ದಮನಿತರಿಗೆ ದೀಪವಾದವರು
‘‘ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ.’’
-ದಲಿತೋದ್ಧಾರಕ ಕುದ್ಮುಲ್ ರಂಗರಾಯರ ನುಡಿಗಳಿವು. ಮಂಗಳೂರಿನ ನಂದಿಗುಡ್ಡೆಯಲ್ಲಿರುವ ಅವರ ಸಮಾಧಿಯ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಶತಮಾನದ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಂಗರಾಯರು ದಲಿತರ ಏಳಿಗೆಗಾಗಿ ಅವಿರತ ದುಡಿದವರು.
ಕೇರಳದ ಕಾಸರಗೋಡಿನ ಕುದ್ಮುಲ್ ಎಂಬ ಊರಿನಲ್ಲಿ ಜಮೀನುದಾರಿ ಕುಟುಂಬದ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಲದಲ್ಲಿ ದೇವಪ್ಪಯ್ಯ ಮತ್ತು ಗೌರಿ ದಂಪತಿಗೆ 29.06.1859ರಂದು ಜನಿಸಿದ ಕುದ್ಮುಲ್ ರಂಗರಾಯರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವರು.
ಕಾಸರಗೋಡಿನಿಂದ ಮಂಗಳೂರಿಗೆ ಬಂದು ಶಿಕ್ಷಕ ವೃತ್ತಿಯನ್ನು ಕೈಗೊಂಡರು. ನಂತರ, ಪ್ಲೀಡರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯ ಆರಂಭ. ಇವರ ಫಿರ್ಯಾದುದಾರರು ಬಹುತೇಕ ಬಡವರು. ಅದಕ್ಕಾಗಿ ಬಡವರ ವಕೀಲರು ಎಂಬ ಜನಜನಿತ ಬಿರುದು. ಮೇಲ್ಜಾತಿಯ ವ್ಯಕ್ತಿಯಿಂದ ಕೆಳಜಾತಿಯ ಹೆಣ್ಣೊಬ್ಬಳಿಗೆ ಅನ್ಯಾಯವಾದಾಗ ರಂಗರಾವ್ ಆ ಅಬಲೆಯ ಪರ ವಕೀಲಿ ವಹಿಸಿ ನ್ಯಾಯ ದೊರಕಿಸಿಕೊಟ್ಟರು. ಇದನ್ನು ಸವರ್ಣೀಯರು ಸಹಿಸಲಿಲ್ಲ. ನಾಲ್ಕನೆ ತರಗತಿ ಓದಿದ ದಲಿತ ಬೆಂದೂರು ಬಾಬುರವರು 1887-1888ರಲ್ಲಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಗುಮಾಸ್ತನ ಹುದ್ದೆಗೆ ಸೇರಿಕೊಂಡರು.
ಆಗಿನ ಕಾಲದಲ್ಲಿ ದಲಿತರಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಸರಕಾರಿ ನೌಕರಿಯಂತೂ ಸಾಧ್ಯವಿರಲಿಲ್ಲ. ಮೂಲಭೂತವಾದಿ ಸವರ್ಣೀಯರು ಬೆಂದೂರು ಬಾಬು ನೇಮಕಾತಿಯ ವಿರುದ್ಧ ಪ್ರತಿಭಟಿಸಿದರು. ಇದರಿಂದ ಬ್ರಿಟಿಷ್ ನ್ಯಾಯಾಧೀಶರ ವರ್ಗಾವಣೆಯಾಯಿತು. ಬೆಂದೂರು ಬಾಬುರವರಿಗೆ ಆಗಬಹುದಾಗಿದ್ದ ಹಿಂಸೆ ತಡೆಯಲು ಬ್ರಿಟಿಷ್ ನ್ಯಾಯಾಧೀಶರು ರಂಗರಾಯರೊಂದಿಗೆ ಮಾತನಾಡಿ, ಬಾಬುರವರ ನೇಮಕಾತಿಯನ್ನು ರದ್ದುಗೊಳಿಸಿದರು. ಈ ಘಟನೆಯಿಂದ ನೊಂದ ನ್ಯಾಯಾಧೀಶರು ಅಸ್ಪಶ್ಯರಿಗೆ ಉತ್ತಮ ಶಿಕ್ಷಣ ಕೊಡಲು ರಂಗರಾಯರನ್ನು ಕೋರಿಕೊಂಡರು. ಇದು ರಂಗರಾಯರ ಬದುಕಿನ ಮಹತ್ತರ ತಿರುವು. ಅಂದಿನಿಂದ ವಕೀಲಿವೃತ್ತಿ ತ್ಯಜಿಸಿ ದಲಿತರ ಏಳಿಗೆಯಲ್ಲಿ ತೊಡಗಿಸಿಕೊಂಡರು. ರಾಜಾರಾಮ್ ಮೋಹನರಾಯ್ ಸ್ಥಾಪಿಸಿದ ಬ್ರಹ್ಮ ಸಮಾಜದ ಬೋಧನೆಗಳು ಇವರ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದವು.
