ಅಮೆರಿಕಾದಲ್ಲಿ ಮತದಾನ ಪ್ರಕ್ರಿಯೆ ಹೇಗೆ? ಹೇಗೆ ನಡೆಯಲಿದೆ ವಿಜೇತರ ಆಯ್ಕೆ?; ಇಲ್ಲಿದೆ ಮಾಹಿತಿ...

Update: 2024-11-05 12:52 GMT

ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ (Photo credit: AP)

ನವೆಂಬರ್ 5 ರಂದು ಅಮೆರಿಕಾದ ಮುಂದಿನ ಅಧ್ಯಕ್ಷರು ಯಾರೆಂಬುದು ನಿರ್ಧಾರವಾಗಲಿದೆ.

ಅಮೆರಿಕದ ನೂತನ ಅಧ್ಯಕ್ಷರು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರೊ ಅಥವಾ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರೊ ಎಂಬುದು ತಿಳಿಯಲು ಇನ್ನು ಕೆಲವೇ ಗಂಟೆಗಳ ಕಾಲ ಮಾತ್ರ ಬಾಕಿಯುಳಿದಿದೆ.

ಅನೇಕ ಅಮೆರಿಕನ್ನರು ಈಗಾಗಲೇ ವೈಯಕ್ತಿಕವಾಗಿ ಅಥವಾ ಮೇಲ್ ಮೂಲಕ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಇತರರು ಇಂದು (ಮಂಗಳವಾರ) ನೋಂದಾಯಿತ ಮತಗಟ್ಟೆಗಳಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸುವುದರಲ್ಲಿ ನಿರತರಾಗಿದ್ದಾರೆ.

ಅಮೆರಿಕಾದಲ್ಲಿ ಮತದಾನ ಪ್ರಕ್ರಿಯೆ ಹೇಗೆ? ಹೇಗೆ ವಿಜೇತರ ಆಯ್ಕೆ ಆಗಲಿದೆ ? ಅಲ್ಲಿ ಚುನಾವಣೆಯನ್ನು ಯಾರು ನಡೆಸುತ್ತಾರೆ?

ಭಾರತದಂತೆಯೇ ಅಮೆರಿಕದ ಚುನಾವಣಾ ಆಯೋಗ ಚುನಾವಣೆಗಳನ್ನು ನಡೆಸುತ್ತದೆ. ಭಾರತದ ಚುನಾವಣಾ ಆಯೋಗ ನಡೆಸುವಂತೆ ನೇರವಾಗಿ ಅದು ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಗಳನ್ನು ನಿಯಂತ್ರಿಸುವುದಿಲ್ಲ.

ಅಮೆರಿ­ಕದ 50 ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಅದು ನಿರ್ದೇಶನ ಮಾತ್ರ ನೀಡುತ್ತದೆ. ಆ ದೇಶದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಆಯಾ ಪ್ರಾಂತ್ಯದಲ್ಲಿಯೇ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ.

ಅಲ್ಲಿನ ಸಂವಿಧಾನದಲ್ಲಿ ದೇಶಕ್ಕೆ ಸಂಬಂಧಿಸಿದಂತೆ ಚುನಾವಣೆ ಹೇಗೆ ನಡೆಸಬೇಕು ಎಂಬ ಉಲ್ಲೇಖವೇ ಇಲ್ಲ. ಏಕೆಂದರೆ ಅವು ಸ್ಥಳೀಯ ಮಟ್ಟದಲ್ಲಿಯೇ ನಿಯಂತ್ರಿತವಾಗಿರುತ್ತವೆ. ಅಮೆರಿಕ ಕೇಂದ್ರೀಕೃತ ಚುನಾವಣಾ ವ್ಯವಸ್ಥೆಯನ್ನು ಹೊಂದಿಲ್ಲ.

