ದಲಿತ ಸಂಘಟಕರ ಕಣ್ಣಲ್ಲಿ ಅಮೆರಿಕ

Update: 2016-03-10 17:58 GMT

 ಒಂದು ಕಾಲವಿತ್ತು ‘ಸಾಹಿತಿಗಳು, ಲೇಖಕರು ಅಮೆರಿಕಕ್ಕೆ ಪ್ರವಾಸ ಹೋಗುವುದು’ ಎಂದರೆ, ವೌಂಟ್ ಎವರೆಸ್ಟ್ ಶಿಖರವನ್ನು ಏರಿದಂತೆ. ಅಮೆರಿಕದಲ್ಲಿ ತಮ್ಮ ಪುತ್ರರು, ಮೊಮ್ಮಕ್ಕಳ ಜೊತೆ ಒಂದೆರಡು ತಿಂಗಳು ತಂಗಿ, ಮರಳಿ ಊರಿಗೆ ಬಂದಾಗ ಅದರ ಬಗ್ಗೆ ಒಂದು ಪ್ರವಾಸ ಕಥನ ಬರೆಯುವುದು ಲೇಖಕರಿಗೆ ಅಭ್ಯಾಸವೇ ಆಗಿ ಬಿಟ್ಟಿತ್ತು. ಅಪರಿಚಿತ ಊರಿನ ಕುರಿತಂತೆ ಆ ತೆಳುವಾದ ಬರಹ, ಎಷ್ಟು ಸವಕಲಾಗಿರುತ್ತಿತ್ತು ಎಂದರೆ, ಎಲ್ಲ ಪ್ರವಾಸಕಥನಗಳೂ ಒಂದೇ ದಾಟಿಯಲ್ಲಿರುತ್ತಿತ್ತು. ಲೇಖಕರು ಅಮೆರಿಕವನ್ನು ನೋಡುವ ದೃಷ್ಟಿ, ಪೂರ್ವ ನಿರ್ಧರಿತ ವಾಗಿರುತ್ತಿತ್ತು. ಅಮೆರಿಕ ಪ್ರವಾಸವೇ ಒಂದು ಸಾಧನೆಯೇನೋ ಎಂಬ ಹೆಮ್ಮೆಯೂ ಅದರೊಳಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಮೆರಿಕ ಪ್ರವಾಸಗೈಯುತ್ತಿರುವುದರಿಂದ ಮತ್ತು ಅಮೆರಿಕ ಜನಸಾಮಾನ್ಯರಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡಿರುವುದರಿಂದ, ಈ ರೀತಿಯ ಪ್ರವಾಸ ಕಥನಗಳು ಕಡಿಮೆಯಾಗತೊಡಗಿವೆ.
   
  ಇದೇ ಸಂದರ್ಭದಲ್ಲಿ ದಲಿತ ಸಂಘಟಕನೊಬ್ಬ ಅಮೆರಿಕ ಪ್ರವಾಸ ಗೈದರೇ, ಅವರು ತೆರೆದಿಡುವ ಅನುಭವ ಯಾವ ರೀತಿ ಇರಬಹುದು? ಈ ಪ್ರಶ್ನೆಗೆ ಉತ್ತರವಾಗಿದೆ ‘ಬಂದಾರಪ್ಪೋ ಬಂದಾರು ನಮ್ಮ ಜನಗೋಳು’ ಅಮೆರಿಕ ಪ್ರವಾಸ ಕಥನ. ಈ ಪ್ರವಾಸಕಥನವನ್ನು ಹಂಚಿಕೊಂಡವರು ದಲಿತ ಮುಖಂಡ ಲಕ್ಷ್ಮೀ ನಾರಾಯಣ ನಾಗವಾರ. ಅವರ ಪಾಲಿಗೆ ಇದು ತಿಂದು, ಉಂಡು ಬರುವ ಮೋಜಿನ ಪ್ರವಾಸವಾಗಿಲ್ಲ. ಅಮೆರಿಕದಲ್ಲಿದ್ದ ವರ್ಣಭೇದ ನೀತಿಯ ಇತಿಹಾಸವನ್ನು ಪ್ರತ್ಯಕ್ಷ ದರ್ಶಿಯಾಗಿ ತಿಳಿಯುವ, ವರ್ಣಭೇದದ ಕ್ರೌರ್ಯ, ಅಮಾನವೀಯತೆಗಳ ವಿರುದ್ಧ ಹೋರಾಟ ಮಾಡಿದವರ ಬಗೆಗಿನ ಅಧ್ಯಯನಕ್ಕೆ ಈ ಪ್ರವಾಸ ಸಹಾಯ ಮಾಡಿದೆ. ಪ್ರವಾಸದ ವೇಳೆ, ಅಮೆರಿಕದ ತಳದಲ್ಲಿ ಇನ್ನೂ ಕೆನೆಗಟ್ಟಿರುವ ವರ್ಣ ನೀತಿಯ ಕುರಿತಂತೆ ತಿಳಿದುಕೊಳ್ಳುವ ಸಣ್ಣದೊಂದು ಪ್ರಯತ್ನವನ್ನು ಈ ಪ್ರವಾಸ ಕಥನ ಮಾಡುತ್ತದೆ. ಅಮೆರಿಕದ ಜನರ ಸ್ನೇಹ, ವಿಶ್ವಾಸ, ಅಲ್ಲಿರುವ ಕನ್ನಡಿಗರ ಕುರಿತ ಅನಿಸಿಕೆಗಳು, ಅಲ್ಲಿನ ಇತಿಹಾಸ ಮತ್ತು ವರ್ತಮಾನ ಇವೆಲ್ಲವನ್ನೂ ತನ್ನ ಮಿತಿಯಲ್ಲಿ ಈ ಕೃತಿ ಪರಿಚಯಿಸುತ್ತದೆ. ಬರಹಕ್ಕೆ ಪೂರಕವಾಗಿ ವರ್ಣಮಯ ಚಿತ್ರಗಳೂ ಇವೆ. ಮಿಲಿಂದ್ ಪ್ರಕಾಶ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 175 ರೂ. ಆಸಕ್ತರು 94490 59393 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News