ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಮಾರ್ಕ್ ಝುಕರ್‌ಬರ್ಗ್

Update: 2016-01-16 17:15 GMT
Editor : ಸಂಗೀತ

ಳೆದ ಎರಡು ವಾರಗಳಿಂದ ಫೇಸ್‌ಬುಕ್ಕಿನ ಫ್ರೀಬೇಸಿಕ್ಸ್ ಅಭಿಯಾನ ಮತ್ತು ಫ್ರೀಬೇಸಿಕ್ಸ್ ಜಾರಿಗೊಂಡರೆ ಸಮಾಜ ಎದುರಿಸಬಹುದಾದ ಅಪಾಯಗಳ ಬಗ್ಗೆ ಬಹಳ ದೀರ್ಘವಾಗಿ ಚರ್ಚಿಸಿದ್ದೇವೆ. ಇದು ಬಹಳ ಮುಖ್ಯವಾದ ವಿಷಯ ಆಗಿರುವುದರಿಂದ ಈ ವಾರವೂ ಇದರ ಬಗ್ಗೆ ಚರ್ಚಿಸಿ ಈ ವಿಷಯವನ್ನು ಪರಿಸಮಾಪ್ತಿ ಮಾಡೋಣ.

ನಿಮಗೆ ಗೊತ್ತಿರಲಿ, ತನ್ನ ಫ್ರೀಬೇಸಿಕ್ಸ್ ಪರಿಕಲ್ಪನೆಯನ್ನು ಜನರ ಮಿದುಳಿಗೆ ತುರುಕುವುದಕ್ಕಾಗಿ ಮಾರ್ಕ್ ಝುಕರ್‌ಬರ್ಗ್ ತನ್ನ ಫೇಸ್‌ಬುಕ್ ವೇದಿಕೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಂಡರು. ಟೈಂಲೈನಿನಲ್ಲಿ, ನೋಟಿಫಿಕೇಶನ್‌ಗಳ ಮಧ್ಯದಲ್ಲಿ - ಹೀಗೆ ಕಂಡಕಂಡಲ್ಲಿ ಫ್ರೀಬೇಸಿಕ್ಸ್ ಪರವಾದ ವಿಷಯಗಳನ್ನು ತುರುಕುತ್ತಾ ಮೊದಲು ಫೇಸ್‌ಬುಕ್ ಬಳಕೆದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ದೊಡ್ಡ ಮಟ್ಟದ ಪ್ರಯತ್ನ ನಡೆಸಿದರು. ಭಾರತದಲ್ಲೀಗ ಹೆಚ್ಚುಕಡಿಮೆ 14 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಈ ಜಾಗೃತ ಬಳಕೆದಾರರನ್ನು ಬುಟ್ಟಿಗೆ ಹಾಕಿಕೊಂಡರೆ ಸಮಾಜದಲ್ಲಿ ಫ್ರೀಬೇಸಿಕ್ಸ್ ಪರವಾದ ಅಭಿಪ್ರಾಯ ನಿರ್ಮಾಣವಾಗುತ್ತದೆ, ಅದರಿಂದ ನೀತಿರೂಪಕರ ಮೇಲೆ ಪರಿಣಾಮವುಂಟಾಗಿ ತನ್ನ ಹಾದಿ ಸುಲಭವಾಗುತ್ತದೆ ಎಂಬುದು ಝುಕರ್‌ಬರ್ಗ್‌ನ ಆಲೋಚನೆಯಾಗಿತ್ತು. ಎರಡನೆಯದಾಗಿ, ಫೇಸ್‌ಬುಕ್ ಬಳಕೆದಾರರ ಆಚೆಗಿರುವ ಪ್ರಜ್ಞಾವಂತ ನಾಗರಿಕರ ಮಿದುಳು ತಿರುಗಿಸುವುದಕ್ಕಾಗಿ ಆತ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದ ಜಾಹೀರಾತು ಅಭಿಯಾನವನ್ನೂ ಕೈಗೊಂಡರು. ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ನೀಡುವ ಮೂಲಕ ದೊಡ್ಡ ಮಟ್ಟದ ಪ್ರಚಾರಾಂದೋಲನ ನಡೆಸಿದರು.
