ಅಮೆರಿಕದ ಒಟ್ಟು ಜನಸಂಖ್ಯೆಗಿಂತ ಚೀನಾದ ನೆಟಿಜೆನ್‌ಗಳ ಸಂಖ್ಯೆಯೇ ಹೆಚ್ಚು

Update: 2016-01-23 17:48 GMT
Editor : ಸಂಗೀತ

ಪ್ಪತ್ತನೆ ಶತಮಾನದ ಮೊದಲರ್ಧ ಭಾಗದ ದಿನಗಳಿಗೆ ಹೋಲಿಸಿದರೆ ಚೀನಾ ವಿಶ್ವದ ಅತ್ಯಂತ ಹಿಂದುಳಿದ ದೇಶಗಳಲ್ಲಿ ಒಂದಾಗಿತ್ತು. ಅನಕ್ಷರತೆ, ಮೂಢನಂಬಿಕೆ, ಬಡತನ ನಿರುದ್ಯೋಗ, ಹಸಿವು ಅಲ್ಲಿ ತಾಂಡವಾಡುತ್ತಿದ್ದವು.ಅಂದಿನ ಭಾರತಕ್ಕೆ ಹೋಲಿಸಿದರೆ ಅಂದಿನ ಚೀನಾ ತೀರಾ ಹಿಂದುಳಿದ ದೇಶವಾಗಿತ್ತು. ಒಂದೆಡೆ ಜಪಾನಿನ ಅಕ್ರಮಣಕ್ಕೊಳಗಾಗಿ ನಲುಗುತ್ತಿದ್ದ ಜನಸಮುದಾಯ, ಇನ್ನೊಂದೆಡೆ ಸಾಮ್ರಾಜ್ಯಶಾಹಿ ಲೂಟಿಕೋರರೊಂದಿಗೆ ಕೈಜೋಡಿಸಿ ಸಹಕರಿಸುತ್ತಿದ್ದ ಕೊಮಿನ್‌ಟಾಂಗ್ ಪಕ್ಷದ ದುರಾಡಳಿತ ಹಾಗೂ ವಿಶಾಲ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಗೆ ಒಡೆಯರಾಗಿ, ತಮ್ಮದೇ ಸೈನ್ಯವನ್ನೂ ಇಟ್ಟುಕೊಂಡು ಮೆರೆಯುತ್ತಿದ್ದ ಪಾಳೆಗಾರ ದೊರೆಗಳ ಅಟ್ಟಹಾಸ ಚೀನಾ ದೇಶದ ಪ್ರಗತಿಗೆ ಅಡ್ಡಿ ಯುಂಟು ಮಾಡಿದ್ದವು. ವಿಶ್ವದ ಅತ್ಯಂತ ಹಿಂದುಳಿದ ದೇಶಗಳ ಪೈಕಿ ಒಂದಾಗಿದ್ದ ಚೀನಾ ಕೇವಲ ಅರ್ಧ ಶತಮಾನದಲ್ಲಿ ಪುಟಿದೆದ್ದು ವಿಶ್ವಶಕ್ತಿಯಾಗಿ ವಿಶ್ವಕ್ಕೆ ಸೆಡ್ಡು ಹೊಡೆಯುತ್ತದೆಂದು ಯಾರೂ ಕನಸು ಮನಸಿನಲ್ಲೂ ಅಂದಾಜಿಸಿರಲಿಲ್ಲ.ಮಾವೋ ತ್ಸೇ ತುಂಗ್ ನೇತೃತ್ವದಲ್ಲಿ ಸುದೀರ್ಘವಾಗಿ ನಡೆದ ಚೀನಾ ಮಹಾಕ್ರಾಂತಿ ಸಾಮ್ರಾಜ್ಯಶಾಹಿ ಲೂಟಿಕೋರರನ್ನು, ಕೊಮಿನ್‌ಟಾಂಗ್ ದಲ್ಲಾಳಿಯ ದುರಾಡಳಿತವನ್ನು ಹಾಗೂ ಪಾಳೆಗಾರ ವರ್ಗವನ್ನು ಸಂಪೂರ್ಣವಾಗಿ ನಿರ್ಮೂಲಿಸಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದು ನಿಜಕ್ಕೂ ಒಂದು ರೋಚಕ ಚರಿತ್ರೆ.ಚೀನಾವನ್ನು ಊಳಿಗಮಾನ್ಯತೆಯ ಕಬಂಧಬಾಹುಗಳಿಂದ ಬಿಡಿಸಿದ್ದೇ ಅದು ಪ್ರಗತಿಪಥದಲ್ಲಿ ದಾಪುಗಾಲು ಹಾಕಿ ಇಂದು ವಿಶ್ವದ ಅಗ್ರಮಾನ್ಯ ಆರ್ಥಿಕ ಶಕ್ತಿಗಳಲ್ಲೊಂದಾಗಿ ಬೆಳೆದು ನಿಂತಿರುವುದಕ್ಕೆ ಪ್ರಧಾನ ಕಾರಣ.