ಭಾರತದಲ್ಲಿಯಂತೆ ಕೇಂದ್ರ ಚುನಾವಣಾ ಆಯೋಗ ದೇಣಿಗೆಗಳ ಮೇಲ್ವಿಚಾರಣೆ ಮತ್ತು ಅಧ್ಯಕ್ಷೀಯ ಪ್ರಚಾರಕ್ಕಾಗಿ ಸಾರ್ವಜನಿಕ ನಿಧಿ ಸೇರಿದಂತೆ ಪ್ರಚಾರ ಹಣಕಾಸು ಕಾನೂನುಗಳನ್ನು ಜಾರಿಗೊಳಿಸುತ್ತದೆ. ಚುನಾವಣೆಗಳನ್ನು ಪ್ರತಿ ರಾಜ್ಯದೊಳಗೆ ಸ್ಥಳೀಯ ಅಧಿಕಾರಿಗಳು ನಡೆಸುತ್ತಾರೆ.

ಈ ಅಧಿಕಾರಿಗಳು ಸಂವಿಧಾನದ ನಿಯಮಗಳಲ್ಲದೆ, ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಕಾನೂನುಗಳಿಗೆ ಬದ್ಧರಾಗಿರುತ್ತಾರೆ. ಹಾಗಾಗಿ ಚುನಾವಣಾ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. 2020ರಲ್ಲಿ 10,000ಕ್ಕೂ ಹೆಚ್ಚು ಸ್ಥಳೀಯ ಘಟಕಗಳು ಚುನಾವಣೆಗಳನ್ನು ನಿರ್ವಹಿಸಿದ್ದವು.

ಮತ ಚಲಾವಣೆ ಹೇಗೆ?

ಅಮೆರಿಕದಲ್ಲಿ ಆನ್‌ಲೈನ್ ಮತದಾನದ ವ್ಯವಸ್ಥೆಯನ್ನು ಇಲ್ಲ. ಪ್ರತಿ ಜಿಲ್ಲೆಯೊಳಗೆ ಮತದಾರರಿಗೆ ಮತದಾನದ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಈ ಸ್ಥಳಗಳು ಸಾಮಾನ್ಯವಾಗಿ ಸಾರ್ವಜನಿಕ ಕಟ್ಟಡಗಳಾಗಿರುತ್ತವೆ, ಉದಾಹರಣೆಗೆ ಸಮಾವೇಶ ಕೇಂದ್ರಗಳು, ಗ್ರಂಥಾಲಯಗಳು, ಶಾಲೆಗಳು ಮತ್ತು ಸಮುದಾಯ ಕೇಂದ್ರಗಳು. ಈ ಸ್ಥಳಗಳಲ್ಲಿ, ಮತದಾರರು ತಮ್ಮ ಮತಪತ್ರಗಳನ್ನು ಭರ್ತಿ ಮಾಡಲು ಖಾಸಗಿ ಮತಗಟ್ಟೆಗಳಿಗೆ ಪ್ರವೇಶಿಸುತ್ತಾರೆ.

ಮತಪತ್ರಗಳ ಬಳಕೆ

ಹೆಚ್ಚಿನ ಮತದಾರರು ಕೈಯಿಂದ ಗುರುತಿಸಲಾದ ಮತಪತ್ರಗಳೊಂದಿಗೆ ಮತ ಚಲಾಯಿಸುತ್ತಾರೆ. ಮತದಾರರು ತಮ್ಮ ಆದ್ಯತೆಯ ಅಭ್ಯರ್ಥಿಯ ಹೆಸರಿನ ಮುಂದಿನ ಖಾಲಿ ಅಂಡಾಕಾರ ಅಥವಾ ಚೌಕವನ್ನು ತುಂಬುತ್ತಾರೆ. ಫಿಲಡೆಲ್ಫಿಯಾ ಮೂಲದ ಪಕ್ಷೇತರ ಸಂಸ್ಥೆ ವೆರಿಫೈಡ್ ವೋಟಿಂಗ್ ಪ್ರಕಾರ, ಸುಮಾರು ಶೇ.70ರಷ್ಟು ನೋಂದಾಯಿತ ಮತದಾರರು ಕೈಯಿಂದ ಗುರುತು ಮಾಡಿದ ಕಾಗದದ ಮತಪತ್ರಗಳನ್ನು ಬಳಸುವ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ.