ಇಷ್ಟೆಲ್ಲಾ ಪ್ರಯತ್ನ ಮಾಡಿದ ಮಾರ್ಕ್ ಝುಕರ್‌ಬರ್ಗ್‌ಗೆ ಕೊನೆಗೆ ನಿರಾಶೆಯೇ ಕಾದಿತ್ತು. ಏಕೆಂದರೆ ಈ ಪ್ರಚಾರಾಂದೋಲನ ಅಸಲಿಗೆ ಅವರ ಫ್ರೀಬೇಸಿಕ್ಸ್ ಪರವಾದ ಅಭಿಪ್ರಾಯವನ್ನು ರೂಪಿಸುವುದರ ಬದಲಿಗೆ ಅದರ ವಿರುದ್ಧವಾದ ಅಭಿಪ್ರಾಯವನ್ನು ರೂಪಿಸುವ ಮೂಲಕ ತಿರುಗುಬಾಣವಾಗಿಬಿಟ್ಟಿತು! ನಂಬಲು ಕಷ್ಟ, ಆದರೂ ಇದೇ ಸತ್ಯ.
ವಾಸ್ತವದಲ್ಲಿ ಏನಾಯಿತೆಂದರೆ, 2015ರ ಆರಂಭದಲ್ಲಿಯೇ ಫೇಸ್‌ಬುಕ್ ಇನ್ನೂ ಇಂಟರ್‌ನೆಟ್ ಬಳಕೆಯಿಂದ ಆಚೆಯಿರುವ ಹತ್ತಾರು ಕೋಟಿ ಜನರನ್ನು ವಾಮಮಾರ್ಗದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಇಂಟರ್‌ನೆಟ್ ಡಾಟ್ ಆರ್ಗ್ ಎಂಬ ಸೇವೆಯನ್ನು ಶುರು ಮಾಡಿದಾಗಲೇ ಅದು ಜಾಲ ತಟಸ್ಥತೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬ ಅಪಸ್ವರಗಳನ್ನು ನೆಟಿಜೆನ್ ವಲಯ ಎತ್ತಿತ್ತು. ಇದರಿಂದಾಗಿ ಕಳೆದ ವರ್ಷ ಮೇ ತಿಂಗಳಿನಲ್ಲಿ ಭಾರತದ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಈ ಬಗ್ಗೆ ಮುಕ್ತ ಸಮಾಲೋಚನೆ ನಡೆಯಲಿ, ಆನಂತರ ಒಂದು ನಿರ್ಧಾರಕ್ಕೆ ಬರೋಣ ಎಂಬ ಆಶಯದಿಂದ ಇಂಟರ್‌ನೆಟ್ ಬಳಕೆದಾರರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಕೇಳಿತು. ವಾಸ್ತವದಲ್ಲಿ ಆಗ ಜಾಲ ತಟಸ್ಥತೆಯ ಪರಿಕಲ್ಪನೆಯ ಬಗ್ಗೆ ಜನರಲ್ಲಿ ಅಷ್ಟೊಂದು ತಿಳುವಳಿಕೆ ಇಲ್ಲದ ಕಾರಣ ಸ್ಪಷ್ಟ ಅಭಿಪ್ರಾಯ ಮೂಡಿ ಬಂದಿರಲಿಲ್ಲ. ಕೆಲವರು ಫೇಸ್‌ಬುಕ್ ಪ್ರೇರಿತ ಇಂಟರ್‌ನೆಟ್ ಡಾಟ್ ಆರ್ಗ್ ಸೇವೆಯನ್ನು ಎತ್ತಿಹಿಡಿದರೆ ಮತ್ತೆ ಕೆಲವರು ಅದು ಜಾಲ ತಟಸ್ಥತೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬ ಕಾರಣವೊಡ್ಡಿ ವಿರೋಧಿಸಿದರು. ಅಂದರೆ, ಅಭಿಪ್ರಾಯಗಳು ಅಂದು ಸಮನಾಗಿ ಪರವಿರೋಧಗಳಲ್ಲಿ ಹಂಚಿಕೆಯಾಗಿದ್ದವು. ಆದರೂ ಜಾಲ ತಟಸ್ಥತೆಯ ಬಗ್ಗೆ ಒಂದು ಚರ್ಚೆಯನ್ನಂತೂ ಅದು ಹುಟ್ಟುಹಾಕಿದ್ದು ನಿಜ.
