‘ತರ್ಲೆ ತಿಮ್ಮ’ನ ಸಾಮಾಜಿಕ ಮುಖಾಮುಖಿ

Update: 2016-01-23 18:11 GMT

 ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ಅದರದೇ ಆದ ಇತಿಹಾಸವಿದೆ. ಲಲಿತ ಪ್ರಬಂಧಗಳಿಗೆ ಅದರದೇ ಆದ ಓದುಗ ಬಳಗವೂ ಇದೆ. ಎ.ಎನ್. ಮೂರ್ತಿ ರಾಯರಿಂದ ಹಿಡಿದು, ರಾಜಕೀಯ ವಿಡಂಬನೆಗಳ ಮೂಲಕ ಹೆಸರಾಗಿರುವ ಬಿ. ಚಂದ್ರೇಗೌಡರವರೆಗೆ, ಈ ಕ್ಷೇತ್ರವನ್ನು ಬೇರೆ ಬೇರೆ ಲೇಖಕರು ಬೇರೆ ಬೇರೆ ರೀತಿಯಲ್ಲಿ ಪ್ರಯೋಗಕ್ಕೆ ಒಡ್ಡಿದ್ದಾರೆ. ಕೆಲವರು ಇದನ್ನು ಬರಿದೆ ಹಾಸ್ಯಕ್ಕಷ್ಟೇ ಬಳಸಿಕೊಂಡರೆ, ಹಲವರು ಹಾಸ್ಯದ ಜೊತೆಗೇ ಬದುಕಿನ ಅಗಾಧತೆಯನ್ನು ತೆರೆದುಕೊಟ್ಟಿದ್ದಾರೆ. ರಾಜಕೀಯ ವಿಡನಂಬನೆಗಳ ಮೂಲಕವೂ ಈ ಕ್ಷೇತ್ರವನ್ನು ದುಡಿಸಿಕೊಂಡವರಿದ್ದಾರೆ. ಇಂದಿಗೂ ಲಲಿತ ಪ್ರಬಂಧಗಳ ಕೆಲವು ಪಾತ್ರಗಳು ಜೀವಂತ ಪಾತ್ರಗಳೋ ಎಂಬಂತೆ ನಮ್ಮಲ್ಲಿ ಉಳಿದುಕೊಂಡಿವೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಬೀಚಿ ಅವರ ತಿಮ್ಮ. ಅಜಮೀರ ನಂದಾಪುರ ಅವರು ತಿಮ್ಮನನ್ನೇ ನಾಯಕನನ್ನಾಗಿಸಿ, ಬರೆದ ಲಲಿತ ಪ್ರಬಂಧಗಳ ಸಂಕಲನ ‘ತರ್ಲೆ ತಿಮ್ಮನ ಬಿ. ಫಾರ್ಮ್’ ಇಲ್ಲಿದೆ. ತರ್ಲೆ ತಿಮ್ಮನ ಮೂಲಕ ನಗೆಗೆ ಊನವಾಗದಂತೆ ಸಮಾಜದ ಹತ್ತು ಹಲವು ಕಪ್ಪು ಬಿಳುಪು ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸಿದ್ದಾರೆ. ಸಮಾಜದ ಬೇರೆ ಬೇರೆ ಸಮಸ್ಯೆಗಳನ್ನು ಲೇಖಕರು ಇವನ ಮೂಲಕ ಚರ್ಚಿಸುತ್ತಾರೆ.. ಗಂಗಾವತಿ ಆಸುಪಾಸಿನ ದೈನಂದಿನ ದೇಸಿ ಭಾಷೆಯ ಸೊಗಸು ಈ ಲಲಿತ ಪ್ರಬಂಧಗಳ ಹೆಗ್ಗಳಿಕೆ. ಸಮಾಜದ ಆಷಾಢಭೂತಿತಮ, ರಾಜಕೀಯದ ಮುಖವಾಡಗಳು ಸಹಿತ ಬೇರೆ ಬೇರೆ ವಿಷಯಗಳನ್ನು ತರ್ಲೆ ತಿಮ್ಮ ಇಲ್ಲಿ ಮುಖಾಮುಖಿಯಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧಗಳೇ ಇಲ್ಲ ಎನ್ನುವಾಗ ಆ ಖಾಲಿ ಜಾಗವನ್ನು ಈ ಕೃತಿ ತುಂಬುತ್ತದೆ. ಶರ್ಮಿಳಾ ಪ್ರಕಾಶನ ಕನಕಗಿರಿ ಹೊರತಂದಿರುವ ಈ ಕೃತಿಯ ಮುಖಬೆಲೆ 170 ರೂ. ಆಸಕ್ತರು 9449705672 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News