ಅಸ್ಪೃಶ್ಯತೆ, ಮೂಢನಂಬಿಕೆ, ಬಡತನ, ಬಾಲ್ಯವಿವಾಹ, ವಿಧವೆಯರ ಸ್ಥಿತಿಗತಿಗಳು ಅವರ ಮನ ಕಲಕಿದವು. ಉಳ್ಳಾಲದ ರಘುನಾಥಯ್ಯನವರೊಂದಿಗೆ ಸೇರಿ ಮಂಗಳೂರಿನಲ್ಲಿ ಬ್ರಹ್ಮ ಸಮಾಜದ ಘಟಕವನ್ನು ಸ್ಥಾಪಿಸಿದರು. ತಮ್ಮದೇ ಜಾತಿಯವರಿಂದ ರಂಗರಾಯರ ಕೆಲಸಕಾರ್ಯಗಳಿಗೆ ಅಡ್ಡಿ ಆತಂಕಗಳು ಬಂದವು. ದಲಿತೋದ್ಧಾರದ ಹಾದಿಯಲ್ಲಿ ಅವರದು ದೃಢ ಮನಸ್ಸು. ಪತ್ನಿ ರುಕ್ಮಿಣಿ ಅಮ್ಮನವರು ರಂಗರಾಯರ ಎಲ್ಲ ಕೆಲಸಗಳನ್ನು ಬೆಂಬಲಿಸಿದರು.
ಕುದ್ಮುಲ್ ರಂಗರಾಯರು ಕೈಗೊಂಡ ಪ್ರಮುಖ ದಲಿತೋದ್ಧಾರದ ಕಾರ್ಯಗಳು
1. ದಲಿತರ ಶಿಕ್ಷಣಕ್ಕಾಗಿ 1892ರ ನಂತರ ಮಂಗಳೂರಿನ ಕಂಕನಾಡಿ, ಉಡುಪಿ, ಮುಲ್ಕಿ, ಉಳ್ಳಾಲ, ಬನ್ನಂಜೆ, ಬೋಳೂರು, ಬಾಬುಗುಡ್ಡೆ, ನೇಜಾರು, ದಡ್ಡಲ್ ಕಾಡು, ಅತ್ತಾವರ ಮತ್ತಿತರ ಕಡೆ ಪಂಚಮ ಶಾಲೆಗಳನ್ನು ತೆರೆದರು. ಸಂಪ್ರದಾಯವಾದಿ ಸವರ್ಣೀಯರು ಶಿಕ್ಷಕರಾಗಲು ಒಪ್ಪದಿದ್ದಾಗ ಕ್ರಿಶ್ಚಿಯನ್ನರನ್ನು ಶಿಕ್ಷಕರನ್ನಾಗಿ ನೇಮಿಸಲಾಯಿತು.
2. ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಧ್ಯಾಹ್ನದ ಊಟ ಕೊಡಲಾಯಿತು. ದಿನಕ್ಕೆ ಎರಡರಿಂದ ನಾಲ್ಕು ಪೈಸೆಗಳ ಉತ್ತೇಜನ ಹಣವೂ ಪ್ರತಿ ವಿದ್ಯಾರ್ಥಿಗೆ ಸಿಕ್ಕುತ್ತಿತ್ತು.
3. ಶಾಲೆಗಳಲ್ಲಿ ಬಟ್ಟೆ ಹೊಲಿಯುವಿಕೆ, ಬಡಗಿ, ತೋಟಗಾರಿಕೆ, ರೇಷ್ಮೆ ಕೃಷಿ ಕುರಿತು ತರಬೇತಿಯನ್ನು ಕೊಡಲಾಯಿತು.
