ಗಾಂಧಿಯ ದಕ್ಷಿಣ ಆಫ್ರಿಕಾ ದಿನಗಳನ್ನು ತೆರೆದಿಡುವ ಗುಹಾ
ಭಾ ರತದ ಸ್ವಾತಂತ್ರ ಸಂಗ್ರಾಮಕ್ಕೆ ಪೂರ್ವದಲ್ಲಿ ಮೋಹನದಾಸ ಕರಮಚಂದ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯ, ದಬ್ಬಾಳಿಕೆಗಳ ವಿರುದ್ಧ ಅಲ್ಲಿನ ವಲಸಿಗರನ್ನು ಸಂಘಟಿಸಿದ ಕಥನವೇ ರಾಮಚಂದ್ರ ಗುಹಾ ಅವರ ‘ಗಾಂಧಿ ಬಿಫೋರ್ ಇಂಡಿಯಾ’ ಕೃತಿ. ಕನ್ನಡದ ಹಿರಿಯ ಬರಹಗಾರ ಜಿ. ಎನ್. ರಂಗನಾಥ ರಾವ್ ಅವರು ಅದನ್ನು ‘ಗಾಂಧಿ-ಮಹಾತ್ಮರಾದುದು’ ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಅನುವಾದ ಮಾಡಿದ್ದಾರೆ. ಮಹಾತ್ಮಗಾಂಧಿಯ ಆಫ್ರಿಕಾ ದಿನಗಳನ್ನು ಈ ಎರಡು ಬೃಹತ್ ಸಂಪುಟಗಳು ತೆರೆದಿಡುತ್ತವೆ. ಮಹಾತ್ಮ ಗಾಂಧೀಜಿಯ ಕುರಿತಂತೆ ಈಗಾಗಲೇ ಎರಡು ಕೃತಿಗಳನ್ನು ರಂಗನಾಥ ರಾವ್ ಕನ್ನಡಕ್ಕಿಳಿಸಿದ್ದಾರೆ. ಒಂದು ರಾಮಚಂದ್ರ ಗುಹಾ ಅವರ ‘ಬಾಪು ನಂತರದ ಭಾರತ’. ಮತ್ತೊಂದು ರಾಜಮೋಹನ ಗಾಂಧಿಯವರ ‘ಮೋಹನದಾಸ-ಒಂದು ಸತ್ಯಕತೆ’. ರಂಗನಾಥ್ ರಾವ್ ಅವರ ಗಾಂಧಿಯಾತ್ರೆಯ ಮೂರನೆಯ ಕೊಡುಗೆ ಗುಹಾ ಅವರ ಕೃತಿಯ ಇನ್ನೊಂದು ಅನುವಾದ. ಮಹಾತ್ಮಗಾಂಧೀಜಿಯ ಹೋರಾಟಗಾರನನ್ನು ರೂಪಿಸಿದ್ದು ದಕ್ಷಿಣ ಆಫ್ರಿಕಾ. ಆದುದರಿಂದಲೇ ಗಾಂಧೀಜಿಯ ದ.ಆಫ್ರಿಕಾದ ಬದುಕು, ಹೋರಾಟಗಳನ್ನು ತಿಳಿದುಕೊಳ್ಳದೇ ನಾವು ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಈ ನಿಟ್ಟಿನಲ್ಲಿ ಗುಹಾ ಅವರ ಈ ಕೃತಿ, ಗಾಂಧಿಯ ವ್ಯಕ್ತಿತ್ವವನ್ನು ನಮ್ಮದಾಗಿಸಲು ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ.
ಹಿಂದೂ ಸಾಮಾಜಿಕ ಶ್ರೇಣಿಯಲ್ಲಿ ಸಂದೇಹಾತ್ಮಕ ಸ್ಥಾನವನ್ನು ಹೊಂದಿದ್ದ ಬನಿಯಾ ಜಾತಿಯನ್ನು ಉಲ್ಲೇಖಿಸುತ್ತಾ ಗಾಂಧಿಯ ಬದುಕನ್ನು ಈ ಕೃತಿ ತೆರೆದಿಡಲು ಆರಂಭಿಸುತ್ತದೆ. ಆಫ್ರಿಕಾದ ಕಡೆಗೆ ಗಾಂಧಿಯ ಪಯಣ, ಅವರ ಬದುಕಿನ ಮಹತ್ವದ ಘಟ್ಟ. ಆ ಪಯಣ ಆಫ್ರಿಕಾದಲ್ಲಿ ಕೊನೆಯಾಗದೆ, ಮುಂದೆ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇನ್ನಷ್ಟು ವೇಗವನ್ನು ಪಡೆಯುತ್ತದೆ. ಮುಖ್ಯವಾಗಿ ಆ ಪಯಣ ಭಾರತದ ಪಾಲಿಗೆ ಎಂದಿಗೂ ಮುಗಿಯದ ಪಯಣವಾಗಿದೆ. ಸದಾ ನಮ್ಮನ್ನು ನಾವು ನಿಕಷ್ಟಕ್ಕೊಡ್ಡಿಕ್ಕೊಳಲು ಗಾಂಧಿ ನಮ್ಮ ಜೊತೆ ಜೊತೆಗೆ ಆತ್ಮಸಾಕ್ಷಿಯ ರೂಪದಲ್ಲಿ ಹೆಜ್ಜೆಯಿಡುತ್ತಲೇ ಇದ್ದಾರೆ.
