟ್ ಮಾಡಿ, ಮನೆಯಲ್ಲಿ ಮಾಡುವ ವಿಷಯವನ್ನೆಲ್ಲಾ ಬಂದವರ ಮುಂದೆ ಆಡುತ್ತಾ ಅವರ ಖಾಸಗೀ ತನವನ್ನು ಬಯಲಲ್ಲಿ ಬಿಚ್ಚಿಡಬೇಡಿ. ಮಕ್ಕಳು ದೊಡ್ಡವರಷ್ಟೇ ಅವರ ಖಾಸಗೀತನವನ್ನು ಬಯಸುತ್ತಾರೆ. ಮರೆಯಲ್ಲಿ ಹೇಳುವ ಬುದ್ಧಿವಾದಕ್ಕೂ, ಎಲ್ಲರ ಎದುರು ಮಾಡುವ ಖಂಡನೆಗೂ ವ್ಯತ್ಯಾಸವಿದೆ. 

ಜೊಲ್ಲು

ಮಗುವಿನ ಬಾಯಿಯಲ್ಲಿ ಜೊಲ್ಲು ಬರುವುದು ಸಾಮಾನ್ಯ. ಬಾಯಿಯಲ್ಲಿ ಹಲ್ಲುಗಳಿಲ್ಲದಿರುವ ಕಾರಣಕ್ಕೂ ಮತ್ತು ಅದರ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ಉದ್ದೇಶವಿಲ್ಲದಿರುವುದಕ್ಕೂ ಮಗುವಿನ ಬಾಯಲ್ಲಿ ಜೊಲ್ಲು ಸುರಿಯುತ್ತಿರುತ್ತದೆ. ಜೊಲ್ಲು ಹೆಚ್ಚು ಸುರಿಸುವುದರಿಂದ ಮಾತು ಬೇಗ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅದಕ್ಕೆ ಯಾವುದೇ ವೈಜ್ಞಾನಿಕವಾದ ಆಧಾರವಿಲ್ಲ. ಆದರೆ, ಕೆಲವೊಮ್ಮೆ ಸಾಧಾರಣ ಜೊಲ್ಲಿಗಿಂತಲೂ ಅಧಿಕವೆನಿಸುವಂತೆಯೂ ಮತ್ತು ಕೊಂಚ ವಾಸನೆಯಿಂದ ಕೂಡಿರುವ ಅಂಟುಅಂಟಾದ ಜೊಲ್ಲು ಸುರಿಯುತ್ತಿದ್ದರೆ ಹೊಟ್ಟೆಯಲ್ಲಿ ಹೆಚ್ಚು ಕ್ರಿಮಿಗಳೂ ಮತ್ತು ಕಫವೂ ಹೆಚ್ಚಾಗಿರುವ ಸೂಚನೆ ಅದು. ಆಗ ಮಗುವಿಗೆ ಹಾಲು, ಮೊಸರು, ಸಿಹಿ ಪದಾರ್ಥಗಳು, ಬಾಳೆಹಣ್ಣು, ಐಸ್‌ಕ್ರೀಂ, ಚಾಕೋಲೆಟ್ ಇತ್ಯಾದಿಗಳನ್ನು ತಿನ್ನಿಸಬಾರದು. ಅದಕ್ಕೆ ಮನೆಯ ಮದ್ದೆಂದರೆ ಹಸಿ ಶುಂಠಿ ಮತ್ತು ತುಳಸಿಯ ರಸವನ್ನು ಹನಿಹನಿಯಾಗಿ ಎರಡು ಚಮಚ ದಿನಕ್ಕೆ ಎರಡು ಅಥವಾ ಮೂರು ಸಲ ಕುಡಿಸಬೇಕು.