ಬಿಎಂಡಿ ಬಳಕೆ

ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿ ಮತದಾರರು ಮತಗಳನ್ನು ಡಿಜಿಟಲ್ ಸಾಧನದ ಮೂಲಕ ಚಲಾಯಿಸಲು ಅವಕಾಶವಿರುವ ಬ್ಯಾಲೆಟ್ ಗುರುತು ಸಾಧನಗಳನ್ನು (BMD) ಒದಗಿಸುತ್ತವೆ. ಸುಮಾರು ಶೇ.25ರಷ್ಟು ನೋಂದಾಯಿತ ಮತದಾರರು BMD ಗಳನ್ನು ಬಳಸುವ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ.

ವಿದ್ಯುನ್ಮಾನ ಮತದಾನ

ತೀರಾ ಕಡಿಮೆ ಸಂಖ್ಯೆಯ ಮತದಾರರು ನೇರ ರೆಕಾರ್ಡಿಂಗ್ ಎಲೆಕ್ಟ್ರಾನಿಕ್ (DRE) ಮತದಾನ ವ್ಯವಸ್ಥೆಯನ್ನು ಬಳಸಿಕೊಂಡು ಮತಗಳನ್ನು ಚಲಾಯಿಸುತ್ತಾರೆ. ಮತದಾರರು ತಮ್ಮ ಮತಗಳನ್ನು ಚಲಾಯಿಸಲು ಬಟನ್ ಅಥವಾ ಟಚ್‌ಸ್ಕ್ರೀನ್ ಅನ್ನು ಒತ್ತುತ್ತಾರೆ, ಅದು ನೇರವಾಗಿ ಕಂಪ್ಯೂಟರ್ ಸಿಸ್ಟಮ್‌ಗೆ ಹೋಗುತ್ತದೆ. ಕೆಲವು ಡಿಆರ್‌ಇ ವ್ಯವಸ್ಥೆಗಳು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಪ್ರಿಂಟರ್‌ಗೆ ಸಂಪರ್ಕಗೊಂಡಿವೆ, ಇದು ಕಂಪ್ಯೂಟರ್‌ನಲ್ಲಿ ತಮ್ಮ ಮತವನ್ನು ದಾಖಲಿಸುವ ಮೊದಲು ಮತದಾರರು ದೃಢೀಕರಿಸಬಹುದಾದ ಪ್ರತಿ ಮತದ ದಾಖಲೆಯನ್ನು ತೋರಿಸುತ್ತದೆ.

ಶೇ.5ರಷ್ಟು ನೋಂದಾಯಿತ ಮತದಾರರು DRE ಗಳನ್ನು ಬಳಸುವ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ.

ಈಗಾಗಲೇ ಮತ ಚಲಾಯಿಸಿರುವವರು ಎಷ್ಟು ಮಂದಿ?

ಎಲ್ಲಾ ರಾಜ್ಯಗಳು ಮತದಾರರಿಗೆ ಚುನಾವಣಾ ದಿನದ ಮೊದಲು ಮತ ಚಲಾಯಿಸಲು ಅವಕಾಶ ನೀಡುತ್ತವೆ. ಮೇಲ್-ಇನ್ ಮತಪತ್ರಗಳು ಆರಂಭಿಕ ಮತದಾನದ ಅತ್ಯಂತ ಸಾಮಾನ್ಯ ವಿಧಾನ. ಮೂರು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಚುನಾವಣಾ ದಿನದ ಮೊದಲು ವೈಯಕ್ತಿಕವಾಗಿ ಮತದಾನ ಮಾಡಲು ಅವಕಾಶ ನೀಡುತ್ತವೆ.

ಅಲಬಾಮಾದಲ್ಲಿ ಮೇಲ್-ಇನ್ ಮತಪತ್ರಗಳ ವ್ಯವಸ್ಥೆ ಇರುವುದರಿಂದ ಸೆಪ್ಟೆಂಬರ್ 11 ರಂದು ಆರಂಭಿಕ ಮತದಾನ ಪ್ರಾರಂಭವಾಯಿತು.

ಎಪಿ ನ್ಯೂಸ್‌ನಲ್ಲಿನ ಟ್ರ್ಯಾಕರ್ ಪ್ರಕಾರ, ರವಿವಾರದವರೆಗೆ 77,317,453 ಜನರು ಈಗಾಗಲೇ ತಮ್ಮ ಮತ ಚಲಾಯಿಸಿದ್ದಾರೆ. 23 ಕೊಟ್ಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಮತ ಎಣಿಕೆ ಹೇಗೆ?

ಮತಗಳನ್ನು ಎಣಿಸುವ ಯಾವುದೇ ಫೆಡರಲ್ ಅಂದ್ರೆ ಕೇಂದ್ರೀಯ ವ್ಯವಸ್ಥೆ ಇಲ್ಲ, ಮತ್ತು ಮತ ಎಣಿಕೆಯ ಹೊಣೆ ರಾಜ್ಯಗಳದ್ದೇ ಆಗಿರುತ್ತದೆ.

ಕೈಯಿಂದ ಗುರುತಿಸಲಾದ ಮತಪತ್ರಗಳು ಮತ್ತು BMD ಗಳಿಂದ ಗುರುತಿಸಲಾದ ಮತಪತ್ರಗಳನ್ನು ಸಾಮಾನ್ಯವಾಗಿ ಆಪ್ಟಿಕಲ್ ಸ್ಕ್ಯಾನರ್‌ಗಳನ್ನು ಬಳಸಿ ಎಣಿಸಲಾಗುತ್ತದೆ ಮತ್ತು ನಂತರ ಅಂತಿಮ ಲೆಕ್ಕಾಚಾರಕ್ಕಾಗಿ ಡಿಜಿಟಲ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ. ವಿವಿಧ ರಾಜ್ಯಗಳು ಮರು-ಎಣಿಕೆ ಮತ್ತು ಅಂತಿಮ ಎಣಿಕೆಯನ್ನು ಪರಿಶೀಲಿಸುವ ವಿಭಿನ್ನ ವಿಧಾನಗಳನ್ನು ಹೊಂದಿವೆ.

ರಾಜ್ಯಗಳು ತಮ್ಮ ಚುನಾವಣಾ ಫಲಿತಾಂಶಗಳನ್ನು ಪ್ರಮಾಣೀಕರಿಸಲು ಡಿಸೆಂಬರ್ 11 ರವರೆಗೆ ಅವಕಾಶವಿರುತ್ತದೆ.

ಅಧ್ಯಕ್ಷರ ಆಯ್ಕೆ ಹೇಗೆ?

ಅಧ್ಯಕ್ಷರನ್ನು ನೇರವಾಗಿ ಜನರ ಮತದಿಂದ ಚುನಾಯಿಸಲಾಗುವುದಿಲ್ಲ. ಬದಲಿಗೆ ಎಲೆಕ್ಟೋರಲ್ ಕಾಲೇಜ್ ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ, ಪ್ರತಿ ರಾಜ್ಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನಲ್ಲಿನ ಸ್ಥಾನಗಳ ಸಂಖ್ಯೆಯಂತೆಯೇ ಎಲೆಕ್ಟೋರಲ್ ಕಾಲೇಜಿನಲ್ಲಿ ಅದೇ ಸಂಖ್ಯೆಯ ಮತದಾರರನ್ನು ಹೊಂದಿದೆ.

ಅಮೆರಿಕ ಒಟ್ಟು 538 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಹೊಂದಿದೆ. ಅವರು ಪಕ್ಷಗಳಿಂದ ನೇಮಕಗೊಂಡಿದ್ದಾರೆ ಮತ್ತು ಯಾವಾಗಲೂ ಪಕ್ಷದ ಅಧಿಕಾರಿಗಳು ಅಥವಾ ಬೆಂಬಲಿಗರಾಗಿದ್ದಾರೆ. ಒಬ್ಬ ಅಭ್ಯರ್ಥಿ ಗೆಲ್ಲಲು 270 ಎಲೆಕ್ಟೋರಲ್ ಕಾಲೇಜ್ ಮತಗಳ ಅಗತ್ಯವಿದೆ.

ಈ ವರ್ಷ ಡಿಸೆಂಬರ್ 17 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲು ಈ ಮತದಾರರು ಸಭೆ ಸೇರಲಿದ್ದಾರೆ.

ಎರಡು ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ತಮ್ಮ ಮತದಾರರನ್ನು ಆಯ್ಕೆಮಾಡುವಲ್ಲಿ ವಿನ್ನರ್ ಟೇಕ್ಸ್ ಆಲ್ ವ್ಯವಸ್ಥೆಯನ್ನು ಬಳಸುತ್ತವೆ. ಅಂದರೆ ಎಲ್ಲಾ ಎಲೆಕ್ಟೋರಲ್ ಕಾಲೇಜಿನ ಮತಗಳು ಯಾವ ಅಭ್ಯರ್ಥಿ ಹೆಚ್ಚು ಮತಗಳನ್ನು ಗೆಲ್ಲುತ್ತಾರೋ ಅವರಿಗೆ ಹೋಗುತ್ತವೆ.

ಮೈನೆ ಮತ್ತು ನೆಬ್ರಸ್ಕಾ ರಾಜ್ಯಗಳು ಮಾತ್ರ ಇದಕ್ಕೆ ಹೊರತು. ಅವುಗಳ ಎಲೆಕ್ಟೋರಲ್ ಕಾಲೇಜ್ ಮತಗಳು ಪಕ್ಷಗಳ ನಡುವೆ ವಿಭಜನೆಯಾಗಬಹುದು. ಹಿಂದಿನ ಚುನಾವಣೆಗಳಲ್ಲಿ ರಾಜ್ಯದ ಮತಕ್ಕೆ ವಿರುದ್ಧವಾಗಿ ಮತದಾರರು ಬೇರೆ ಅಭ್ಯರ್ಥಿಗೆ ಮತ ಹಾಕಿದ ಪ್ರಕರಣಗಳಿವೆ.

ಟೈ ಆಗುವ ಸಾಧ್ಯತೆ?

ಅಂಥ ಸಾಧ್ಯತೆ ಇಲ್ಲವಾದರೂ ಹೇಳಲು ಬರುವುದಿಲ್ಲ ಎನ್ನುವ ಸನ್ನಿವೇಶವಿದೆ. ಇಬ್ಬರಿಗೂ ತಲಾ 269 ಮತಗಳು ಬಂದರೆ, ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮುಂದಿನ ಅಧ್ಯಕ್ಷರನ್ನು ನಿರ್ಧರಿಸುತ್ತದೆ. ಕೆಳಮನೆಯಲ್ಲಿನ ಪ್ರತಿಯೊಂದು ರಾಜ್ಯದ ನಿಯೋಗ ಒಂದು ಮತವನ್ನು ಚಲಾಯಿಸುತ್ತದೆ. ಒಬ್ಬ ಅಭ್ಯರ್ಥಿ ಗೆಲ್ಲಲು ಆ ಮತಗಳ ಬಹುಮತ ಸಿಗಬೇಕು.

ನಂತರ ಅಮೆರಿಕದ ಸೆನೆಟ್ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಪ್ರತಿ ರಾಜ್ಯಕ್ಕೆ ಇಬ್ಬರು ಸೆನೆಟರ್‌ಗಳಂತೆ 50 ರಾಜ್ಯಗಳಿಗೆ 100 ಜನ ಸೆನೆಟರ್‌ಗಳು ಸಹ ಇರುತ್ತಾರೆ. ಪ್ರತಿ ಸೆನೆಟರ್ ಒಂದು ಮತವನ್ನು ಹೊಂದಿದ್ದು, ಸರಳ ಬಹುಮತ ಗೆಲ್ಲು 51 ಮತಗಳ ಅಗತ್ಯವಿದೆ.

ಮಂಗಳವಾರವೇ ಅಧ್ಯಕ್ಷೀಯ ಚುನಾವಣೆ ಏಕೆ?

ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೆ ಒಂದು ಬಾರಿ ಚುನಾವಣೆ ನಡೆಯುತ್ತದೆ. 1845ರ ಮೊದಲು ವಿವಿಧ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ದೇಶದಲ್ಲಿ ಒಂದೇ ರೀತಿಯ ಚುನಾವಣೆ ನಡೆಸಬೇಕು ಎಂಬ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು. ರವಿವಾರ ಕ್ರಿಶ್ಚಿಯನ್‌ ಸಮುದಾಯದವರು ಪ್ರಾರ್ಥನೆಗಾಗಿ ತೆರಳುತ್ತಿರುವುದರಿಂದ ಆ ದಿನ ಮತದಾನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನವೆಂಬರ್‌ನ ಮೊದಲ ಸೋಮವಾರದ ಅನಂತರದ ಮೊದಲ ಮಂಗಳವಾರ ಮತ­ದಾನ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News