22,85,000 ರೆಗ್ಯೂಲರ್ ಸೈನಿಕರನ್ನು ಹೊಂದಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಿಶ್ವದ ಅತಿದೊಡ್ಡ ಸೈನ್ಯವಾಗಿದೆ. (ನಂತರದ ಸ್ಥಾನಗಳಲ್ಲಿ ಸುಮಾರು ಹದಿಮೂರುವರೆ ಲಕ್ಷ ಸೈನಿಕರನ್ನು ಹೊಂದಿರುವ ಭಾರತ ಮತ್ತು ಅಮೆರಿಕಗಳಿವೆ).ಆರ್ಥಿಕತೆಯ ವಿಷಯಕ್ಕೆ ಬಂದರೆ ಚೀನಾ ನುಗ್ಗದ ದೇಶವಿಲ್ಲ.ಇಡೀ ವಿಶ್ವ ಮಾರುಕಟ್ಟೆಯಲ್ಲಿ ಗ್ರಾಹಕ ಬಳಕೆಯ ವಸ್ತುಗಳಲ್ಲಿ ಚೀನಾದ ಮಾಲುಗಳೇ ಅತಿದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.ಅದು ಅಮೆರಿಕವಿರಲಿ, ಆಫ್ರಿಕವಿರಲಿ, ಯೂರೋಪಿರಲಿ - ಎಲ್ಲೆಲ್ಲಿಯೂ ಚೀನಾ ವಸ್ತುಗಳದ್ದೇ ಕಾರುಬಾರು. ಎಲೆಕ್ಟ್ರಾನಿಕ್ ಸಲಕರಣೆಗಳ ವಿಷಯದಲ್ಲಂತೂ ಇದು ಇನ್ನಷ್ಟು ಸತ್ಯ. ಒಂದು ಕಾಲಕ್ಕೆ ಅಗ್ಗದ ಮತ್ತು ಬಾಳಿಕೆ ಬಾರದ ಕಳಪೆ ಎಲೆಕ್ಟ್ರಾನಿಕ್ ‘ಚೈನಾ ಸೆಟ್’ ಗಳಿಗೆ ಹೆಸರುವಾಸಿಯಾಗಿದ್ದ ಚೀನಾ ಈಗ ವಿಶ್ವದ ಅತ್ಯುತ್ಕೃಷ್ಟ ದರ್ಜೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹೆಸರುವಾಸಿಯಾಗುತ್ತಿದೆ. ಅಮೆರಿಕದ ಮೂಲದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ತಯಾರಿಸುತ್ತಿದ್ದ ಸುಪ್ರಸಿದ್ಧ ಐಬಿಎಂ ಕಂಪೆನಿಯನ್ನು ಚೀನಾದ ಲೆನೋವೋ ಎಂಬ ಕಂಪೆನಿ ಕೊಂಡುಕೊಂಡು ಈಗ ವಿಶ್ವ ಮಾರುಕಟ್ಟೆಯ ಮುಂಚೂಣಿಯಲ್ಲಿದೆ. ಈಗ ಚೀನಾದಲ್ಲಿ ತಯಾರಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು (ಉದಾಹರಣೆಗೆ ಹುವೆಯ್, ರೆಡ್‌ಮಿ, ಜಿಯೋನಿ, ನೆಟ್‌ವಿ ಕಂಪೆನಿಗಳು) ಯಾವ ಸ್ಯಾಮ್ಸಂಗ್, ಐಫೋನ್‌ಗಳ ಗುಣಮಟ್ಟಕ್ಕೆ ಸರಿಸಮನಾಗಿ ನಿಲ್ಲುತ್ತಿವೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಸಾಧಿಸಿದ ಪ್ರಗತಿಯೂ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ.ಅದಕ್ಕೆ ಒಂದೇ ಉದಾಹರಣೆ ಸಾಕು.ಭಾರತವು ಆರ್ಯಭಟ ಉಪಗ್ರಹ ಉಡಾವಣೆಯೊಂದಿಗೆ ಬಾಹ್ಯಾಕಾಶ ಸಂಶೋಧನೆ ಮತ್ತು ಪ್ರಯೋಗವನ್ನು ಪ್ರಾರಂಭಿಸಿದಾಗ ಚೀನಾ ನಮ್ಮ ಹಿಂದೆ ಹತ್ತಿರದಲ್ಲೂ ಇರಲಿಲ್ಲ.