ಇಂದಿನ ಮಕ್ಕಳು ಇಂದಿನ ಪ್ರಜೆಗಳು

Update: 2016-02-21 07:03 GMT

ನಾಲ್ಕು ಜನ ಹುಡುಗರು, ಕ್ರಮವಾಗಿ ಆರು, ಏಳು, ಎಂಟು ಮತ್ತು ಒಂಬತ್ತನೆ ತರಗತಿಯ ಮಕ್ಕಳು ಒಂದೇ ಗಾಡಿಯ ಮೇಲೆ ಕುಳಿತುಕೊಂಡು ಬರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಪೊಲೀಸ್ ಅವರ ಗಾಡಿಯನ್ನು ಹಿಡಿದು, ಪಕ್ಕಕ್ಕೆ ನಿಲ್ಲಿಸಿ, ಗದರಿದರು. ಹಾಗೂ ತಮ್ಮ ಕೈಯಲ್ಲಿದ್ದ ಷಟಲ್ ಕಾಕ್ ಬ್ಯಾಟಿನಿಂದ ಲಘುವಾಗಿ ಹೊಡೆಯುವಂತೆ ನಟಿಸುತ್ತಾ ಬೈದರು. ಡಾಕ್ಯುಮೆಂಟ್ಸ್ ಎಲ್ಲಿ ಎಂದರೂ ಇಲ್ಲ, ಲೈಸೆನ್ಸ್ ಎಲ್ಲಿ ಎಂದರೂ ಇಲ್ಲ, ಹೆಲ್ಮೆಟ್ಟೂ ಹಾಕಿಲ್ಲ. ಜೊತೆಗೆ ಗಾಡಿಯ ಮೇಲೆ ನಾಲ್ಕು ಜನ ಒಟ್ಟಿಗೇ! ಅವರಲ್ಲಿ ಸ್ವಲ್ಪ ದೊಡ್ಡ ಹುಡುಗ ಕ್ಷಮೆ ಕೇಳಿದ. ಆದರೆ ಪೊಲೀಸ್ ಬಿಡಲಿಲ್ಲ.

ಮನೆಯೊಳಗಿಂದ ನಮ್ಮ ಮಕ್ಕಳು ನನ್ನೊಂದಿಗೆ ಅವರನ್ನು ನೋಡುತ್ತಿದ್ದವರು, ಹೇಳಿದರು ‘ಅಪ್ಪಾ, ಅವರು ನಮ್ಮ ಶಾಲೆಯ ಹುಡುಗರು. ನಮಗವರು ಗೊತ್ತು. ಅವರನ್ನು ಬಿಟ್ಟುಬಿಡಿ’ ಎಂದು. ‘‘ಇರಲಿ, ಇಲ್ಲಿ ಏನೂ ಆಗಿ ಬಿಡುವುದಿಲ್ಲ. ಪೊಲೀಸ್ ಅವರ ಕೆಲಸ ಮಾಡುತ್ತಿದ್ದಾರೆ. ಮಾಡಲಿ. ಈ ಹುಡುಗರು ಇದನ್ನು ಹೇಗೆ ಎದುರಿಸುವರೋ ನೋಡೋಣ’’ ಎಂದು ಕಾದು ಕುಳಿತೆ. ಆ ಪೊಲೀಸರ ಕರ್ತವ್ಯ ನನಗೆ ಸಂಬಂಧಿಸಿರುವುದೇ ಆದ್ದರಿಂದ ಅವರಿಗೆ ಹೇಳುವುದಾಗಲಿ, ಮಧ್ಯ ಪ್ರವೇಶಿಸುವುದಾಗಲಿ ಸಮಸ್ಯೆ ಏನಿಲ್ಲ. ಹೀಗೆ ಮಾಡದಿರಲಿ ಎಂದು ಹೆದರಿಸಿ ಕಳುಹಿಸುತ್ತಾರೆ ಅಷ್ಟೇ. ಆದರೆ, ಅಲ್ಲಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನೋಡುವುದನ್ನು ಮಿಗಿಲಾಗಿ ಈ ಮಕ್ಕಳು ಈ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು ನಾನು ಕಾದಿದ್ದೆ. ಇದೇ ಮಕ್ಕಳು ಇದೇ ರೀತಿಯಲ್ಲಿ ಬೇರೆ ಯಾರೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರೂ ಇದನ್ನು ಎದುರಿಸಬೇಕು. ಹಾಗೂ ಮಕ್ಕಳ ಹಿತರಕ್ಷಣಾ ದೃಷ್ಟಿಯಿಂದ ವಾಹನಗಳ ಮೇಲೆ ಇಂಥಾ ಸರ್ಕಸ್ಸುಗಳೂ ಕೂಡ ಸಲ್ಲವು. ನಿಂದನೆ ಯಾವ ಕಾನೂನಿನ ಕ್ರಮ?