4. ಎಂಟನೆ ತರಗತಿಯವರೆಗೆ ಕಲಿತ ಅಸ್ಪೃಶ್ಯ ವಿದ್ಯಾರ್ಥಿಗಳು ಮುಂದೆ ಮಂಗಳೂರಿನ ಸರಕಾರಿ ಕಾಲೇಜಿಗೆ ಸೇರಲು ಅಗತ್ಯ ಕ್ರಮ ಕೈಗೊಂಡರು.
5. ಉಡುಪಿ ಮತ್ತು ಪುತ್ತೂರಿನ ಕೊರಗ ಜನಾಂಗದವರಿಗೆ ಸರಕಾರಿ ಭೂಮಿ ಹಂಚಿಕೆ ಮಾಡಿಸಿದರು.
6. ದಲಿತರಿಗೆ ಉಚಿತವಾಗಿ ವಸತಿ ನಿವೇಶನಗಳನ್ನು ಹಂಚಿದರು.
7. ದಲಿತರಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಿಸಿದರು.
8. ಜಮೀನುದಾರರಿಂದ ಭೂದಾನ ಮಾಡಿಸಿ ಉಡುಪಿ, ಬನ್ನಂಜೆ, ಉದ್ಯಾವರ, ಪಣಂಬೂರು, ತಣ್ಣೀರುಬಾವಿ, ಬೈಕಂಪಾಡಿ ಮುಂತಾದೆಡೆ ದಲಿತರಿಗೆ ಹಂಚಿದರು.
9. ನೆಂಟರಾದ ಡಾ. ಬೆನೆಗಲ್ ರಾಘವೇಂದ್ರರಾವ್ ಅವರು ಉಡುಪಿಯಲ್ಲಿ ದಾನವಾಗಿ ಕೊಟ್ಟ ಏಳು ಎಕರೆ ಭೂಮಿಯನ್ನು ಅಸ್ಪೃಶ್ಯರ ವಸತಿಗಾಗಿ ಹಂಚಿದರು.
10. ಮಂಗಳೂರಿನ ಶೇಡಿಗುಡ್ಡೆಯಲ್ಲಿ ಹತ್ತು ಕೊರಗ ಕುಟುಂಬದವರು ತಮ್ಮ ಕರಕುಶಲ ಕಲೆಯ ವಸ್ತುಗಳ ತಯಾರಿಕೆಗೆ ಅನುಕೂಲವಾಗುವಂತೆ ಆರ್ಥಿಕ ಸೌಲಭ್ಯ ಒದಗಿಸಿದರು.
11. ದಕ್ಷಿಣ ಕನ್ನಡ ಜಿಲ್ಲೆಯ ದಲಿತರ ಜೀತವಿಮೋಚನೆಗಾಗಿ ದುಡಿದರು.
12. ಮಂಗಳೂರು ಪುರಸಭೆಯಲ್ಲಿ ಕೊರಗರಿಗೆ ನೌಕರಿ ಕೊಡಿಸಿದರು.
13. ಉಳ್ಳಾಲದ ರಘುನಾಥಯ್ಯನವರೊಂದಿಗೆ ಸೇರಿ 1897ರಲ್ಲಿ ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’ (ಡಿಸಿಎಂ) ಅನ್ನು ಮಂಗಳೂರಿನಲ್ಲಿ ಸ್ಥಾಪಿಸಿದರು. ಇದರ ಉದ್ದೇಶವು ದಲಿತರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವುದಾಗಿತ್ತು. ‘ದೀನೋದ್ಧಾರಣಮ್, ದೇಶೋದ್ಧಾರಣಮ್’ ಎನ್ನುವುದು ಡಿಸಿಎಂನ ಘೋಷವಾಕ್ಯವಾಯಿತು.
14. ಮಂಗಳೂರಿನ ಕಾಪಿಕ್ಕಾಡ್ ಎಂಬಲ್ಲಿ ದಲಿತರಿಗಾಗಿ ಸಮುದಾಯ ಭವನದ ನಿರ್ಮಾಣ.
