ಮೌರ್ಯ ಕಾಲದ ಭಾರತದ ಕುರಿತು...

Update: 2016-02-09 17:55 GMT

  ಭಾರತದ ಪಾಲಿಗೆ ವೌರ್ಯರ ಕಾಲದ ಭಾರತ ಅತ್ಯಂತ ಮಹತ್ವ ಪೂರ್ಣವಾದುದು. ಈ ದೇಶದ ತಳಸ್ತರದ ಬದುಕಿನಲ್ಲಿ ಮಹತ್ತರ ಬದಲಾವಣೆಯನ್ನು ತಂದ ಕಾಲ ಅದು. ಅಶೋಕನ ಕಾಲದಲ್ಲಿ ಈ ದೇಶ ಅತ್ಯಂತ ವಿಸ್ತಾರ ರೂಪವನ್ನು ಪಡೆಯಿತು. ಹಾಗೆಯೇ ಬೌದ್ಧ ಧರ್ಮ ಉಚ್ಛ್ರಾಯವನ್ನು ತಲುಪಿತು. ಹಿಂಸೆ-ಅಹಿಂಸೆ, ವೈದಿಕ-ಅವೈದಿಕ ಸಂಘರ್ಷದ ಕಾಲವೂ ಇದಾಗಿತ್ತು. ಈ ಹಿನ್ನೆಲೆಯಲ್ಲಿ ವೌರ್ಯರ ಕಾಲದ ಭಾರತವನ್ನು ತಿಳಿಯುವ ಮೂಲಕ ಭಾರತದ ಸಾಮಾಜಿಕ ಪಲ್ಲಟಗಳನ್ನು ನಾವು ತಿಳಿಯಬಹುದಾಗಿದೆ. ಭಾರತದ ಜನ ಇತಿಹಾಸ ಸರಣಿಯ 5 ಕೃತಿಯಾಗಿ ಚಿಂತನ ಪುಸ್ತಕವು ಇರ್ಫಾನ್ ಹಬೀಬ್ ಅವರ ‘ವೌರ್ಯರ ಕಾಲದ ಭಾರತ’ ಕೃತಿಯನ್ನು ಹೊರತಂದಿದೆ. ನಗರಗೆರೆ ರಮೇಶ್ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಅಲೆಕ್ಸಾಂಡರ್ ದಾಳಿಯಿಂದಲೇ ಈ ಕೃತಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಜನಜೀವನ ಮತ್ತು ಅಲೆಕ್ಸಾಂಡರನ ದಾಳಿ ಈ ದೇಶದ ಜನರ ಮೇಲೆ ಮಾಡಿದ ಪರಿಣಾಮ, ನಂದವಂಶ ಮತ್ತು ಚಂದ್ರಗುಪ್ತ ವೌರ್ಯರ ಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನು ಕೃತಿಯ ಆರಂಭದಲ್ಲಿ ಚರ್ಚಿಸಲಾಗಿದೆ. ಅಶೋಕನ ಶಾಸನಗಳು, ಅಶೋಕನ ಧಮ್ಮ, ಆಡಳಿತ ಆನಂತರದ ವೌರ್ಯ ರಾಜರ ಅವನತಿಯನ್ನು ಅತ್ಯಂತ ಕುತೂಹಲಕರವಾಗಿ ವಿಶ್ಲೇಷಿಸುತ್ತದೆ. ಚಾಣಕ್ಯನ ಅರ್ಥಶಾಸ್ತ್ರದ ಕುರಿತಂತೆಯೂ ಮಹತ್ವ ಪೂರ್ಣವಾದ ವಿವರಗಳು ಈ ಕೃತಿಯಲ್ಲಿವೆೆ. ಹಾಗೆಯೇ ಆ ಕಾಲದ ಬರವಣಿಗೆ, ಭಾಷೆ, ಸಾಹಿತ್ಯದ ಬಗ್ಗೆಯೂ ಕೃತಿ ವಿಶ್ಲೇಷಿಸುತ್ತದೆ. ಐತಿಹಾಸಿಕವಾಗಿ ಹಲವು ಗಮನಾರ್ಹ ವಿಷಯಗಳ ಕಡೆಗೆ ಈ ಕೃತಿ ಬೆಳಕು ಚೆಲ್ಲುತ್ತದೆ. ಇದು ಬರೇ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಈ ದೇಶದ ಇತಿಹಾಸದ ಕುರಿತಂತೆ ಆಸಕ್ತಿಯುಳ್ಳ ಎಲ್ಲರೂ ಓದಬೇಕಾದ ಕೃತಿಯಾಗಿದೆ.

ಚಿಂತನ ಪುಸ್ತಕ, ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 160 ರೂ. ಆಸಕ್ತರು 9036082005 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News