ಹುಡುಗರನ್ನು ಒಂದಷ್ಟು ಕಾಡಿದ ಪೊಲೀಸ್ ಮಕ್ಕಳಿಂದ ಫೋನ್ ಮಾಡಿಸಿದರು. ನಂತರ ಹಿರಿಯರ ಜೊತೆ ಮಾತಾಡಿದರು. ಅದೇನೇ ಇರಲಿ, ಆಗ ಆ ಹುಡುಗ ಹೇಳಿದ್ದೇನೆಂದರೆ, ‘‘ಇವರು ನಮ್ಮನ್ನು ಕೆಟ್ಟ ಮಾತಿನಲ್ಲಿ ಬೈಯುತ್ತಿದ್ದಾರೆ. ಅದರಿಂದ ನನಗೆ ಅಳು ಬಂದಿತು. ಬ್ಯಾಟಿನಲ್ಲಿ ಹೊಡೆಯಕ್ಕೆ ಬಂದರು’’ ಹೀಗೆ ನಡೆದ ವಿಷಯವನ್ನು ಹೇಳಿದ. ಪೊಲೀಸ್ ಹೇಳಿದ್ದೇನೆಂದರೆ, ‘‘ನೀವು ಮಾಡೋದಕ್ಕೆ ಬೈಯದೇ ಇನ್ನೇನು ಮಾಡಬೇಕು? ನೀನು ಒಳ್ಳೆಯ ಮಾತಿನಲ್ಲಿ ಕೇಳಿದ್ದರೆ ನಾನು ಬಿಡುತ್ತಿದ್ದೆ’’ ಎಂದು. ‘‘ನಾನು ಸಾರಿ ಹೇಳಿದೆ. ರಿಕ್ವೆಸ್ಟ್ ಮಾಡಿಕೊಂಡೆ.

ನಾವು ಹೀಗೆ ಗಾಡಿಯಲ್ಲಿ ಒಟ್ಟಿಗೆ ಹೀಗೆ ಬಂದಿದ್ದು ತಪ್ಪೇ ನಿಜ. ಹಾಗಂತ ನೀವು ನಮ್ಮನ್ನು ಬೈಯಬಹುದೇ?’’ ಎಂದು ಕೇಳಿದ ಆ ಹುಡುಗನ ಮಾತಿನಲ್ಲಿ ತಮ್ಮ ಸ್ವಾಭಿಮಾನವನ್ನು ಅಪಮಾನಿಸಿದರ ಬಗ್ಗೆ ಆಗ್ರಹವಿತ್ತು. ಗಾಡಿ ಪಡೆದಾದ ಮೇಲೆ ಆ ಹುಡುಗ ಹೋಗುವಾಗ ‘ಸಾರಿ ಅಂಕಲ್’ ಎಂದೇ ಹೇಳಿ ಹೋದ. ನಿಜಕ್ಕೂ ಆ ಹುಡುಗ ಎತ್ತಿದ ಧ್ವನಿ ಏನೆಂದರೆ, ನೀವು ನಿಮ್ಮ ಕಾನೂನು ವ್ಯವಸ್ಥೆಯಲ್ಲಿ ಕೆಲಸ ಮಾಡಿ. ಆದರೆ ನಮ್ಮನ್ನು ಅಪಮಾನಿಸಬೇಡಿ. ನಿಜ, ಕಾನೂನಿನ ವ್ಯಾಪ್ತಿಯಲ್ಲಿ ತಪ್ಪಿಗಾಗಿ ಅವರನ್ನು ವಿಚಾರಿಸುವಾಗ ಲಿಂಗಾಧಾರಿತವಾಗಿ, ವಯಸ್ಸಿನ ಆಧಾರಿತವಾಗಿ, ವರ್ಗ ಮತ್ತು ಧರ್ಮಗಳ ತಾರತಮ್ಯವನ್ನು ಮುಂದಿಟ್ಟುಕೊಂಡು, ತಮ್ಮ ನಿಲುವು ಧೋರಣೆಗಳ ಪ್ರಕಾರವಾಗಿ ವರ್ತಿಸುವುದಾಗಲಿ, ನಿಂದಿಸುವುದಾಗಲಿ ಎಷ್ಟರಮಟ್ಟಿಗೆ ಸರಿ? ಆ ಹುಡುಗ ಹೊರಡುವಾಗ ಅವನಿಗೆ ಭೇಷ್ ಎನ್ನಲು ಮನಸ್ಸಾಗಿತ್ತು. ಆದರೆ, ಗಂಭೀರವಾದ ಪ್ರಕರಣವನ್ನು ನಾಟಕದ ಪ್ರಹಸನದಂತೆ ಮಾಡಿ ಲಘುಗೊಳಿಸಲು ಇಚ್ಛಿಸದೇ ಸುಮ್ಮನಾದೆ. ಪೊಲೀಸರ ದೃಷ್ಟಿ ಏನೆಂದರೆ, ಇವತ್ತು ಇವರಿಗೆ ಈ ರೀತಿ ಭಯ ಹಿಡಿಸಿದರೆ ಮುಂದೆ ತಪ್ಪು ಮಾಡುವುದಿಲ್ಲ ಎಂದು. ಜೊತೆಗೆ ಈಗಲೇ ಈ ಹುಡುಗರು ಹೀಗಾದರೆ ಮುಂದೆ ಹೇಗೆ? ಎಂದು. ಜೊತೆಗೆ ಆ ಹುಡುಗನ ಕೇಶ ವಿನ್ಯಾಸ ನವನವೀನವಾಗಿದ್ದು, ಹಾಗೆಲ್ಲಾ ಅವತಾರಗಳನ್ನು ಮಾಡಿಕೊಂಡಿರುವ ಇವನು ಮುಂದೆ ಉದ್ಧಾರ ಆಗಲ್ಲ. ಮನೆಯಲ್ಲಿ ಧನವಂತರಾಗಿದ್ದು, ಕಷ್ಟಸುಖ ಗೊತ್ತಿಲ್ಲದೇ ಹೀಗೆ ಜೋರು ಮಾಡಿಕೊಂಡು ಮೆರೆಯುತ್ತಾರೆ. ಇವರು ಓದಿನಲ್ಲೂ, ಬೇರೆ ವಿಷಯಗಳಲ್ಲೂ ಮುಂದೆ ಬರಲ್ಲ ಹೀಗೇ ಸಾಗಿತ್ತು ಪೊಲೀಸರ ವಿಮರ್ಶೆ ಮತ್ತು ಪ್ರವಾದಿತ್ವ.

ತನ್ನ ಕಾಲದ ವಿಷಯಗಳಿಗೆ ಅಪ್‌ಡೇಟ್ ಆಗಿರುವ ಸಂಕೇತದಂತೆಯೇ ತೋರುವ ಆ ಹುಡುಗನ ಹೇರ್ ಸ್ಟೈಲ್ ಚೆನ್ನಾಗಿತ್ತು. ಆ ಹುಡುಗನ ಮಾತು ಕೂಡ ಸರಿಯಾಗಿತ್ತು. ಆತನಿಗೆ ತಾನು ಏನು ಹೇಳುತ್ತಿದ್ದೇನೆ ಮತ್ತು ಏಕೆ ಹೇಳುತ್ತಿದ್ದೇನೆ ಎಂಬುದು ಕೂಡ ಸ್ಪಷ್ಟವಾಗಿತ್ತು. ಇದೇ ಸ್ಪಷ್ಟತೆಯನ್ನು ಕಾಯ್ದುಕೊಂಡರೆ ಅವನು ನಿಜಕ್ಕೂ ತನ್ನ ವ್ಯಕ್ತಿತ್ವವನ್ನು ಘನವಾಗಿಯೇ ರೂಪಿಸಿಕೊಳ್ಳಬಲ್ಲವನು ಎಂದೇ ನನಗೆ ಅನ್ನಿಸಿದ್ದು. ಈ ಪೊಲೀಸ್ ಮಾತ್ರವಲ್ಲ, ಬಹಳಷ್ಟು ಜನ ಮಕ್ಕಳ ಬಗ್ಗೆ ಇಂಥಹುದೇ ಧೋರಣೆಯನ್ನು ಹೊಂದಿರುತ್ತಾರೆ. ಇಂದು ಹೀಗಿರುವ ಮಕ್ಕಳು ನಾಳಿನ ಪ್ರಜೆಗಳಾಗಿ ಅವರು ಹೇಗೆ ತಮ್ಮನ್ನು ಸಮಾಜದಲ್ಲಿ ತೊಡಗಿಸಿಕೊಳ್ಳುತ್ತಾರೆಂದು ವಾದಿಸುತ್ತಾರೆ. ತಾವು ಅಪ್‌ಡೇಟ್ ಆಗಲಾರದೇ ಅಪ್‌ಡೇಟ್ ಆಗಿರುವ ಮಕ್ಕಳು ಮತ್ತು ಯುವಕರನ್ನು ಕಂಡರೆ ಅಸೂಯೆಪಡುವವರಂತೆ ಕಾಣುತ್ತಾರೆ. ಈ ವಾದದ ಸರಣಿಯಲ್ಲೇ ಈ ದೊಡ್ಡವರು ಎಡವುತ್ತಾರೆ. ಮಕ್ಕಳು ನಾಳಿನ ಪ್ರಜೆಗಳಲ್ಲ. ಅವರು ಇಂದಿನ ಪ್ರಜೆಗಳೇ ಹೌದು. ಈ ಮಕ್ಕಳು ಈಗಿನ ಕಾಲಘಟ್ಟದ ಸ್ಟೈಲ್‌ಗಳನ್ನು ಮಾಡದೇ ಹೋದರೆ, ಹೊಸ ಆವಿಷ್ಕಾರದ ತಂತ್ರಜ್ಞಾನವನ್ನು ಮತ್ತು ವಸ್ತುಗಳನ್ನು ಬಳಸದೇ ಹೋದರೆ ಅದನ್ನು ಬಳಸಬೇಕಾಗಿರುವುದು ಯಾರು? ಮಿಗಿಲಾಗಿ ಮಕ್ಕಳು ಯಾಕೆ ಈ ವಿಷಯಗಳಿಂದ ವಂಚಿತರಾಗಬೇಕು? ಆದರೆ ಯಾವುದೇ ವಸ್ತುವನ್ನು ಮತ್ತು ಜ್ಞಾನವನ್ನು ಬಳಸಿಕೊಳ್ಳುವ ವಿಷಯದಲ್ಲಿ ದಾರಿ ತಪ್ಪದಂತೆ, ಮಿತಿ ಮೀರದಂತೆ, ತನಗಾಗಲಿ ಅಥವಾ ತನ್ನೊಡನೆಯಿರುವ ಇತರರಿಗಾಗಲಿ ತೊಂದರೆ ಎಂದೂ ಆಗದಂತೆ ಎಚ್ಚರವಹಿಸುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿ ಪ್ರಜ್ಞಾವಂತ ಪೋಷಕರು ಮತ್ತು ಶಿಕ್ಷಕರದು. ಆದರೆ ಮಕ್ಕಳು ಅವರದ್ದೇ ಕಾಲಘಟ್ಟದ ವಿಷಯಗಳಿಂದ ವಂಚಿತರಾಗುವುದರಿಂದ ಅವರ ಬೆಳವಣಿಗೆಯನ್ನು ಹಿಮ್ಮೆಟ್ಟಿಸಿದಂತಾಗುತ್ತದೆ. 

