ತಂತ್ರಜ್ಞಾನದಿಂದ ನಂಬಿಕೆಯವರೆಗೆ...

Update: 2016-02-12 18:20 GMT

   ‘ಭಾರತದ ಜನ ಇತಿಹಾಸ’ ಇದರ ನಾಲ್ಕನೆ ಸಂಪುಟ ಪ್ರಸಿದ್ಧ ಇತಿಹಾಸಕಾರ ಕೃಷ್ಣ ಮೋಹನ್ ಶ್ರೀಮಾಲಿ ಬರೆದಿರುವ ‘ಕಬ್ಬಿಣ ಯುಗ ಮತ್ತು ಧಾರ್ಮಿಕ ಕ್ರಾಂತಿ’-ಕ್ರಿ.ಪೂ. 700- ಕ್ರಿ.ಪೂ. 350’. ನಾ. ದಿವಾಕರ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿಂತನ ಪುಸ್ತಕ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಹಿಂದೂ ಧರ್ಮದ ಪುನರ್ ಸ್ಥಾಪನೆಗಾಗಿ ಕೆಲವು ಶಕ್ತಿಗಳು ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಈ ಅಧ್ಯಯನ ಭಾರತೀಯ ಪ್ರಾಚೀನ ಸಮಾಜದ ಮೇಲೆ ಬೆಳಕು ಚೆಲ್ಲುತ್ತದೆ. ಮತ್ತು ಹುಸಿ ಧಾರ್ಮಿಕವಾದಿ, ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಬಯಲಿ ಗೆಳೆಯುತ್ತದೆ. ಇತಿಹಾಸದ ವಿವಿಧ ಕಾಲಘಟ್ಟಗಳ, ವಿವಿಧ ಮಜಲುಗಳನ್ನು ಗ್ರಹಿ ಸುವುದರೊಂದಿಗೆ, ಸಮಕಾಲೀನ ಸಂದರ್ಭದಲ್ಲಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಪುನರ್ ವ್ಯಾಖ್ಯಾನ ಮಾಡುವ ನಿಟ್ಟಿನಲ್ಲಿ ಈ ಕೃತಿ ಮಹತ್ವ ಪಡೆಯುತ್ತದೆ.
 ಕಬ್ಬಿಣದ ಆವಿಷ್ಕಾರ, ಅದರ ಬಳಕೆಯಿಂದ ಆದ ಆರ್ಥಿಕ ಸಾಮಾಜಿಕ ಬದಲಾವಣೆಗಳು, ಜಾತಿ ವ್ಯವಸ್ಥೆಯ ಬೆಳವಣಿಗೆ, ಪ್ರಭುತ್ವ ಮತ್ತು ಮಗಧ ಸಾಮ್ರಾಜ್ಯದ ಉದಯ, ಬೌದ್ಧ, ಜೈನ ಧರ್ಮಗಳ ಬೆಳವಣಿಗೆ ಮತ್ತು ಬೌದ್ಧಿಕ ಮಂಥನ ಮುಂತಾದ ಅಂಶಗಳನ್ನು ಒಳಗೊಂಡ ಕೃತಿ ಇದು. ಮೂಲ ಲೇಖಕರೇ ಹೇಳುವಂತೆ, ಕಬ್ಬಿಣದ ಯುಗದ ಅವಧಿಯಲ್ಲೇ ಜಾತಿ ವ್ಯವಸ್ಥೆಯೂ ಒಂದು ಚೌಕಟ್ಟನ್ನು ನಿರ್ಮಿಸಿಕೊಂಡಿತು. ಅಲ್ಲದೆ ಈ ಚೌಕಟ್ಟು ಶಾಶ್ವತವಾಗಿ ಜಾತಿ ವ್ಯವಸ್ಥೆಯೊಂದಿಗೆ ಸಮ್ಮಿಳಿತವಾಗಿತ್ತು. ರಾಜಕೀಯ ಸ್ತರದಲ್ಲಿ ಪ್ರಾಚೀನ ಭಾರತೀಯ ಪ್ರಭುತ್ವ ವ್ಯವಸ್ಥೆ, ಆದಿವಾಸಿ ರಾಜಪ್ರಭುತ್ವ ಮತ್ತು ಗಣರಾಜ್ಯಗಳ ಮೂಲಕ ಉಗಮಿಸಿತ್ತು. ಅಂತಿಮವಾಗಿ ಬುದ್ಧ ಮತ್ತು ಮಹಾವೀರರ ಪ್ರೇರಣೆಯಿಂದ ಉಂಟಾದ ಧರ್ಮಕ್ರಾಂತಿ, ವೇದಕಾಲದ ಸಂಪ್ರದಾಯಗಳನ್ನು ಮತ್ತು ಬ್ರಾಹ್ಮಣ್ಯದ ಆಧಿಪತ್ಯವನ್ನು ನಿರಾಕರಿಸುವ ನವ ಧರ್ಮ ವ್ಯವಸ್ಥೆಯನ್ನು ಹುಟ್ಟು ಹಾಕಿತು. ಹೇಗೆ ಭಾರತೀಯ ಸಮಾಜದಲ್ಲಿ ತಂತ್ರಜ್ಞಾನವೂ ನಂಬಿಕೆಯ ಬದಲಾವಣೆಗಳಿಗೆ ಕಾರಣವಾಯಿತು ಎನ್ನುವುದನ್ನು ಲೇಖಕರು ನಿರೂಪಿಸುತ್ತಾ ಹೋಗುತ್ತಾರೆ.
ಕೃತಿಯ ಮುಖಬೆಲೆ 140 ರೂ. ಆಸಕ್ತರು 99022 49150 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News