ಕನ್ನಡ-ಮರಾಠಿ ಸಾಂಸ್ಕೃತಿಕ ಪ್ರತಿನಿಧಿ ಪ್ರಕಾಶ್ ಜಿ ಬುರ್ಡೆ

Update: 2016-02-08 17:23 GMT

ಟೆಮ್ಸ್ ಆಫ್ ಇಂಡಿಯಾ, ಇಕಾನಾಮಿಕ್ ಟೈಮ್ಸ್, ಆಫ್ಟರ್‌ನೂನ್ ಇತ್ಯಾದಿ ಇಂಗ್ಲಿಷ್ ಪತ್ರಿಕೆಗಳ ಸಹಿತ ಕನ್ನಡದಲ್ಲಿ ಆದರಲ್ಲೂ ಮುಂಬೈಯ ಕನ್ನಡ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಪ್ರಸಿದ್ಧ ವಿಮರ್ಶಕ, ಕನ್ನಡಿಗ ಪ್ರಕಾಶ್ ಜಿ ಬುರ್ಡೆ 2016ರ ಹೊಸವರ್ಷದ ಮೊದಲ ವಾರದಲ್ಲಿ ನಮ್ಮನ್ನು ಅಗಲಿದರು. ಕರ್ನಾಟಕ ಸಂಘ ಮುಂಬೈ ಇದರ ಅಧ್ಯಕ್ಷರೂ ಇವರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇವರು ಸಂಘಕ್ಕೆ ಬರುವುದು ಅಪರೂಪವಾಗಿತ್ತು, ಆರೋಗ್ಯದ ಸಮಸ್ಯೆಯಿಂದಾಗಿ. ಕಳೆದ 2015ರಲ್ಲಿ ಎಂಬತ್ತೊಂದನೆ (81) ವಾರ್ಷಿಕ ಮಹಾಸಭೆಗೆ ಅನಿರೀಕ್ಷಿತವಾಗಿ ಆರೋಗ್ಯ ಕೈಕೊಟ್ಟಿದ್ದರಿಂದ ಸಂಘದ ಉಪಾಧ್ಯಕ್ಷನಾಗಿದ್ದ ನನಗೆ ಮೆಸೇಜ್ ಮಾಡಿ ‘‘ಇಂದಿನ ಮಹಾಸಭೆಯನ್ನು ನೀವೇ ಸುಧಾರಿಸಿ ಬಿಡಿ’’ ಎಂದಿದ್ದರಿಂದ ಅಂದಿನ ಮಹಾಸಭೆಯ ಅಧ್ಯಕ್ಷತೆ ವಹಿಸುವ ಜವಾಬ್ದಾರಿ ನನ್ನದಾಗಿತ್ತು. ಸಂಘದ ಮುಖವಾಣಿ ‘ಸ್ನೇಹ ಸಂಬಂಧ’ದಲ್ಲಿ ಅವರು ಬರೆಯುತ್ತಿದ್ದ ‘ನವಿಲುಗರಿ’ಅಂಕಣ ಲೇಖನದಲ್ಲಿ ಭಾರತದ ಪ್ರಖ್ಯಾತ ಹಿಂದುಸ್ತಾನಿ ಗಾಯಕರನ್ನೆಲ್ಲ ಪರಿಚಯಿಸಿದ್ದರು. ಹೆಚ್ಚಿನವರು ಬುರ್ಡೆಯವರು ನಿಕಟ ಸಂಪರ್ಕ ಇರಿಸಿದ್ದರು. ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ ಎಂದರೆ ನಿಧನದ ಮರುದಿನ ‘ಮುಂಬೈ ಮಿರರ್’ ಇಂಗ್ಲಿಷ್ ದೈನಿಕದಲ್ಲಿ ಅರ್ಧಪುಟ ಬುರ್ಡೆಯವರ ಕುರಿತಂತೆ ಬರಹ ಬಂದಿರುವುದು ಗಮನಿಸಬೇಕು.

ಟೈಮ್ಸ್ ಗ್ರೂಪ್‌ಗೆ ಸುಮಾರು ಒಂದು ದಶಕದ ಕಾಲ ಸಂಗೀತ ರಂಗಭೂಮಿಯ ವಿಮರ್ಶೆಗಳನ್ನು ಬರೆಯುವ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಪ್ರಕಾಶ್ ಬುರ್ಡೆಯವರಿಗೆ ಆನಂತರ ಟೈಮ್ಸ್‌ನ ಸಂಪಾದಕರು ಬದಲಾದುದು, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡುತ್ತಿದ್ದ ಆದ್ಯತೆಗಳು ನಿಂತು ಹೋದದ್ದು, ಅರೆನಗ್ನ ಯುವತಿಯರ ಫೋಟೊ ಸುದ್ದಿಗಳು ಹೆಚ್ಚುತ್ತಿರುವುದು ಕಂಡು ಸ್ನೇಹ ಸಂಬಂಧದಲ್ಲಿ ‘ಬೋರಿ ಬಂದರಿನ ಮುದುಕಿ’ ಎಂಬರ್ಥದಲ್ಲಿ ಒಂದು ಲೇಖನ ಕೂಡಾ ಬರೆದು ಕೊಟ್ಟಿದ್ದರು.