ತೊದಲುವ ಮಕ್ಕಳಿಗೆ

ಮಕ್ಕಳು ತೊದಲುವುದು ಸಾಮಾನ್ಯ. ಆದರೆ ತೊದಲು ನಿಲ್ಲಿಸಿ ಮಾತಾಡುವ ವಯಸ್ಸಾದರೂ ಪದಗಳನ್ನು ಉಚ್ಚರಿಸಲು ತೊದಲುವುದು, ಅಥವಾ ಡಕಾರಕ್ಕೆ ದ ಅಥವಾ ತಕಾರ, ರಕಾರಕ್ಕೆ ಬದಲಾಗಿ ಲಕಾರ ಇತ್ಯಾದಿ ಉಚ್ಚರಿಸುವುದುಂಟು. ಆಗ ಅವರನ್ನು ತಿದ್ದಲು ಹೋಗಬೇಡಿ. ಹಾಗೂ ಎಷ್ಟು ಕಾಲದ ಅವಧಿಯವರೆಗೂ ಆ ಬಗೆಯ ಉಚ್ಚಾರಣೆಯು ಇರುವುದು ಎಂಬುದನ್ನು ಗಮನಿಸುತ್ತಿರಿ. ಇನ್ನೂ ಕೆಲವು ಮಕ್ಕಳಿಗೆ ದನಿ ಹೊರಡಿಸಲೇ ಕಷ್ಟವಾಗುವುದು. ಅವರು ಮಾತನಾಡಲು ಕಷ್ಟಪಡುವಾಗ ತಿದ್ದಲು, ಬೇಗ ಬೇಗ ಹೇಳು ಎಂದು ಒತ್ತಾಯಿಸುವುದು ಸಲ್ಲದು. ಇನ್ನು ಆಡಿಕೊಳ್ಳುವುದು, ಹಾಸ್ಯ ಮಾಡುವುದು ದೂರವೇ ಉಳಿಯಲಿ. ಇನ್ನು ಅವನ ಓರಗೆಯವರು ಮತ್ತು ಒಡಹುಟ್ಟುಗಳು ಹಾಸ್ಯ ಮಾಡದಂತೆ, ಅಣಕಿಸದಂತೆ ಎಚ್ಚರಿಸಬೇಕು ಮತ್ತು ತೊದಲುವ ಮಗುವು ಇಲ್ಲದಿರುವ ಸಮಯದಲ್ಲಿ ಆ ಮಗುವಿಗೆ ಸಹಕರಿಸುವುದು ಹೇಗೆ ಎಂದು ಯೋಚಿಸಿ. ಅನುಕಂಪವಿರಲಿ, ಆದರೆ ಅದು ಪ್ರದರ್ಶನದ ರೀತಿಯಲ್ಲಿ ವ್ಯಕ್ತವಾಗದಿರಲಿ. ಸ್ಪೀಚ್ ಥೆರಪಿಯ ವಿಶೇಷ ತಜ್ಞರನ್ನು ಕಂಡು ಸಲಹೆ ಸೂಚನೆಗಳನ್ನು ಪಡೆಯಿರಿ. ಮನೆಯಲ್ಲಿ ಮಾಡಬಹುದಾದುದೇನೆಂದರೆ, ಮಗುವಿಗೆ ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಬೇಕಾದುದನ್ನು ಮಾತಾಡುವ ಹಾಗೆ ನೋಡಿಕೊಳ್ಳುವುದು. ಅದಕ್ಕೆ ಬೇಕಾದ ಸಮಯ ಮತ್ತು ಅವಕಾಶವನ್ನು ನೀಡುವುದು. ಜೊತೆಗೆ ಒಬ್ಬನೇ/ಒಬ್ಬಳೇ ತನಗಿಷ್ಟ ಬಂದ ಹಾಗೆ ಮಾತಾಡುವುದನ್ನು, ಹಾಡುವಾಗ ಜೊತೆಗೆ ದನಿ ಸೇರಿಸುವುದನ್ನು, ಟಿವಿ ಅಥವಾ ರೇಡಿಯೋದಲ್ಲಿ ಬರುವ ಸಂಭಾಷಣೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವಂತಹ ಕ್ರೀಡಾತ್ಮಕ ಚಟುವಟಿಕೆಗಳನ್ನು ನಡೆಸಬೇಕು. ನಾಟಕದ ಅಭ್ಯಾಸವೂ ಕೂಡ ಇದಕ್ಕೆ ಸಹಕಾರಿಯಾಗುತ್ತದೆ. ಸಾಮೂಹಿಕ ಚಟುವಟಿಕೆಗಳಲ್ಲಿ ಒಟ್ಟೊಟ್ಟಾಗಿ ಮಾತಾಡುವ ಸಂದರ್ಭಗಳನ್ನು ಕೂಡ ಒದಗಿಸಬೇಕು. ಇದಕ್ಕೆ ಮನೆ ಮದ್ದು ಕೂಡ ಇದೆ. ಆದರೆ ನನಗೆ ಇದನ್ನು ಪ್ರಯೋಗಿಸುವಂತಹ ಅವಕಾಶ ಬಂದಿಲ್ಲ. ಆದರೂ ಹಂಚಿಕೊಳ್ಳುವೆ. ಪ್ರಯೋಗಿಸಿ ನೋಡಬಹುದು. ಎಂತಿದ್ದರೂ ಇದರಲ್ಲಿ ಉಪಯೋಗಿಸುವ ವಸ್ತುಗಳು ಹಾನಿಕಾರವೇನಲ್ಲ.