ಆದರೆ, ಯಾವಾಗ ಮಾರ್ಕ್ ಝುಕರ್‌ಬರ್ಗ್ ಇಂಟರ್‌ನೆಟ್ ಡಾಟ್ ಆರ್ಗ್‌ಗೆ ಫ್ರೀಬೇಸಿಕ್ಸ್ ಎಂಬ ಹೊಸ ಅಂಗಿ ತೊಡಿಸಿ ಅದರ ಪರವಾಗಿ ತೋಳೇರಿಸಿ ಪ್ರಚಾರಕ್ಕೆ ನಿಂತರೋ ಆಗ ಜಾಲ ತಟಸ್ಥತೆ ಕುರಿತ ಚರ್ಚೆಯೂ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಯಿತು. ಈ ಬೃಹತ್ ಪ್ರಚಾರಾಂದೋಲನ ಭಾರತದ ನೆಟಿಜೆನ್ ಸಮುದಾಯವನ್ನು ಬಡಿದೆಬ್ಬಿಸಿತು. ಫ್ರೀಬೇಸಿಕ್ಸ್ ಎಂದರೇನು, ಅದರಿಂದ ಉಪಯೋಗ ಏನು, ನಷ್ಟ ಏನು, ಯಾರಿಗೆ ಲಾಭ ಎಂಬಿತ್ಯಾದಿ ಪ್ರಶ್ನೆಗಳನ್ನು ಅವರಲ್ಲಿ ಹುಟ್ಟುಹಾಕಿತು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಅವರು ಗೂಗಲ್ ಮೊರೆ ಹೋದಾಗ ಅವರಿಗೆ ಫ್ರೀಬೇಸಿಕ್ಸ್ ವಿರುದ್ಧವಾದ ಮಾಹಿತಿಯೇ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿತು. ಅಂದರೆ ನೆಟ್ ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆಯ ಪರವಾಗಿ ಪ್ರಜ್ಞಾವಂತ ನೆಟಿಜನ್ನರು ಹಂಚಿಕೊಂಡ ಅಭಿಪ್ರಾಯಗಳೇ ದೊಡ್ಡ ಸಂಖ್ಯೆಯಲ್ಲಿ ಸಿಕ್ಕರು. ಅದನ್ನೆಲ್ಲಾ ಈ ನೆಟಿಜನ್ನರು ಫೇಸ್‌ಬುಕ್ ವೇದಿಕೆಯನ್ನು ಬಳಸಿಕೊಂಡೇ ದೊಡ್ಡ ಪ್ರಮಾಣದಲ್ಲಿ ಹಂಚಿಕೊಂಡು ಫ್ರೀಬೇಸಿಕ್ಸ್ ವಿರುದ್ಧವಾದ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡಿದರು. ಅದು ಫೇಸ್‌ಬುಕ್‌ನ ಫ್ರೀಬೇಸಿಕ್ಸ್ ಪರಿಕಲ್ಪನೆಗೆ ಬಿದ್ದ ಮೊದಲ ಹೊಡೆತ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಮಾರ್ಕ್ ಝುಕರ್‌ಬರ್ಗ್‌ರ ಫ್ರೀಬೇಸಿಕ್ಸ್ ಪ್ರಚಾರಾಂದೋಲನ ನೆಟಿಜೆನ್ ವಲಯದಲ್ಲಿ ಜಾಲ ತಟಸ್ಥತೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಈ ಅರಿವು ವಾಸ್ತವದಲ್ಲಿ ಮಾರ್ಕ್ ಝುಕರ್‌ಬರ್ಗ್‌ನ ಫ್ರೀಬೇಸಿಕ್ಸ್ ಪರಿಕಲ್ಪನೆಯ ವಿರುದ್ಧದ ಅಭಿಪ್ರಾಯವೂ ಆಗಿತ್ತು.

