ಮಧ್ಯಪ್ರದೇಶ: ವಿವಾದದ ಕೇಂದ್ರವಾದ ಪ್ರಾಚೀನ ಸ್ಮಾರಕ
ಭೋಪಾಲ್: ಮಧ್ಯಪ್ರದೇಶದ ಧರ್ ಜಿಲ್ಲೆಯ ಹನ್ನೊಂದನೇ ಶತಮಾನದ ಪ್ರಾಚೀನ ಸ್ಮಾರಕವೊಂದು ಇದೀಗ ವಿವಾದದ ಕುದಿಬಿಂದುವಾಗಿದೆ, ಮುಂದಿನ ತಿಂಗಳ ಬಸಂತ ಪಂಚಮಿಯ ಶುಕ್ರವಾರ ಹಿಂದೂ ಹಾಗೂ ಮುಸ್ಲಿಂ ಬಾಂಧವರು ವಿವಾದಿತ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಪಟ್ಟು ಹಿಡಿದಿರುವುದು ವಿವಾದದ ಮೂಲ.
ಜಿಲ್ಲಾ ಆಡಳಿತ ಹಿಂದೆ ರೂಪಿಸಿದ್ದ ರಾಜಿಸೂತ್ರದ ಪ್ರಕಾರ, ಪ್ರತಿ ವಸಂತಪಂಚಮಿಯಂದು ಮುಂಜಾನೆಯಿಂದ ಮುಸ್ಸಂಜೆ ವರೆಗೆ ಭೋಜ್‌ಶಾಲಾ ಆವರಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹಾಗೂ ಪ್ರತಿ ಶುಕ್ರವಾರ ಇಲ್ಲಿ ಮುಸಲ್ಮಾನರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಫೆಬ್ರವರಿ 12ರಂದು ವಸಂತ ಪಂಚಮಿ ಶುಕ್ರವಾರವೇ ಬಂದಿರುವುದು ಸಮಸ್ಯೆಯ ಮೂಲ. ರಾಜ್ಯದ ಮಿನಿ ಅಯೋಧ್ಯೆ ಎಂದೇ ಪರಿಗಣಿತವಾದ ಈ ಸ್ಥಳದಲ್ಲಿ ಅಂದು ಪ್ರಾರ್ಥನೆ ಸಲ್ಲಿಸಲು ಎರಡೂ ಸಮುದಾಯಗಳು ಪಟ್ಟು ಹಿಡಿದಿವೆ.
ಹಿಂದೂಗಳು ಇಡೀ ದಿನ ಭೋಜ್‌ಶಾಲಾ ಸಂಕೀರ್ಣದಲ್ಲಿ ಪೂಜೆ- ಪುನಸ್ಕಾರ ಹಮ್ಮಿಕೊಂಡಿದ್ದು, ಮುಸಲ್ಮಾನರಿಗೆ ಅಂದು ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. "ಇದು ಮೂಲತಃ ರಾಜ ಭೋಜ 11ನೇ ಶತಮಾನದಲ್ಲಿ ನಿರ್ಮಿಸಿದ ಸರಸ್ವತಿ ಮಂದಿರ. ದೇವಸ್ಥಾನದ ವಿನ್ಯಾಸಕಾರರನ್ನೇ ಬಳಸಿಕೊಂಡು ಮಸೀದಿಯನ್ನೂ ನಿರ್ಮಿಸಲಾಗಿದೆ. ಇಲ್ಲಿ ಕೆಲ ಸಂಸ್ಕೃತ ಮತ್ತು ಪ್ರಾಕೃತ ಬರಹಗಳೂ ಕಂಡುಬರುತ್ತವೆ. ಮುಸ್ಲಿಂ ಸಾಹಿತ್ಯದ ಪೋಷಕ ಎನಿಸಿದ್ದ ಭೋಜ ಇಲ್ಲಿ ಒಂದು ಶಾಲೆ ನಿರ್ಮಿಸಿದ್ದ ಎನ್ನಲಾಗಿದ್ದು, ಇದೇ ಭೋಜಶಾಲೆ ಎಂದು ಖ್ಯಾತವಾಗಿದೆ" ಎಂದು ಸ್ಥಳದ ವೆಬ್‌ಸೈಟ್ ಹೇಳುತ್ತದೆ.
ಇದೀಗ ಎರಡು ಕೋಮುಗಳ ನಡುವೆ ಉದ್ದೇಶಪೂರ್ವಕವಾಗಿ ಸಂಘರ್ಷ ತಂದಿದಡಲು ಈ ವಿವಾದ ಸೃಷ್ಟಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾಥ ಘಟಕದ ಅಧ್ಯಕ್ಷ ಮುಜೀಬ್ ಖುರೇಶಿ ಹಾಗೂ ಧರ್ ಶಹರ್ ಕ್ವಾಸಿ ವಕಾರ್ ಸಿದ್ದಿಕ್ ಸೇರಿದಂತೆ ಈ ಭಾಗದ ಪ್ರಮುಖ ಮುಸ್ಲಿಂ ಮುಖಂಡರ ವಿರುದ್ಧ ಡಿಸೆಂಬರ್ 7ರಂದು ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.
ಅಂದು ಪ್ರತಿಭಟನೆಯಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 2003, 2006 ಹಾಗೂ 2013ರಲ್ಲಿ ಇಂಥದ್ದೇ ಪರಿಸ್ಥಿತಿ ಉದ್ಭವಿಸಿದ್ದಾಗ ಶಾಂತಿ ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಂದು ಪ್ರಾರ್ಥನೆಗೆ ಅವಕಾಶ ನೀಡದಿದ್ದರೆ, ಅದು ಕೇಂದ್ರ ಸರ್ಕಾರದ ವೈಫಲ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.