ವಾಸುದೇವ ಶರ್ಮಾ

ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ನಿರತವಾಗಿರುವ ವಾಸುದೇವ ಶರ್ಮಾ, ಚೈಲ್ಡ್ ರೈಟ್ಸ್ ಟ್ರಸ್ಟ್ ಮೂಲಕ ಸಮಾಜದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸ್ವಯಂ ಸೇವಾ ಸಂಘಟನೆಗಳ, ಮಾಧ್ಯಮಗಳ, ಗ್ರಾಮ ಪಂಚಾಯತ್‌ನ ಸದಸ್ಯರ ಮತ್ತು ಸರಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಮೂಲಕ ಮಕ್ಕಳ ಹಕ್ಕುಗಳು, ಮಕ್ಕಳ ನ್ಯಾಯ, ಮಕ್ಕಳ ಶೈಕ್ಷಣಿಕ ಹಕ್ಕುಗಳು ಇತ್ಯಾದಿಗಳ ಕುರಿತಾಗಿ ತರಬೇತಿ, ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿಯೂ ವಾಸುದೇವ ಶರ್ಮಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ಜಾರಿ ಚಳವಳಿಯಲ್ಲಿ ಪ್ರಧಾನ ಪಾತ್ರವಹಿಸುವ ಶರ್ಮಾ ಇದೇ ವಿಷಯವಾಗಿ ಅನೇಕ ಹೊತ್ತಿಗೆಗಳನ್ನು ಹೊರತಂದಿದ್ದಾರೆ. ಮಕ್ಕಳೆಂದರೆ, ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು ಮತ್ತು ಇಂದಿನ ಮಕ್ಕಳು ಇಂದಿನ ಪ್ರಜೆಗಳು ಇತ್ಯಾದಿ ಪುಸ್ತಕಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಅನೇಕ ವಿಷಯಗಳ ಮೂಲ ಅರಿವು ಮೂಡಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತೆಗೆದುಕೊಂಡಿರುವಂತಹ ಕ್ರಮಗಳನ್ನೂ, ಯೋಜನೆಗಳನ್ನು, ಅನೇಕ ಸಂಗತಿಗಳನ್ನೂ ಕೇಸ್ ಸ್ಟಡಿಯ ಮೂಲಕ ಉದಹರಿಸಿದ್ದಾರೆ. ಇವರ ಪುಸ್ತಕಗಳು ಶಿಕ್ಷಕರಿಗೆ, ಪೋಷಕರಿಗೆ ಮತ್ತು ಮಕ್ಕಳ ಕುರಿತಾಗಿ ಕೆಲಸ ಮಾಡುವಂತ ಯಾರೇ ಹಿರಿಯರಿಗೆ ಅಗತ್ಯವಾದ ದಿಕ್ಸೂಚಿಯಾಗಿ ತೋರುತ್ತದೆ. ಅಲ್ಲದೆ ಈ ಪುಸ್ತಕಗಳ ಹಕ್ಕುಗಳನ್ನೂ ಕೂಡ ಇವರು ಕಾಯ್ದಿರಿಸಿಲ್ಲ. ಏಕೆಂದರೆ ಇದರಲ್ಲಿ ಲಭ್ಯವಿರುವ ಮಾಹಿತಿಗಳು