ಮಹಾಭಾರತದ ಇನ್ನೊಂದು ಹೊಸ ಓದು
ಮಹಾಭಾರತ ಕಾವ್ಯ ಮೊಗೆದಷ್ಟೂ ಉಕ್ಕುವ ಸಾಗರ. ಪ್ರಾಚೀನ ಕವಿಗಳಿಂದ ಹಿಡಿದು ಆಧುನಿಕ ಕವಿ, ಕತೆಗಾರರವರೆಗೆ ಮಹಾಭಾರತವನ್ನು ಮತ್ತೆ ಮತ್ತೆ ಬರೆಯಲಾಗಿದೆ. ಅವರವರ ಬೊಗಸೆಗೆ ದಕ್ಕಿದ ಮಹಾಭಾರತವನ್ನು ಮತ್ತೆ ಮತ್ತೆ ಮರು ವ್ಯಾಖ್ಯಾನಿಸುತ್ತಲೇ ಬಂದಿದ್ದಾರೆ. ಕವಿಗಳು, ಕತೆಗಾರರಲ್ಲದೆ ಸಂಶೋಧಕರೂ ಮಹಾಭಾರತವನ್ನು ಒಂದು ಐತಿಹ್ಯವಾಗಿ ಕಂಡು, ಅದರ ಒಳಹೊರಗನ್ನು ವಿಶ್ಲೇಷಿಸಿದ್ದಾರೆ. ಇರಾವತಿ ಕರ್ವೆಯ ‘ಯುಗಾಂತ’ ಈ ನಿಟ್ಟಿನಲ್ಲಿ ಮಹಾಭಾರತ ಪಾತ್ರ ವಿಶ್ಲೇಷಣೆಯಲ್ಲಿ ಅಪರೂಪದ ಕೃತಿ. ಕನ್ನಡದಲ್ಲಿಯೂ ಮಹಾಭಾರತವನ್ನು ಹಿನ್ನೆಲೆಯಾಗಿಟ್ಟು ಹಲವು ಕವಿಗಳು, ಕತೆಗಾರರು, ಕಾದಂಬರಿಕಾರರು ಬರೆದಿದ್ದಾರೆ. ಎಸ್. ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಈ ನಿಟ್ಟಿನಲ್ಲಿ ಒಂದು ಅಪರೂಪದ ಕೃತಿಯಾಗಿದೆ.
ಪುರಾಣವನ್ನು, ಮನುಷ್ಯಲೋಕದಲ್ಲಿಟ್ಟು ನೋಡಿದ ಕಾದಂಬರಿ ಅದು. ಕಂನಾಡಿಗಾ ನಾರಾಯಣ ಅವರು ಬರೆದಿರುವ ‘ದ್ವಾಪರ’ ಈ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ. ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ ಎಂದು ಅವರೇ ಇಲ್ಲಿ ಹೇಳಿಕೊಂಡಿದ್ದಾರೆ. ವಿವಿಧ ಸಂದರ್ಭ, ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಿಸಿಕೊಳ್ಳುತ್ತಲೇ, ವಾಸ್ತವವನ್ನು ಉಧ್ವಸ್ತಗೊಳಿಸುತ್ತ, ವೈಚಾರಿಕ ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತಾ, ಮಿಥ್‌ಗಳನ್ನು ಒಂದೊಂದಾಗಿ ಒಡೆಯುತ್ತಾ ಸಾಗುತ್ತದೆ ಈ ಕೃತಿ. ಇದು ಆಯಾ ಪಾತ್ರಗಳ ಸ್ವಗತ ಎಂದರೆ ಚೆನ್ನ. ಪಾತ್ರ ವಿಶ್ಲೇಷಣೆಗಳಲ್ಲಿ ಲೇಖಕರು ತೀರ ಆಳವಾಗಿ ಮತ್ತು ಸಂಶೋಧನಾತ್ಮಕವಾಗಿ ಇಳಿಯುವುದಿಲ್ಲವಾದರೂ, ಆಯಾ ಪಾತ್ರಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಮಹಾಭಾರತದ ಕಾಲಘಟ್ಟವನ್ನು ವಿಜ್ಞಾನದ ಮತ್ತು ವೈಚಾರಿಕ ಕಣ್ಣಲ್ಲಿ ನೋಡುವುದರ ಅಪಾಯವನ್ನು ಒಳಗಿಟ್ಟುಕೊಂಡು ಈ ಕೃತಿಯನ್ನು ನಾವು ನಮ್ಮದಾಗಿಸಲು ಪ್ರಯತ್ನಿಸಿದರೆ, ಮಹಾಭಾರತದ ಇನ್ನೊಂದು ಹೊಸ ಓದು ನಮಗೆ ದಕ್ಕುವುದರಲ್ಲಿ ಸಂಶಯವಿಲ್ಲ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 250 ರೂ. ಆಸಕ್ತರು 080-22203580 ದೂರವಾಣಿಯನ್ನು ಸಂಪರ್ಕಿಸಬಹುದು.