ರಂಗದೊಳಗೆ ಹಾಡಿನ ಮಳೆ...

Update: 2016-02-16 18:11 GMT

ರಂಗಗೀತೆಗಳಿಗೆ ಅದರದೇ ಆದ ಇತಿಹಾಸವಿದೆ. ಆಯಾ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸುವಲ್ಲಿ ರಂಗಗೀತೆಗಳ ನೆರವು ಬಹುದೊಡ್ಡದು. ಸಿನಿಮಾಗಳಲ್ಲಿ ಬಳಸುವಂತೆ ಹಾಡುಗಳನ್ನು ನಾಟಕಗಳಲ್ಲಿ ಬಳಸುವಂತಿಲ್ಲ. ಮೇಲೋಡ್ರಾಮಗಳಿಗೂ ಇಲ್ಲಿ ಅವಕಾಶವಿಲ್ಲ. ರಂಗಗೀತೆಗಳು ವಾಸ್ತವಕ್ಕೆ ಹೆಚ್ಚು ಹತ್ತಿರ ಇರುವಂತಹದು. ಆದುದರಿಂದಲೇ, ರಂಗಗೀತೆಗಳು ಸಿನಿಮಾ ಹಾಡುಗಳು ಅಥವಾ ಇನ್ನಿತರ ಯಾವುದೇ ಭಾವಗೀತೆಗಳಿಗಿಂತ ಭಿನ್ನವಾಗಿ ತನ್ನದೇ ಆದ ಸ್ಥಾನವನ್ನು ಸಾಹಿತ್ಯ ಕ್ಷೇತ್ರದಲ್ಲಿ ಪಡೆದುಕೊಂಡಿದೆ. ಹಾಡು, ದೃಶ್ಯವಾಗಿ ನೋಡುಗರನ್ನು ನೇರವಾಗಿ ತಟ್ಟುವಂತೆ ಮಾಡುತ್ತದೆ. ಇದೇ ಸಂದರ್ಭದಲ್ಲಿ ಗೀತೆಗಳು ನಾಟಕಗಳಿಗೆ ಪೂರಕವಾಗಿ ಉಳಿಯದೇ ಸ್ವಂತಿಕೆಯನ್ನು ಉಳಿಸಿಕೊಂಡಿರುತ್ತವೆ. ನಾಟಕದಾಚೆಗೂ ಅದು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ನಾಟಕಕಾರ, ಲೇಖಕ ಯೋಗೇಶ್ ಮಾಸ್ಟರ್ ಅವರು, ಹಲವು ನಾಟಕಗಳಿಂದ ಆಯ್ದ ರಂಗಗೀತೆಗಳನ್ನು ಇಲ್ಲಿ ಒಟ್ಟು ಸೇರಿಸಿ ಅದಕ್ಕೆ ‘ಮಳೆ ಬಂದು ನಿಂತಾಗ’ ಎಂಬ ಹೆಸರು ನೀಡಿದ್ದಾರೆ.
ತಾವು ನಿರ್ದೇಶಿಸಿ, ಆಡಿಸಿದ ಬೇರೆ ಬೇರೆ ನಾಟಕಗಳಿಂದ ಆಯ್ದ ಸುಮಾರು 150 ರಂಗಗೀತೆಗಳು ಇಲ್ಲಿವೆ. ಕೋರಸ್‌ಗಳು ಹಾಡುವ ಗೀತೆಗಳು, ದೇವರನ್ನು ಸ್ತುತಿಸುವ ಹಾಡುಗಳು, ಪ್ರೇಮವನ್ನು ಅಭಿವ್ಯಕ್ತಿಸುವ ಹಾಡುಗಳು, ವಿಡಂಬನಾತ್ಮಕ ಧ್ವನಿಯುಳ್ಳಗೀತೆಗಳು, ದುಃಖ, ಸಂತೋಷ, ಸಂಭ್ರಮ, ವಿಷಾದ, ದುರಂತ ಹೀಗೆ ಬೇರೆ ಬೇರೆ ರಸಗಳನ್ನು ವ್ಯಕ್ತಪಡಿಸುವ ಸಾಲುಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಪುರಾಣ, ಇತಿಹಾಸ, ವರ್ತಮಾನ ಹೀಗೆ ವಿವಿಧ ಸಂದರ್ಭಗಳಿಗೆ ಪೂರಕವಾಗಿ ಇಲ್ಲಿ ಹಾಡುಗಳನ್ನು ಹೆಣೆಯಲಾಗಿದೆ.

ಇಲ್ಲಿರುವ ಹಾಡುಗಳನ್ನು ಬೇರೆ ನಾಟಕಗಳಿಗೂ ಬಳಸಬಹುದಾಗಿವೆ. ನಾಟಕ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಹೊಸಬರಿಗೆ ಈ ಹಾಡುಗಳು ಹಲವು ರೀತಿಯಲ್ಲಿ ಸ್ಫೂರ್ತಿಯಾಗಬಹುದು. ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 40 ರೂ. ಆಸಕ್ತರು 98868 05442 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ. 

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News