ಸುನೀತಾ ಶೆಟ್ಟಿ: ಸಹೃದಯ ಮನದೊಳಗೆ ಮಿಡಿವ ಕಾವ್ಯ ಚಿಟ್ಟೆ

Update: 2016-03-16 18:41 GMT

ಮುಂಬೈ ಕನ್ನಡವೆಂದಾಗ ನೆನಪಾಗುವ ಹೆಸರುಗಳಲ್ಲಿ ಮುಂಚೂಣಿಯಲ್ಲಿರುವುದು ಡಾ. ಸುನೀತಾ ಎಂ. ಶೆಟ್ಟಿ. ಕತೆಗಾರ್ತಿ, ಕವಯತ್ರಿಯಾಗಿ, ಚಿಂತಕಿಯಾಗಿ, ಸಂಘಟಕಿಯಾಗಿ, ಶಿಕ್ಷಕಿಯಾಗಿ ಮುಂಬೈ ಮಾತ್ರವಲ್ಲ ಕರ್ನಾಟಕಾದ್ಯಂತ ಪರಿಚಿತರು. ಇವರು ತಮ್ಮ ಆತ್ಮತತೆಯನ್ನು ಹಲವೆಡೆಗೆ ಹಲವು ರೀತಿಯಲ್ಲಿ ಕೃತಿಗಿಳಿಸಿದ್ದಾರೆ. ‘ಸಾವಿರದ ಬಿಸಿಲು-ಬೆಳದಿಂಗಳು’ ಅವರ ಆತ್ಮಕಥನದ ವಿಸ್ತೃತ ರೂಪ. ಈ ಕಿರು ಕೃತಿ ವಿಶಿಷ್ಟವೆನಿಸುವುದು, ಅವರ ಬಳಸುವ ಸರಳ ಭಾಷೆಯ ಮೂಲಕ. ಹಾಗೆಯೇ ಇದು ಮುಂಬೈಗಿಂತಲೂ ತುಳುನಾಡಿನ 40ರ ದಶಕದ ಕಾಲ ಘಟ್ಟವನ್ನು ಅತ್ಯಂತ ಆತ್ಮೀಯವಾಗಿ ಹಿಡಿದಿಡುತ್ತದೆ. ಬಾಲ್ಯ ಕಾಲ, ತುಳು ಸಂಸ್ಕೃತಿ, ಜಾತ್ರೆ, ದಿಬ್ಬಣ ಇವೆಲ್ಲವನ್ನೂ ಅತ್ಯಂತ ಲವಲವಿಕೆಯಿಂದ ಕಥನ ರೂಪದಲ್ಲಿ ಕಟ್ಟಿಕೊಡುತ್ತಾರೆ. ಹಾಗೆಯೇ ಮಂಗಳೂರಿನ ಕಾಲೇಜಿನ ದಿನಗಳು ಮತ್ತು ಬರಹ ಲೋಕಕ್ಕೆ ಕಾಲಿಡಲು ಕಾರಣವಾದ ಸಂಗತಿಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಹಾಗೆಯೇ ಬಂಟ ಹುಡುಗಿಯೊಬ್ಬಳು ಆ ಕಾಲ ಘಟ್ಟದಲ್ಲಿ ‘ವರದಕ್ಷಿಣೆ ಕೇಳದ ಗಂಡನನ್ನೇ ಮದುವೆಯಾಗುವೆ’ ಎಂದು ಹಟ ಹಿಡಿಯುವುದು ಮತ್ತು ಅದನ್ನು ಸಾಧಿಸಿಕೊಳ್ಳುವುದನ್ನು ಒಂದು ಅಧ್ಯಾಯದಲ್ಲಿ ಹೇಳಿಕೊಳ್ಳುತ್ತಾರೆ. ಇಂತಹ ಆದರ್ಶಗಳನ್ನು ಹದಿ ಹರೆಯದಲ್ಲೇ ಮುಡಿದುಕೊಂಡಿದ್ದ ಸುನೀತಾ, ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎಂಬ ರೀತಿಯಲ್ಲಿ ಸೃಜನಕ್ರಿಯೆಯನ್ನು ನಂಬಿದವರು. ಸುನೀತಾ ಶೆಟ್ಟಿಯವರ ಬದುಕು ಇನ್ನಷ್ಟು ವಿಸ್ತಾರಗೊಳ್ಳಲು ಕಾರಣವಾದ ಮುಂಬೈಯ ಬಗ್ಗೆಯೂ ಅಪಾರ ಮಾಹಿತಿಗಳನ್ನು ತೆರೆದಿಡುತ್ತಾರೆ.

ಈ ಕೃತಿ, ಮುಂಬೈ ಕನ್ನಡದ ಕುರಿತಂತೆ ಅಧ್ಯಯನ ಮಾಡುವವರಿಗೂ ಒಂದು ಕೈಪಿಡಿಯಾಗಿದೆ. ಮಹಿಳಾ ಸಂವೇದನೆಯನ್ನು ಬದುಕಿನ ಉಸಿರಾಗಿಸಿಕೊಂಡು, ಆ ಮೂಲಕ ಕರ್ನಾಟಕದಲ್ಲೂ, ಮುಂಬೈಯಲ್ಲೂ ಸೃಜನಶೀಲತೆಗೆ ತನ್ನದೇ ಆದ ಮಾರ್ಗವನ್ನು ಕಂಡುಕೊಂಡ ಪರಿಯನ್ನು ನಾವು ಈ ಕೃತಿಯಲ್ಲಿ ಗುರುತಿಸಬಹುದು. ‘ಅರೆ ಶತಮಾನ ಮರಾಠಿ ನೆಲದಲ್ಲಿ

ಕನ್ನಡ ಕುಸುಮ ಅರಳಿಸಿದವಳೇ

ಗುಂಪುಗಾರಿಕೆ ಹುಳುಕು, ಕೆಡುಕು ಮೈಕೊಡವಿ

ಮಂದ್ರದಲಿ ಗೀತ-ಸುನೀತಾ ಉಲಿದವಳೇ

ಅಬಲೆಯಲ್ಲ ದಿಟ್ಟೆ, ಆಲವೋ ಆಲಯವೋ

ಸಹೃದಯ ಮನದೊಳಗೆ ಮಿಡಿವ ಕಾವ್ಯ ಚಿಟ್ಟೆ’ ಬೆನ್ನುಡಿಯಲ್ಲಿ ಗೋಪಾಲ ತ್ರಾಸಿಯವರು ಬರೆದ ಸಾಲುಗಳು ಸುನೀತಾ ಶೆಟ್ಟಿಯವರಿಗೆ ಅನ್ವರ್ಥವಾಗಿದೆ. ಈ ಕೃತಿಯನ್ನು ಸನ್ನಿಧಿ ಪ್ರಕಾಶನ ಮುಂಬೈ ಹೊರತಂದಿದೆ. ಮುಖಬೆಲೆ 250 ರೂಪಾಯಿ. ಆಸಕ್ತರು 2430 8316 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News