ಮಕ್ಕಳಿರುವ ಎಲ್ಲರಿಗೂ ಅಗತ್ಯವೂ ಇರುವುದರಿಂದ ಆದಷ್ಟು ಪರಸ್ಪರ ಹಂಚಿಕೊಳ್ಳಲೆಂಬ ಸದುದ್ದೇಶವಿದೆ. ತಮ್ಮ ಶಾಲೆ, ಸಂಘ ಸಂಸ್ಥೆಗಳಲ್ಲಿ ಇವರನ್ನು ಕರೆಯಿಸಿ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳುವುದಷ್ಟೇ ಅಲ್ಲದೆ ಕಾರ್ಯಾಗಾರಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಬಹುದು. ಸಂಪರ್ಕ ಸಂಖ್ಯೆ: 9448472513 (ವಾಸುದೇವ ಶರ್ಮ) ವಿಳಾಸ: ಚೈಲ್ಡ್ ರೈಟ್ಸ್ ಟ್ರಸ್ಟ್, 4606, 6ನೆ ಮಹಡಿ, ಹೈಪಾಯಿಂಟ್ 4, ಅರಮನೆ ರಸ್ತೆ, ಬೆಂಗಳೂರು: 560001, ದೂರವಾಣಿ: 080-41138285

 ಹಣೆಯ ಮೇಲೆ ಕೂದಲಿರಬಾರದು

ಹಿಂದೆ ನಾವು ಸಣ್ಣವರಿರುವಾಗ ಹಣೆಯ ಮೇಲೆ ತಲೆಗೂದಲು ಇಳಿಬಿದ್ದಿದ್ದರೆ ಶಾಲೆಯ ಮಕ್ಕಳು ಚೆನ್ನಾಗಿ ಬೈಸಿಕೊಳ್ಳುತ್ತಿದ್ದರು. ಹೊಡೆಸಿಕೊಳ್ಳುತ್ತಿದ್ದರು. ಹಣೆಯ ಮೇಲೆ ಹೀಗೆ ಕೂದಲು ಇಳಿಬಿದ್ದರೆ ವಿದ್ಯೆ ಹತ್ತುವುದಿಲ್ಲ ಎಂದು ಹೇಳುತ್ತಿದ್ದರು. ಕೂದಲನ್ನು ಚಿಕ್ಕದಾಗಿ ಕತ್ತರಿಸುವುದು ಮಾತ್ರವಲ್ಲದೆ ಮೇಲಕ್ಕೆ ಎತ್ತಿ ಕ್ರಾಪ್ ತೆಗೆದು ಎಣ್ಣೆ ಹಚ್ಚಿರಬೇಕಿತ್ತು. ಬಹುಶಃ ಆಗಿನ ಗ್ರಾಮೀಣ ಜನರಿಗೆ ತಮ್ಮ ಎದುರು ಕಾಣುತ್ತಿದ್ದ ಬೋಳು ತಲೆ ಮತ್ತು ಕಿರಿದಾದ ಜುಟ್ಟಿನ ವಿದ್ಯಾವಂತ ಬ್ರಾಹ್ಮಣವಟುಗಳ ಮಾದರಿಯನ್ನು ಗಮನಿಸಿದ್ದಿರಬೇಕು. ಹಾಗಾಗಿ ತಲೆಯ ಮೇಲಿನ ಕೂದಲಿನ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಿರಬಹುದು. ಕೂದಲ ಬಗ್ಗೆಯೂ ಅಂತಹ ಶಿಸ್ತನ್ನು ಪಾಲಿಸಿದರೆ ವಿದ್ಯೆ ಒಲಿದುಬಿಡುತ್ತದೆ ಎಂಬ ಮಿಥ್ ಅವರಿಗೆ. ನಾನು ಶಾಲಾ ಉಪಾಧ್ಯಾಯನಾಗಿದ್ದಾಗಲಂತೂ ಮಕ್ಕಳ ತಲೆಗೂದಲು ಹಣೆಯ ಮೇಲೆ ಬರುವುದರ ಬಗ್ಗೆ ವಿದ್ಯಾವಂತರೂ, ಸೋಕಾಲ್ಡ್ ಸುಶಿಕ್ಷಿತರೂ ಆಗಿರುವಂತ ನೂರಾರು ಮಂದಿ ಆಕ್ಷೇಪಿಸುತ್ತಿದ್ದು ನನಗೆ ಬಹಳ ಆಶ್ಚರ್ಯವಾಗುತ್ತಿತ್ತು. ಕೂದಲು ತೀರಾ ಉದ್ದವಿದ್ದು ಕಣ್ಣಿಗೆ ಬಂದರೆ ಅಡಚಣೆ ನಿಜ. ಹಾಗೆಯೇ ಕೂದಲಿಗೆ ಧೂಳು ತುಂಬಿಕೊಂಡು ಅದೇ ಕೂದಲಿನ ಬುಡಗಳು ಕಣ್ಣಿಗೆ ತಗಲಿ ತೊಂದರೆಯುಂಟು ಮಾಡಬಹುದೆಂಬ ಸ್ವಚ್ಛತೆಯ ಮತ್ತು ಆರೋಗ್ಯದ ದೃಷ್ಟಿಯಿಂದ ಪರಿಗಣಿಸಬೇಕೇ ಹೊರತು ವಿದ್ಯೆಗೂ, ಕಲಿಕೆಗೂ ಕೂದಲಿಗೂ ಏನೇನೂ ಸಂಬಂಧವಿಲ್ಲ. ಇಂಥಾ ವೌಢ್ಯವನ್ನು ತುಂಬಿಕೊಂಡಿರುವ ಹಿರಿಯರು, ಕಿರಿಯರು ತಮ್ಮ ಕಾಲಘಟ್ಟದ ವಿಷಯಗಳಿಗೆ ಸ್ಪಂದಿಸಲು ಬಿಡುವುದಿಲ್ಲ. ತಲೆಯ ಮೇಲೆ ಕೈಯಿಟ್ಟುಕೊಂಡು ಕುಳಿತುಕೊಳ್ಳಬಾರದು ಮಡಿಸಿದ ಕಾಲುಗಳನ್ನು ಕೈಗಳಿಂದ ಬಂಧಿಸಿ ಕುಳಿತುಕೊಳ್ಳಬಾರದು ಇತ್ಯಾದಿಗಳಿರಲಿ, ಶಿಕ್ಷಕರ ಹತ್ತಿರ ಕೈ ಕಟ್ಟಿಕೊಂಡು ನಿಂತುಕೊಳ್ಳಬೇಕು. ತಲೆ ಎತ್ತಿ ಕಣ್ಣಿಗೆ ಕಣ್ಣು ಕೊಟ್ಟು ನೋಡಬಾರದು ಇತ್ಯಾದಿಗಳೂ ಜೊತೆ ಸೇರುತ್ತವೆ. ಹಿಂದೆ ಜೀತಕ್ಕಿರುವ ಆಳುಗಳು ತಮ್ಮ ದಣಿಗಳ ಮುಂದೆ ಕೈ ಕಟ್ಟಿಕೊಂಡು ಸೊಂಟ ಬಗ್ಗಿಸಿ ನಿಂತುಕೊಂಡಂತೆ ವಿದ್ಯಾರ್ಥಿಗಳೂ ಶಿಕ್ಷಕರ ಪಕ್ಕದಲ್ಲಿ ನಿಂತುಕೊಳ್ಳುವ ರೀತಿಯನ್ನು ಅನೇಕರು ನಿರೀಕ್ಷಿಸುತ್ತಾರೆ. ವೌಢ್ಯ ಮತ್ತು ಸಾಮಾಜಿಕ ದಬ್ಬಾಳಿಕೆಗಳನ್ನು ತೊಡೆದು ಹಾಕುವುದು ಶಿಕ್ಷಣದ ಗುರಿಯಾಗಿರುವಾಗ ಮಕ್ಕಳಿಗೆ ಕಲಿಕೆಯ ಹಂತದಲ್ಲೇ ಇವುಗಳನ್ನು ರೂಢಿ ಮಾಡಿಸುವುದು ಮಕ್ಕಳಿಗೂ ಮತ್ತು ಶಿಕ್ಷಣದ ಉದ್ದೇಶಕ್ಕೂ ಮಾಡುವ ವಂಚನೆಯೇ ಆಗಿದೆ. ಕಲಿಕೆಯ ಪ್ರಕ್ರಿಯೆಯಲ್ಲಿ ಅಗತ್ಯವಿರುವ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಬದಲು, ಅವೈಜ್ಞಾನಿಕ ಮತ್ತು ಅವೈಚಾರಿಕ ಧೋರಣೆಗಳಿಂದ ವಿದ್ಯಾರ್ಥಿಗಳನ್ನು ಅಂಕೆಯಲ್ಲಿಡಲು ಯತ್ನಿಸುವುದು ಒಂದು ಸಾಮಾಜಿಕ ಅಪರಾಧವೇ ಆಗಿದೆ.

