ಬಹುಸಂಖ್ಯಾತವಾದ- ಚಿಂತಕರು ಕಂಡಂತೆ

Update: 2016-02-03 18:51 GMT

ಆರೆಸ್ಸೆಸ್‌ನ ಮತೀಯವಾದಿ ರಾಜಕಾರಣದ ಕುರಿತಂತೆ ದೇಶದ ಚಿಂತಕರ ಎಚ್ಚರಿಕೆಯ ಬರಹಗಳನ್ನು ಒಂದೆಡೆ ಸೇರಿದ್ದಾರೆ ಲೇಖಕ ಬಿ. ಶ್ರೀಪಾದ. 'ಬಹುಸಂಖ್ಯಾತವಾದ' ಚಿಂತಕರು ಕಂಡಂತೆ, ಬೇರೆ ಬೇರೆ ಲೇಖಕರ, ಚಿಂತಕರ ಬರಹಗಳ ಸಂಗ್ರಹ ಮತ್ತು ಅನುವಾದ. ಆರೆಸ್ಸೆಸ್ ಮೂಲಭೂತವಾದದ ಕುರಿತಂತೆ ನೆಹರೂ ಅವರಿಗಿದ್ದ ಆತಂಕವನ್ನು ಅವರ ಪತ್ರಗಳು ಹೇಳುತ್ತವೆ. ನೆಹರೂ ಅವರು ರಾಜ್ಯ ಸರಕಾರಗಳಿಗೆ ಹಾಗೂ ವಿವಿಧ ಜನರಿಗೆ ಬರೆದ ಒಂಬತ್ತು ಪ್ರಮುಖ ಪತ್ರಗಳನ್ನು ಇಲ್ಲಿ ಅನುವಾದಿ ಸಲಾಗಿದೆ. ಇದು ಮೂಲಭೂತವಾ ದದ ಇತಿಹಾಸ ಮತ್ತು ಅದು ಭವಿಷ್ಯದಲ್ಲಿ ಬೆಳೆಯುವುದಕ್ಕೆ ಕಾರಣವಾದ ನೆಲೆಗಳನ್ನು ಪರಿಚಯಿಸುತ್ತದೆ. ಆರೆಸ್ಸೆಸ್ ಎಂದರೆ ಏನು ಎನ್ನುವ ಬಗ್ಗೆ ಮಧು ಲಿಮಯೆ ಅವರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ವಿವರಿಸುತ್ತಾರೆ. ಆರೆಸ್ಸೆಸ್‌ನ ನಯವಂಚಕತನ, ದ್ರೋಹ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಮಂಡಿಸುತ್ತಾರೆ. 'ಮರೆತು ಹೋದ 1949ರ ವಾಗ್ದಾನ' ಆರೆಸ್ಸೆಸ್ ಸರಕಾರಕ್ಕೆ ಮಾಡಿರುವ ವಾಗ್ದಾನವನ್ನು ಹೇಗೆ ಭಂಗ ಮಾಡಿದೆ ಮತ್ತು ತನ್ನ ರಾಜಕೀಯ ಅಜೆಂಡಾಗಳನ್ನು ಬಹಿರಂಗವಾಗಿ ಹೇಗೆ ಅನುಷ್ಠಾನಕ್ಕೆ ತರುತ್ತಿದೆ ಎನ್ನುವ ಅಂಶವನ್ನು ವಿದ್ಯಾಸುಬ್ರಹ್ಮಣ್ಯಂ ವಿವರಿಸುತ್ತಾರೆ. ಪ್ರೊ. ಪ್ರಭಾತ್ ಪಟ್ನಾಯಕ್ ಜೊತೆಗೆ ಮಾಡಿರುವ ಸಂದರ್ಶನವೂ ಮಹತ್ವ ಪೂರ್ಣವಾದದ್ದು. 'ಹುಷಾರ್, ನಾನು ಹಿಂದೂ ಆಗಿ ಮತಾಂತರಗೊಳ್ಳುತ್ತೇನೆ' ಹಸನ್ ಸುರೂರ್ ಅವರು ಆರೆಸ್ಸೆಸ್ ಮುಖಂಡರಿಗೆ ಬರೆದ, ವ್ಯಂಗ್ಯದ ಹರಿತವುಳ್ಳ ಪತ್ರ. ಹಾಗೆಯೇ ಜಮಾತೆ ಇಸ್ಲಾಮೀ ಸ್ಥಾಪಕರ ಪುತ್ರನ ಕುತೂಹಲಕಾರಿ ಸಂದರ್ಶನವೂ ಇದೆ. ಕಿರಿದಾದ ಪುಸ್ತಕ ಇದಾದರೂ ಜ್ವಲಂತ ವಿಷಯಗಳಿಗೆ ಸಂಬಂಧಿಸಿದಂತೆ ಅಪಾರ ಮಾಹಿತಿಗಳನ್ನು ನೀಡುತ್ತದೆ. ಸದ್ಯದ ಸಂದರ್ಭದಲ್ಲಿ ಈ ಕೃತಿ ಹೆಚ್ಚು ಪ್ರಸ್ತುತವಾಗಿದೆ.ಕ್ರಿಯಾ ಪುಸ್ತಕ ಹೊರತಂದಿರುವ ಈ ಕೃತಿಯ ಮುಖಬೆಲೆ 65 ರೂ. ಆಸಕ್ತರು 90360 82005 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News