ವರ್ತಮಾನದ ಕಣ್ಣಲ್ಲಿ ಕನಕದಾಸರ ಸಾಹಿತ್ಯ
‘ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ’ ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಬರೆದ ಅಧ್ಯಯನಾ ಕೃತಿ. ಸಮಕಾಲೀನ ಸಮಾಜದ ಅನೇಕ ಬಗೆಯ ದಮನದ ಕೇಂದ್ರಗಳನ್ನು ಕನಕದಾಸರ ಕೃತಿಗಳ ಮೂಲಕ ವಿಮರ್ಶಿಸಿ, ಸ್ಫೋಟಿಸಲೆತ್ನಿಸಿರುವ ಈ ಪುಸ್ತಕ, ಕನಕದಾಸರ ಚಿಂತನೆಗಳನ್ನು ನಮ್ಮ ಕಾಲದ ಬೆಳಕಿನಲ್ಲಿ ಮರು ಶೋಧಿಸಿಕೊಳ್ಳಲು ಹೊರಟಿದೆ. ಕನಕದಾಸರ ಕಾವ್ಯವನ್ನು ವಚನ ಸಾಹಿತ್ಯದ ಜೊತೆಗೆ ನೋಡುವ ಸಾಹಸವನ್ನೂ ಅವರು ಮಾಡಿದ್ದಾರೆ.
ಕೆಳಜಾತಿಯಿಂದ ಬಂದ ಹೋರಾಟ ಗಾರ, ಲೇಖಕರಾದ ಕನಕದಾಸರು ಸಂಪ್ರದಾಯಸ್ಥ ಸಂಸ್ಕೃತಿಯೊಂದರ ವಿರುದ್ಧ ಪ್ರತಿಭಟನೆಯನ್ನು, ಇತರ ಕೀರ್ತನೆ ಮತ್ತು ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸುವ ಲೇಖಕರು, ಅವರನ್ನು ಮೇಲ್ವರ್ಣೀಯ ಜನರು ತಮ್ಮ ಸೂತ್ರದಲ್ಲಿ ಬಂಧಿಸಿಡುವುದನ್ನು ವಿರೋಧಿಸುತ್ತಾರೆ. ಸಾಮಾಜಿಕ ಚಳವಳಿಯನ್ನು ಪ್ರಾರಂಭಿಸಿ, ಸಾಮಾನ್ಯ ಜನರೊಂದಿಗೆ ಸಮಾನತೆಯ, ಸ್ಥಾನಮಾನದ ವಿಚಾರಗಳಿಗೆ ಹೋರಾಟಕ್ಕಿಳಿದು, ಜನಾಂಗಕ್ಕಾಗುತ್ತಿದ್ದ ನೋವು, ಅಪಮಾನ, ಬೇಸರ, ಕೀಳರಿಮೆಗಳನ್ನು ಭಕ್ತಿಯ ಆಚರಣೆಯಲ್ಲಿ ತೊಡಗಿಕೊಂಡೇ ಮಾನವೀಯ ವೌಲ್ಯಗಳನ್ನು ಹೇಳುವ ಅನುಭಾವಿಯಾಗಿ ರೂಪುಗೊಂಡವರು ಕನಕದಾಸರು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ಏಳು ಅಧ್ಯಾಯಗಳನ್ನೊಳಗೊಂಡ ಈ ಕೃತಿ, ಕನಕದಾಸರ ಸಾಹಿತ್ಯ ಮತ್ತು ಚಳವಳಿಯ ಬೇರೆ ಬೇರೆ ಮಗ್ಗುಲುಗಳನ್ನು ಸ್ಪರ್ಶಿಸುತ್ತದೆ. ಕೀರ್ತನೆಗಳಲ್ಲಿ ಭಕ್ತಿ, ಕೀರ್ತನೆಗಳಲ್ಲಿ ಸಮಾಜ, ಕನಸಿನ ಕಾವ್ಯಗಳು, ಕಾವ್ಯಗಳಲ್ಲಿ ಧರ್ಮ ಮತ್ತು ಯುದ್ಧ, ಜಾತಿ ದಂಗೆಯ ಕೃತಿ ರಾಮಧಾನ್ಯ ಚರಿತ್ರೆ, ಕನಕ ದಾಸರ ಕೀರ್ತನೆಗಳಲ್ಲಿ ಸಂಸ್ಕೃತಿ, ರಾಜಕೀಯ ಮೊದಲಾದವ ವಿಷಯಗಳ ಕುರಿತಂತೆ ಈ ಕೃತಿ ಚರ್ಚಿಸುತ್ತದೆ. ಪ್ರೇರಣಾ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 75 ರೂ. ಆಸಕ್ತರು 9480583913 ದೂರವಾಣಿಯನ್ನು ಸಂಪರ್ಕಿಸಬಹುದು.