ಮೊದಲ ಸಂಪುಟದಲ್ಲಿ ಅವರ ಕೌಟುಂಬಿಕ ಹಿನ್ನೆಲೆ ಮತ್ತು ಆಫ್ರಿಕಾ ಪ್ರಯಾಣಕ್ಕೆ ತೆರೆದುಕೊಳ್ಳಲು ಕಾರಣವಾದ ಸನ್ನಿವೇಶಗಳನ್ನು ವಿವರಿಸುತ್ತಾರೆ. ಸಸ್ಯಾಹಾರ-ಮಾಂಸಾಹಾರ, ಪಶ್ಚಿಮ-ಪೂರ್ವ, ಕರಿಯ-ಬಿಳಿಯ, ಹಿಂಸೆ-ಅಹಿಂಸೆ ಮೊದಲಾದ ಅವರೊಳಗಿನ ಸಂಘರ್ಷಗಳಿಗೆ ಈ ಪಯಣದ ದಾರಿ ಸಾಕ್ಷಿಯಾಗುತ್ತದೆ. ಡರ್ಬಾನಿನ ಬ್ಯಾರಿಸ್ಟರ್, ಕ್ರಿಯಾವಾದಿ ಯಾತ್ರಿಕ, ನಿಷ್ಠಾವಂತ ವಕೀಲ, ಶ್ಯಾಮ ವಿರೋಧಿ ಬಿಳಿಯರು, ಬಹುತ್ವವಾದಿ ಮತ್ತು ಪರಿಶುದ್ಧತಾವಾದಿ, ಟ್ರಾನ್ಸ್‌ವಾಲ್‌ನಲ್ಲಿ ಕಷ್ಟ ಕ್ಲೇಷಗಳು, ಲಂಡನ್ನಿನಲ್ಲಿ ವಶೀಲಿ, ರಾಜಕೀಯ ರಗಳೆ ರಾದ್ಧಾಂತಗಳು ಈ ಕೃತಿಯ ಮುಖ್ಯ ಭಾಗಗಳು. ಅಂತಿಮವಾಗಿ ಈ ಕೃತಿ ಸೆರೆಮನೆಗೆ ಅಧ್ಯಾಯದಲ್ಲಿ ಮುಗಿಯುತ್ತದೆ. ಎರಡನೆ ಸಂಪುಟದಲ್ಲಿ, ಟಾಲ್‌ಸ್ಟಾಯ್ ಮೂಲಕ ಗಾಂಧಿ ತೆರೆದುಕೊಳ್ಳುತ್ತಾರೆ. ಆತ್ಮಸಾಕ್ಷಿಯ ಸೆರೆಯಾಳು, ಮೆಟ್ಟಿನಿಂತ ವಾಮನ, ನಾಗರಿಕತೆಗಳ ಮೇಲಾಟ, ಒಡಂಬಡಿಕೆಯನು ಅರಸುತ್ತ, ಪುತ್ರನ ವಿದಾಯ ಆಪ್ತನ ಆಗಮನ, ಫೀನಿಕ್ಸ್‌ನ ವೈದ್ಯಭಾನು, ಸೀಮೋಲ್ಲಂಘನ, ಆಫ್ರಿಕಾ, ನಿನಗೆ ನಮಸ್ಕಾರ ಈ ಮಹತ್ವದ ಆಧ್ಯಾಯಗಳನ್ನು ಈ ಸಂಪುಟ ಹೊಂದಿದೆ. ಅಂತಿಮವಾಗಿ ಮಹಾತ್ಮರಾಗುವ ಕಡೆಗೆ ಹೇಗೆ ಆಫ್ರಿಕಾ ಅವರನ್ನು ರೂಪಿಸಿತು ಎನ್ನುವುದನ್ನು ಈ ಕೃತಿ ಹೇಳುತ್ತದೆ. ಅಮಾನುಷ ಜನಾಂಗೀಯ ಭೇದ ನೀತಿಯ ವಿರುದ್ಧ ಎಲ್ಲ ಜಾತಿ, ಕುಲವರ್ಗಗಳ ಜನರನ್ನು ಸಂಘಟಿಸಿ, ಅಹಿಂಸೆಯ ದೀಕ್ಷೆ ತೊಟ್ಟು, ಮಾನವ ಘನತೆಯನ್ನು ಎತ್ತಿ ಹಿಡಿದ ಗಾಂಧಿ ಮಹಾತ್ಮನಾದ ಪರಿಯನ್ನು ನಿರೂಪಿಸುವ ಈ ರೋಚಕ ಕಥನ ರಾಮಚಂದ್ರ ಗುಹಾ ಅವರ ಮುಕ್ತ ಮನದ ಧೀಮಂತ ಸಂಶೋಧನೆಯ ಮತ್ತೊಂದು ಮಹತ್ವದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ರಂಗನಾಥರಾವ್ ಅವರು ಈ ಎರಡೂ ಕೃತಿಯನ್ನು, ಮೂಲ ಆಶಯಕ್ಕೆ, ಲಯಕ್ಕೆ, ಅದರ ಸತ್ಯಕ್ಕೆ ಒಂದಿಷ್ಟು ಧಕ್ಕೆ, ಹಾನಿಯುಂಟಾಗದಂತೆ ಕನ್ನಡಕ್ಕಿಳಿಸಿದ್ದಾರೆ. ಈ ಎರಡೂ ಸಂಪುಟಗಳನ್ನು ವಸಂತ ಪ್ರಕಾಶ, ಬೆಂಗಳೂರು ಪ್ರಕಟಿಸಿದೆ. ಕೃತಿಯ ಮುಖಬೆಲೆ 300 ರೂ. ಆಸಕ್ತರು 080 2244 3996 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.