1-2 ಗ್ರಾಂ ಒಣ ನೆಲ್ಲಿಕಾಯಿ ಚೂರ್ಣವನ್ನು ಹಸುವಿನ ತುಪ್ಪದೊಂದಿಗೆ ಕಲಿಸಿ ನೆಕ್ಕುವುದರಿಂದ ಕೆಲವು ದಿನಗಳಲ್ಲಿ ತೊದಲುತನ ದೂರಾಗುತ್ತದೆ ಎಂದು ಹೇಳುತ್ತಾರೆ.

ಮಕ್ಕಳ ದೇಹ ಪುಷ್ಟಿಗೆ

ಕೆಲವು ಮಕ್ಕಳು ನಿಶ್ಶಕ್ತಿಯಿಂದ ಬಳಲುತ್ತಾರೆ. ಎಷ್ಟೋ ಪೋಷಕರಲ್ಲಿ ತಪ್ಪು ಕಲ್ಪನೆಯಿದೆ. ದಷ್ಟಪುಷ್ಟವಾಗಿರುವ ಮಕ್ಕಳು ಬಲಶಾಲಿಗಳು, ಶಕ್ತಿಶಾಲಿಗಳು ಮತ್ತು ಆರೋಗ್ಯವಂತರಾಗಿದ್ದಾರೆಂದು. ಹಾಗೇನೂ ಇಲ್ಲ. ದಪ್ಪಗಿರುವವರಾಗಲಿ, ಸಣ್ಣಗಿರುವವರಾಗಲಿ ಅವರ ದೇಹ ಪ್ರಕೃತಿಯನ್ನು ಅವಲಂಬಿಸಿ ಅವರು ಇರಲಿ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ ಅವರು ದೃಢಕಾಯರಾಗಿದ್ದಾರೋ ಅಥವಾ ಬಲಶಾಲಿಗಳಾಗಿದ್ದಾರೋ ಎಂಬುದು ಮುಖ್ಯ. ಕೃಶಕಾಯರೆಂದ ತಕ್ಷಣ ಅವರು ಬಲಹೀನರು ಎಂದಲ್ಲದಿದ್ದರೂ ತೀರಾ ಸಪೂರವಾಗಿದ್ದರೆ ಅಥವಾ ತೀರಾ ದಪ್ಪಗಿದ್ದರೆ ಕೊಂಚ ಎಚ್ಚರಿಕೆ ವಹಿಸುವುದು ಅಗತ್ಯ.

