ಅಮೆರಿಕಾದ ಬೇಹು ಇಲಾಖೆಯ ಮುಖ್ಯಸ್ಥೆಯಾಗಿ ನೇಮಕವಾಗಿರುವ ತುಳಸಿ ಗಬ್ಬಾರ್ಡ್ ಭಾರತೀಯರೇ?; ಇಲ್ಲಿದೆ ಮಾಹಿತಿ...
ಅಮೆರಿಕದ ಗುಪ್ತಚರ ಇಲಾಖೆಯ ಹೊಸ ನಿರ್ದೇಶಕಿ (ಡೈರೆಕ್ಟರ್ ಆಫ್ ನ್ಯಾಷನಲ್ ಇಂಟೆಲಿಜೆನ್ಸ್) ಆಗಿ ತುಳಸಿ ಗಬ್ಬಾರ್ಡ್ ಅವರನ್ನು ಭಾವೀ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.
ಹವಾಯಿ ಮೂಲದ ಹೆತ್ತವರಿಗೆ ಜನಿಸಿದ ತುಲಸೀ ಗಬ್ಬಾರ್ಡ್ ಟ್ರಂಪ್ ರ ಅತ್ಯಂತ ಆಪ್ತ ಹಾಗು ಕಟ್ಟಾ ಬೆಂಬಲಿಗ ನಾಯಕರಲ್ಲೊಬ್ಬರು. ಅದಕ್ಕಾಗಿಯೇ ಅವರನ್ನು ಬಹಳ ಮಹತ್ವದ ದೇಶದ ಬೇಹು ಇಲಾಖೆಗೇ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಇವರ ನೇಮಕದ ಬಳಿಕ ಇಲ್ಲಿ ಒಂದು ಗುಂಪು ಅವರು ಭಾರತೀಯ ಮೂಲದವರೆಂದು, ಸಾಮಾಜಿಕ ಮಾದ್ಯಮಗಳಲ್ಲಿ ಸಂಭ್ರಮದಿಂದ ಈ ನೇಮಕಾತಿಯನ್ನು ಹಾಡಿಹೊಗಳುತ್ತಿದ್ದಾರೆ. "ಅಮೆರಿಕ ಗುಪ್ತಚರ ಇಲಾಖೆಗೆ ಭಾರತ ಮೂಲದ ಮಹಿಳೆ ಮುಖ್ಯಸ್ಥೆ " ಎಂದು AI ಮೂಲಕ ತುಳಸಿ ಅವರನ್ನು ವೈಭವೀಕರಿಸಿ ಚಿತ್ರಿಸುತ್ತಿರುವ ವಿಡಿಯೋಗಳನ್ನೂ ಕಾಣಬಹುದು.
ಆದರೆ ತುಳಸಿ ಗಬ್ಬಾರ್ಡ್ ನಿಜಕ್ಕೂ ಭಾರತ ಮೂಲದವರೇ?: ಇಲ್ಲಿದೆ ಮಾಹಿತಿ...
ತುಳಸಿ ಗಬ್ಬಾರ್ಡ್ ಹಿಂದೂ ಧರ್ಮವನ್ನು ಪಾಲಿಸುತ್ತಾರೆ ಹೌದು. ಆದರೆ ಇವರಿಗೆ ಭಾರತದೊಂದಿಗೆ ನೇರವಾಗಿ ಯಾವುದೇ ಸಂಪರ್ಕವಿಲ್ಲ. ಬಹುತೇಕ ವಿಚಾರಗಳಲ್ಲಿ ಅಮೆರಿಕ ಗುಪ್ತಚರ ಸಂಸ್ಥೆಗಳ ಅಭಿಪ್ರಾಯಕ್ಕೆ ತದ್ವಿರುದ್ಧವಾದ ಅಭಿಪ್ರಾಯವೇ ವ್ಯಕ್ತಪಡಿಸುವ ತುಳಸಿ ಗಬಾರ್ಡ್ ಇದೀಗ ಅಲ್ಲಿನ 18 ಪ್ರಮುಖ ಗೂಢಚರ ಸಂಸ್ಥೆಗಳ ಮೇಲ್ವಿಚಾರಣೆ ಮಾಡಲು ಸಿದ್ಧರಾಗಿದ್ದಾರೆ.
