ಕೃಷ್ಣನ್ ಅವರ ಜನಮುಖಿ ನೆನಪುಗಳು...

Update: 2016-02-26 17:55 GMT

ಹೋರಾಟಗಾರನ ಜೀವನ ಚರಿತ್ರೆ ಅವನ ಕಾಲಘಟ್ಟದ ಸಾಮಾಜಿಕ ಇತಿಹಾಸವಾಗಿರುತ್ತದೆ. ಹೋರಾಟಗಾರ, ದುಡಿವ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿರುವ ಎಂ. ಎಸ್. ಕೃಷ್ಣನ್ ಅವರ ಬದುಕಿನ ವಿವರಗಳ ಸಂಗ್ರಹ ‘ಜನಮುಖಿ’ ಈ ಕಾರಣದಿಂದಲೇ ನಮಗೆ ಮುಖ್ಯವಾಗುತ್ತದೆ. ವಿದ್ಯಾರ್ಥಿ ಸಂಘಟನೆಯ ಮೂಲಕ ಸ್ವಾತಂತ್ರ ಹೋರಾಟಕ್ಕೆ ಧುಮುಕಿ, ಬಳಿಕ ತನ್ನ ಬದುಕನ್ನು ಕಮ್ಯುನಿಸ್ಟ್ ಚಳವಳಿಗೆ ಅರ್ಪಿಸಿದವರು ಕೃಷ್ಣನ್. ಅವರ ಬದುಕು, ಹೋರಾಟವನ್ನು ಅವರ ಆತ್ಮೀಯರು, ಸಂಗಾತಿಗಳು ಮತ್ತು ಇನ್ನಿತರ ಲೇಖಕರ ಮೂಲಕ ಕೃತಿಗಿಳಿಸಲಾಗಿದೆ. ‘ಜನಮುಖಿ’ ಎಂ. ಎಸ್. ಕೃಷ್ಣನ್ ಸಂಸ್ಮರಣಾ ಗ್ರಂಥ. ಡಾ. ಸಿದ್ದನಗೌಡ ಪಾಟೀಲ ಅವರು ಇದನ್ನು ಸಂಪಾದಿಸಿದ್ದಾರೆ. ಕೃತಿಯ ಪ್ರಸ್ತುತತೆಯನ್ನು ಸಂಪಾದಕರು ಹೀಗೆ ವಿವರಿಸುತ್ತಾರೆ. ‘‘ಯಾವುದೇ ವ್ಯಕ್ತಿಯ ಸ್ಮರಣೆಗೆ ಎರಡು ಆಯಾಮಗಳಿರುತ್ತವೆ. ಒಂದು, ಅವರ ಬದುಕಿನ ಸಂದರ್ಭದಲ್ಲಿ ಅವರು ಬದುಕಿದ ರೀತಿ, ನಡೆಸಿದ ಹೋರಾಟಗಳು, ನಿಸ್ವಾರ್ಥ ಜೀವನ, ತ್ಯಾಗ ಮೊದಲಾದವುಗಳನ್ನು ಗೌರವಿಸುವುದು. ಎರಡು, ಅವರ ಚಿಂತನೆ, ಬದುಕಿನ ವಿಧಾನ, ಆಶಯ, ಆದರ್ಶಗಳು ಇಂದಿಗೂ ಅವಶ್ಯವೆನ್ನುವಂತಿದ್ದರೆ ಅವುಗಳನ್ನು ಮಾದರಿಯಾ ಗಿಟ್ಟುಕೊಳ್ಳುವುದು. ಈ ಎರಡೂ ಆಯಾಮಗಳಿಗೆ ಅರ್ಹವಾದ ವ್ಯಕ್ತಿ ಕಾಮ್ರೇಡ್ ಎಂ. ಎಸ್. ಕೃಷ್ಣನ್...’’

 ಕೃತಿಯನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಮೊದಲನೆ ಭಾಗವನ್ನು ಸಂಗಾತಿ-ಸ್ಮರಣೆಗೆ ಮೀಸಲಿಡಲಾಗಿದೆ. ಇದರಲ್ಲಿ, ಕೃಷ್ಣನ್ ಅವರ ಜೀವನದ ಸಂಕ್ಷಿಪ್ತ ಪರಿಚಯವನ್ನು ಸುರೇಖಾ ಶೆಟ್ಟಿ ಮಾಡಿಕೊಡುತ್ತಾರೆ. ಉಳಿದಂತೆ ಅವರ ಬದುಕಿನ ಬೇರೆ ಬೇರೆ ಆಯಾಮಗಳನ್ನು ಪುಷ್ಪಾ ಕೃಷ್ಣನ್, ಡಾ. ಜಿ. ರಾಮಕೃಷ್ಣ, ಪ್ರೊ. ಜೆ. ಆರ್. ಲಕ್ಷ್ಮಣ ರಾವ್, ವಿಜೆಕೆ ನಾಯರ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಬಾಬು ಮ್ಯಾಥ್ಯೂ, ಕೆ. ರಾಧಾಕೃಷ್ಣ, ಸಿಯಾರ್ಕೆ, ಎಚ್. ವಿ. ಅನಂತಸುಬ್ಬರಾವ್, ಹೆಚ್. ಆರ್. ಶೇಷಾದ್ರಿ ಮೊದಲಾದವರು ತೆರೆದಿಟ್ಟಿದ್ದಾರೆ. ಎರಡನೆ ಭಾಗವನ್ನು ‘ಸಂವಾದ’ ಎಂದು ವಿಂಗಡಿಸಲಾಗಿದೆ. ಇಲ್ಲಿ ಎಂ. ಎಸ್. ಎಸ್. ಕೃಷ್ಣನ್ ಅವರ ಲೇಖನಗಳು, ಅವರ ಹೋರಾಟಕ್ಕೆ ಪೂರಕವಾದ ಚರ್ಚೆ, ಸಂದರ್ಶನಗಳನ್ನು ನೀಡಲಾಗಿದೆ. ಮೂರನೆ ಭಾಗವನ್ನು ‘ಸಹಮತ’ ಎಂದು ಕರೆಯಲಾಗಿದೆ. ಈ ಭಾಗದಲ್ಲಿ ಕೃಷ್ಣನ್ ಅವರ ಚಿಂತನೆ, ಆಶಯಗಳಿಗೆ ಪೂರಕವಾದ ಲೇಖನಗಳನ್ನು ವಿವಿಧ ಲೇಖಕರು ಬರೆದಿದ್ದಾರೆ. ಡಿ. ಎ. ವಿಜಯಭಾಸ್ಕರ್, ಜಿ. ರಾಜಶೇಖರ್, ಡಾ. ಬಿ. ಆರ್. ಮಂಜುನಾಥ್, ಡಾ. ಟಿ. ಆರ್. ಚಂದ್ರಶೇಖರ್, ರಾ. ನಂ. ಚಂದ್ರಶೇಖರ್, ಎಂ. ಅಬ್ದುಲ್ ರೆಹಮಾನ್ ಪಾಷಾ, ಎಂ. ಸಿ. ಡೋಂಗ್ರೆ, ಪ್ರೊ. ಬಿ. ಸುರೇಂದ್ರ ರಾವ್ ಮೊದಲಾದ ಖ್ಯಾತ ಲೇಖಕರು ಇಲ್ಲಿ ಬರೆದಿದ್ದಾರೆ.
ಎಂ. ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಬೆಂಗಳೂರು ಈ ಕೃತಿಯನ್ನು ಪ್ರಕಟಿಸಿದ್ದು, ಮುಖಬೆಲೆ 250 ರೂ. ಆಸಕ್ತರು 080-30578029ನ್ನು ಸಂಪರ್ಕಿಸಬಹುದು.
ಕಾರುಣ್ಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News