ತೊಂಬತ್ತರ ದಶಕದಲ್ಲಿ ಕರ್ನಾಟಕ ಸಂಘ, ಮುಂಬೈ ಇದರ ವರದರಾಜ ಆದ್ಯ ಪ್ರಶಸ್ತಿಯನ್ನು ಪಂ.ಭೀಮ್‌ಸೇನ್ ಜೋಶಿ ಅವರಿಗೆ ಘೋಷಿಸಲಾಗಿತ್ತು. ಆದರೆ ಪ್ರಶಸ್ತಿ ಪ್ರದಾನದ ಆ ವಾರದಲ್ಲಿ (ಯಾವಾಗಲೂ ಅದು ಫೆಬ್ರವರಿ 25 ಫಿಕ್ಸ್ ಇರುತ್ತದೆ) ಪಂ.ಭೀಮ್‌ಸೇನ್ ಜೋಶಿ ಅವರು ಆಪಘಾತಕ್ಕೀಡಾಗಿ ಪುಣೆಯ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಆವಾಗ ನಾವು ಕರ್ನಾಟಕ ಸಂಘದ ಪರವಾಗಿ ಮುಂಬೈಂದ ಪುಣೆಗೆ ತೆರಳಿ ವರದರಾಜ ಆದ್ಯ ಪ್ರಶಸ್ತಿಯನ್ನು ಜೋಶಿಯವರ ಮನೆಯಲ್ಲೇ ಪ್ರದಾನಿಸಿದ್ದೆವು. ಇದರ ಎಲ್ಲಾ ನೇತೃತ್ವವನ್ನು ಪ್ರಕಾಶ್ ಬುರ್ಡೆಯವರು ವಹಿಸಿದ್ದು ಆಗಾಗ ತಮ್ಮ ಲೇಖನಗಳಲ್ಲಿ ನೆನಪಿಸುತ್ತಿದ್ದರು. ಬುರ್ಡೆಯವರ ಕಾರಣ ನನಗೂ ಭಾರತರತ್ನ ಪಂ.ಭೀಮ್‌ಸೇನ್ ಜೋಶಿಯವರನ್ನು ಪುಣೆಯಲ್ಲಿ ಅವರ ಮನೆಯಲ್ಲೇ ಕಾಣುವ ಭಾಗ್ಯ ಲಭಿಸಿತ್ತು.

ಕರ್ನಾಟಕ ಸಂಘದ ಪತ್ರಿಕೆ ಸ್ನೇಹ ಸಂಬಂಧ 25ರ ಬೆಳ್ಳಿಹಬ್ಬ ಸಂಭ್ರಮ 2010ರಲ್ಲಿ ಜರಗಿತ್ತು. ಆವಾಗ ಪತ್ರಿಕೆಯ ಪರವಾಗಿ ‘ಒತ್ತಡಗಳ ನಡುವೆ ಪತ್ರಿಕೋದ್ಯಮ’ ವಿಷಯದ ಮೇಲೆ ಸೆಮಿನಾರ್ ಇರಿಸಲಾಗಿತ್ತು. ಅಲ್ಲಿ ಪ್ರಕಾಶ್ ಬುರ್ಡೆಯವರು ನೀಡಿದ್ದ ಪ್ರತಿಕ್ರಿಯೆ ಹೀಗಿತ್ತು- ‘‘ಒಂದೆರಡು ರಾಷ್ಟ್ರೀಯ ದಿನ ಪತ್ರಿಕೆಗಳಲ್ಲಿ ಸ್ತಂಭ ಲೇಖಕನೆಂದು ಕಳೆದ ಶತಮಾನದಲ್ಲಿ 1984ರಿಂದ 1995ರ ತನಕ ಉತ್ತರಾದಿ ಸಂಗೀತ ವಿಮರ್ಶೆ, ಕನ್ನಡ ನಾಟಕ, ಯಕ್ಷಗಾನದ ಬಗ್ಗೆ ಆಗಿಂದಾಗೆ ಲೇಖನ ಬರೆದಿರುವುದರಿಂದ ನನ್ನ ಕೆಲವು ವಿಚಾರಗಳನ್ನು ಹೇಳುತ್ತಿದ್ದೇನೆ. ‘‘ನಮ್ಮ ‘ಸ್ನೇಹ ಸಂಬಂಧ’ ಪತ್ರಿಕೆಯಲ್ಲಿ ಅನೇಕ ವರ್ಷಗಳಿಂದ ಕನ್ನಡದಲ್ಲಿಯ ನನ್ನ ಲೇಖನಗಳು ನನ್ನನ್ನು ನಿಮ್ಮೆದುರು ನಿಂತು ಮಾತನಾ ಡಲು ಪ್ರೇರೇಪಿಸಿದೆ’’ ಎಂಬ ಮಾತನ್ನು ಹೇಳಿದ್ದರು ಬುರ್ಡೆ. ಅಲ್ಲಿ ಅವರು ಜಾಹೀರಾತುದಾರರು ಹೇಗೆ ಪತ್ರಿಕೆಯೊಂದನ್ನು ತಮ್ಮ ಹಿಡಿತದಲ್ಲಿಡುತ್ತಾರೆ ಎಂಬ ಸಂಗತಿಯನ್ನು ಬಹಳ ಅರ್ಥಪೂರ್ಣವಾಗಿ ಬಿಚ್ಚಿಟ್ಟಿದ್ದರು.