ಮನೆಗೆ ಬರುವ ಅತಿಥಿಗಳು, ನೆಂಟರು ತೀರಾ ವಿಚಿತ್ರವಾದ ಮತ್ತು ಅನಗತ್ಯವಾದಂತಹ, ನಿಜವಾಗಿ ಹೇಳಬೇಕೆಂದರೆ ನಾನ್ಸೆನ್ಸ್ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಏನು ಇಷ್ಟೊಂದು ಸಣ್ಣಗಿದ್ದೀಯಾ? ತಿಂತೀಯೋ ಇಲ್ಲವೋ? ಏನೂ ತಿನ್ನೋದಿಲ್ಲವಾ? ಬಿದ್ದರೆ ಕೈ ಕಾಲು ಮುರಿದುಹೋಗತ್ತೆ. ಚೆನ್ನಾಗಿ ತಿನ್ನಬೇಕು ಅಥವಾ ಯಾಕೆ ಈ ವಯಸ್ಸಿಗೇ ಇಷ್ಟು ದಪ್ಪ ಆಗಿಬಿಟ್ಟಿದ್ದೀಯಾ. ಚೆನ್ನಾಗಿ ಎಕ್ಸರ್ಸೈಸ್ ಮಾಡು. ಬೇಕರಿ ಐಟಂ ತಿನ್ನಬೇಡ ಇತ್ಯಾದಿ, ಪುಗಸಟ್ಟೆ ಸಲಹೆಗಳನ್ನು ಕೊಡುತ್ತಿರುತ್ತಾರೆ. ಜೊತೆಗೆ ಇನ್ನಾವುದಾದರೂ ಮಗುವಿದ್ದರೆ ಅದಕ್ಕೆ ಹೋಲಿಸಿ ಹೇಳುವುದು. ನೋಡು ಅವನು/ಅವಳು ಹೇಗಿದ್ದಾಳೆ! ಎಂದು. ಆ ಮಗುವಿನ ಮನೆಯವರು ಅವರ ಮಗುವಿನ ದೇಹಸ್ಥಿತಿಗಳನ್ನು ನೋಡಿಕೊಳ್ಳುವ ಮತ್ತು ಪಾಲನೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಅವರ ಕೆಲಸ ಮಾಡುತ್ತಿರುತ್ತಾರೆ. ಇವರೆಂದೋ ಒಂದು ದಿನ ಬಂದು ತಲೆಬುಡ ತಿಳಿಯದೇ ಮಾತಾಡಿ ಹೋಗಬಾರದು. ಶೇ.99 ಜನ ಈ ರೀತಿ ಮಕ್ಕಳ ವಿಷಯದಲ್ಲಿ ಅಧಿಕ ಪ್ರಸಂಗಿಗಳಂತೆ ಮಾತಾಡುತ್ತಾರೆ. ಚೆನ್ನಾಗಿ ತಿನ್ನುವುದರಿಂದ ದಪ್ಪಗಾಗಿ ಬಿಡುತ್ತಾರೆಂದೂ, ತಿನ್ನದೇ ಇರುವುದರಿಂದ ಸಪೂರ ಆಗುವರೆಂದೂ ಭಾವಿಸುವುದೇ ತಪ್ಪು. ಎಷ್ಟೋ ದಪ್ಪದಾಗಿರುವ ಮಕ್ಕಳು ಸರಿಯಾಗಿ ತಿನ್ನುವುದಿಲ್ಲ. ಹಾಗೆಯೇ ಸಣ್ಣಗಿರುವ ಮಕ್ಕಳು ಚೆನ್ನಾಗಿಯೇ ತಿನ್ನುವರು. ಮಿತಿಮೀರಿ ತಿಂದು ಬೊಜ್ಜು ಮತ್ತು ಸ್ಥೂಲಕಾಯ ಬರುವ ವಿಷಯ ಬೇರೆಯೇ ವಿಭಾಗ.

ಮಗುವು ದಪ್ಪಗಿದೆಯೋ ಸಣ್ಣಗಿದೆಯೋ ಅನ್ನುವುದು ಮುಖ್ಯವಲ್ಲ. ಅದು ಎಷ್ಟರ ಮಟ್ಟಿಗೆ ಸದೃಢವಾಗಿದೆ, ಆರೋಗ್ಯಕರವಾಗಿದೆ ಎಂಬುದಷ್ಟೇ ಮುಖ್ಯ. ಮಕ್ಕಳಿಗೆ ಪುಗಸಟ್ಟೆ ಸಲಹೆಗಳು ಬೇಡ