"ತುಳಸಿ ಅವರು ನಮ್ಮ ಗುಪ್ತಚರ ಸಮುದಾಯಕ್ಕೆ ತಮ್ಮ ಸುಪ್ರಸಿದ್ಧ ವೃತ್ತಿಜೀವನವನ್ನು ವ್ಯಾಖ್ಯಾನಿಸಿದ ನಿರ್ಭೀತ ಮನೋಭಾವವನ್ನು ತರುತ್ತಾರೆ ಎಂದು ನನಗೆ ತಿಳಿದಿದೆ. ಅದು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬೆಂಬಲಿಸುತ್ತದೆ ಮತ್ತು ಶಕ್ತಿಯ ಮೂಲಕ ಶಾಂತಿಯನ್ನು ಭದ್ರಪಡಿಸುತ್ತದೆ ಎಂದು ಚುನಾಯಿತ ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯೆ ಮತ್ತು ಆ ಪಕ್ಷದಿಂದ 2020 ರಲ್ಲಿ ಸ್ವತಃ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ತುಳಸಿ ಅವರು ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ವಾರದಲ್ಲಿ ಶ್ವೇತಭವನಕ್ಕೆ ಉನ್ನತ ಹುದ್ದೆಗಳಿಗೆ ನೇಮಕಗೊಂಡ ಅನೇಕ ಟ್ರಂಪ್ ನಿಷ್ಠಾವಂತರಲ್ಲಿ ಸೇರಿದ್ದಾರೆ.
43 ವರ್ಷದ ತುಳಸಿ ಗಬ್ಬಾರ್ಡ್ ಅವರು ಅಮೆರಿಕ ಆರ್ಮಿ ರಿಸರ್ವಿಸ್ಟ್ ಆಗಿದ್ದಾರೆ. ಹವಾಯಿಯಿಂದ ನಾಲ್ಕು ಬಾರಿ ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯೆಯಾಗಿದ್ದ ಅವರು 2012 ರಲ್ಲಿ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸ್ಥಾನವನ್ನು ಗೆದ್ದಾಗ ಆ ಸ್ಥಾನಕ್ಕೆ ಬಂದ ಮೊದಲ ಹಿಂದೂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1981 ರಲ್ಲಿ ಸಮೋವನ್-ಅಮೆರಿಕನ್ ತಂದೆ ಮತ್ತು ಅಮೆರಿಕನ್ ಮಿಡ್ವೆಸ್ಟ್ ಮೂಲದ ತಾಯಿಗೆ ಜನಿಸಿದ ತುಳಸಿ ಹವಾಯಿಯಲ್ಲಿ ಬೆಳೆದರು.
ಅಲ್ಲಿಯೇ ಅವರ ತಾಯಿ ಕರೋಲ್ ಹಿಂದೂ ಧರ್ಮದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು. 2013 ರ ಹವಾಯಿ ನ್ಯೂಸ್ ನೌ ನಲ್ಲಿರುವ ತುಳಸಿಯ ಪ್ರೊಫೈಲ್ ಪ್ರಕಾರ, ಕರೋಲ್ ತನ್ನ ಎಲ್ಲಾ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಇಟ್ಟಿದ್ದಾರೆ. ಭಕ್ತಿ, ಜೈ, ಆರ್ಯನ್, ತುಳಸಿ ಮತ್ತು ವೃಂದಾವನ್ ಆ ಹೆಸರುಗಳು.
ಗಬ್ಬಾರ್ಡ್ ಮನೆಯವರು ತಮ್ಮನ್ನು "ಬಹು-ಜನಾಂಗೀಯ, ಬಹುಸಂಸ್ಕೃತಿ, ಮತ್ತು ಬಹು-ನಂಬಿಕೆಯ ಕುಟುಂಬ" ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಆ ಬಗ್ಗೆ ಹೆಮ್ಮೆ ಪಡುತ್ತಾರೆ.
“ಜನ್ಮಾಷ್ಟಮಿಯು ಶ್ರೀಕೃಷ್ಣನ ಜನ್ಮದಿನ. ಕ್ರಿಸ್ಮಸ್ ದಿನದಂದು ಲಾರ್ಡ್ ಜೀಸಸ್ ಜನ್ಮ ದಿನ. ಆದ್ದರಿಂದ ನಾವು ಎರಡನ್ನೂ ಆಚರಿಸುತ್ತೇವೆ ಎಂದು 2006 ರಿಂದ ಹವಾಯಿ ರಾಜ್ಯ ಸೆನೆಟ್‌ನಲ್ಲಿ ಸೇವೆ ಸಲ್ಲಿಸಿದ ತುಳಸಿಯ ತಂದೆ ಮೈಕ್ 2013 ರಲ್ಲಿ ಹವಾಯಿ ನ್ಯೂಸ್ ನೌಗೆ ತಿಳಿಸಿದ್ದರು.