ನಮ್ಮ ದೇಶ ಆರ್ಯಭಟವನ್ನು ಉಡಾಯಿಸಿ ವಿಶ್ವದ ಬೆರಳೆಣಿಕೆಯ ಬಾಹ್ಯಾಕಾಶ ದೇಶಗಳ ಪಟ್ಟಿಯಲ್ಲಿ ನಿಂತು ಹತ್ತು ವರ್ಷಗಳ ನಂತರವಷ್ಟೇ ಚೀನಾದಲ್ಲಿ ಬಾಹ್ಯಾಕಾಶ ಪ್ರಯೋಗಗಳು ಪ್ರಾರಂಭವಾಗಿದ್ದು.ಈಗ?ಅದು ಬಾಹ್ಯಾಕಾಶ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ಭಾರತಕ್ಕಿಂತ ಹತ್ತು ವರ್ಷ ಮುಂದಿದೆ ಎಂದು ನಮ್ಮ ದೇಶದ ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ.ನಮಗಿಂತ ಬಲಿಷ್ಠವಾದ ಉಡಾವಣಾ ವಾಹನಗಳನ್ನು ಅವರು ತಯಾರಿಸಿದ್ದಾರೆ.
ಉಳಿದೆಲ್ಲಾ ದೇಶಗಳಿಗಿಂತ ಚೀನಾಕ್ಕಿರುವ ಇನ್ನೊಂದು ಅತಿದೊಡ್ಡ ಬೆಂಬಲ ಎಂದರೆ ಅದರ ಜನಸಂಖ್ಯೆ. ‘ಜನಸಂಖ್ಯಾ ಸ್ಫೋಟ’, ‘ಜನಸಂಖ್ಯಾ ಸ್ಫೋಟದಿಂದುಂಟಾಗುವ ದುಷ್ಪರಿಣಾಮಗಳು’ ಎಂಬಂತಹ ಪರಿಕಲ್ಪನೆಗಳು ವಿಶ್ವದಾದ್ಯಂತ, ಅದರಲ್ಲೂ ವಿಶೇಷವಾಗಿ ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಹೆಚ್ಚಿದ್ದ ಜನಸಂಖ್ಯೆಯು ಒಂದು ಆತಂಕಕಾರಿ ವಿಷಯವಾಗಿತ್ತು. ಜನಸಂಖ್ಯಾ ನಿಯಂತ್ರಣಕ್ಕೆ ಈ ದೇಶಗಳು ಹಲವು ಕ್ರಮಗಳನ್ನೂ ಕೈಗೊಂಡಿದ್ದುಂಟು. ಆದರೆ, ಬಂಜೆತನ ಮತ್ತು ಸ್ವಇಚ್ಛೆಯಿಂದ ಮಕ್ಕಳನ್ನು ಮಾಡಿಕೊಳ್ಳದಿರುವ ಧೋರಣೆಗಳು ಹೆಚ್ಚಾದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದುಡಿಯುವ ಯುವಜನರ ಸಂಖ್ಯೆ ಕಡಿಮೆಯಾಗಿ, ವೃದ್ಧರ ಸಂಖ್ಯೆ ಜಾಸ್ತಿಯಾದಾಗ ಡೆಮಾಗ್ರಾಫಿಕ್ ಡೆವಿಡೆಂಡ್, ಅಂದರೆ ಜನಸಂಖ್ಯೆಯ ಲಾಭ ಎಂಬ ಪರಿಕಲ್ಪನೆ ಹುಟ್ಟಿಕೊಂಡಾಗ ಚೀನಾ ಮತ್ತು ಭಾರತಗಳಿಗೆ ತಮ್ಮ ಹೆಚ್ಚಿರುವ ಜನಸಂಖ್ಯೆಯೇ ವರದಾನವಾಗಿದೆ. ಭವಿಷ್ಯದ ವಿಶ್ವವನ್ನು 137 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಚೀನಾ ಹಾಗೂ 125 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವೇ ಆಳುವುದು ನಿಚ್ಚಳವಾಗುತ್ತಿದೆ.
ಅದರಲ್ಲೂ ಚೀನಾದ ವಿಷಯಕ್ಕೆ ಈ ಮಾತು ಇನ್ನಷ್ಟು ಕರಾರುವಕ್ಕಾಗಿ ಅನ್ವಯವಾಗುತ್ತದೆ. ವಿಶ್ವದ ಅತಿದೊಡ್ಡ ಸೈನ್ಯ, ವಿಶ್ವದ ಅತ್ಯಂತ ದೊಡ್ಡ ಮತ್ತು ಬಲಿಷ್ಠ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧಿಸಿದ ಪ್ರಗತಿ ಹಾಗೂ ವಿಶ್ವದ ಅತಿಹೆಚ್ಚು ಯುವಜನಸಂಖ್ಯೆಯನ್ನು ಹೊಂದಿದ್ದು ಚೀನಾದ ಪಾಲಿಗೆ ವರದಾನ.