‘‘20 ವರ್ಷ ಒಂದು ಮಲ್ಟಿನ್ಯಾಶನಲ್ ಕಂಪೆನಿಯಲ್ಲಿ ಪ್ರತಿನಿಧಿ ಎಂದು ಕೆಲಸ ಪ್ರಾರಂಭಿಸಿ ರಾಷ್ಟ್ರೀಯ ಮಾರುಕಟ್ಟೆಯ ಮ್ಯಾನೇೆಜರ್ ಎಂದು ನಾನು ದುಡಿದುದರಿಂದ ಈ ಪತ್ರಿಕೋದ್ಯಮದಲ್ಲಿ ಜಾಹೀರಾತುದಾರರ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ಒತ್ತಡಗಳ ಬಗ್ಗೆ ಮಾತನಾಡುವುದಿದೆ’’ ಎಂದೇ ಅವರು ಆರಂಭಿಸಿದ್ದಾರೆ ತಮ್ಮ ಲೇಖನದಲ್ಲಿ. ಆವಾಗ ಇಡೀ ಜಾಹೀರಾತು ಉದ್ಯೋಗದಲ್ಲಿ ‘ಗಾಡ್’ ಎಂದು ಖ್ಯಾತರಾದ ಅಲೆಕ್ ಪದಮ್‌ಸಿ ಅವರ ಎರಡು ನಾಟಕಗಳ ವಿಮರ್ಶೆ ಮುಂದಿಟ್ಟು ಯಾವ ರೀತಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಬಂದ ನಿಕೃಷ್ಟ ದರ್ಜೆಯ ಎರಡೂ ನಾಟಕಗಳ ವಿಮರ್ಶೆಯಿಂದ ಅಲೆಕ್ ಪದಮ್‌ಸಿ ನೊಂದಿದ್ದರೆಂದು ವಿಶ್ಲೇಷಿಸಿದ್ದರು.
ಬುರ್ಡೆಯವರ ನಿಧನದ ನಂತರ ನಮ್ಮ ಖ್ಯಾತ ವಿಮರ್ಶಕ ಡಾ.ರಹಮತ್ ತರೀಕೆರೆ ಅವರು ಫೋನ್ ಮಾಡಿ ಬುರ್ಡೆಯವರ ಕುರಿತಂತೆ ಲೇಖನ ಬರೆಯುವುದಾಗಿ ತಿಳಿಸಿದಾಗ ಬೆಂಗಳೂರಿನಲ್ಲಿದ್ದ ನಾನು ‘‘ಕರ್ನಾಟಕ ಸಂಘಕ್ಕೆ ಕಾಲ್ ಮಾಡಿ. ಎಲ್ಲಾ ಮಾಹಿತಿ ದೊರೆಯಬಹುದು’’ ಎಂದಿದ್ದೆ. ಡಾ ರಹಮತ್ ತರೀಕೆರೆ ಅವರು ಪ್ರಜಾವಾಣಿಗೆ ಬರೆದ ಲೇಖನದ ಆರಂಭದಲ್ಲೇ ಮುಂಬೈನಲ್ಲಿ ಕರ್ನಾಟಕ ಸಾಂಸ್ಕೃತಿಕ ಪ್ರತಿನಿಧಿಯಂತಿದ್ದ ಪ್ರಕಾಶ್ ಜಿ ಬುರ್ಡೆಯವರು (ನವೆಂಬರ್ 24 1938ರಿಂದ ಜನವರಿ 4 2016) ಕಣ್ಮುಚ್ಚಿದರು. ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಅವರು ಕರ್ನಾಟಕದ ಬಹಳ ಜನರಿಗೆ ಪರಿಚಿತರಲ್ಲ. ಆದರೆ ಅವರನ್ನು ಬಲ್ಲವರಿಗೆ ಅವರ ಸಾವು, ಕರ್ನಾಟಕ-ಮಹಾರಾಷ್ಟ್ರಗಳ ಸಾಂಸ್ಕೃತಿಕ ಕೊಡು ಕೊಳೆಯ ಕೋಶವೊಂದು ಕಳೆದುಹೋದಂತೆ ಭಾಸವಾಗುತ್ತಿದೆ’’ ಎಂದಿದ್ದರು.
