ಆರದಿರಲಿ ಬೆಳಕು ಮುಂಬೈ ನೆಲದಲ್ಲಿ ತಾಯ್ನೆಲದ ಕನವರಿಕೆ

Update: 2016-03-12 17:45 GMT

ಬದುಕಿನ ಮಾರ್ಗವನ್ನು ಹುಡುಕಿ ಮುಂಬಯಿಗೆ ಹೋದವರು ಅಲ್ಲೂ ತಮ್ಮನ್ನು ಕೇವಲ ದುಡಿತಕ್ಕೆ ಸೀಮಿತವಾಗಿರಿಸಿಕೊಳ್ಳದೆ, ನಗರದ ಗದ್ದಲಗಳಲ್ಲಿ ಕಳೆದುಹೋಗದೆ ಹೃದಯದ ಮಾತಿಗೆ ಕಿವಿಯಾದ ಹಲವರಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿಯ ಮೂಲಕ ತಮ್ಮ ಬೇರನ್ನು, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಂತಹ ಒಂದು ಪ್ರಯತ್ನದ ಭಾಗವೇ, ಡಾ. ಕರುಣಾಕರ್ ಎನ್. ಶೆಟ್ಟಿ ಪಣಿಯೂರು ಅವರ ಕಥಾ ಸಂಕಲನ ‘ಆರದಿರಲಿ ಬೆಳಕು’. ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕವು ತನ್ನ ಶತಮಾನದ ಸಂಭ್ರಮದ ಹಿನ್ನೆಲೆಯಲಋ್ಲ ಈ ಕೃತಿಯನ್ನು ಹೊರ ತಂದಿದೆ. ಪೂರ್ಣಿಮಾ, ಅರುಣೋದಯ, ಕತ್ತಲೆ ಸರಿದಾಗ, ಶಂಖನಾದ ಕೃತಿಯನಂತರ ಅವರ ಈ ಕೃತಿ ಹೊರ ಬಂದಿದೆ. ಯಾವುದೇ ಸಾಹಿತ್ಯಿಕ ಹಣೆ ಪಟ್ಟಿಗಳಿಲ್ಲ, ನವೋದಯ ಮತ್ತು ಪ್ರಗತಿಶೀಲರ ದಟ್ಟ ಪ್ರಭಾವದಿಂದ ಹೊರ ಬಂದಿರುವ ಈ ಕತೆಗಳು, ನಮ್ಮ ದೈನಂದಿನ ಬದುಕಿನ ಘಟನೆಗಳಲ್ಲಿ ಮನುಷ್ಯ ಬದುಕಿನ ಸಾರ್ಥಕತೆಯನ್ನು ಹುಡುಕಲು ಪ್ರಯತ್ನಿಸುತ್ತದೆ.

ಈ ಕತೆಗಳು ಮಹಾರಾಷ್ಟ್ರದ ಮಣ್ಣಿನಲ್ಲಿ ಬೆಳಕು ಕಂಡಿದ್ದರೂ, ಇವುಗಳ ಮೂಲ ಸೆಲೆಯಿರುವುದು ದಕ್ಷಿಣ ಕನ್ನಡದ ತುಳು ಸಂಸ್ಕೃತಿಯಲ್ಲಿ. ಅಲ್ಲಲ್ಲಿ ನಗರಗಳ ಬದುಕು ಕಾಣುತ್ತವೆಯಾದರೂ, ಅದು ಅಂತಿಮವಾಗಿ ಹೋಗಿ ನಿಲ್ಲುವುದು ಹುಟ್ಟಿದ ಊರಿನಲ್ಲಿ. ಇಲ್ಲಿ ಒಟ್ಟು 18 ಕತೆಗಳಿವೆ. ಎಲ್ಲವೂ ಯಾವುದೇ ನಿರೂಪಣಾ ತಂತ್ರಗಳಿಲ್ಲದೆ, ಸರಾಗವಾಗಿ ಹರಿಯುವ, ಸರಳವಾಗಿ ಒಪ್ಪಿತವಾಗುವ ಕತೆಗಳು. ಜೀವನ ವೌಲ್ಯಗಳನ್ನು ಎತ್ತಿ ಹಿಡಿಯುವುದು ಕತೆಗಾರರ ಮುಖ್ಯ ಉದ್ದೇಶವಾಗಿದೆ. ಋಣಾನುಬಂಧ, ಕಾಲಚಕ್ರ, ಬಾಡಿಗೆ ತಾಯಿ, ಸೋಷಿಯಲ್, ವಾಟ್ಸ್‌ಆಪ್ ಹೀಗೆ ಹಲವು ಕತೆಗಳು ಆಧುನಿಕತೆ ಮತ್ತು ಪ್ರಾಚೀನತೆಯ ಜೊತೆಗಿನ ಸಂಘರ್ಷಗಳನ್ನು ಹೇಳುತ್ತದೆ. ಹೆಚ್ಚಿನ ಕತೆಗಳ ಅಂತ್ಯ ಪೂರ್ವನಿರ್ಧರಿತವಾದವುಗಳು. ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು, 98203 57758 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News