 ಮಕ್ಕಳಿಗೆ ನಾಗರಿಕ ಹಕ್ಕು

ಮಕ್ಕಳು ಓಟ್‌ಬ್ಯಾಂಕ್ ರಾಜಕೀಯಕ್ಕೆ ಯಾವ ರೀತಿಯಲ್ಲಿಯೂ ತಮ್ಮ ಕಾಣ್ಕೆಯನ್ನು ಸಲ್ಲಿಸದೇ ಇರುವುದರಿಂದ ಅಧಿಕಾರದಲ್ಲಿರುವ ರಾಜಕಾರಣಿಗಳು ಸಾಮಾನ್ಯವಾಗಿ ಅಷ್ಟೇನೂ ಆಸಕ್ತಿ ವಹಿಸುವುದಿಲ್ಲ. ಹಾಗಾಗಿ ಬೇರೆ ಎಲ್ಲಾ ಸಮಸ್ಯೆಗಳ ಮುಂದೆ ಮಕ್ಕಳ ಸಮಸ್ಯೆಯನ್ನು ಮುಂದಿರಿಸಲು ಹೆಚ್ಚಿನ ಕಾಳಜಿಯೂ ಇರುವುದಿಲ್ಲ. ಇನ್ನು ಮಕ್ಕಳ ವ್ಯಕ್ತಿಗತವಾದ ಅಗತ್ಯಗಳಿವೆ ಎಂಬ ವಿಷಯವೇ ಅನೇಕ ಹಿರಿಯರ ಅರಿವಿಗೆ ಮುಟ್ಟಿರುವುದಿಲ್ಲ. ವ್ಯಕ್ತಿಗತ ಅಥವಾ ವೈಯಕ್ತಿಕ ಎಂಬ ಪರಿಭಾಷೆಯೇ ಮಕ್ಕಳ ವಿಷಯದಿಂದ ದೂರ ಎಂಬಂತಹ ಧೋರಣೆಯಲ್ಲೇ ಬಹುತೇಕ ಹಿರಿಯ ಮಂದಿಯಿರುವುದು. ವಾಸುದೇವ ಶರ್ಮಾ ತಮ್ಮ ಚಳವಳಿ ಮತ್ತು ಬರಹಗಳ ಮೂಲಕ ಹಿರಿಯರ ಈ ಧೋರಣೆಯನ್ನು ಖಂಡಿಸುವುದು ಮಾತ್ರವಲ್ಲದೆ ಮಕ್ಕಳ ಹಕ್ಕುಗಳು ಯಾವುದೇ ದೊಡ್ಡವರ ಹಕ್ಕುಗಳಷ್ಟೇ ಮಾನ್ಯವಾದದ್ದು ಮತ್ತು ಅಗತ್ಯವಾದದ್ದು ಎಂದು ವಸ್ತುನಿಷ್ಠರಾಗಿ ಮಂಡಿಸುತ್ತಾರೆ. ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳು ಎಚ್ಚೆತ್ತುಕೊಳ್ಳುವುದಕ್ಕಿಂತ ಮುಖ್ಯವಾಗಿ ದೊಡ್ಡವರು ಎಚ್ಚೆತ್ತುಕೊಳ್ಳಬೇಕು. ಅವರು ಅಸಹಾಯಕರು ಮತ್ತು ತಮ್ಮನ್ನು ಅವಲಂಬಿಸಿದವರು ಎಂಬ ಒಂದೇ ಕಾರಣದಿಂದ ರಕ್ಷಣೆಯ ನೆಪದಲ್ಲಿ ಅವರ ಹಕ್ಕುಚ್ಯುತಿಗೆ ಮುಂದಾಗುವುದು ಎಂದಿಗೂ ಸಲ್ಲದು. ಹಾಗಾಗಿಯೇ ಮಕ್ಕಳ ಹಕ್ಕುಗಳ ಸಂಘಗಳು, ಮೀನಾ ತಂಡಗಳು, ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳು ಮತ್ತು ಮಕ್ಕಳ ಸಂಸತ್ತುಗಳಲ್ಲಿ ಪರಿಣಾಮಕಾರಿಯಾಗಿ ಚರ್ಚಿಸಲು ವಾಸುದೇವ ಶರ್ಮಾ ಹಲವಾರು ಮಾಹಿತಿಗಳನ್ನು ನೀಡುತ್ತಾರೆ. ವಿಶ್ವಸಂಸ್ಥೆಯು ಘೋಷಿಸಿರುವ ಮಕ್ಕಳ ಹಕ್ಕುಗಳ ಒಡಂಬಡಿಕೆ 1989. ಇದನ್ನು ಜಾರಿ ಮಾಡಲು ಭಾರತ ಸರಕಾರ 1992ರಲ್ಲಿ ಅಧಿಕೃತವಾಗಿ ಬದ್ಧವಾಗಿದೆ. ಆ ಹಕ್ಕುಗಳ ಮುಂದೆ ಮತ್ತು ಅವುಗಳನ್ನು ಜಾರಿಗೊಳಿಸಲು ನಾವು, ದೊಡ್ಡವರೆನಿಸಿಕೊಂಡಿರುವವರು ಹೇಗೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಮುಂದೆ ನೋಡೋಣ.

 

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News