ಮಹಿಳಾ ದೌರ್ಜನ್ಯವನ್ನು ಸಮಗ್ರವಾಗಿ ಚರ್ಚಿಸುವ ಕೃತಿ

Update: 2016-01-26 17:47 GMT

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ತೀಚೆಗೆ ಸಾರ್ವಜನಿಕ ಚರ್ಚೆಯ ರೂಪವನ್ನು ಪಡೆದಿದೆ. ಈ ಚರ್ಚೆಯ ಭರದಲ್ಲಿ ಕುಟುಂಬದೊಳಗೆ ಮಹಿಳೆಯರು ಬೇರೆ ಬೇರೆ ರೂಪಗಳಲ್ಲಿ ಎದುರಿಸುತ್ತಿರುವ ದೌರ್ಜನ್ಯ, ಶೋಷಣೆಗಳು ಬದಿಗೆ ಸರಿದಿವೆ. ಮಹಿಳೆಯ ಮೇಲಿನ ದೌರ್ಜನ್ಯದ ಮೇಲ್ಮುಖ ಚರ್ಚೆಗಳು ನಡೆಯುತ್ತವೆಯೇ ಹೊರತು, ಅದರ ತಾಯಿ ಬೇರನ್ನು ಗುರುತಿಸಿ ನಿವಾರಿಸುವ ಕೆಲಸ ನಡೆಯುತ್ತಿಲ್ಲ. ನ್ಯಾ. ಎಚ್. ಎನ್. ನಾಗಮೋಹನದಾಸ್ ಅವರು ಬರೆದಿರುವ ‘ಮಹಿಳಾ ಅಸಮಾನತೆ’ ಕೃತಿ ಮಹಿಳೆಯ ಮೇಲೆ ಬೇರೆ ಬೇರೆ ಕ್ಷೇತ್ರಗಳಲ್ಲಿ, ಸಂದರ್ಭಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ಅಧ್ಯಯನಾತ್ಮಕವಾಗಿ ವಿಶ್ಲೇಷಿಸುತ್ತದೆ. ಅಸಮಾನತೆಯ ಮೂಲವನ್ನು ಹುಡುಕಿಕೊಂಡು ಹೋಗುವ ಕೃತಿ, ಹೆಣ್ಣಿನ ಮೂಲಕ ಜೀವ ಪಡೆದ ಇತಿಹಾಸದ ಬೇರುಗಳನ್ನು ಅರಸಿಕೊಂಡು ಹೋಗುತ್ತದೆ. ಈಜಿಪ್ಟ್‌ನಿಂದ ಹಿಡಿದು, ಪಾಕಿಸ್ತಾನದ ಮಾಂಟೆಗೊಮರಿ, ಗ್ರೀಕ್ ನಾಗರಿಕತೆ, ರೋಮನ್ ನಾಗರಿಕತೆ ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಮಹಿಳೆಯ ಅಸಮಾನತೆ ರೂಪು ಪಡೆದದ್ದು ಮತ್ತು ಅಂದು ಒಂದೇ ಧಾರೆಯಾಗಿ ಕೂಡಿಕೊಂಡ ಕತೆಯನ್ನು ಇತಿಹಾಸದ ದಾಖಲೆಗಳ ಜೊತೆಗೆ ಇಡುತ್ತದೆ ಈ ಕೃತಿ. ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಬೇರೆ ಬೇರೆ ಧರ್ಮಗಳು ಕಂಡ ರೀತಿ, ಬೇರೆ ಬೇರೆ ದೇಶಗಳ ಕಾನೂನುಗಳು ಕಂಡ ರೀತಿಗಳು ಇಲ್ಲಿ ಚರ್ಚೆಗೊಳಗಾಗುತ್ತವೆ. ಹಾಗೆಯೇ ಬೇರೆ ಬೇರೆ ದೇಶಗಳಲ್ಲಿ ಮಹಿಳಾ ಚಳವಳಿ ಹೇಗೆ ಬೆಳೆಯಿತು ಎನ್ನುವುದನ್ನೂ ಈ ಕೃತಿ ವಿವರಿಸುತ್ತದೆ. ಅಂತೆಯೇ ಆಧುನಿಕ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಅಂಕಿ ಸಂಖ್ಯೆಗಳ ಜೊತೆಗೆ ಈ ಕೃತಿ ಸಮಸ್ಯೆಯನ್ನು ಚರ್ಚಿಸುತ್ತದೆ. ಸುಮಾರು 130 ಪುಟಗಳ ಕೃತಿ ಇದಾಗಿದ್ದರು, ಮಹಿಳೆಯ ಮೇಲಿನ ದೌರ್ಜನ್ಯವನ್ನು ಸಮಗ್ರವಾಗಿ ಗ್ರಹಿಸುವ ಪ್ರಯತ್ನವನ್ನು ಇದು ಮಾಡುತ್ತದೆ. ಮಹಿಳೆಯರ ಕುರಿತಂತೆ ಅಧ್ಯಯನ ಮಾಡುವವರಿಗೆ ಇದೊಂದು ಪುಟ್ಟ ಕೈಪಿಡಿಯಾಗಿ ಕೆಲಸ ಮಾಡುವುದರಲ್ಲಿ ಸಂಶಯವಿಲ್ಲ.

ಚಿಂತನ ಪುಸ್ತಕ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂಪಾಯಿ. ಆಸಕ್ತರು 90360 82005 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News