ದಲಿತರ ಮೇಲಿನ ದೌರ್ಜನ್ಯಗಳ ಅಧ್ಯಯನ
ರಾಜ್ಯದ ದಲಿತ ಚಳವಳಿಯಲ್ಲಿ ಲಕ್ಷ್ಮಣ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಅವರು ಒಂಟಿ ಚಿರತೆಯಂತೆ ಸದಾ ದಲಿತ ವಿರೋಧಿ ಶಕ್ತಿಗಳ ಮೇಲೆ ಹಾರುತ್ತಲೇ ಇದ್ದಾರೆ. ಸಂಘಟನೆಯ ರೂಪದಲ್ಲಿ, ಸಾಹಿತ್ಯಕ ರೂಪದಲ್ಲಿ, ವೈಚಾರಿಕ ಲೇಖನಗಳ ರೂಪದಲ್ಲಿ, ಕಾವ್ಯ ರೂಪದಲ್ಲಿ...ಹೀಗೆ ಹೋರಾಟಕ್ಕೆ ಅವರಿಗೆ ಸಾವಿರ ದಾರಿಗಳು. ಅವರ ಈ ಹೋರಾಟದ ಭಾಗವಾಗಿಯೇ ಹೊರಬಂದಿದೆ ‘ಇದು ಭಾರತ’ ಲೇಖನಗಳ ಸಂಗ್ರಹ. ಇದೊಂದು ವಿಶಿಷ್ಟ ಸಂಗ್ರಹ. ಇದನ್ನು ಪರಿಪೂರ್ಣವಾಗಿ ಲೇಖನಗಳು ಎಂದು ಕರೆಯುವುದಕ್ಕಿಂತ, ಬಿಡಿ ದಾಖಲೆಗಳು ಎಂದು ಕರೆಯಬಹುದು. ಇದೊಂದು ರೀತಿಯಲ್ಲಿ ಅಧ್ಯಯನದಿಂದ ಮೂಡಿಬಂದ ಕೃತಿಯೂ ಹೌದು. ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ವಿವಿಧ ದಾಳಿ, ದೌರ್ಜನ್ಯಗಳನ್ನು ಗುರುತಿಸಿ, ಅದನ್ನು ಸಂಗ್ರಹಿಸಿ ಬರಹರೂಪಕ್ಕಿಳಿಸಿದ್ದಾರೆ. ಇಲ್ಲಿ ಸುಮಾರು 100ಕ್ಕೂ ಅಧಿಕ ಘಟನೆಗಳನ್ನು ಒಂದೆಡೆ ಸೇರಿಸಿದ್ದಾರೆ. ಪತ್ರಿಕೆಗಳ ವರದಿಗಳು, ಸ್ಥಳ ಪರಿಶೀಲನೆ, ನಿಯೋಗ ಭೇಟಿ ಇತ್ಯಾದಿಗಳ ಮೂಲಕ ಹೊರ ಬಿದ್ದಿರುವ ಘಟನೆಗಳನ್ನು ಸಂಗ್ರಹಿಸಿ ಲಕ್ಷಣ್ ಅವರು ಈ ಕೃತಿಯನ್ನು ರೂಪಿಸಿದ್ದಾರೆ. ‘‘ಮನುಷ್ಯ ಬೆತ್ತಲಾಗಿ ಬೀದಿಯಲ್ಲಿ ಓಡಾಡುವುದು ಎಷ್ಟು ಅವಮಾನಕರವೋ, ಅಷ್ಟೇ ಅವಮಾನಕರವಾದದ್ದು ಹಿಂದೂ ಧರ್ಮದಲ್ಲಿನ ಅಸ್ಪಶ್ಯತೆಯನ್ನು ತಲೆಯ ಮೇಲೆ ಹೊತ್ತುಕೊಂಡು ದಲಿತರು ಜೀವಿಸುತ್ತಿರುವುದು’’ ಎಂದು ಅಭಿಪ್ರಾಯ ಪಡುವ ಲಕ್ಷ್ಮಣ್ ಆ ಅವಮಾನಗಳು ಎಷ್ಟು ಭೀಕರವಾಗಿರುತ್ತವೆ ಎನ್ನುವುದನ್ನು ಸಾಕ್ಷ ಸಮೇತ ಹೊರಗೆಡವಿದ್ದಾರೆ. ಕೃತಿಯ ಪೀಠಿಕೆಯಾಗಿ, ಆರ್ಯರ ಕುತಂತ್ರದಿಂದ ಇಲ್ಲಿನ ದ್ರಾವಿಡ ಸಂಸ್ಕೃತಿ ಹೇಗೆ ಶೋಷಣೆಗೀಡಾಗಬೇಕಾಯಿತು ಎನ್ನುವುದನ್ನು ಬರೆಯುತ್ತಾರೆ. ಹಂಗರಹಳ್ಳಿ ಜೀತ ಪ್ರಕರಣದಿಂದ ಆರಂಭಗೊಳ್ಳುವ ಘಟನೆಗಳಿಂದ ದಲಿತರ ಬರ್ಬರ ಬದುಕು ತೆರೆದುಕೊಳ್ಳುತ್ತದೆ. ಮುಂದೆ ರಾಜ್ಯವೂ ಸೇರಿದಂತೆ, ದೇಶದಲ್ಲಿ ಹೇಗೆ ದಲಿತ ದೌರ್ಜನ್ಯಗಳು ಬೇರೆ ಬೇರೆ ರೂಪಗಳಲ್ಲಿ ಹರಡಿಕೊಂಡಿವೆ ಎನ್ನುವುದನ್ನು ಉದಾಹರಣೆ ಸಹಿತ ತೆರೆದಿಡುತ್ತಾರೆ.
ಸವರ್ಣೀಯರಲ್ಲಿ ನಾಚಿಕೆಯನ್ನೂ, ದಲಿತರಲ್ಲಿ ಜಾಗೃತಿಯನ್ನೂ ಮೂಡಿಸುವ ಕೃತಿ ಇದು. ಕಣ್ವ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 245 ರೂ. ಆಸಕ್ತರು 9980021101 ದೂರವಾಣಿಯನ್ನು ಸಂಪರ್ಕಿಸಬಹುದು.