ನಿಧನದ ಕೆಲವು ದಿನಗಳ ಮೊದಲಷ್ಟೇ ಅವರು ಫೋನ್ ಮಾಡಿ ‘‘ಟೈಮ್ಸ್‌ಗೆ ಹಿಂದೆ ಬರೆದಿದ್ದ ಕೆಲವು ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ. ಸ್ನೇಹ ಸಂಬಂಧದಲ್ಲಿ ಹಾಕುವಿರಲ್ಲಾ?’’ ಎಂದಿದ್ದರು. ಕಳೆದ 2004ರಿಂದ ಈ ತನಕ ಸುಮಾರು ಒಂದು ದಶಕ ಕಾಲ ‘ಸ್ನೇಹ ಸಂಬಂಧ’ದ ಸಂಪಾದಕನಾಗಿದ್ದ ನನಗೆ ಪ್ರಕಾಶ್ ಬುರ್ಡೆಯವರ ಅನೇಕ ಹಸ್ತ ಪ್ರತಿಗಳು ಸಿಕ್ಕಿವೆ. ಜನವರಿ ತಿಂಗಳಲ್ಲೂ (2016) ಅವರ ಲೇಖನವಿತ್ತು. ಆದರೆ ಅವರ ಅಕ್ಷರಗಳು ಉತ್ತರ ಕರ್ನಾಟಕ ಶೈಲಿಯಲ್ಲಿರುತ್ತಿತ್ತು! (ಟೈಮ್ಸನ್ನು ಅವರು ಟಾಯಿಮ್ಸ್ ಅನ್ನುತ್ತಿದ್ದರು, ಹೀಗೆ.) ಮರಾಠಿ-ಇಂಗ್ಲಿಷ್-ಕನ್ನಡ ಈ ಮೂರೂ ಭಾಷೆಗಳಲ್ಲಿ ಅವರಿಗೆ ಉತ್ತಮ ಹಿಡಿತವಿತ್ತು.
ಬುರ್ಡೆಯವರ ಲೇಖನಗಳನ್ನು ಓದಿದವರಿಗೆ ಅವರ ವಿದ್ವತ್ ಅರ್ಥವಾಗಿದೆ. ಸಾಂಸ್ಕೃತಿಕ ಲೋಕದ ವಿಶಿಷ್ಟ ನೆನಪುಗಳನ್ನು ಅವರು ಬಹು ಸ್ವಾರಸ್ಯಕರವಾಗಿ ದಾಖಲಿಸುತ್ತಿದ್ದರು. ಅವರಿಗೆಂದೂ ಜಾತಿ-ಪ್ರಾಂತ ಮುಖ್ಯವಾಗಿರಲಿಲ್ಲ. ಕರ್ನಾಟಕ ಸಂಘದ 81ನೆ ವಾರ್ಷಿಕ ಮಹಾಸಭೆಗೆ ಗೈರು ಹಾಜರಾಗಿದ್ದರೂ ವಾರ್ಷಿಕ ವರದಿಯಲ್ಲಿ ಬುರ್ಡೆಯವರ ಅಧ್ಯಕ್ಷರ ಮಾತು ಪ್ರಕಟವಾಗಿದೆ. ‘‘ಆಲದ ಮರದಂತೆ ಕನ್ನಡ ಚಟುವಟಿಕೆಗಳು ಸಂಘದಲ್ಲಿ ವಿಸ್ತರಣೆಯಾಗುತ್ತಿದೆ. ಕಲೆಗಳ ಸಂವರ್ಧನೆಗಾಗಿ ಶ್ರಮಿಸುತ್ತಿರುವ ಸಂಘ ಮುಂಬೈ ಕನ್ನಡಿಗರ ಮನ ಗೆದ್ದಿದೆ. ಇದಕ್ಕೆಲ್ಲ ಸದಸ್ಯರ ಬೆಂಬಲ ಕಾರಣ’’ ಎಂದು ಹಿಂದಿನ ವರ್ಷ ಹೇಳಿದ್ದರು. ಕರ್ನಾಟಕ ಸಂಘ ಮುಂಬೈ 1993ರಿಂದ ಹಮ್ಮಿಕೊಂಡು ಬಂದಿರುವ ‘ಕಲಾಭಾರತಿ’ ದೇಶಾದ್ಯಂತ ಕೀರ್ತಿ ತರುವಲ್ಲಿ ಪ್ರಕಾಶ್ ಜಿ ಬುರ್ಡೆ ಅವರ ಪಾತ್ರ ಬಹು ಮಹತ್ವದ್ದು. ಇತ್ತೀಚೆಗೆ ಕರ್ನಾಟಕ ಸಂಘ ಮುಂಬೈ ಪ್ರಕಾಶ್ ಬುರ್ಡೆಯವರ ಶ್ರದ್ಧಾಂಜಲಿ ಸಭೆಯನ್ನು ಕರೆದಿತ್ತು. ಅಲ್ಲಿ ನಾಡಿನ ಖ್ಯಾತ ವಿಮರ್ಶಕರು ಸಂಗೀತ ದಿಗ್ಗಜರು ಬಂದು ಬುರ್ಡೆಯವರ ಬದುಕಿನ ಸಾಧನೆಗಳನ್ನು ಇನ್ನಷ್ಟು ಬಿಚ್ಚಿಟ್ಟಿದ್ದರು.
ಭಾಷೆ ಮತ್ತು ಇಂಟರ್‌ನೆಟ್ ಬಳಕೆ:
ಹೀಗೊಂದು ಉಪನ್ಯಾಸ
ವಿಮರ್ಶೆ ಅಂದರೆ ಏನು?