15. ಜಿಲ್ಲಾ ಮಂಡಳಿ ಮತ್ತು ಮಂಗಳೂರು ಪುರಸಭೆಯಲ್ಲಿ ದಲಿತರಿಗೆ ರಾಜಕೀಯ ಮೀಸಲಾತಿ ಸೌಲಭ್ಯ ಒದಗಿಸುವಲ್ಲಿ ಸಫಲ. ಜಿಲ್ಲಾ ಮಂಡಳಿಗೆ ಅಂಗಾರ ಮಾಸ್ತರ್ ಮತ್ತು ಮಂಗಳೂರು ಪುರಸಭೆಗೆ ಗೋವಿಂದ ಮಾಸ್ತರ್ ಅಸ್ಪೃಶ್ಯರ ಪ್ರತಿನಿಧಿಗಳಾಗಿ ಆಯ್ಕೆ.
16. ಶೇಡಿಗುಡ್ಡೆಯಲ್ಲಿ ಆದಿದ್ರಾವಿಡ ಸಹಕಾರ ಸಂಘದ ಸ್ಥಾಪನೆ.
17. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ. ಅಸ್ಪೃಶ್ಯರ ಒಳಪಂಗಡಗಳಲ್ಲಿ ಅಂತರ ಪಂಗಡ ಮದುವೆಗೆ ಪ್ರೋತ್ಸಾಹ.
18. ದೇವದಾಸಿ ಮತ್ತು ಎಲ್ಲ ಜಾತಿಯ ವಿಧವೆಯರಿಗಾಗಿ ಆಶ್ರಮಗಳ ಸ್ಥಾಪನೆ. ಅವರ ವಿವಾಹಕ್ಕೆ ಪ್ರೋತ್ಸಾಹ.
19. ದಲಿತ ವಿದ್ಯಾರ್ಥಿನಿಯರಿಗಾಗಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿಲಯದ ಸ್ಥಾಪನೆ. ಕೊಡಿಯಾಲ್ ಬೈಲ್‌ನಲ್ಲಿ ಅವರು ಸ್ಥಾಪಿಸಿದ ವಿದ್ಯಾರ್ಥಿನಿ ನಿಲಯ ಸಮಾಜ ಕಲ್ಯಾಣ ಇಲಾಖೆಯಿಂದ ಕುದ್ಮುಲ್ ರಂಗರಾವ್ ವಿದ್ಯಾರ್ಥಿನಿ ನಿಲಯ ಎಂಬ ಹೆಸರಿನಲ್ಲಿ ನಡೆಯುತ್ತಿದೆ.
ರಂಗರಾಯರು ಸ್ಥಾಪಿಸಿದ ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’ ದೇಶ ವಿದೇಶಗಳಲ್ಲಿ ಹೆಸರು ಮಾಡಿತು. ರವೀಂದ್ರನಾಥ ಟಾಗೂರ್, ದೀನಬಂಧು ಆಂಡ್ರ್ಯೂಸ್, ಡಾ. ಅನಿಬೆಸಂಟ್, ಮಹಾತ್ಮಾ ಗಾಂಧೀಜಿ, ಗೋಪಾಲ ಕೃಷ್ಣ ಗೋಖಲೆ, ಠಕ್ಕರ್ ಬಾಪಾ, ಬ್ರಿಟಿಷ್ ಕೈಗಾರಿಕೋದ್ಯಮಿ ಮೋರ್ಗನ್ ಡೋರ್, ಎಸ್. ಕೆ. ದೇವಧರ್, ಶ್ರೀನಿವಾಸ ಶಾಸ್ತ್ರಿ, ಡಾ. ಕಾರ್ನಾಡ್, ಕಾರ್ನಾಡ್ ಸದಾಶಿವ ರಾವ್ ಇನ್ನೂ ಮುಂತಾದವರು ಡಿಸಿಎಂನ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಅದರ ಬೆಳವಣಿಗೆಯಲ್ಲಿ ಸಹಕರಿಸಿದರು. ಮಹಾತ್ಮ ಗಾಂಧಿಯವರು 1934ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿರುವ ಕಚೇರಿಗೆ ಆಗಮಿಸಿದ್ದರು.