2002 ರಲ್ಲಿ, ತಮ್ಮ 21ನೇ ವಯಸ್ಸಿನಲ್ಲಿ ಹವಾಯಿ ರಾಜ್ಯ ಶಾಸಕಾಂಗಕ್ಕೆ ಚುನಾಯಿತರಾದ ತುಳಸಿ, ಆ ಸ್ಥಾನಕ್ಕೆ ಚುನಾಯಿತರಾದ ಅತ್ಯಂತ ಕಿರಿಯ ಮಹಿಳೆ. ಹವಾಯಿ ನ್ಯಾಷನಲ್ ಗಾರ್ಡ್ ಘಟಕದ ಜೊತೆ 2004 ರಲ್ಲಿ ಅವರು ಇರಾಕ್‌ನಲ್ಲಿ ಮಿಲಿಟರಿ ಸೇವೆ ಸಲ್ಲಿಸಿದರು.
ಅವರು 2020 ರವರೆಗೆ ಹವಾಯಿ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿ ಇದೀಗ US ಆರ್ಮಿ ರಿಸರ್ವ್‌ಗೆ ನಿಯೋಜಿತರಾಗಿದ್ದಾರೆ. ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದಾರೆ. 2009 ರಲ್ಲಿ ಮಧ್ಯಪ್ರಾಚ್ಯದಿಂದ ಮನೆಗೆ ಹಿಂದಿರುಗಿದ ಅವರು ಮತ್ತೆ ಹವಾಯಿ ರಾಜಕೀಯವನ್ನು ಪ್ರವೇಶಿಸಿದರು. ಅಲ್ಲಿ ಚುನಾವಣೆ ಗೆದ್ದು ಹೊನೊಲುಲು ಸಿಟಿ ಕೌನ್ಸಿಲ್‌ನ ಸದಸ್ಯರಾದರು.
2012 ರಲ್ಲಿ ಹವಾಯಿಯ ಎರಡನೇ ಕಾಂಗ್ರೆಸ್ ಜಿಲ್ಲೆಯಿಂದ ಅವರು US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದರು. ಈ ಮೂಲಕ ಕಾಂಗ್ರೆಸ್‌ಗೆ ಚುನಾಯಿತರಾದ ಮೊದಲ ಸಮೋವನ್-ಅಮೇರಿಕನ್ ಮತ್ತು ಹಿಂದೂ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಭಗವದ್ಗೀತೆಯ ಮೇಲೆ ಪ್ರತಿಜ್ಞೆ ಮಾಡಿದ ಅವರು ಭಗವದ್ ಗೀತೆಯು ಜೀವನದಲ್ಲಿ ಅನೇಕ ಕಠಿಣ ಸವಾಲುಗಳ ಸಮಯದಲ್ಲಿ ಆಂತರಿಕ ಶಾಂತಿ ಮತ್ತು ಶಕ್ತಿಯ ಪ್ರಚಂಡ ಮೂಲವಾಗಿತ್ತು ಎಂದು ತುಳಸಿ ಹೇಳಿದ್ದರು. ತುಳಸಿ ಅವರು ಸಿನಿಮಾಟೋಗ್ರಾಫರ್ ಅಬ್ರಹಾಂ ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದಾರೆ.
ಹಿರಿಯ ಡೆಮಾಕ್ರಟಿಕ್ ನಾಯಕಿ ನ್ಯಾನ್ಸಿ ಪೆಲೋಸಿ ಅವರು ಪಕ್ಷದ "ಉದಯುತ್ತಿರುವ ತಾರೆ" ಎಂದು ಒಮ್ಮೆ ವಿವರಿಸಿದ್ದ ತುಳಸಿ ಪಕ್ಷದ ನಿಲುವಿಗೆ ವಿರುದ್ಧವಾದ ನಿಲುವುಗಳನ್ನು ಅನೇಕ ಬಾರಿ ಪ್ರತಿಪಾದಿಸಿದ್ದರು. ವಿದೇಶಾಂಗ ನೀತಿಯ ಬಗ್ಗೆ ತುಳಸಿ ಹಲವು ಬಾರಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2015 ರಲ್ಲಿ, ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಅವರ ಆಡಳಿತದ ವಿರುದ್ಧ ಚಳವಳಿಗಳನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಒಬಾಮಾ ಆಡಳಿತವನ್ನು ಒತ್ತಾಯಿಸಿದ್ದಕ್ಕಾಗಿ ಅವರು ಡೆಮೋಕ್ರಾಟ್‌ಗಳಿಂದ ಭಾರೀ ಟೀಕೆಗಳನ್ನು ಎದುರಿಸಿದ್ದರು.