ಈ ಜನಸಂಖ್ಯೆಯ ಜೊತೆಗೆ ಡಿಜಿಟಲ್ ಸುಶಿಕ್ಷಿತರು ಎಷ್ಟಿದ್ದಾರೆಂಬುದೂ ಕೂಡ ವರ್ತಮಾನ ಮತ್ತು ಭವಿಷ್ಯಗಳ ದೃಷ್ಟಿಯಿಂದ ಮಹಳ ಪ್ರಮುಖ ವಿಷಯವಾಗಿದೆ. ಇತ್ತೀಚೆಗೆ ಚೀನಾ ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರವೇ ಚೀನಾದಲ್ಲಿ ಸುಮಾರು 700 ಮಿಲಿಯನ್ ಆನ್‌ಲೈನ್ ಜನಸಂಖ್ಯೆ ಅಥವಾ ನೆಟಿಜೆನ್ ಸಂಖ್ಯೆ ಇದೆ! ಅಂದರೆ, 70 ಕೋಟಿ ಜನರು ಚೀನಾದಲ್ಲಿ ಕ್ರಿಯಾಶೀಲವಾಗಿ ಇಂಟರ್‌ನೆಟ್ ಬಳಸುತ್ತಿದ್ದಾರೆ.ಅಂದರೆ, ಅಮೆರಿಕದ ಒಟ್ಟು ಜನಸಂಖ್ಯೆಯ (32 ಕೋಟಿ) ದುಪ್ಪಟ್ಟು ಭಾಗ.ಭಾರತದಲ್ಲಿನ 125 ಕೋಟಿ ಜನಸಂಖ್ಯೆಯಲ್ಲಿ ಸುಮಾರು 40 ಕೋಟಿ ನೆಟಿಜೆನ್‌ಗಳಿದ್ದಾರೆ. ಅಮೆರಿಕದಲ್ಲಿ ಈ ಸಂಖ್ಯೆ 28 ಕೋಟಿ ಇದೆ. ತದನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್ (10.97 ಕೋಟಿ), ಬ್ರೆಝಿಲ್ (10.37 ಕೋಟಿ), ರಷ್ಯಾ (8.7 ಕೋಟಿ), ಇಂಡೋನೇಶಿಯಾ (7.8 ಕೋಟಿ), ಜರ್ಮನಿ (6.8 ಕೋಟಿ), ನೈಜೀರಿಯ (6.5 ಕೋಟಿ), ಇಂಗ್ಲೆಂಡ್ (5.6 ಕೋಟಿ) ಮತ್ತು ಫ್ರಾನ್ಸ್ (5.4 ಕೋಟಿ) ಇವೆ. ಯೂರೋಪಿನ ಹಲವು ದೇಶಗಳ ನೆಟಿಜೆನ್‌ಗಳನ್ನು ಒಟ್ಟು ಸೇರಿಸಿದರೂ ಚೀನಾದ ನೆಟಿಜೆನ್ ಸಂಖ್ಯೆಯ ಮುಂದೇ ಏನೇನೂ ಅಲ್ಲ.
ವಿಶ್ವದಲ್ಲಿ ದೇಶವೊಂದರ ಪ್ರಾಬಲ್ಯ ಆ ದೇಶ ಹೊಂದಿರುವ ಜನಸಂಖ್ಯೆ, ನೆಟಿಜೆನ್‌ಗಳ ಸಂಖ್ಯೆ, ಮಿಲಿಟರಿ ಗಾತ್ರ, ಪ್ರದೇಶದ ಗಾತ್ರ, ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿ, ಆರ್ಥಿಕತೆ ಮುಂತಾದ ವಿಷಯಗಳನ್ನು ಆಧರಿಸಿರುವುದರಿಂದ ಚೀನಾ ಈ ಎಲ್ಲ ವಿಷಯಗಳಲ್ಲೂ ಬಹಳ ಮುಂದಿದ್ದು ವಿಶ್ವದ ಸೂಪರ್ ಪವರ್ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ .xsangeetax@gmail.com

Writer - ಸಂಗೀತ

contributor

Editor - ಸಂಗೀತ

contributor

Similar News