ಶೋಷಿತ ಜನವರ್ಗಗಳ ಏಳಿಗೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ಕುದ್ಮುಲ್ ರಂಗರಾಯರೇ ನನಗೆ ಮಾರ್ಗದರ್ಶಿಗಳು ಮತ್ತು ಪ್ರೇರಕರು ಎಂದರು ಗಾಂಧೀಜಿಯವರು. ಅವರ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡ ಬ್ರಿಟಿಷ್ ಸರಕಾರವು ಅವರಿಗೆ ‘ರಾವ್ ಸಾಹೇಬ್’ ಎಂಬ ಬಿರುದು ಕೊಟ್ಟಿತು. ರಂಗರಾಯರು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಇಪ್ಪತ್ತೊಂದನೆ ವಯಸ್ಸಿಗೆ ವಿಧವೆಯಾದ, ತಮ್ಮ ಮಗಳಾದ ರಾಧಾಬಾಯಿ (1891-1960)ಯವರನ್ನು ಸೇಲಂ ಜಿಲ್ಲೆಯ ಕುಮಾರಮಂಗಲಂನ ಜಮೀನುದಾರರಾದ ಪಿ. ಸುಬ್ಬರಾಯನ್ ಅವರೊಂದಿಗೆ ಮದುವೆ ಮಾಡಿಸಿದರು. ಮುಂದೆ ರಾಧಾಬಾಯಿಯವರು ಮಹಿಳಾ ಹೋರಾಟಗಾರ್ತಿಯಾಗಿ 1930 ಮತ್ತು 1932ರ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದರು. 1938ರಲ್ಲಿ ರಾಜ್ಯ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. ಸುಬ್ಬರಾಯನ್ ರಾಧಾಬಾಯಿ ದಂಪತಿಯ ಮಗನಾದ ಮೋಹನ ಕುಮಾರಮಂಗಲಂ ಭಾರತ ಸರಕಾರದ ಮಾಜಿ ಮಂತ್ರಿಗಳು (1971 ರಿಂದ 1973). ಇನ್ನೊಬ್ಬ ಮಗ ಪ್ರಭಾಕರ ಕುಮಾರಮಂಗಲಂ 1967ರಿಂದ 1970ರವರೆಗೆ ಜನರಲ್ ಹುದ್ದೆಯಲ್ಲಿ ಭಾರತೀಯ ಸೇನೆಯಲ್ಲಿದ್ದರು. ರಾಧಾಬಾಯಿ ದಂಪತಿಯ ಮೊಮ್ಮಗ ರಂಗರಾಜನ್ ಕುಮಾರಮಂಗಲಂ ಅವರೂ ಕೂಡ ಪಿ.ವಿ.ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರಿಮಂಡಲದಲ್ಲಿದ್ದರು. ಅವರ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ಕಾರಿನಲ್ಲಿ ಓಡಾಡುವ ದಲಿತಾಭ್ಯುದಯದ ರಂಗರಾಯರ ಆಶಯ ಆ ಕಾಲಕ್ಕೆ ಈಡೇರಲಿಲ್ಲ.
ಅಂದಿನ ತೀವ್ರತರದ ಸಾಮಾಜಿಕ ಅಸಮಾನತೆ, ಬದಲಾವಣೆಗೆ ಶೋಷಿತರು ಒಗ್ಗಿಕೊಳ್ಳದಿದ್ದುದು, ಯಜಮಾನರ ಹಟ್ಟಿಗಳಿಗೆ ಅಂಟಿಕೊಂಡಿದ್ದು-ಅಂಜಿಕೊಂಡಿದ್ದು, ವೈಜ್ಞಾನಿಕ ಯುಗಕ್ಕೆ ಇಡೀ ಜಗತ್ತು ಆಗ ತಾನೆ ಅಂಬೆಗಾಲಿಡುತ್ತಿದ್ದುದು, ದೇಶ ಅಭಿವೃದ್ಧಿಯ ಪಥದಲ್ಲಿ ಇಲ್ಲದಿದ್ದುದು, ಅದಕ್ಕೆ ಕಾರಣವಿರಬಹುದು. ಪಂಚಮ ಶಾಲೆಗಳಲ್ಲಿ ಓದಿ ಅಲ್ಲಿಯೇ ಶಿಕ್ಷಕರಾದ ಪ್ರಮುಖ ಅಸ್ಪೃಶ್ಯ ವ್ಯಕ್ತಿಗಳೆಂದರೆ, ಮುಂಡಪ್ಪಮಾಸ್ತರ್, ಬೆಂದೂರು ಬಾಬು ಮಾಸ್ತರ್, ಬ್ಯಾರಿಪಲ್ಲ ಅಂಗಾರ ಮಾಸ್ತರ್, ಪುಟ್ಟ ಮಾಸ್ತರ್, ಬಸವ ಮಾಸ್ತರ್, ಕಾಪಿಕ್ಕಾಡ್ ಪದ್ದು ಮಾಸ್ತರ್, ಗುರುವ ಮಾಸ್ತರ್, ಜೆ. ಬಾಬು ಮಾಸ್ತರ್, ಕೊರಗ ಮಾಸ್ತರ್, ಯು. ಕೋಟಿ ಮಾಸ್ತರ್ ಮತ್ತು ಗೋವಿಂದ ಮಾಸ್ತರ್. ಅವರ ಗಂಡು ಮಕ್ಕಳಾದ ಸಂಜೀವ ರಾವ್ (1892 -1918) ಮತ್ತು ಅಮೃತರಾವ್ (1897-1930) ಅವರಿಗೆ ರಂಗರಾಯರು ಶಿಕ್ಷಣ ಕೊಡಿಸಿದ್ದು ಬಿಟ್ಟರೆ ಆಸ್ತಿ ಮಾಡಲಿಲ್ಲ. ಇದು ಅವರ ನಿಸ್ವಾರ್ಥ ಸೇವೆಯ ದ್ಯೋತಕ. ಬದುಕಿನ ಅಂತಿಮ ದಿನಗಳಲ್ಲಿ ರಂಗರಾಯರು ಬ್ರಹ್ಮಸಮಾಜದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ನಿತ್ಯ ದೇವರಧ್ಯಾನ ಮಾಡಿದರು. ಶೋಷಿತರ ಸೇವೆಯಲ್ಲವರು ದೈವತ್ವವನ್ನು ಕಂಡವರು.
1924ರ ಹೊತ್ತಿಗೆ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. 1927ರಲ್ಲಿ ದಿಲ್ಲಿಯಿಂದ ಆಗಮಿಸಿದ ಆರ್ಯ ಸಮಾಜದ ಸುವಿಚರಣಾನಂದ ಸ್ವಾಮೀಜಿಯವರಿಂದ ಸನ್ಯಾಸ ಸ್ವೀಕರಿಸಿ ಸ್ವಾಮಿ ಈಶ್ವರಾನಂದ ಎಂಬ ನಾಮಾಂಕಿತರಾದರು. ಕೊನೆಯ ದಿನಗಳನ್ನು ಹಿರಿಯ ಮಗಳಾದ ಲಲಿತಾಬಾಯಿಯವರ ಮನೆಯಲ್ಲಿ ಕಳೆದರು. ಹೃದಯದ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತ ಜನವರಿ 30, 1928ರಂದು ರಂಗರಾಯರನ್ನು ಸಾವಿನ ದವಡೆಗೆ ನೂಕಿತು. ಅಂದು ಮಂಗಳೂರಿನ ಕದ್ರಿಯ ಶಿವಬಾಗ್‌ನಲ್ಲಿರುವ ಮನೆಗೆ ಜನಸ್ತೋಮವೇ ಹರಿದು ಬಂದಿತು. ಅಳಿಯ ಸುಬ್ಬಣ್ಣ ರಾವ್ ಅವರು ರಂಗರಾಯರ ಉಯಿಲಿನಲ್ಲಿ ಬರೆದಿದ್ದಂತೆ ಅಸ್ಪೃಶ್ಯರಾದ ತೋಟಿ ಜನಾಂಗದವರು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಅನುವು ಮಾಡಿಕೊಟ್ಟರು.
ಬೃಹತ್ ಮೆರವಣಿಗೆಯಲ್ಲಿ ಮೃತದೇಹವನ್ನು ಸ್ಮಶಾನಕ್ಕೆ ಒಯ್ಯಲಾಯಿತು. ರಂಗರಾಯರ ಸಮಾಜ ಸುಧಾರಣಾ ಕಾರ್ಯಗಳು ಎಲ್ಲರಿಗೂ ದಾರಿದೀಪವಾಗಬೇಕು. ಅವರ ಸಾಮಾಜಿಕ ಪರಿವರ್ತನೆಯ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಅವರ ಸ್ಮರಣೆ ಚಿರಾಯುವಾಗಿರಬೇಕು.