ಮಗುವು ಸಣ್ಣ ಅಥವಾ ದಪ್ಪ ಎನ್ನುವುದು ಅದಕ್ಕೇ ಗೊತ್ತಿರುತ್ತದೆ. ಪದೇ ಪದೇ ನೀನು ಸಣ್ಣ ದಪ್ಪ ಎಂದು ವ್ಯರ್ಥ ಕಾಮೆಂಟುಗಳನ್ನು ಮಾಡುತ್ತಿರಬಾರದು. ಬಂದವರ ಮುಂದೆಲ್ಲಾ ಮಗುವಿನ ಶರೀರದ ಬಗ್ಗೆ ಚರ್ಚೆ ಮಾಡಬಾರದು. ಅದು ಇದನ್ನು ತಿನ್ನುವುದಿಲ್ಲ, ಅದನ್ನು ತಿನ್ನುವುದಿಲ್ಲ ಎಂದೆಲ್ಲಾ ದೂರುತ್ತಿರಬಾರದು. ಬಹಳಷ್ಟು ಪೋಷಕರು ಮಾತನ್ನು ಆಡುವುದೇ ದೂರುವಂತೆ. ಮಕ್ಕಳಿಗೆ ತಾವು ಯಾವಾಗಲೂ ದೂರಲ್ಪಡುವವರು ಎಂಬಂತಹ ಭಾವನೆ ಹುಟ್ಟುತ್ತದೆ. ಪೋಷಕರ ಮತ್ತು ಅವರ ಗೆಳೆಯರ ಸಲಹೆ ಸೂಚನೆಗಳ ಬಗ್ಗೆ ರೇಜಿಗೆ ಉಂಟಾಗುತ್ತದೆ. ತಮ್ಮ ಪ್ರಯತ್ನ ಮೀರಿದ ವಿಷಯವಿದು ಎಂದು ಕೈ ಚೆಲ್ಲುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ನಂತರ ಪೋಷಕರು ಹೇಳುವ ಎಲ್ಲಾ ಮಾತುಗಳಿಗೂ ಉಡಾಫೆಯ ಧೋರಣೆ ತಳೆಯುತ್ತಾರೆ.

ಮಕ್ಕಳ ಏಳ್ಗೆಯ ಮತ್ತು ಅಭಿವೃದ್ಧಿಯ ಬಗ್ಗೆ ನಿಜವಾಗಿ ಕಾಳಜಿ ಇದ್ದ ಪಕ್ಷದಲ್ಲಿ ಮಕ್ಕಳ ಮುಂದೆ ಅವರನ್ನು ದೂರುತ್ತಾ ಚರ್ಚೆ ಮಾಡಬೇಡಿ. ಅದು ತಿನ್ನಲ್ಲ, ಇದು ತಿನ್ನಲ್ಲ, ಹೇಳಿದ ಮಾತು ಕೇಳಲ್ಲ, ಬೇಡಾಂದ್ರೂ ಇದನ್ನು ತಿಂತಾನೆ, ಕುಡಿತಾನೆ ಎಂದು, ಮಕ್ಕಳನ್ನು ಟಾರ್ಗೆಟ್ ಮಾಡಿ, ಮನೆಯಲ್ಲಿ ಮಾಡುವ ವಿಷಯವನ್ನೆಲ್ಲಾ ಬಂದವರ ಮುಂದೆ ಆಡುತ್ತಾ ಅವರ ಖಾಸಗೀತನವನ್ನು ಬಯಲಲ್ಲಿ ಬಿಚ್ಚಿಡಬೇಡಿ. ಮಕ್ಕಳು ದೊಡ್ಡವರಷ್ಟೇ ಅವರ ಖಾಸಗೀತನವನ್ನು ಬಯಸುತ್ತಾರೆ. ಮರೆಯಲ್ಲಿ ಹೇಳುವ ಬುದ್ಧಿವಾದಕ್ಕೂ, ಎಲ್ಲರ ಎದುರು ಮಾಡುವ ಖಂಡನೆಗೂ ವ್ಯತ್ಯಾಸವಿದೆ. ಹಿರಿಯರು ಮಕ್ಕಳಿಲ್ಲದ ಸಮಯದಲ್ಲಿ ಸೇರಿದಾಗ ತಮ್ಮ ಮಕ್ಕಳ ಬಗ್ಗೆ ಮಾತಾಡಿಕೊಳ್ಳಿ. ಆ ಮಗುವಿನ ಏಳ್ಗೆ ಮತ್ತು ಅಭಿವೃದ್ಧಿಗೆ ಏನು ಕಾಣ್ಕೆ ನೀಡಬೇಕೋ ಅದನ್ನು ಮಗುವಿನ ಗೈರು ಹಾಜರಿಯಲ್ಲಿ ಚರ್ಚಿಸಿ. ಯಾವ ಸಮಸ್ಯೆಗೆ ಯಾವ ಪರಿಹಾರ ಕಾಣಬಹುದು ಎಂಬುದನ್ನು ಪರಸ್ಪರ ವಿಷಯ ಮತ್ತು ನೆರವನ್ನು ಹಂಚಿಕೊಂಡು ದಾರಿ ಕಂಡುಕೊಳ್ಳಿ.

