ಮುದಕೊಡುವ ಮೊಗಸಾಲೆ ಕವಿತೆಗಳು

Update: 2016-01-14 18:15 GMT

‘‘ಮೊಗಸಾಲೆ ನಿತ್ಯದ ಸಾಮಾನ್ಯದಲ್ಲಿ ಸದಾ ತೊಡಗಿದ್ದೇ ಕಾವ್ಯ ರಚಿಸುತ್ತಾರೆ. ಹಲವು ಬಾರಿ ಇದು ನಡೆಯುವುದು ಉದ್ದೀಪನಗೊಂಡ ಊಹೆಯಲ್ಲಿ. ಇದೊಂದು ಶಬ್ದದಲ್ಲಿ ನಡೆಯುವ ಲೀಲೆ. ಈ ಲೀಲೆಯಲ್ಲಿ ಮುದವಿದೆ. ಮನೋರಂಜನೆಯಿದೆ. ಕೆಲವೊಮ್ಮೆ ಈ ಊಹೆಯ ಲೀಲೆಯೇ ಗಾಢವಾದ ಕಲ್ಪಕ ಶಕ್ತಿಯಾಗಿ ಕವಿಯಲ್ಲಿ ಮೂಡಿದಾಗ ನಮಗೆ ಗೊತ್ತಿರುವುದು ಎಂದು ನಾವು ತಿಳಿದದ್ದನ್ನೇ ಕಣ್ಣುಜ್ಜಿ ಮತ್ತೆ ನೋಡುವಂತೆ ಮಾಡುತ್ತಾರೆ’’ ದಿ. ಯು. ಆರ್. ಅನಂತಮೂರ್ತಿಯವರು ಡಾ. ನಾ. ಮೊಗಸಾಲೆಯವರ ಆಯ್ದ ಕವನಗಳ ಸಂಪುಟ 2ಕ್ಕೆ ಬರೆದ ಬೆನ್ನುಡಿಯ ಸಾಲುಗಳು ಇವು. ಬಹುಶಃ ಈ ಸಾಲುಗಳು ಮೊಗಸಾಲೆ ಕವಿತೆಗಳನ್ನು ಒಟ್ಟಾಗಿ ಹಿಡಿದುಕೊಂಡಿದೆ. ಹನ್ನೊಂದು ಕವನಸಂಕಲನಗಳನ್ನು ಪ್ರಕಟಿಸಿರುವ ಮೊಗಸಾಲೆಯವರ ಆಯ್ದೆ ಉತ್ತಮ ಕವಿತೆಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಮೊಗಸಾಲೆಯವರ 185 ಕವಿತೆಗಳು ಈ ಸಂಗ್ರಹದಲ್ಲಿವೆ. ಈ ಸಂಗ್ರಹ, ಮೊಗಸಾಲೆಯವರ ಕಾವ್ಯದ ದಾರಿಗಳನ್ನು ಗ್ರಹಿಸುವುದಕ್ಕೆ ಸಾಧ್ಯ ಮಾಡಿಕೊಡುತ್ತದೆ. ‘ಈಗ ಹೂವಿನಲ್ಲೇ ಅಡಗಿರುವ

ನಿನ್ನ ಹೂ ವಿನಯಕ್ಕೆ
ಅಹಂಕಾರದ ಈ ನನ್ನ ಎರಡು ಕಣ್ಣು

ಕರಗಿ ಹೂವಾಗುತ್ತಿದೆ ನೋಡು!’ ಎನ್ನುವಷ್ಟು ವಿನಯ ಪೂರಿತವಾಗಿ ಬರೆಯುವ ಮೊಗಸಾಲೆಯವರ ಕಾವ್ಯದ ಲಯ, ಮನಸ್ಸಿಗೆ ಹಿತವಾಗುವಂಥದ್ದು. ‘ಬೆಳಕು ಬೆಳಗುವ ಮೊದಲೇ
ತಾನು ಏನು ಎಂದು ಕೊಳ್ಳಲಿಲ್ಲ
ಬೆಳಗಿದ ಮೇಲೂಕೂಡ ಅದಕ್ಕೆ

 ಬೆಳಗಿದ್ದು ಯಾವುದು ಎಂದು ತಿಳಿಯಲಿಲ್ಲ’ ಎಂದು ಬರೆಯುವ ಮೊಗಸಾಲೆ ಕವಿತೆಗಳು, ತಾವು ಬೆಳಗುತ್ತಿದ್ದೇವೆ ಎನ್ನುವುದನ್ನು ತಿಳಿಯದ ಬೆಳಕಿನ ಅನುಭವವಾಗಿ ನಮ್ಮನ್ನು ತಲುಪುತ್ತದೆ. ‘ಪೂರ್ವೋತ್ತರ’ ಮೊಗಸಾಲೆಯವರ ಆಯ್ದ ಕವನಗಳ ಮೊದಲ ಸಂಪುಟ. ‘ಕಾವ್ಯಕಾರಣ’ ಸಂಪುಟವು 1. ಇದಲ್ಲ ಇದಲ್ಲ 2. ಇಹಪರದ ಕೊಳ 3. ಕಾಮನೆಯ ಬೆಡಗು, 4. ದೇವರು ಮತ್ತೆ ಮತ್ತೆ ಕವನಸಂಗ್ರಹಗಳಿಂದ ಆಯ್ದ ಕವಿತೆಗಳನ್ನು ಹೊಂದಿದೆ. ಸಾಹಿತ್ಯ ಸುಗ್ಗಿ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 300 ರೂಪಾಯಿ. ಆಸಕ್ತರು 9900701666 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News