ಸಂಕೀರ್ಣವಾಗಿರುವುದನ್ನು ‘ಸರಳಗೊಳಿಸುವುದು’ ವಿಮರ್ಶೆ ಅಲ್ಲ. ಸಂಕೀರ್ಣವಾಗಿರುವುದನ್ನು ಹೇಗೆ ‘ಸ್ಪಷ್ಟಗೊಳಿಸುವುದು’ ಅದುವೇ ವಿಮರ್ಶೆ. ಒಂದು ಕಾದಂಬರಿಯೋ ಅಥವಾ ಇನ್ನೇನೋ ಅಲ್ಲಿನ ಕ್ಲಿಷ್ಟತೆಯನ್ನು ಬಿಡಿಸಿದಾಗ ಅಲ್ಲಿನ ಸ್ಪಷ್ಟತೆ ಸಿಗುತ್ತದೆ.
ಹೀಗೆಂದವರು ವಿಮರ್ಶಕ ಎಸ್.ಆರ್.ವಿಜಯ ಶಂಕರ್. ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಜ.29ರಂದು ಜೆ.ಪಿ.ನಾಯಕ್ ಭವನ್, ವಿದ್ಯಾನಗರಿಯಲ್ಲಿ ‘ಸಮಕಾಲೀನ ಸಾಹಿತ್ಯ-ಸಂಸ್ಕೃತಿ, ಇಂಟರ್‌ನೆಟ್ ಬಳಕೆ ಸಾಧಕ ಭಾದಕ’ ವಿಷಯದಲ್ಲಿ ಅವರು ಉಪನ್ಯಾಸ ನೀಡುತ್ತಾ ಮೇಲಿನ ಮಾತುಗಳನ್ನಾಡಿದರು. ಅದೇ ದಿನ ಸಂಜೆಗೆ ಸಾಹಿತಿ ಮಿತ್ರಾ ವೆಂಕಟ್ರಾಜ್ ಅವರ ‘ಮಿತ್ರಾವಳಿ’ ಅಭಿನಂದನ ಗ್ರಂಥ ಬಿಡುಗಡೆಗೂ ವಿಜಯಶಂಕರ್ ಮುಖ್ಯ ಅತಿಥಿಯಾಗಿದ್ದರು. ಅಂದು ಪಿಎಚ್‌ಡಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನೂ ನಡೆಸಿದ್ದರು.
 ‘ಅನುಭವ’ ಮತ್ತು ‘ರಸ’ ಒಂದೇ? ಅಲ್ಲವೇ? ಇದು ಆಧುನಿಕ ವಿಮರ್ಶಕರ ಮುಖ್ಯವಾಗಿ ಕನ್ನಡದವರ ಸಮಸ್ಯೆಯೂ ಹೌದು. ಬೇಂದ್ರೆಯವರು ಆಧುನಿಕ ಸಾಹಿತ್ಯದಲ್ಲಿ ರಸ-ವಿಮರ್ಶೆಯನ್ನು ಒಟ್ಟು ಸೇರಿಸಿ ಹೊಸತನವನ್ನು ಬರೆದವರು. ನರಹಳ್ಳಿ ಎಚ್.ಎಸ್.ಆರ್ ಇಂತಹ ವಿಮರ್ಶಕರು ಅಂತರ್ಗತವಾದ ಸಿದ್ಧಾಂತಗಳನ್ನು ಎಸ್ಟಾಬ್ಲಿಷ್ ಮಾಡುವುದಿಲ್ಲ. ಕಾಳಿದಾಸ ಹೇಳಿದಂತೆ ಅರ್ಥ ಮತ್ತು ಶಬ್ದಗಳು ಸತಿ-ಪತಿ ಪರಮೇಶ್ವರ ಹಾಗೆ ಸೇರಿರಬೇಕು. ಅರ್ಥ ಮತ್ತು ಶಬ್ದಗಳು ಸೇರಿ ಅರ್ಥ ಬದಲಾಗುತ್ತದೆ ಎನ್ನುವ ಮಾತನ್ನೂ ವಿಶ್ಲೇಷಿಸಿದರು. ಮಾವಿನ ಮರಕ್ಕೂ ಕೋಗಿಲೆಗೂ ಸಂಬಂಧವೇ ಇಲ್ಲ. ಇಬ್ಬರಿಗೂ ಪರಸ್ಪರರ ಅರಿವಿಲ್ಲ. ಆದರೆ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎನ್ನುವ ಸಂಬಂಧ ಕಲ್ಪಿಸುವುದು ನಮ್ಮ ಪ್ರಜ್ಞೆ. ಪ್ರಜ್ಞೆಯ ಮೂಲಕ ಸಂಬಂಧ ಇಲ್ಲದ್ದಕ್ಕೆ ಸಂಬಂಧ ಮಾಡುತ್ತೇವೆ. ಭಾಷೆಯ ಮೂಲಕ ಸಂಪರ್ಕ ಕಲ್ಪಿಸುತ್ತೇವೆ. ಲಯವು ಅರ್ಥವನ್ನು ಅನುಸರಿಸಬೇಕು ಎನ್ನುತ್ತಾ ಮುಂಬೈಯಲ್ಲಿ ಕನ್ನಡದಲ್ಲಿ ಉಳಿದುಕೊಂಡ ಕೆಲವು ಅಪರೂಪದ ಶಬ್ದಗಳು ಎಷ್ಟಿವೇ? ಈ ಬಗ್ಗೆಯೂ ಲೇಖನ ಮಾಡಬಹುದು ಎಂದೂ ವಿಜಯ ಆಹ್ವಾನ ನೀಡಿದರು.