"ಅಸ್ಸಾದ್ ಅವರನ್ನು ತೆಗೆದುಹಾಕಬೇಕು ಎಂದು ನಾನು ಭಾವಿಸುವುದಿಲ್ಲ" ಎಂದು ಅವರು ಆ ಸಮಯದಲ್ಲಿ ಹೇಳಿದ್ದರು. ಅವರನ್ನು ಉರುಳಿಸಿದರೆ ಉಗ್ರಗಾಮಿ ಗುಂಪುಗಳು ಅಧಿಕಾರ ವಹಿಸಿಕೊಳ್ಳುತ್ತವೆ ಎಂದು ಅವರು ಎಚ್ಚರಿಸಿದ್ದರು.
2020ರಲ್ಲಿ, ಇರಾನ್‌ನ ಉನ್ನತ ಜನರಲ್ ಖಾಸಿಮ್ ಸುಲೈಮಾನಿ ಮೇಲೆ ಡ್ರೋನ್ ದಾಳಿಗೆ ಆದೇಶ ನೀಡುವ ಟ್ರಂಪ್ ನಿರ್ಧಾರವನ್ನು ತುಳಸಿ ಖಂಡಿಸಿದ್ದರು. ಈ ಕ್ರಮವನ್ನು "ಅಸಂವಿಧಾನಿಕ" ಮತ್ತು "ಅಪಾಯಕಾರಿ ಉಲ್ಬಣ" ಎಂದು ಅವರು ವಿಶ್ಲೇಷಿಸಿದ್ದರು.
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಡೆಮಾಕ್ರಟಿಕ್ ಪಕ್ಷದ ನಿಲುವಿನಿಂದಾಗಿ ಅಂತಿಮವಾಗಿ ತುಳಸಿ ಡೆಮೋಕ್ರಟ್ ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ನೇಟೋ ವಿಸ್ತರಣೆ ಯುದ್ಧಕ್ಕೆ ಕಾರಣ ಎಂದು ಅವರು ಹೇಳಿದ್ದರು.
2022 ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವಾಗ ಡೆಮೋಕ್ರಟ್ ಪಕ್ಷವನ್ನು "ಯುದ್ಧಕೋರರ ಕುಲೀನರ ಕೂಟ" ಮುನ್ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಪ್ರತಿಯೊಂದು ಸಮಸ್ಯೆಯನ್ನು ಜನಾಂಗೀಯಗೊಳಿಸುವುದು ಮತ್ತು ಬಿಳಿಯ ವಿರೋಧಿ ವರ್ಣಭೇದ ನೀತಿ ಯನ್ನು ಪ್ರಚೋದಿಸುವ ಮೂಲಕ ದೇಶವನ್ನು ವಿಭಜಿಸುವ ಪಕ್ಷದ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಾವು ಬಿಡುತ್ತಿರುವ ಪಕ್ಷವನ್ನು ಟೀಕಿಸಿದ್ದರು. ಆ ಸಮಯದಲ್ಲೂ ಅವರು ರಿಪಬ್ಲಿಕನ್ ಪಕ್ಷಕ್ಕೆ ಸೇರಲಿಲ್ಲ. ಬದಲಿಗೆ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದರು.
ಕೇವಲ ತಿಂಗಳ ಹಿಂದೆ ದಿಢೀರನೇ ರಿಪಬ್ಲಿಕನ್ ಪಕ್ಷಕ್ಕೆ ಸೇರಿಕೊಳ್ಳುವ ಮೊದಲೇ, ಟ್ರಂಪ್ ಬೆಂಬಲಿಗ ಬಲಪಂಥೀಯ ಚಾನಲ್ ಫಾಕ್ಸ್ ನ್ಯೂಸ್‌ನಲ್ಲಿ ತುಳಸಿ ಅತ್ಯಂತ ಪ್ರಮುಖ ರಾಜಕೀಯ ನಿರೂಪಕರಲ್ಲಿ ಒಬ್ಬರಾಗಿ ಟ್ರಂಪ್ ಗೆ ಸತತ ಬೆಂಬಲ ಸೂಚಿಸಿದ್ದರು. ಟ್ರಂಪ್ ಯುದ್ಧವನ್ನು ಕೊನೆಯ ಉಪಾಯವಾಗಿ ನೋಡುತ್ತಾರೆ ಎಂದು ಟ್ರಂಪ್ ಗೆ ಬೆಂಬಲ ಸೂಚಿಸುತ್ತಾ ತುಳಸಿ ಹೇಳಿದ್ದರು.
