ತನ್ನ ದೇಶಕ್ಕೂ, ತನ್ನ ಜನರಿಗೂ ನಿಷ್ಠರಾಗಿರುವ ಅಂಬೇಡ್ಕರ್...

Update: 2016-01-16 17:40 GMT

ಡಾ. ಬಿ. ಆರ್. ಅಂಬೇಡ್ಕರ್ ಅವರು ಅಸ್ಪಶ್ಯರಾಗಿ ಅನುಭವಿಸಿದ ಯಾತನಾಮಯ ಬದುಕಿನ ಹಲವು ಝಲಕ್‌ಗಳೇ ‘ವೀಸಾದ ನಿರೀಕ್ಷೆಯಲ್ಲಿ ನೆನಪುಗಳು’. ಅಂಬೇಡ್ಕರ್ ಮಾಡಿರುವ ಮೂರು ಭಾಷಣಗಳು ಮತ್ತು ಮೂರು ಲೇಖನಗಳನ್ನು ಈ ಕೃತಿ ಒಳಗೊಂಡಿದ್ದು, ಅಸ್ಪಶ್ಯರ ಬದುಕಿನ ವಿವಿಧ ಆಯಾಮಗಳನ್ನು ತೆರೆದಿಡುತ್ತದೆ. ಅಷ್ಟೇ ಅಲ್ಲ, ಸ್ವಾತಂತ್ರ ಪೂರ್ವ ಮತ್ತುಸ್ವಾತಂತ್ರೋತ್ತರ ಸ್ಥಿತಿ ಗತಿಗಳನ್ನೂ ಜೊತೆ ಜೊತೆಗೆ ದಾಖಲಿಸುತ್ತದೆ. ಇಡೀ ದೇಶ ಬ್ರಿಟಿಷರ ಗುಲಾಮಗಿರಿಯ ವಿರುದ್ಧ ಹೋರಾಟ ಮಾಡುತ್ತಿರುವಾಗ, ತನ್ನದೇ ನೆಲದ ಗುಲಾಮಗಿರಿಯ ವಿರುದ್ಧ ಹೋರಾಡುವಂತಹ ಸ್ಥಿತಿ ಅಂಬೇಡ್ಕರ್ ಅವರದಾಗಿತ್ತು. ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತ, ಬ್ರಾಹ್ಮಣ್ಯದ ಗುಲಾಮಗಿರಿಯಿಂದ ದಲಿತರನ್ನು ಬಿಡಿಸುವುದೇ ಅಂಬೇಡ್ಕರ್‌ಗೆ ಅತಿ ಮುಖ್ಯವಾಗಿತ್ತು. ಈ ಕೃತಿಯಲ್ಲಿ ಒಬ್ಬ ನೋವುಂಡ ದಲಿತನಾಗಿ, ವಿದ್ವಾಂಸನಾಗಿ, ಹೋರಾಟಗಾರನಾಗಿ, ರಾಜಕಾರಣಿಯಾಗಿ, ಇತಿಹಾಸಗಾರನಾಗಿ ಶ್ರೇಷ್ಠ ಅಂಬೇಡ್ಕರ್‌ರನ್ನು ಕಾಣಬಹುದು. ವೀಸಾದ ನಿರೀಕ್ಷೆಯಲ್ಲಿ ಲೇಖನದಲ್ಲಿ ಅಸ್ಪಶ್ಯತೆ, ಜಾತೀಯತೆಯ ಕರಾಳ ಮುಖವನ್ನು ತೆರೆದಿಡಲಾಗಿದೆ. ಬುದ್ಧ ಮತ್ತು ಬೌದ್ಧ ಧರ್ಮದ ಭವಿಷ್ಯ ಲೇಖನದಲ್ಲಿ ದಲಿತರ ಗುರುತಿಸುವಿಕೆ ಬೌದ್ಧ ಧರ್ಮದ ಮೂಲಕ ಯಾಕೆ ಆಗಬೇಕು ಎನ್ನುವುದನ್ನು ಅರ್ಥ ಮಾಡಿಸುವ ಪ್ರಯತ್ನವಿದೆ. ಮತ್ತು ಬೌದ್ಧ ಧರ್ಮ ಹೇಗೆ ಈ ನೆಲದ ಮೂಲ ಧರ್ಮ ಎನ್ನುವುದನ್ನು ಅವರು ಪ್ರತಿಪಾದಿಸುತ್ತಾರೆ. ಕೋಮುವಾರು ಪ್ರಶ್ನೆ ಮತ್ತು ಭಾರತೀಯ ಸಂವಿಧಾನ ರಚನೆಯ ಬರಹದಲ್ಲಿ ಅಂಬೇಡ್ಕರ್ ಅವರ ರಾಜಕೀಯ ಸಂಘರ್ಷಗಳು ಮತ್ತು ಅವರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಎದುರಿಸಿದ ಸವಾಲನ್ನು ಮುಂದಿಡುತ್ತದೆ. ತನ್ನ ದೇಶಕ್ಕೆ ನಿಷ್ಠನಾಗಿರುವುದು ಎಂದರೆ ತನ್ನ ಜನರಿಗೆ ನಿಷ್ಠನಾಗಿರುವುದು ಎನ್ನುವುದನ್ನು ಅಂಬೇಡ್ಕರ್ ಭಾವಿಸಿದ್ದರು. ಅಸ್ಪಶ್ಯರ ಸ್ಥಿತಿಯನ್ನು ನೋವಿನಿಂದ ಮತ್ತು ನೋವಿನ ಮೂಲಕವಲ್ಲದೆ ಬೇರೆ ವಿಧಾನದಿಂದ ಹೇಳಲು ಸಾಧ್ಯವಿಲ್ಲ ಎಂದು ಬರೆಯುವ ಅಂಬೇಡ್ಕರ್, ಸಂಘಟನೆಯೇ ದಲಿತರ ಸಾಫಲ್ಯಕ್ಕಿರುವ ದಾರಿ ಎಂದು ಸ್ಪಷ್ಟಪಡಿಸುತ್ತಾರೆ. ಜಾತಿಯೆನ್ನುವ ಗಾಯವನ್ನು ಮುಟ್ಟಿ ತೋರಿಸುವ ಅಂಬೇಡ್ಕರ್, ಆ ಗಾಯವನ್ನು ಮುಚ್ಚಿಟ್ಟಷ್ಟು ಹೆಚ್ಚು ಅಪಾಯ ಎನ್ನುವುದನ್ನು ಪ್ರತಿ ಲೇಖನದಲ್ಲೂ ಎಚ್ಚರಿಸುತ್ತಾರೆ.

 ಇಲ್ಲಿರುವ ಅಂಬೇಡ್ಕರ್ ಬರಹಗಳನ್ನು ಸದಾಶಿವ ಮರ್ಜಿ ಕನ್ನಡಕ್ಕೆ ಇಳಿಸಿದ್ದಾರೆ. ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಹೊರತಂದಿದೆ. ಕೃತಿಯ ಮುಖಬೆಲೆ 90 ರೂ. ಆಸಕ್ತರು 9480 286844ನ್ನು ಸಂಪರ್ಕಿಸಿ

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News