ಭಾಷೆಯಲ್ಲಿ ಒಂದು ಲೋಕದ ಅನುಭವ ಅಡಗಿರುತ್ತದೆ. ಶಬ್ದವೊಂದು ಸ್ವಲ್ಪ ತಪ್ಪಿದರೂ ಕೆಂಡ ಮುಚ್ಚಿದ ಹಾಗೆ ಶಬ್ದವನ್ನು ಫಿಲ್ ಮಾಡಬೇಕು.ಆವಾಗ ಒಬ್ಬ ಕವಿ ಭಾಷೆಯ ಹೊಸತನ ಸೃಷ್ಟಿಸುತ್ತಾನೋ? ಅಥವಾ ಇರುವುದನ್ನೇ ಹೊಸತಾಗಿ ಸೃಷ್ಟಿಸುತ್ತಾನೋ? ಎನ್ನುವುದು ಗೊತ್ತಾಗುತ್ತದೆ. ಕೊನೆಗೂ ಲೋಕ ಸ್ಫೂರ್ತಿಯನ್ನು ಒಂದು ಭಾಷೆ ಹಿಡಿದಿಟ್ಟು ಅರ್ಥದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ. ಭಾಷೆ ಎಂಬುದು ಜ್ಞಾನಕ್ಕೆ ಹೋಗುವ ದಾರಿ. ಹಾಗಾಗಿ ಭಾಷೆಯನ್ನು ಆಧುನಿಕ ಅಗತ್ಯಕ್ಕೆ ಇಂಟರ್‌ನೆಟ್ ಯುಗದಲ್ಲಿ ನಾವು ಬಳಸಿಕೊಳ್ಳಬೇಕು. ಆದ್ದರಿಂದ ಆಧುನಿಕ ಬಳಕೆಗೆ ಉಪಯೋಗವಾಗುವ ಭಾಷೆ ಯಾವುದು? ಈ ಬಗ್ಗೆ ಗಮನ ನೀಡಬೇಕಾಗಿದೆ. ಅನುಭವದ ಅರಿವಿನ ಅಭಿವ್ಯಕ್ತಿಗೆ ಇಂಟರ್‌ನೆಟ್ ಅನ್ನು ಬಳಸಲು ಇಂಟರ್‌ನೆಟ್ ಭಾಷೆಯನ್ನೂ ಗಮನಿಸಲೇಬೇಕು ಎಂದರು.

ಇದೇ ಸಂದರ್ಭದಲ್ಲಿ ಅವರು ಮಾಹಿತಿಗೂ ಜ್ಞಾನಕ್ಕೂ ಇರುವ ವ್ಯತ್ಯಾಸ ವನ್ನು ತಿಳಿಸುತ್ತಾ ಇಂಟರ್‌ನೆಟ್‌ಗೆ ಹೋದರೆ ಗೂಗಲ್‌ನಲ್ಲಿ ಮಾಹಿತಿ ಸಿಗುತ್ತದೆ. ಆದರೆ ಜ್ಞಾನ ಅದಲ್ಲ. ನಾಲೇಜ್ ಮತ್ತು ಇನ್‌ಫಾರ್ಮೇಶನ್ ಎರಡೂ ಬೇರೆ ಬೇರೆ ಎನ್ನುವುದನ್ನೂ ಮರೆಯಬಾರದು ಎಂದರು ವಿಜಯ ಶಂಕರ್.
ಈ ಸಂದರ್ಭದಲ್ಲಿ ಅವರು ಮುಂಬೈ ವಿವಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳ ಜೊತೆ ಅವರವರ ವಿಷಯಗಳಿಗೆ ಸಂಬಂಧಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಮಿತ್ರಾವಳಿ’ ಬಿಡುಗಡೆ ಮಧ್ಯಾಹ್ನ ನಂತರ ಹೆಸರಾಂತ ಸಾಹಿತಿ ‘ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯ ಸಂಭ್ರಮ’ ಜರಗಿತು. ಅಭಿನಂದನ ಗ್ರಂಥ ‘ಮಿತ್ರಾವಳಿ’ಯನ್ನು ಖ್ಯಾತ ವಿಜ್ಞಾನಿ, ಸಾಹಿತಿ ಡಾ.ವ್ಯಾಸರಾವ್ ನಿಂಜೂರು ಬಿಡುಗಡೆ ಮಾಡಿದರು. ‘‘ನನಗೆ ಊರಿನ ಬಗ್ಗೆ ಬರೆಯಲು ಆಗುತ್ತದೆ. ಆದರೆ ಮುಂಬೈ ಬಗ್ಗೆ ಸಂವೇದನೆ ಆಗ್ತಾ ಇಲ್ಲ’’ ಎಂದ ನಿಂಜೂರರು, ಸಾಂಸ್ಕೃತಿಕ ಮತ್ತು ಶ್ರೀಮಂತ ಕುಟುಂಬದಿಂದ ಬಂದ ಮಿತ್ರಾ ವೆಂಕಟ್ರಾಜ್ ಅವರನ್ನು ನಮ್ಮ ವಿಮರ್ಶಕರು ಗಮನಿಸಬೇಕು ಎಂದರು. ಎಸ್.