ಅಮೆರಿಕಾದ ರಾಷ್ಟ್ರೀಯ ಗುಪ್ತಚರ ಕಾರ್ಯಕ್ರಮದ ಮುಖ್ಯಸ್ಥರಾಗಿ DNI (ಡೈರೆಕ್ಟರ್ ಆಫ್ ನ್ಯಾಷನಲ್ ಇಂಟೆಲಿಜೆನ್ಸ್) ಕಾರ್ಯನಿರ್ವಹಿಸುತ್ತಾರೆ. ಇದೀಗ ಈ ಹುದ್ದೆ ತುಳಸಿಯವರದ್ದಾಗಿದೆ.
ಅಧ್ಯಕ್ಷರಿಗೆ, ರಾಷ್ಟ್ರೀಯ ಭದ್ರತಾ ಮಂಡಳಿಗೆ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕೌನ್ಸಿಲ್‌ಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗುಪ್ತಚರ ವಿಷಯಗಳ ಕುರಿತು ಸಲಹೆ ನೀಡುವ ಜವಾಬ್ದಾರಿ ಇನ್ನು ಮುಂದೆ ಇವರದ್ದು. ಪ್ರತಿದಿನ ಬೆಳಗ್ಗೆ ಅಧ್ಯಕ್ಷ ಟ್ರಂಪ್ ಅವರಿಗೆ ನೀಡಲಾಗುವ ಬೇಹು ವರದಿಯನ್ನು ಅಂತಿಮಗೊಳಿಸುವ ಜವಾಬ್ದಾರಿಯೂ ತುಳಸಿ ಅವರ ಮೇಲಿದೆ. 9/11 ಆಯೋಗದ ವರದಿಯ ಶಿಫಾರಸುಗಳ ಆಧಾರದ ಮೇಲೆ ಈ ಹುದ್ದೆಯನ್ನು ಸ್ಥಾಪಿಸಲಾಗಿತ್ತು.
DNI ಆಗಿ ತುಳಸಿ ಗಬ್ಬಾರ್ಡ್ ಅವರ ನೇಮಕಾತಿಗೆ ಸೆನೆಟ್ ಅನುಮೋದನೆಯ ಅಗತ್ಯವಿರುತ್ತದೆ. ರಿಪಬ್ಲಿಕನ್ನರು US ಸೆನೆಟ್‌ನ ಹಿಡಿತವನ್ನು ಮರಳಿ ಪಡೆದಿರುವುದರಿಂದ ಅದಿನ್ನೂ ಔಪಚಾರಿಕ ಪ್ರಕ್ರಿಯೆ ಮಾತ್ರ.
2021 ರಲ್ಲಿ DNI ಆಗಿ ನೇಮಕಗೊಂಡ ಮೊದಲ ಮಹಿಳೆಯಾದ ಅವ್ರಿಲ್ ಹೈನ್ಸ್ ಅವರಿಂದ ತುಳಸಿ ಅಧಿಕಾರ ಪಡೆದುಕೊಳ್ಳಲಿದ್ದಾರೆ. ಅಂದ ಹಾಗೆ ಡಿ ಎನ್ ಐ ಅಂದ್ರೆ ಜಾಗತಿಕವಾಗಿ ಖ್ಯಾತಿ ಕುಖ್ಯಾತಿ ಎರಡನ್ನೂ ಗಳಿಸಿರುವ ಅಮೆರಿಕಾದ ಬಾಹ್ಯ ಬೇಹು ಸಂಸ್ಥೆ ಸಿಐಎ ಅಂದ್ರೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ ಮುಖ್ಯಸ್ಥರ ಹುದ್ದೆ ಅಲ್ಲ. ಜಾನ್ ರಾಟ್ ಕ್ಲಿಫ್ ಸಿಐಎ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
US ಗುಪ್ತಚರ ಸಂಸ್ಥೆಗಳೊಂದಿಗೆ ಹತ್ತಾರು ವಿಷಯಗಳಲ್ಲಿ ಸದಾ ಭಿನ್ನಾಭಿಪ್ರಾಯ ಹೊಂದಿರುವ ತುಳಸಿ ಇದೀಗ ಇದೇ ಸಂಸ್ಥೆಗಳ ಮುಖ್ಯಸ್ಥಯಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಬೇಕಿದೆ.