ಸೃಜನಶೀಲ ಬರಹಗಾರನ ಮುಗಿಯದ ಬಾಯಾರಿಕೆ

Update: 2016-03-13 18:31 GMT

ಮುಂಬೈ  ಕನ್ನಡ ಲೇಖಕರಲ್ಲಿ ಗಮನಾರ್ಹ ಹೆಸರು ಶ್ರೀನಿವಾಸ ಜೋಕಟ್ಟೆ ಅವರದು. ನಗರ ಬದುಕಿನ ಬಾಯಾರಿಕೆಯ ಬೆನ್ನ ಹಿಂದೆ ಬಿದ್ದು, ಇನ್ನೂ ಅಲೆಯುತ್ತಿರುವವರು ಜೋಕಟ್ಟೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನ ಬಾಯಾರಿಕೆಯನ್ನು ತಣಿಸುವ ಯತ್ನವನ್ನು ಮಾಡಿದವರು. ಆದರೆ ಎಲ್ಲೂ ತಣಿಯದ ಬಾಯಾರಿಕೆ ಅದು. ‘ನಗರ ಬಾಯಾರಿಕೆ’ ಕೃತಿ ಅವರ ತಣಿಯದ ಬಾಯಾರಿಕೆಯ ಇನ್ನೊಂದು ರೂಪವಾಗಿದೆ. ಬೇರೆ ಬೇರೆ ಆಸಕ್ತಿಗಳ ಮೂಲಕ ಚೆಲ್ಲಾ ಪಿಲ್ಲಿಯಾಗಿ ಹರಡಿಕೊಂಡಿರುವ ಬರಹಗಳನ್ನು ಒಂದಾಗಿ ಇಟ್ಟುಕೊಂಡಿರುವುದು ಮುಂಬೈಯ ಬೇರು. ಮುಂಬೈಯಲ್ಲಿ ನಿಂತು ಅವರು ತನ್ನ ಒಳಗಿನ ಬಾಯಾರಿಕೆಯನ್ನು ತಣಿಸುವ ದಾರಿಹುಡುಕುತ್ತಾರೆ. ಅದರ ಫಲವೇ ಈ ಕೃತಿ. ಮುಂಬೈಯ ಹಲವು ನೆನಪುಗಳನ್ನು, ಘಟನೆಗಳನ್ನು ಈ ಕೃತಿ ಬಗೆದು ಕೊಡುತ್ತದೆ. ನಮಗೆ ಗೊತ್ತಿಲ್ಲದ ಹಲವು ಸಂಗತಿಗಳನ್ನು ಕನ್ನಡಿಗನ ಮನಸ್ಸಿನ ಮೂಲಕ, ಕಣ್ಣಿನ ಮೂಲಕ ಜೋಕಟ್ಟೆ ತೆರೆದಿಡುತ್ತಾರೆ.
 ಇಲ್ಲಿ ಸುಮಾರು 67 ವೈವಿಧ್ಯಮಯವಾದ ಲೇಖನಗಳಿವೆ. ಹಾಗೆಂದು ಅವೆಲ್ಲವೂ ಮುಂಬೈಗೆ ಸಂಬಂಧಿಸಿದ್ದಲ್ಲ. ನಗರಕ್ಕಷ್ಟೇ ಸೀಮಿತವಾದುದೂ ಅಲ್ಲ. ಪ್ರವಾಸದ ನೆನಪುಗಳಿವೆ. ಓದಿದ ಪುಸ್ತಕಗಳ ಕುರಿತ ಅನಿಸಿಕೆಗಳಿವೆ. ಕಾರ್ಯಕ್ರಮಗಳ ವಿವರಗಳು, ವ್ಯಕ್ತಿ ಚಿತ್ರಗಳು, ಹಲವು ಸಾಂಸ್ಕೃತಿಕ ವೈವಿಧ್ಯಗಳ ಬಗ್ಗೆ ವಿವರಗಳಿವೆ, ನರ್ಮದಾ ನದಿಯ ಕಥೆ ವ್ಯಥೆಗಳಿವೆ, ಸ್ವಾಮೀಜಿಗಳ ಸಂದರ್ಶನಗಳಿವೆೆ...ಈ ನಿಟ್ಟಿನಲ್ಲಿ ಈ ಕೃತಿಯನ್ನು ಯಾವುದೋ ಒಂದು ಪ್ರಾಕಾರದಲ್ಲಿ ಕಟ್ಟಿ ಹಾಕಲು ಸಾಧ್ಯವಿಲ್ಲ. ವಿವಿಧ ಬಣ್ಣದ ಬೇಲಿಯ ಹೂಗಳನ್ನು ಒಂದೇ ದಾರದಲ್ಲಿ ಜೋಡಿಸಿಕೊಟ್ಟಿದ್ದಾರೆ ಜೋಕಟ್ಟೆ.

ಶ್ರೀರಾಮ ಪ್ರಕಾಶನ ಮಂಡ್ಯ ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ. ಆಸಕ್ತರು 9448930173 ದೂರವಾಣಿಯನ್ನು ಸಂಪರ್ಕಿಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News