ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ ಟ್ರಂಪ್ !

Update: 2024-11-06 12:27 GMT

ಡೊನಾಲ್ಡ್ ಟ್ರಂಪ್

ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅಮೆರಿಕದ ಮತದಾರರಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.

ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಪಾಮ್ ಬೀಚ್ ಕೌಂಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಇದು ನಿಜವಾಗಿಯೂ ಅಮೆರಿಕದ ಸುವರ್ಣ ಯುಗ. ಇದು ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸುತ್ತದೆ. ಗೆಲುವಿಗೆ ಬೇರೆ ದಾರಿ ಇರಲಿಲ್ಲ. ನಿಮ್ಮ ಮತದ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

Full View

ಚುನಾವಣೆಯಲ್ಲಿ ನೀಡಿದ ಪ್ರತಿ ಭರವಸೆಯನ್ನು ಈಡೇರಿಸುವುದಾಗಿ ಬೆಂಬಲಿಗರಿಗೆ ಟ್ರಂಪ್ ಭರವಸೆ ನೀಡಿದ್ದಾರೆ. ನನ್ನ ದೇಹದ ಪ್ರತಿ ಉಸಿರಿನೊಂದಿಗೆ ನಾನು ನಿಮಗಾಗಿ ಹೋರಾಡುತ್ತೇನೆ. ಬಲವಾದ, ಸುರಕ್ಷಿತ ಮತ್ತು ಸಮೃದ್ಧ ಅಮೆರಿಕಾವನ್ನು ರೂಪಿಸುವವರೆಗೂ ವಿಶ್ರಮಿಸುವುದಿಲ್ಲ. ದೇವರು ನನ್ನ ಪ್ರಾಣವನ್ನು ಒಂದು ಕಾರಣಕ್ಕಾಗಿ ಉಳಿಸಿದ್ದಾನೆ ಎಂದು ಟ್ರಂಪ್ ಹೇಳಿದ್ದಾರೆ.

ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಬಗ್ಗೆಯೂ ಪ್ರಸ್ತಾಪಿಸಿದರು.

78 ವರ್ಷ ವಯಸ್ಸಿನ ರಿಪಬ್ಲಿಕನ್ ನಾಯಕ ಟ್ರಂಪ್ ಪೆನ್ಸಿಲ್ವೇನಿಯಾ, ಜಾರ್ಜಿಯಾ‌, ಉತ್ತರ ಕೆರೊಲಿನಾ ಸಹಿತ ನಿರ್ಣಾಯಕ ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.

ಗೆಲುವು ಬೆನ್ನಲ್ಲೇ‌ ಅಮೆರಿಕವನ್ನುದ್ದೇಶಿಸಿ ಭಾಷಣ ಮಾಡಿದ ಟ್ರಂಪ್, "ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಜನಾದೇಶ ನೀಡಿದೆ" ಎಂದು ಹೇಳಿದ್ದಾರೆ.

ರಿಪಬ್ಲಿಕನ್‌ ಪಕ್ಷ ಸೆನೆಟ್‌ನ ನಿಯಂತ್ರಣವನ್ನೂ ಕೂಡ ಮರಳಿ ಪಡೆದಿದೆ. ಸೆನೆಟ್‌ನಲ್ಲಿನ ಗೆಲುವುಗಳ ಪ್ರಮಾಣ ನಂಬಲಸಾಧ್ಯವಾಗಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿಯೂ ನಾವು ನಿಯಂತ್ರಣವನ್ನು ಇಟ್ಟುಕೊಳ್ಳುತ್ತೇವೆ ಎಂದು ತೋರುತ್ತಿದೆ ಎಂದು ಟ್ರಂಪ್ ಎಂದಿದ್ದಾರೆ.

ಟ್ರಂಪ್ ಅವರು ತಮ್ಮ ಕುಟುಂಬ ಮತ್ತು ರಿಪಬ್ಲಿಕನ್ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಜೊತೆಗಿದ್ದರು. ಟ್ರಂಪ್ ಅವರು ಶ್ವೇತಭವನಕ್ಕೆ ಮರಳುವುದನ್ನು ಅಮೆರಿಕದ ಇತಿಹಾಸದಲ್ಲಿಯೇ ಶ್ರೇಷ್ಠ ರಾಜಕೀಯ ಪುನರಾಗಮನ ಎಂದು ಜೆಡಿ ವ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಲಿರುವುದರೊಂದಿಗೆ ಹಲವು ಮೊದಲುಗಳ ಹೆಗ್ಗಳಿಕೆಗಳನ್ನೂ ಹೊಂದಲಿದ್ದಾರೆ.

78ನೇ ವಯಸ್ಸಿನಲ್ಲಿ ಟ್ರಂಪ್ ಅಧ್ಯಕ್ಷರಾಗುತ್ತಿದ್ದು, ಆ ಹುದ್ದೆ ವಹಿಸಿಕೊಳ್ಳುವ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಿಕೊಳ್ಳಲಿದ್ದಾರೆ. ಅಲ್ಲದೇ 20 ವರ್ಷಗಳಲ್ಲಿ ಜನಪ್ರಿಯ ಮತವನ್ನು ಗೆದ್ದ ಮೊದಲ ರಿಪಬ್ಲಿಕನ್ ಆಗಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಟ್ರಂಪ್ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕ ಅಧ್ಯಕ್ಷರಾಗುತ್ತಿದ್ದಾರೆ.

ಡೆಮಾಕ್ರಟ್ ಜೋ ಬಿಡೆನ್ ವಿರುದ್ಧ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಸೋತ ನಂತರ 2021ರ ಜನವರಿ 6ರಂದು ಅಮೆರಿಕದ ರಾಜಧಾನಿಯಲ್ಲಿ ನಡೆದ ಗಲಭೆಗಳಲ್ಲಿ ಅವರ ಪಾತ್ರವಿತ್ತೆಂಬುದೂ ಸೇರಿದಂತೆ ಹಲವು ಪ್ರಕರಣಗಳು ಅವರ ಮೇಲಿವೆ. ಟ್ರಂಪ್ ಎರಡು ಬಾರಿ ದೋಷಾರೋಪಣೆಗೆ ಒಳಗಾದ ಬಳಿಕವೂ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮೊದಲಿಗರಾಗಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಎಕ್ಸ್ ನಲ್ಲಿ ಡೊನಾಲ್ಡ್ ಟ್ರಂಪ್ ಜತೆಗಿರುವ ಫೋಟೊ ಪೋಸ್ಟ್ ಮಾಡಿರುವ ಮೋದಿ, ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ನನ್ನ ಸ್ನೇಹಿತನಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಜನರ ಯೋಗಕ್ಷೇಮಕ್ಕಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ.

ಭಾರತ-ಅಮೆರಿಕ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News