  
ಈಗ ನೆಟಿಜನ್ ವಲಯದಲ್ಲಿ ಸ್ಪಷ್ಟ ನಿಲುವುಗಳು ರೂಪುಗೊಳ್ಳುತ್ತಿವೆ. ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ಆಸ್ತಿ, ಉದ್ಯೋಗ ಮುಂತಾದವುಗಳನ್ನು ನಾವು ಹೇಗೆ ‘ನಮ್ಮ ಹಕ್ಕುಗಳು’ ಎಂದು ನೋಡುತ್ತೇವೆಯೋ ಅದೇ ರೀತಿಯಲ್ಲಿ ಈಗ ಇಂಟರ್‌ನೆಟ್ ಅನ್ನೂ ಕೂಡ ಜನ ಒಂದು ಹಕ್ಕಾಗಿ ನೋಡಲಾರಂಭಿಸಿದ್ದಾರೆ. ಅಂದರೆ, ಈ ಹಕ್ಕನ್ನು ಪ್ರಭುತ್ವಗಳು ತನ್ನ ನಾಗರಿಕರಿಗೆ ಖಾತ್ರಿಗೊಳಿಸಬೇಕು ಎಂಬರ್ಥದಲ್ಲಿ ಮಾತಾಡುತ್ತಿದ್ದಾರೆ. ಇಲ್ಲಿ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಒಂದು, ‘ಕೆಲವು ಸೇವೆಗಳನ್ನು ಎಲ್ಲರಿಗೂ ಉಚಿತವಾಗಿ ಒದಗಿಸುವುದು’ ಮತ್ತು ‘ಎಲ್ಲಾ ಸೇವೆಗಳನ್ನು ಕೆಲವರಿಗೆ ಉಚಿತವಾಗಿ ಒದಗಿಸುವುದು’. ಮೊದಲನೆಯದು ಫೇಸ್‌ಬುಕ್ ತನ್ನ ಫ್ರೀಬೇಸಿಕ್ಸ್ ಪರಿಕಲ್ಪನೆಯ ಮೂಲಕ ಮಾಡಲು ಹೊರಟಿದ್ದು. ಇಲ್ಲಿ ‘ಕೆಲವು ಸೇವೆಗಳನ್ನು’ ಫೇಸ್‌ಬುಕ್ ನಿರ್ಧರಿಸುತ್ತದೆಯೇ ಹೊರತು ಬಳಕೆದಾರನಲ್ಲ. ಹಿಂದಿನ ವಾರವೇ ಹೇಳಿದಂತೆ ಅದು ತನ್ನ ವ್ಯಾಪಾರ ಹೆಚ್ಚಿಸಿಕೊಳ್ಳುವ ಸಲುವಾಗಿ, ಲಾಭ ಹೆಚ್ಚಿಸಿಕೊಳ್ಳುವ ಸಲುವಾಗಿ ತನಗೆ ಬೇಕಾದ ಸೇವೆಗಳನ್ನು ‘ಉಚಿತ’ವಿಭಾಗದಡಿಯಲ್ಲಿಡುತ್ತದೆಯೇ ಹೊರತು ಜನರಿಗೆ ಬೇಕಾದ ಸೇವೆಗಳನ್ನಲ್ಲ. ಇನ್ನು ಎರಡನೆಯದು ಎಲ್ಲಾ ಸೇವೆಗಳನ್ನು ಕೆಲವರಿಗೆ ಉಚಿತವಾಗಿ ಕೊಡುವುದು ಅದಕ್ಕಿಂತ ಉತ್ತಮವಾದ ಪರಿಕಲ್ಪನೆ ನಿಜ. ಅಂದರೆ, ಆರ್ಥಿಕವಾಗಿ ದುರ್ಬಲವಾಗಿರುವ ಜನಸಮುದಾಯಗಳಿಗೆ ಎಲ್ಲಾ ಸೇವೆಗಳು ಉಚಿತವಾಗಿ ಸಿಗುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂಬ ವಾದಗಳು ಕೇಳಿಬರುತ್ತಿವೆ. ಅಂದರೆ ಈ ಸಮುದಾಯಗಳಿಗೆ ಹೇಗೆ ಭಾಗ್ಯಜೋತಿ ಯೋಜನೆ ರೂಪಿಸಿ ಉಚಿತ ವಿದ್ಯುತ್ ಸಂಪರ್ಕ ಕೊಡಲಾಗಿದೆಯೋ ಅದೇ ರೀತಿಯಲ್ಲಿ ಉಚಿತ ಇಂಟರ್‌ನೆಟ್ ಸೌಕರ್ಯವನ್ನು ಕೊಡಬೇಕು ಎಂಬುದು. ಇದರಾಚೆಗೆ ಇನ್ನೂ ಒಂದು ಅಭಿಪ್ರಾಯವಿದೆ. ಅದೆಂದರೆ, ಎಲ್ಲಾ ಸೇವೆಗಳನ್ನು ಎಲ್ಲರಿಗೂ ಉಚಿತವಾಗಿ ಕೊಡಿ ಎಂಬುದು. ಈ ಅಭಿಪ್ರಾಯ ವ್ಯಕ್ತಪಡಿಸುವವರ ಪ್ರಕಾರ ಸರಕಾರ ಪ್ರತಿ ತಿಂಗಳು ಇಂತಿಷ್ಟು ಜಿಬಿ ಉಚಿತ ಡಾಟಾ ಅಂತ ನಿಗದಿ ಮಾಡಿ ಕೊಡಬೇಕು. ಆ ಇಂಟರ್‌ನೆಟ್ ಡಾಟಾವನ್ನು ಜನರು ಯಾವುದಕ್ಕಾದರೂ ಬಳಸಿಕೊಳ್ಳಲಿ. ಒಮ್ಮೆ ಆ ಡಾಟಾ ಖಾಲಿಯಾಯಿತೆಂದರೆ ಮತ್ತೆ ಡಾಟಾ ಹಾಕಲು ನಿಗದಿತ ಶುಲ್ಕ ಪಡೆಯಬೇಕು ಎಂಬುದು. ಒಟ್ಟಿನಲ್ಲಿ ಡಿಜಿಟಲ್ ಹಕ್ಕು, ಇಂಟರ್‌ನೆಟ್ ಹಕ್ಕು ಮುಂತಾದ ‘ಹಕ್ಕು’ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಫೇಸ್‌ಬುಕ್‌ನ ಫ್ರೀಬೇಸಿಕ್ಸ್ ಅಭಿಯಾನದ ಪಾತ್ರ ದೊಡ್ಡದಿದೆ!
 ಮಾರ್ಕ್ ಝುಕರ್‌ಬರ್ಗ್ ಜನರಿಗೆ ‘ಫ್ರೀಬೇಸಿಕ್ಸ್’ ಪಾಠ ಹೇಳಿಕೊಡಲು ಬಾರಿ ದುಡ್ಡು ಖರ್ಚು ಮಾಡಿ ದೊಡ್ಡ ಪ್ರಚಾರ ಮಾಡಿದರು. ಆದರೆ, ಅದರ ಪರಿಣಾಮ ಏನಪ್ಪ ಅಂದರೆ, ಜನ ಅವರನ್ನೇ ಕೂರಿಸಿ ‘ನೆಟ್ ನ್ಯೂಟ್ರಾಲಿಟಿ’ ಬಗ್ಗೆ ಪಾಠ ಮಾಡಿಬಿಟ್ಟರು! ತನ್ನ ಕಾಲಮೇಲೆ ತಾನೇ ಕಲ್ಲು ಎತ್ತಿಹಾಕಿಕೊಳ್ಳುವುದು ಅಥವಾ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವುದು ಎಂದರೆ ಇದೇ ತಾನೆ?

xsangeetax@gmail.com

Writer - ಸಂಗೀತ

contributor

Editor - ಸಂಗೀತ

contributor

Similar News