ಮನೆಯುಪಚಾರ

 1.ದಿನವೂ ತುಳಸಿ ರಸ 10 ಹನಿಗಳನ್ನು ನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಸ್ನಾಯು ಮತ್ತು ಎಲುಬುಗಳು ಗಟ್ಟಿಯಾಗುತ್ತವೆ.

2.ಮಗುವಿಗೆ ಆಹಾರ ಬಡಿಸುವಾಗ ಶುದ್ಧ ತುಪ್ಪ, ಮೊಸರು ಬಳಸಬೇಕು.

3.ಉದ್ದಿನಬೇಳೆ, ಎಳ್ಳು, ಹೆಸರುಕಾಳು, ಸ್ವಲ್ಪ ಅಕ್ಕಿ, ಗೋಧಿ ಇವುಗಳನ್ನು ಪ್ರತ್ಯೇಕವಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ನಂತರ ಆ ಹಿಟ್ಟಿಗೆ ಬೆಲ್ಲ ಅಥವಾ ಕಲ್ಲುಸಕ್ಕರೆಯ ಪುಡಿಯನ್ನು ಬೆರೆಸಬೇಕು. ಅದನ್ನು ನಿತ್ಯವೂ ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬಹುದು ಅಥವಾ ಲಡ್ಡುವಿನಂತೆ ಉಂಡೆ ಕಟ್ಟಿಟ್ಟುಕೊಂಡು ದಿನವೂ ಬೆಳಗ್ಗೆ ಮತ್ತು ಸಂಜೆ ಒಂದೊಂದು ತಿನ್ನಲು ಕೊಟ್ಟು ನಂತರ ಹಾಲು ಕುಡಿಸಬೇಕು. ಆ ಲಡ್ಡುವಿಗೆ ಬಾದಾಮಿ, ಗೋಡಂಬಿಗಳನ್ನೂ, ಒಣ ದ್ರಾಕ್ಷಿಯನ್ನೂ ಉಂಡೆ ಕಟ್ಟುವಾಗ ಮಿಶ್ರ ಮಾಡಬಹುದು. ಬಿಳಿ ಎಳ್ಳನ್ನೂ ಕೂಡ ಹುರಿದು ಇದರೊಂದಿಗೆ ಬೆರೆಸಬಹುದು.

4.ದಿನವೂ ರಾತ್ರಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ಬೆಳಗೆದ್ದ ಮೇಲೆ ದ್ರಾಕ್ಷಿಯನ್ನು ತಿನ್ನಿಸಿ, ಆ ನೀರನ್ನು ಕುಡಿಸಿ.

5.ಒಂದು ಮುಷ್ಟಿ ಕಡಲೇ ಕಾಯಿ ಬೀಜ ಅಥವಾ ಕಡಲೇ ಕಾಳು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಗ್ಗೆ ಬರಿಯ ಹೊಟ್ಟೆಯಲ್ಲಿ ತಿನ್ನಿಸಬೇಕು.

6.ಎಳ್ಳು, ಹುರುಳಿ, ಕಡಲೇಕಾಳು, ಹೆಸರುಕಾಳು, ಕಡಲೇಕಾಯಿ ಇತ್ಯಾದಿಗಳಲ್ಲಿ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಧಾರಾಳವಾಗಿವೆ. ಅದರಲ್ಲೂ ಎಳ್ಳನ್ನು ಧಾರಾಳವಾಗಿ ಬಳಸಬಹುದು.

7.ಮಾಂಸಾಹಾರದಲ್ಲಿ ಮೀನು ಮತ್ತು ಚಿಕನ್, ಅದರಲ್ಲೂ ಕೋಳಿಯ ಎದೆಯ ಭಾಗ ಮಕ್ಕಳಿಗೆ ಹೆಚ್ಚು ಪುಷ್ಟಿ ನೀಡುವಲ್ಲಿ ಸಹಕಾರಿಯಾಗಿದೆ. ದೊಡ್ಡ ಮಗುವಾದರೆ ಮೀನೆಣ್ಣೆಯ ಮಾತ್ರೆಗಳನ್ನೂ ಕೂಡ ಬಳಸಬಹುದು.