ಆರ್.ವಿಜಯಶಂಕರ್‌ರು ಮುಖ್ಯ ಅತಿಥಿಯಾಗಿ ಮಾತನಾಡಿ ವಾಸ್ತವವಾದದ ಅರಿವಿನಲ್ಲೇ ಮಿತ್ರಾರ ಕತೆಗಳಿವೆ. ಮಾಗುತ್ತಾ ಹೊಸದಾಗುವುದು ಯಶಸ್ಸು. ಮಿತ್ರಾರ ಕತೆಗಳು ಮಾಗುವ ಕಡೆಗೆ ವಾಲುವ ಕತೆಗಳು. ಹಾಗಾಗಿ ಅವು ಧೀಘಕಾಲ ಬದುಕುತ್ತವೆ ಎಂದರು. ಕಸಾಪ ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷರಾದ ಎಚ್.ಬಿ.ಎಲ್.ರಾವ್ ಸ್ವಾಗತಿಸಿದರು. ಕೃತಿಯ ಕುರಿತು ರಂಗನಟಿ ಅಹಲ್ಯಾ ಬಲ್ಲಾಳ್ ಮಾತನಾಡಿದರು. ಡಾ.ಪೂರ್ಣಿಮಾ ಎಸ್.ಶೆಟ್ಟಿ, ರಮಾ ಉಡುಪ ಮಿತ್ರಾ ವೆಂಕಟ್ರಾಜ್ ಜೊತೆ ಸಂವಾದ ನಡೆಸಿದರು.
ದೇವನಾರ್ ಡಂಪಿಂಗ್ ಗ್ರೌಂಡ್‌ನ ‘ದಾಖಲೆ’ಯ ಅಗ್ನಿ ದುರಂತ
ಒಂದು ಡಂಪಿಂಗ್ ಗ್ರೌಂಡ್‌ಗೆ ಬೆಂಕಿ ಬಿದ್ದರೆ ಏನೆಲ್ಲ ದೃಶ್ಯಗಳು ಕಂಡು ಬರಲು ಸಾಧ್ಯ? ಅದಕ್ಕೊಂದು ಉದಾಹರಣೆ ಮುಂಬೈಯ ದೇವನಾರ್ ಡಂಪಿಂಗ್ ಗ್ರೌಂಡ್. ಜನವರಿ 27ರಂದು ಬೆಳಗ್ಗೆ ಆರೂವರೆ ಗಂಟೆಗೆ ಇಲ್ಲಿ ಬೆಂಕಿ ಕಾಣಿಸಿದ್ದು ಮೂರು ದಿನಗಳ ಕಾಲ ತನ್ನ ಪ್ರತಾಪವನ್ನು ತೋರಿಸಿತ್ತು. ನಾಲ್ಕನೆ ದಿನಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಮನಪಾ ಆಡಳಿತ ಮತ್ತು ಅಗ್ನಿಶಾಮಕ ದಳ ಹೇಳಿದರೂ ಅದು ಒಂದು ದಿಕ್ಕಿನಲ್ಲಿ ಮಾತ್ರ ನಿಯಂತ್ರಣಕ್ಕೆ ಬಂದಿದ್ದೇ ಹೊರತು ಇತರೆಡೆ ಬಿಳಿ ಹೊಗೆ ನಂತರವೂ ಬರುತಲ್ಲೇ ಇತ್ತು. ಎಸ್‌ಪಿ ಗ್ರೂಪ್ ಲೀಡರ್ ರಯೀಸ್ ಶೇಖ್ ಅನುಸಾರ ಮನಪಾ ಆಡಳಿತ ಮತ್ತು ಗುತ್ತಿಗೆದಾರರ ನಿರ್ಲಕ್ಷದ ಕಾರಣವೇ ಬೆಂಕಿ ಬಿದ್ದಿತ್ತು. ಇದೀಗ ಡಂಪಿಂಗ್ ಗ್ರೌಂಡನ ಗುತ್ತಿಗೆದಾರರ ವಿರುದ್ಧ ಮನಪಾ ಆಡಳಿತ ಪ್ರಕರಣ ದಾಖಲಿಸಲು ನಿರ್ಧರಿಸಿದೆ. ಈ ಬೆಂಕಿ ಘಟನೆಯ ಪರಿಣಾಮಗಳು ಹೇಗಿತ್ತು ಅಂದರೆ ಇಷ್ಟರ ತನಕ ಇಂತಹ ದೃಶ್ಯ ಕಾಣಿಸಿರಲಿಲ್ಲ!
1) ದೇವನಾರ್ ಡಂಪಿಂಗ್ ಗ್ರೌಂಡ್ ಪರಿಸರದ 74 ಶಾಲೆಗಳನ್ನು 3 ದಿನಗಳ ಕಾಲ ಮಹಾನಗರ ಪಾಲಿಕೆ ಬಂದ್ ಇರಿಸಿತು.
2) 14 ಫಯರ್ ಎಂಜಿನ್, 8 ವಾಟರ್ ಟ್ಯಾಂಕರ್ ಸಹಿತ ಅಗ್ನಿಶಾಮಕ ದಳದ 21 ಅಧಿಕಾರಿಗಳು, 132 ಜವಾನರು ಕಾರ್ಯನಿರತರಾಗಿದ್ದು ಬೆಂಕಿಯನ್ನು ನಿಂಯತ್ರಿಸುತ್ತಿದ್ದರು.
3) ಡಂಪಿಂಗ್ ಗ್ರೌಂಡ್ ಪರಿಸರದ ಐದು ಲಕ್ಷ ಜನರು ಹೊಗೆಯ ಉಸಿರಾ ಟದಿಂದ ಭಾರೀ ಕಷ್ಟಕ್ಕೀಡಾದರು.
4) 8 ವಾಟರ್ ಟ್ಯಾಂಕರ್‌ಗಳಲ್ಲಿ 12ರಿಂದ 18 ಸಾವಿರ ಲೀಟರ್ ನೀರು ಸಂಗ್ರಹವಿದ್ದರೆ, 14 ಫಯರ್ ಇಂಜಿನ್‌ಗಳಲ್ಲಿ ಪ್ರತೀ ಎಂಜಿನ್‌ಗಳಲ್ಲಿ 4,500 ಲೀಟರ್ ನೀರಿನ ಸಾಮರ್ಥ್ಯವಿತ್ತು.
5) ಎರಡು ಆ್ಯಂಬುಲೆನ್ಸ್ ವಿಶೇಷ ಡಾಕ್ಟರ್-ಸಿಬ್ಬಂದಿ ಜೊತೆ ಸ್ಥಳದಲ್ಲಿತ್ತು.
6) ಒಂದು ಕಂಟ್ರೋಲ್ ಪೋಸ್ಟ್, ಸೂಚನೆಗಳ ವಿಶೇಷ ನಿಯಂತ್ರಿತ ಕಕ್ಷೆ ರಚನೆ.
7) ಉಸಿರಾಟದ ತೊಂದರೆ ಬಾರದಂತೆ ಸಿಬ್ಬಂದಿಗೆ ಉಸಿರಾಟದ ಉಪಕರಣಗಳ ವಾಹನ ಸೌಲಭ್ಯ.
8) ಬೆಂಕಿ ನಿಯಂತ್ರಿಸಲು ಮೊದಲ ಬಾರಿಗೆ ಅಗ್ನಿಶಾಮಕ ದಳವು ‘ಜೆಟ್ ಕೂಲ್ ಸೊಲ್ಯೂಶನ್’ನ ಆಧುನಿಕ ತಾಂತ್ರಿಕತೆ ಬಳಕೆ ಮಾಡಿತು.
9) ಡಂಪಿಂಗ್ ಗ್ರೌಂಡ್‌ನ ತ್ಯಾಜ್ಯದಿಂದ ದುರ್ಗಂಧವನ್ನು ತಡೆಯುವುದಕ್ಕೆ ಕಸದ ರಾಶಿಗೆ ‘ಬಯೋವಿಶ್’ ದ್ರವ ಸಿಂಪಡಿಕೆ.
10) ಹೊಗೆಯಿಂದ ಕಣ್ಣೀರು ಬರದಂತೆ ಮನಪಾದಿಂದ ಜನರಿಗೆ ಕನ್ನಡಕ ಮತ್ತು ಮುಖಕ್ಕೆ ರುಮಾಲು ಕಟ್ಟಿಕೊಳ್ಳಲು ಸಲಹೆ.

11) 128 ಎಕರೆ ಪರಿಸರದಲ್ಲಿ ಹರಡಿರುವ ದೇವನಾರ್ ಡಂಪಿಂಗ್ ಗ್ರೌಂಡ್‌ಮುಂಬೈಯ ಪ್ರಮುಖ ಡಂಪಿಂಗ್ ಗ್ರೌಂಡ್‌ಗಳಲ್ಲಿ ಒಂದು. ಪ್ರತೀ ವರ್ಷ ಇಲ್ಲಿನ ತ್ಯಾಜ್ಯ ರಾಶಿ ಏರುತ್ತಲೇ ಇದ್ದು ಜನರು ತೀವ್ರ ಬೇಸರಗೊಂಡಿದ್ದು ದೂರುಗಳನ್ನು ದಾಖಲಿಸುತ್ತಲೇ ಇದ್ದಾರೆ. ಇಂತಹ ದುರ್ಘಟನೆ ಮನಪಾಕ್ಕೊಂದು ಪಾಠ.

ಇದೀಗ ಮುಖ್ಯಮಂತ್ರಿಯವರು ತನಿಖೆಗೆ ಆದೇಶಿಸಿದ್ದಾರೆ. ಅತ್ತ ಪಾಲಿಕೆ ಆಯುಕ್ತ ಅಜೋಯ್ ಮೆಹ್ತಾ ಅವರು ಈ ಬೆಂಕಿ ದುರಂತವನ್ನು ಮುಂದಿಟ್ಟು ದೇವನಾರ್ ಪೊಲೀಸ್ ಠಾಣೆಯಲ್ಲಿ ಮೂವರು ಅಜ್ಞಾತ ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News