8.ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಸಪೋಟವನ್ನು ಊಟದ ನಂತರ ಬಳಸುವ ಅಭ್ಯಾಸ ಮಾಡುವುದು. ಊಟದ ನಂತರ ಯಾವುದಾದರೊಂದು ಹಣ್ಣನ್ನು ತಿನ್ನುವುದು ರೂಢಿ ಮಾಡಿಕೊಂಡರೆ ಮಗುವಿನ ಬೆಳವಣಿಗೆಯಲ್ಲಿ ಅದು ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ.

9.ಕಿರುನೆಲ್ಲಿ ಸೊಪ್ಪಿನ ರಸವನ್ನು ಹೊಳ್ಳೆಯಲ್ಲಿ ತೆಗೆದುಕೊಂಡು ಚಿಟಿಕೆ ಉಪ್ಪು ಮತ್ತು ಚಿಟಿಕೆ ಮೆಣಸಿನ ಪುಡಿಯನ್ನು ಉದುರಿಸಿ ಕುಡಿಸುವುದರಿಂದ ಕೆಮ್ಮಿನಂತಹ ಸಮಸ್ಯೆಗಳೂ ಹೋಗುವುದರೊಂದಿಗೆ ಅವರ ಯಕೃತ್ತು ಮತ್ತು ಜೀರ್ಣಾಂಗವನ್ನು ಉತ್ತಮಗೊಳಿಸುತ್ತದೆ.

10.ದಿನಕ್ಕೊಂದು ಸೊಪ್ಪನ್ನು ಅಡುಗೆಯಲ್ಲಿ ಉಪಯೋಗಿಸುವುದು ಒಳ್ಳೆಯದು. ಮಕ್ಕಳಿಗೆ ಎಲುಬು, ಸ್ನಾಯುಗಳು ಬಲವಾಗಿ, ರಕ್ತವು ಚೆನ್ನಾಗಿರಲು ಅಗಸೆ ಸೊಪ್ಪನ್ನು ನಿತ್ಯವೂ ಅಡುಗೆಗೆ ಉಪಯೋಗಿಸುವುದು ಒಳ್ಳೆಯದು. ಅಗಸೆ ಗಿಡ ಅಥವಾ ಮರವನ್ನು ಮನೆಯ ಬಳಿಯೇ ಹೊಂದಿದ್ದು, ಅದರ ಕಾಯಿಯ ಪಲ್ಯ, ಒಗ್ಗರಣೆಗೆ ಎಲೆಗಳು ಮತ್ತು ಹೂವನ್ನೂ ಕೂಡ ಹಾಕುವುದರಿಂದ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಮಗು ಅಳು ನಿಲ್ಲಿಸದಿದ್ದರೆ...

ಕೆಲವೊಮ್ಮೆ ಮಕ್ಕಳು ಹೊಟ್ಟೆ ತುಂಬಿದರೂ, ನಿದ್ರೆಯ ಹೊತ್ತಾದರೂ ನಿದ್ರೆ ಹೋಗದೇ ಅಳುತ್ತಿರುತ್ತಾರೆ. ಆಗ ಅವರಿಗೆ ಏನಾಗಿದೆ ಎಂದು ತಿಳಿಯುವುದೂ ಕೂಡ ಕಷ್ಟವಾಗುತ್ತದೆ. ಅದಕ್ಕೆ ಮನೆ ಮದ್ದು ಎಂದರೆ, ನೀರಿನಲ್ಲಿ ಜಾಯಿಕಾಯಿಯನ್ನು ತೇಯ್ದು ಮಗುವಿನ ಹಣೆಯ ಮೇಲೆ ಹಚ್ಚುವುದು. ಇದರಿಂದ ಮಗು ಶಾಂತವಾಗಿ ಮಲಗುವುದು. ಹಾಗೆಯೇ ಈರುಳ್ಳಿ ರಸದ ಐದು ಅಥವಾ ಆರು ಹನಿಗಳನ್ನು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಿಸುವುದರಿಂದ ಮಗು ಒಳ್ಳೆಯ ನಿದ್ರೆ ಮಾಡುತ್ತದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News